ಆದಿಪುರುಷ್ ಕೇಸ್ ಅಲಹಾಬಾದ್ ಹೈಕೋರ್ಟಿನಲ್ಲಿ ವಾದ ವಿವಾದಗಳನ್ನೆದುರುಸುತ್ತಿದೆ. ಮಂಗಳವಾರವಷ್ಟೇ ವಿಚಾರಣೆ ಕೈಗೆತ್ತಿಕೊಂಡಿದ್ದ ಅಲಹಾಬಾದ್ ಹೈಕೋರ್ಟ್ ಆದಿಪುರುಷ್ ಚಿತ್ರ ತಂಡವನ್ನು ತರಾಟೆಗೆ ತೆಗೆದುಕೊಂಡಿತ್ತು. ಆದಿಪುರುಷ್ ಎ ಸರ್ಟಿಫಿಕೇಟ್ ಸಿನಿಮಾದಂತಿದೆ. ಪದೇ ಪದೇ ಹಿಂದೂಗಳ ತಾಳ್ಮೆ ಏಕೆ ಪರೀಕ್ಷಿಸುತ್ತೀರಿ. ಈ ಸಿನಿಮಾ ನೋಡಿಯೂ ಹಿಂದೂಗಳು ಕಾನೂನು ಸುವ್ಯವಸ್ಥೆ ಹಾಳು ಮಾಡಿಲ್ಲ. ಸಿನಿಮಾ ಮಂದಿರಕ್ಕೆ ನುಗ್ಗಿಲ್ಲ. ಈ ಹಿಂದೆಲ್ಲ ಇದೇ ರೀತಿ ಆಗಿ, ಕೆಲವು ಸಿನಿಮಾಗಳನ್ನೇ ನಿಲ್ಲಿಸಿದ ಉದಾಹರಣೆಗಳಿವೆ ಎಂದು ಹೇಳಿತ್ತು. ಅಲ್ಲದೆ ಚಿತ್ರದಲ್ಲಿ ಹನುಮಂತ, ಸೀತೆ, ರಾಮನನ್ನು ತೋರಿಸಿರುವ ರೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದ ಹೈಕೋರ್ಟ್, ಈ ರೀತಿ ತೋರಿಸಿ ಜನರಿಗೆ ಯಾವ ರೀತಿಯ ಸಂದೇಶ ನೀಡಲು ಬಯಸುತ್ತಿದ್ದೀರಿ ಎಂದು ಪ್ರಶ್ನಿಸಿತ್ತು. ಡಿಸ್`ಕ್ಲೇಮರ್ ಹಾಕಿದ್ದೇವೆ ಎಂಬ ಚಿತ್ರತಂಡದವರ ವಾದಕ್ಕೆ ಮತ್ತಷ್ಟು ಆಕ್ರೋಶಗೊಂಡ ನ್ಯಾಯಾಲಯ ರಾಮ, ಸೀತೆ, ಹನುಮಂತನನ್ನು ತೋರಿಸಿ ಇದು ರಾಮಾಯಣ ಅಲ್ಲ ಎಂದು ಡಿಸ್`ಕ್ಲೇಮರ್ ಹಾಕಿ ನುಣುಚಿಕೊಳ್ಳುವವರನ್ನೂ ತರಾಟಗೆ ತೆಗೆದುಕೊಂಡಿತ್ತು. ದೇಶದ ಜನರೇನು ಮೂರ್ಖರು ಎಂದುಕೊಂಡಿದ್ದೀರಾ.. ದೇಶದ ಬಹುತೇಕ ಜನ ಇವತ್ತಿಗೂ ರಾಮಚರಿತ ಮಾನಸ, ರಾಮಾಯಣವನ್ನು ಓದಿಕೊಂಡೇ ಮನೆಯಿಂದ ಹೊರಗೆ ಬರುತ್ತಾರೆ. ಅಷ್ಟು ಪವಿತ್ರ ಗ್ರಂಥದ ಬಗ್ಗೆ ಗೌರವ ಬೇಡವೇ ಎಂದು ಪ್ರಶ್ನಿಸಿತ್ತು.
ಇದೀಗ ಆದಿಪುರುಷ ಸಿನಿಮಾವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಬುಧವಾರ ಸಿನಿಮಾ ನಿರ್ಮಾಪಕರು ಧಾರ್ಮಿಕ ಪಠ್ಯಗಳಿಂದ ದೂರವಿರಬೇಕು ಮತ್ತು ಅವುಗಳ ಬಗ್ಗೆ ಸಿನಿಮಾ ಮಾಡಬಾರದು ಎಂದು ಅಭಿಪ್ರಾಯಪಟ್ಟಿದೆ.
ನೀವುಗಳು ಕುರಾನ್ ಹಾಗೂ ಬೈಬಲ್ ವಿಚಾರಗಳನ್ನೂ ಕೂಡ ಮುಟ್ಟಬಾರದು. ನಾನು ಇಲ್ಲಿ ಒಂದು ಮಾತನ್ನು ನಿಮಗೆ ಸ್ಪಷ್ಟವಾಗಿ ಹೆಳುತ್ತೇನೆ. ಯಾವುದೇ ಒಂದು ಧರ್ಮದ ಅಂಶಗಳನ್ನು ನೀವು ಮುಟ್ಟಲೇಬಾರದು. ಯಾವುದೇ ಧರ್ಮದ ಕುರಿತಾಗಿಯೂ ಕೆಟ್ಟದಾಗಿ ಚಿತ್ರಣ ಮಾಡಬಾರದು. ನಿಮಗೆ ನೆನಪಿರಲಿ ಕೋರ್ಟ್ಗೆ ಯಾವುದೇ ಧರ್ಮ ಅನ್ನೋದು ಇರೋದಿಲ್ಲ ಎಂದು ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಮತ್ತು ಶ್ರೀಪ್ರಕಾಶ್ ಸಿಂಗ್ ಅವರಿದ್ದ ನ್ಯಾಯಪೀಠ ಹೇಳಿದೆ.
ನೀವು ಕುರಾನ್ನಲ್ಲಿ ತಪ್ಪು ವಿಷಯಗಳನ್ನು ಚಿತ್ರಿಸುವ ಸಣ್ಣ ಸಾಕ್ಷ್ಯಚಿತ್ರವನ್ನಾದರೂ ನಿರ್ಮಾಣ ಮಾಡಿದರೆ, ಏನಾಗಬಹುದು ಎಂದು ನಿಮಗೆ ಗೊತ್ತಿರಲಿ ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿದ್ದಷ್ಟೇ ಅಲ್ಲ, ನಿರ್ಮಾಪಕರು ನ್ಯಾಯಾಯಲ್ಲೆ ಬರಲೇಬೇಕು ಎಂದು ಸೂಚನೆ ಕೊಟ್ಟಿದೆ.
ಪ್ರಭಾಸ್-ಸೈಫ್ ಅಲಿ ಖಾನ್-ಕೃತಿ ಸನೂನ್ ಅಭಿನಯದ ಓಂರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾ ಇದೀಗ ರಿಲೀಸ್ ಆಗಿ, ಫ್ಲಾಪ್ ಆಗುವ ಹಾದಿಯಲ್ಲಿದೆ. ಈ ನಡುವೆಯೇ ಆದಿಪುರುಷ್ ಸಿನಿಮಾ ವಿವಾದವನ್ನೂ ಎದುರು ಹಾಕಿಕೊಂಡಿದೆ. ಅತ್ತ ರಾಮಾಯಣಕ್ಕೂ ನಿಷ್ಠರಾಗದೆ, ಇತ್ತ ವಿನಾಕಾರಣ ಗ್ಲಾಮರ್ ತೋರಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದೆ. ಇದೇ ವಿಷಯವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿತ್ತು. ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ.



