ಭಾರತೀಯ ಸೈನಿಕರ ಶೌರ್ಯ, ಧೈರ್ಯ ಸಾಹಸಗಳ ಕಥೆಗಳಿಗೆ ಕೊನೆ ಇಲ್ಲ. ಆವತ್ತಿನ.. ಆ ಪರಿಸ್ಥಿತಿ ಹೇಗಿರುತ್ತದೆಯೋ.. ಏನೋ.. ಸಾವಿನ ಬಾಗಿಲಿಗೆ ಹೋಗಿ ಕದ ತಟ್ಟಿ ಬಂದವರ ಆ ಕ್ಷಣ ಹೇಗಿರುತ್ತದೆಯೋ.. ಏನೋ.. ಈಗ ಕೇಳುವುದಕ್ಕೆ ರೋಚಕವಾಗಿರುತ್ತದೆ. ಅಂದ ಹಾಗೆ ಇದು ಬಾರ್ಡರ್ ಸಿನಿಮಾದ ಕಥೆಯೂ ಹೌದು. ಭಾರತೀಯ ಸೇನೆಯ ಗಾತ್ರ, ಶಸ್ತ್ರಾಸ್ತ್ರ, ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯದಲ್ಲಿ ಯಾರೂ ಸರಿಸಾಟಿಯಿಲ್ಲ ಎಂಬುದನ್ನು ಜಗತ್ತಿಗೇ ತೋರಿಸಿದ ಯುದ್ಧವದು.
ಲೊಂಗೇವಾಲ ಯುದ್ಧ ಎಂದೇ ಫೇಮಸ್..!
1971. ಪಾಕಿಸ್ತಾನದ ಸೈನ್ಯ 40 ಟ್ಯಾಂಕ್, ಭಾರೀ ಫಿರಂಗಿಗಳೊಂದಿಗೆ 2,000 ಸೈನಿಕರನ್ನು ರಾಜಸ್ಥಾನದ ಲೊಂಗೇವಾಲಾ ಪ್ರದೇಶಕ್ಕೆ ಕಳುಹಿಸಿತ್ತು. ಪಾಕಿಸ್ತಾನದ ಪ್ರಧಾನಿಯಾಗಿದ್ದ ಯಾಹ್ಯಾ ಖಾನ್‌ಗೆ, ಬಾಂಗ್ಲಾ ಭಾಗ ಕೈತಪ್ಪುವುದು ಬಹುತೇಕ ಖಚಿತವಾಗಿತ್ತು. ಅದಕ್ಕಾಗಿಯೇ ಯುದ್ಧ ತಂತ್ರ ಮಾಡಿದ್ದ ಯಾಹ್ಯಾ ಖಾನ್, ಕತ್ತಲಾಗುತ್ತಿದ್ದಂತೆ ಸೇನೆಯನ್ನು ನುಗ್ಗಿಸಿದ್ದ. ಆದರೆ, ಭಾರತೀಯ ಪಡೆಯಲ್ಲಿ.. ಆಗ ಅಲ್ಲಿ ಇದ್ದದ್ದು ಕೇವಲ 120 ಸೈನಿಕರು ಮಾತ್ರ.
ನಕಲಿ ಸ್ಫೋಟಕ ಇಟ್ಟು ದಿಕ್ಕು ತಪ್ಪಿಸಿದರು..!
ಕತ್ತಲು ಕವಿಯುತ್ತಿದ್ದಂತೆ ಪಾಕ್ ಟ್ಯಾಂಕರ್‌ಗಳ ಸದ್ದು ಕೇಳಿ ಎಚ್ಚೆತ್ತ ಭಾರತೀಯ ಸೈನಿಕರು, ನಕಲಿ ಸ್ಫೋಟಕಗಳನ್ನು ಹರಡಿಟ್ಟು ಎದುರಾಳಿಗಳಲ್ಲಿ ಭೀತಿ ಹುಟ್ಟಿಸಿದರು. ಅವುಗಳು ಏನು ಎಂದು ಸ್ವಲ್ಪ ಹೊತ್ತು ಪಾಕ್ ಸೈನಿಕರು ಹುಡುಕುವಂತೆ ಮಾಡಿದರು. ಜೊತೆಗೆ ಶತ್ರು ಸೇನೆಯ ಟ್ಯಾಂಕ್ ಸಮೀಪಿಸುವುದನ್ನು ಕಾದು, ಅವು 15-30 ಮೀಟರ್ ಸಮೀಪಕ್ಕೆ ಬಂದಾಗ ಗುಂಡಿನ ಮಳೆಗರೆದರು. ಕೆಲ ಇಂಧನ ಟ್ಯಾಂಕ್‌ಗಳಿಗೆ ಬೆಂಕಿ ಹತ್ತಿಕೊಂಡದ್ದು, ಭಾರತೀಯ ಪಡೆಗೆ ಲಾಭವಾಯಿತು. 2 ಟ್ಯಾಂಕ್‌ಗಳನ್ನು ಪುಡಿಗಟ್ಟಿದರು.
ಪ್ರಕೃತಿಯೂ ವರ ನೀಡಿತ್ತು..!
ಆ ಸಂದರ್ಭದಲ್ಲಿ, ಭಾರತೀಯ ಪಡೆಗೆ ಪ್ರಕೃತಿಯೂ ಸಾಥ್ ನೀತ್ತು. ಪಾಕಿಸ್ತಾನದ ಟ್ಯಾಂಕರ್ ಮರುಭೂಮಿಯ ಮರಳಿನಲ್ಲಿ ಹೂತು ಹೋಗಿತ್ತು. ತಂತಿ ಬೇಲಿ ಕಂಡಿದ್ದರಿಂದ ಪಾಕ್ ಸೇನೆ ಮುಂದುವರೆಯಲಿಲ್ಲ. ಇದರಿಂದ ಭಾರತೀಯ ಸೈನಿಕರಿಗೆ ಸಿದ್ಧತೆಗೆ ಸಮಯ ಸಿಕ್ಕಿತು.
ವಾಯುಪಡೆಗೆ ಕಾಯುತ್ತಿತ್ತು ಆರ್ಮಿ..!
ಆಗ ರಾತ್ರಿ ಹೊತ್ತಿನಲ್ಲೂ ಕಾರ್ಯಾಚರಣೆ ಮಾಡುವ ಯುದ್ಧ ವಿಮಾನಗಳು ಭಾರತದ ಬಳಿ ಇರಲಿಲ್ಲ. ಹೀಗಾಗಿ ವಾಯುಪಡೆ ಬೆಳಕು ಹರಿಯುವುದನ್ನೇ ಕಾಯುತ್ತಿತ್ತು. ಸೂರ್ಯೋದಯವಾಗುತ್ತಿದ್ದಂತೆ ಹಾರಿಬಂದ ಭಾರತೀಯ ವಾಯುಪಡೆ ಎದುರು ಪಾಕಿಸ್ತಾನದ ಭೂಸೇನೆ ಸೋತು ಶರಣಾಯಿತು.
ಬಳಿಕ ನಡೆದ 6 ಗಂಟೆಗಳ ಹೊಡೆದಾಟದಲ್ಲಿ ಪಾಕಿಸ್ತಾನ 36 ಟ್ಯಾಂಕ್, 100ಕ್ಕೂ ಅಧಿಕ ವಾಹನ ಹಾಗೂ ಸೈನಿಕರನ್ನು ಕಳೆದುಕೊಂಡಿತ್ತು. ಬಳಿಕ ಬೇರೆ ಆಯ್ಕೆಯಿಲ್ಲದೆ ಅಲ್ಲಿಂದ ಪಲಾಯನಗೈದಿತ್ತು. ಹೀಗೆ ಕೇವಲ 120 ಯೋಧರು 2000 ಪಾಕ್ ಯೋಧರ ತಂಡವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಅಂದಹಾಗೆ ಈ 120 ಯೋಧರ ಕಥೆಗಳನ್ನು ಇಟ್ಟುಕೊಂಡೇ ಬಾರ್ಡರ್ ಸಿನಿಮಾ ಬಂದಿತ್ತು.
ಆಗ 1971ರ ಡಿಸೆಂಬರ್ 4 ರಂದು ರಾಜಸ್ಥಾನದ ಥಾರ್ ಮರುಭೂಮಿಯ ಜೈಸಲ್ಮೇರ್ ಸುತ್ತಲಿನ ಪ್ರದೇಶವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಪಂಜಾಬ್ ರೆಜಿಮೆಂಟ್ 23ನೇ ಬೆಟಾಲಿಯನ್ ಪಡೆಗೆ ವಹಿಸಲಾಗಿತ್ತು. ಮೇಜಲ್ ಕುಲ್ದೀಪ್ ಸಿಂಗ್ ಚಾಂದ್ಪುರಿ ನೇತೃತ್ವದಲ್ಲಿ ಲೊಂಗೇವಾಲಾ ಎಂಬ ಪ್ರದೇಶದ ಭದ್ರತೆಗೆ ನಿಯೋಜಿಸಲಾಗಿತ್ತು. 2018ರಲ್ಲಿ ಆ ಯೋಧ ಬ್ರಿಗೇಡಿಯರ್ ಕುಲ್ದೀಪ್ ಸಿಂಗ್ ಚಾಂದ್‌ಪುರಿ ನಿಧನರಾದರು.



