ಜಗತ್ತಿನಲ್ಲಿ ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋವ್ರು ಇದ್ದೇ ಇರ್ತಾರೆ. ಅದರಲ್ಲೂ ಸಿನಿಮಾ ಫೀಲ್ಡಲ್ಲಿ ಇದು ಸ್ವಲ್ಪ ಜಾಸ್ತಿನೇ. ಸಿನಿಮಾ ನಟ, ನಟಿಯಾಗುವುದಕ್ಕೆ ಎಲ್ಲಿಲ್ಲದ ಡಿಮ್ಯಾಂಡ್ ಇರುತ್ತೆ. ಒಂದು ಚಾನ್ಸ್ʻಗೋಸ್ಕರ ಏನು ಬೇಕಾದ್ರೂ ಮಾಡೋಕೆ ಸಿದ್ಧರಿರುವ ಸಾವಿರಾರು ಜನ ಗಲ್ಲಿ ಗಲ್ಲಿಗಳಲ್ಲಿ ಸಿಕ್ತಾರೆ. ಒಂದ್ ಚಾನ್ಸ್ ಸಿಕ್ ಬಿಟ್ರೆ.. ಸ್ಟಾರ್ ಆಗ್ಬಿಟ್ರೆ.. ಏನೇನೋ ಆಗಬಹುದು ಎಂಬ ಕನಸು ಕಾಣುವವರೇ ಮೋಸಗಾರರ ಬಂಡವಾಳ.
ಅವರ ಆ ಆಸೆಯನ್ನ ಮಿಸ್ ಯೂಸ್ ಮಾಡ್ಕೊಳ್ಳೋ ಮಂದಿನೂ ಅಷ್ಟೇ ಸಂಖ್ಯೆಯಲ್ಲಿ ಇರ್ತಾರೆ. ಆದರೆ ದೊಡ್ಡ ದೊಡ್ಡ ಬ್ಯಾನರ್, ಸಂಸ್ಥೆಗಳಲ್ಲಿ ಈ ರೀತಿಯ ಚೀಟಿಂಗ್ ಆಗೋದು ಕಡಿಮೆ. ಆದರೆ ಈ ಚೀಟಿಂಗ್ ಆಗಿರೋದು ದೊಡ್ಡ ಬ್ಯಾನರಿನಲ್ಲಿ. ನಟ, ನಟಿಯಾಗಲು ಬಯಸುವವರು ಹೆಚ್ಚಿನದಾಗಿ ಕಳೆದುಕೊಳ್ಳೋದು ಮಾನ ಮರ್ಯಾದೆ. ಹೆಣ್ಣು ಮಕ್ಕಳಂತೂ ಆಸೆಗೆ ಬಿದ್ದು ಕೊನೆಗೆ ಕೇವಲ ಯೂಸ್ ಆಗ್ತಾರೆ.
ಅದಾದ ಮೇಲೆ ಹಣ. ಕೊನೆಗೆ ಹೇಳಿಕೊಳ್ಳುವುದಕ್ಕೂ ಆಗದೇ.. ಬಿಡುವುದಕ್ಕೂ ಆಗದೇ.. ಸಿನಿಮಾ ಸಹವಾಸವೇ ಸಾಕು ಎಂದು ಹೋಗುವವರೇ ಹೆಚ್ಚು. ಮರ್ಯಾದೆಗೆ ಅಂಜಿ ಅವರು ಹೊರಗೆ ಹೇಳೋದಿಲ್ಲ ಎನ್ನುವುದು ಎನ್ನುವುದು ವಂಚಕರಿಗೆ ಇನ್ನೊಂದು ಪ್ಲಸ್ ಪಾಯಿಂಟ್. ಈ ಪ್ರಕರಣದಲ್ಲಿ ದುಡ್ಡಿನ ಮೋಸವಾಗಿದೆ. ಮೋಸವಾಗಿರೋದು ದೊಡ್ಡ ಬ್ಯಾನರ್ ಸಿನಿಮಾದಲ್ಲಿ ಎನ್ನುವುದು ವಿಶೇಷ.
ಘಟನೆ ಮತ್ತು ವಂಚನೆ ನಡೆದಿರೋದು ತಮಿಳು ಚಿತ್ರದಲ್ಲಿ. ತಮಿಳು ಸ್ಟಾರ್ ಹೀರೋ ರಾಘವ ಲಾರೆನ್ಸ್ ಹೊಸ ಸಿನಿಮಾ ಮಾಡ್ತಿದ್ದಾರೆ. ಹೆಸರು ಹಂಟರ್. ಪ್ರತೀ ಚಿತ್ರದಲ್ಲೂ ಹೊಸ ಹೊಸ ಪ್ರತಿಭೆಗಳಿವೆ ಚಾನ್ಸ್ ಕೊಡುವ ರಾಘವ ಲಾರೆನ್ಸ್, ಈ ಹೊಸ ಸಿನಿಮಾಗಾಗಿ ಕಲಾವಿದರು ಬೇಕಾಗಿದ್ದಾರೆ ಎಂಬ ಜಾಹೀರಾತು ಕೊಟ್ಟಿದ್ದರು. ಅದನ್ನು ನೋಡಿಕೊಳ್ಳೋದಕ್ಕೆ ಸುರೇಶ್ ಎಂಬ ಒಬ್ಬ ವ್ಯಕ್ತಿಯನ್ನು ನೇಮಿಸಿದ್ದರು. ಅದೇ ಎಡವಟ್ಟಾಗಿದ್ದು. ಅದನ್ನು ನೋಡಿ ನಂದಿನಿ ಶೆಟ್ಟಿ ಎಂಬ ಯುವತಿ ತಮ್ಮ ಪ್ರೊಫೈಲ್ ಸಮೇತ ಅಪ್ರೋಚ್ ಆಗಿದ್ದಾರೆ. ಅವರು ನೇರವಾಗಿ ಫೋನ್ ಮಾಡಿದ್ದು ಸುರೇಶ್ʻಗೆ. ಏಕೆಂದರೆ.. ಆತನೇ ಸಿನಿಮಾದ ಕಾಸ್ಟಿಂಗ್ ಡೈರೆಕ್ಟರ್. ಸುರೇಶ್ ಮತ್ತು ನಂದಿನಿ ಶೆಟ್ಟಿಯವರ ನಡುವಿನ ಆಡಿಯೋ ಸಂಭಾಷಣೆ ಕೇಳುತ್ತಿದ್ದರೆ.. ಮೋಸದ ಪರಿಚಯ ಆಗುತ್ತೆ.
ಫೋನ್ ಸಂಭಾಷಣೆ : 01
ಸುರೇಶ್: ಹಲೋ
ನಟಿ: ಸರ್.. ನಾನು ಸಿನಿಮಾದಲ್ಲಿ ಸೆಲೆಕ್ಟ್ ಆದ್ನಾ?
ಸುರೇಶ್: ಹಾ..ಹೌದು. ನೀವು ಸೆಲೆಕ್ಟ್ ಆಗಿದ್ದೀರಾ?
ನಟಿ: ಚಾನ್ಸ್ ಸಿಗುತ್ತಲ್ವಾ ಸರ್..
ಸುರೇಶ್: ಹಾ ಖಂಡಿತಾ ಚಾನ್ಸ್ ಸಿಕ್ಕೇ ಸಿಗುತ್ತೆ. ಡೋಂಟ್ ವರಿ
ಇನ್ಸ್‌ಟಾಗ್ರಾಂನಲ್ಲಿ ರೀಲ್ಸ್ಟ್ ಮಾಡ್ತಿದ್ದ ನಂದಿನಿಯವರನ್ನು ಒಮ್ಮೆ ಕೂಡಾ ಮುಖ ನೋಡದ ಸುರೇಶ್, ಫೋನಿನಲ್ಲೇ ಓಕೆ ಮಾಡ್ತಾನೆ. ನಂತರ ಮುಂದಿನ ಹಂತ ಶುರು.
ಫೋನ್ ಸಂಭಾಷಣೆ : 02
ಸುರೇಶ್: ಮೇಡಂ ನಿಮ್ಮ ಹತ್ರ ಆರ್ಟಿಸ್ಟ್ ಕಾರ್ಡ್ ಇದ್ಯಾ?
ನಟಿ: ಇಲ್ಲ ಸರ್ ನನ್ನ ಹತ್ತಿರ ಆ ರೀತಿಯ ಆರ್ಟಿಸ್ಟ್ ಕಾರ್ಡ್ ಇಲ್ಲ
ಸುರೇಶ್: ಹೌದಾ ಆರ್ಟಿಸ್ಟ್ ಆಗ್ಬೇಕಂದ್ರೆ ಅದಕ್ಕೆ ಕಾರ್ಡ್ ಮಾಡಿಸಿರಲೇ ಬೇಕು
ನಟಿ: ನನ್ನತ್ರ ಇಲ್ಲ.. ಏನ್ ಮಾಡ್ಬೇಕು ಸರ್
ಸುರೇಶ್: ಡೋಂಟ್ವರಿ ನಾನು ಮಾಡಿಸ್ತೀನಿ
ಸುರೇಶ್: 12,500 ಸಾವಿರ ನನ್ನ ಅಕೌಂಟ್ಗೆ ಹಾಕಿ
ಇಲ್ಲಿಂದ ಶುರುವಾಗುತ್ತೆ ಅಸಲಿ ಮೋಸ. ಆಕೆಗೆ ಯಾವ ರೀತಿ ಮೋಸ ಮಾಡ್ತಾನೆ ಅಂದ್ರೆ ಆರ್ಟಿಸ್ಟ್ ಕಾರ್ಡ್‌ಗೆ 12,500 ರೂ. ಜೊತೆಗೆ ಅಗ್ರಿಮೆಂಟ್ ಸ್ಟಾಂಪ್ ಡ್ಯೂಟಿಗೆ 35 ಸಾವಿರ ರೂ. ತೆಗೆದುಕೊಂಡಿದ್ದ. ಇದು ಇಷ್ಟಕ್ಕೇ ನಿಲ್ಲದೆ.. ಶೂಟಿಂಗ್‌ಗೆ ಮಲೇಷ್ಯಾಗೆ ಹೋಗಬೇಕು ಎಂದು ಹೇಳಿದ್ದ. ಪಾಸ್‌ಪೋರ್ಟ್, ಫ್ಲೈಟ್ ಟಿಕೆಟ್‌ಗೆ 90 ಸಾವಿರ ಪೀಕಿದ್ದ. ಎಲ್ಲ ಸೇರಿ 1 ಲಕ್ಷ, 71 ಸಾವಿರ ರೂ. ಹಣ ಕಿತ್ತಿದ್ದ ಸುರೇಶ್ ವಿರುದ್ಧ ನಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ರೀತಿ ಚೀಟಿಂಗ್ ಹೊಸದೇನಲ್ಲ. ಆದರೆ.. ಇಲ್ಲಿ ಆ ಯುವತಿಯ ಹಣವನ್ನಷ್ಟೇ ಹೊಡೆದಿದ್ದಾರೆ. ಅದು ಒಂದು ರೀತಿಯಲ್ಲಿ ನೆಮ್ಮದಿಯ ವಿಷಯವೇ ಎನ್ನಬಹುದು.



