ಈ ಬಾರಿಯ ಎಲೆಕ್ಷನ್ನಿನಲ್ಲಿ ನಡೆಯುತ್ತಿರುವುದು ಪ್ರಮುಖವಾಗಿ ಒಕ್ಕಲಿಗರ ಲೀಡರ್ ಯಾರಾಗಬೇಕು ಎಂಬ ಬಗ್ಗೆ. ಮೊದಲ ಹಂತದಲ್ಲಿ ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕವಾಗಲಿವೆ. ಕಾಂಗ್ರೆಸ್ ಮತ್ತು ಬಿಜೆಪಿ – ಜೆಡಿಎಸ್ ಮೈತ್ರಿ ಶತಪ್ರಯತ್ನ ನಡೆಸುತ್ತಿದ್ದು, ಎರಡೂ ಕಡೆಯವರ ಓಡಾಟ, ಹಾರಾಟ ಜೋರಾಗಿದೆ. ಈ ಬಾರಿ ಕರ್ನಾಟಕದ ಲೋಕಸಭಾ ಚುನಾವಣೆಯಲ್ಲಿ ನಿರ್ಧಾರ ಆಗಬೇಕಾದ ಒಂದು ವಿಷಯ ಅಂದರೆ ಒಕ್ಕಲಿಗರ ನಾಯಕ ಯಾರು? ಅಧಿಪತ್ಯ ದೇವೇಗೌಡರ ಕುಟುಂಬದಲ್ಲೇ ಉಳಿಯುತ್ತಾ? ಅಥವಾ ಕನಕಪುರದ ಬಂಡೆ ಡಿಕೆ ಶಿವಕುಮಾರ್ ಅವರಿಗೆ ವರ್ಗವಾಗುತ್ತಾ..?
2023ರಲ್ಲಿ ಕೂಡ ಕುಮಾರಸ್ವಾಮಿ ವರ್ಸಸ್ ಡಿ.ಕೆ. ಶಿವಕುಮಾರ್ ಕಾದಾಟ ನಡೆದಿತ್ತು. ಆಗ ಒಕ್ಕಲಿಗರ ಕೋಟೆಯಲ್ಲಿ ಜೆಡಿಎಸ್ ಶೇ.8ರಷ್ಟು ವೋಟುಗಳನ್ನು ಕಳೆದುಕೊಂಡಿತ್ತು. ಆ ಶೇ.8ರಲ್ಲಿ ಶೇ.5ರಷ್ಟು ವೋಟುಗಳು ಕಾಂಗ್ರೆಸ್ಸಿಗೆ ಹೋಗಿದ್ದರೆ, ಶೇ.3 ರಷ್ಟು ವೋಟುಗಳು ಬಿಜೆಪಿಗೆ ವರ್ಗವಾಗಿದ್ದವು. 2023ರಲ್ಲಿ ಜೆಡಿಎಸ್ʻನವರು ಸುಮಾರು 10 ಕ್ಷೇತ್ರಗಳನ್ನು ಬಿಜೆಪಿ ಪಡೆದ ಮತಗಳಿಂದಾಗಿಯೇ ಸೋತಿದ್ದರು ಎನ್ನುವುದು ವಿಶೇಷ.
ಹೀಗಾಗಿಯೇ ಕುಮಾರಸ್ವಾಮಿ ಹಳೇ ಮೈಸೂರಿನ 8 ಜಿಲ್ಲೆಗಳಲ್ಲಿ ಒಕ್ಕಲಿಗರ ವೋಟುಗಳ ಪೈಕಿ ಶೇ.65ರಿಂದ ಶೇ.70 ವೋಟುಗಳು ತನ್ನ ಜೊತೆಗಿದ್ದರೆ, ರಾಜಕೀಯದಲ್ಲಿ ಅಸ್ಥಿತ್ವ ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಿಂದಾಗಿಯೇ ಬಿಜೆಪಿ ಜೊತೆ ಕೈಜೋಡಿಸಿದ್ಧಾರೆ. ಇತ್ತ ಡಿಕೆ ಶಿವಕುಮಾರ್ ಅವರೂ ಅಷ್ಟೆ, ವಿಧಾನಸಭೆಯಂತೆಯೇ ಲೋಕಸಭೆಯಲ್ಲಿ ಉತ್ತಮ ಫಲಿತಾಂಶ ಬಂದರೆ.. ಸಿಎಂ ಸ್ಥಾನಕ್ಕೆ ಫೈಟ್ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.
ದೇವೇಗೌಡರಿಗೆ ಡೂ ಆರ್ ಡೈ ವಾರ್
ರಾಜಕೀಯದಲ್ಲಿ ನಾಲ್ಕು ದಶಕಗಳ ಕಾಲ ಒಂದು ಸಮುದಾಯದಲ್ಲಿ ಪ್ರಾಬಲ್ಯ ಮೆರೆಯುವುದು ಸುಲಭದ ವಿಷಯವಲ್ಲ. ನಿಜಲಿಂಗಪ್ಪ, ದೇವರಾಜ್ ಅರಸ್, ವೀರೇಂದ್ರ ಪಾಟೀಲ್, ಬಂಗಾರಪ್ಪ, ಹೆಗಡೆ, ಪಟೇಲರಂಥ ಜನಾನುರಾಗಿ ರಾಜಕಾರಣಿಗಳಿಗೂ ಒಂದು ಪ್ರಾದೇಶಿಕ ಪಾರ್ಟಿ ಕಟ್ಟಿ ಅಸ್ಥಿತ್ವದಲ್ಲಿರುವುದು ಸಾಧ್ಯವಾಗಿಲ್ಲ. ಈಗ ಬಿಜೆಪಿಯಲ್ಲಿರುವ ಯಡಿಯೂರಪ್ಪನವರಿಗೂ ಸಾಧ್ಯವಾಗಿಲ್ಲ. ದೇವೇಗೌಡರಿಗೆ ಮಾತ್ರ. ಶೇ.13ರಿಂದ ಶೇ.20 ಮತಗಳನ್ನು ದಶಕಗಳವರೆಗೆ ಜೊತೆಯಲ್ಲಿಟ್ಟುಕೊಂಡಿದ್ದಾರೆ.
1996ರಿಂದ ಈಗಿನವರೆಗೆ ದೇವೇಗೌಡರ ಕುಟುಂಬ ರಾಜ್ಯದಲ್ಲಿ ಅಧಿಕಾರದಲ್ಲಿದ್ದದ್ದು 52 ತಿಂಗಳು ಮಾತ್ರ. 1996ರಿಂದ 1998 ದೇವೇಗೌಡ, 2006ರಲ್ಲಿ 20 ತಿಂಗಳು ಕುಮಾರಸ್ವಾಮಿ ಮತ್ತು 2018ರಲ್ಲಿ ಒಂದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆದರೆ.. ಈ ಅವಧಿಯಲ್ಲಿ ಪಡೆದ ಅಲ್ಪ ಅಧಿಕಾರವೇ ಒಕ್ಕಲಿಗರ ನಾಯಕನನ್ನಾಗಿ ಮಾಡಿದೆ ಎಂದರೂ ಸುಳ್ಳಲ್ಲ.
1956ರಲ್ಲಿ ಕೆಂಗಲ್ ಹನುಮಂತಯ್ಯ (ವಿಧಾನಸೌಧದ ನಿರ್ಮಾತೃ) ಅವರ ನಂತರ ಸಿಎಂ ಆದ ಒಕ್ಕಲಿಗ ದೇವೇಗೌಡರು ಮಾತ್ರ. ಅದೃಷ್ಟವೂ ಜೊತೆಯಲ್ಲಿತ್ತು. ಪ್ರಧಾನಿಯೂ ಆದರು. 10 ತಿಂಗಳ ಕಾಲವಷ್ಟೇ ಅಧಿಕಾರದಲ್ಲಿದ್ದ ದೇವೇಗೌಡರು ಒಕ್ಕಲಿಗರ ಆರಾಧ್ಯ ದೈವವಾಗಿದ್ದು ಇತಿಹಾಸ. ಎಸ್.ಎಂ. ಕೃಷ್ಣ ಒಮ್ಮೆ ಅಲುಗಾಡಿಸಿದ್ದರಾದರೂ.. ಅದನ್ನು ದೇವೇಗೌಡ ಮತ್ತೆ ಗೆದ್ದರು. ಎಸ್.ಎಂ.ಕೃಷ್ಣ ನಂತರ 20 ವರ್ಷ ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ದೇವೇಗೌಡರ ಒಕ್ಕಲಿಗ ಕೋಟೆಗೆ ಲಗ್ಗೆ ಹಾಕುವ ಧೈರ್ಯ ಯಾರೂ ತೋರಿರಲಿಲ್ಲ. ಆದರೆ ಕೃಷ್ಣ ನಂತರ ಆ ನಾಯಕತ್ವ ಸಾಮರ್ಥ್ಯ ಕಾಣುತ್ತಿರುವುದು ಡಿ.ಕೆ.ಶಿವಕುಮಾರ್‌ರಲ್ಲಿ ಮಾತ್ರ.
ಡಿಕೆಶಿಯವರಿಗೆ ಬಲ ಎಂದರೆ ಕಾಂಗ್ರೆಸ್. ಕಾಂಗ್ರೆಸ್ಸಿನ ಜೊತೆ ಸಿದ್ದರಾಮಯ್ಯ ಅವರಿಂದಾಗಿ ಕುರುಬರು ಜೊತೆಗಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಮರು ಕಾಂಗ್ರೆಸ್ಸಿನ ಶಕ್ತಿ. ದಲಿತರ ಬಲಗೈ ಮತದಾರರು ಕೂಡಾ ಕಾಂಗ್ರೆಸ್ ಜೊತೆಗಿದ್ದಾರೆ. ಇವರೆಲ್ಲರ ಜೊತೆ ಶೇ.25ರಿಂದ ಶೇ.30 ದೇವೇಗೌಡರ ವಿರೋಧಿ ಒಕ್ಕಲಿಗರ ವೋಟುಗಳು (ಕೇವಲ ಒಕ್ಕಲಿಗರ ಮತಗಳ ಪ್ರಕಾರ) ಬಂದರೂ.. ಲಾಭವೇ. ಆ ಸಂಖ್ಯೆಯನ್ನು ಡಬಲ್ ಮಾಡಿಬಿಟ್ಟರೆ.. ಶಿವಕುಮಾರ್ ಗೆದ್ದ ಹಾಗೆ.
ನಂಬರ್ ಲೆಕ್ಕ
ಕೇವಲ ನಂಬರುಗಳ ಲೆಕ್ಕ ತೆಗೆದುಕೊಂಡರೆ.. ಹಳೇ ಮೈಸೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜೊತೆ ಬಂದಾಗ 11 ಸೀಟುಗಳಲ್ಲಿ 2ರಿಂದ 3 ಲಕ್ಷ ಮತಗಳ ಅಂತರದಿಂದ ಗೆಲ್ಲಬೇಕು. ಆದರೆ.. ಜೆಡಿಎಸ್ ವೋಟುಗಳು ಬಿಜೆಪಿಗೆ ಬಂದರೆ.. ಬಿಜೆಪಿಗೆ ಲಾಭ. ಕಾಂಗ್ರೆಸ್ಸಿಗೆ ಹೋದರೆ.. ನಷ್ಟ. ಏಕೆಂದರೆ.. ದೇವೇಗೌಡರ ವಿರೋಧದ ಕಾರಣದಿಂದಾಗಿಯೇ ಕೆಲವು ಒಕ್ಕಲಿಗರು ಬಿಜೆಪಿಯನ್ನೂ ಆಯ್ಕೆ ಮಾಡಿಕೊಂಡಿದ್ಧಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ನತ್ತ ಹೋಗಿದ್ದ ಶೇ.5 ಮತದಾರರು ಲೋಕಸಭೆಯಲ್ಲಿ ಮೋದಿಯತ್ತ ವಾಲಿದರೂ.. ಬಿಜೆಪಿ ಗೆಲ್ಲಬಹುದು.
ಎಷ್ಟು ಸೀಟು ಗೆಲ್ಲಬಹುದು?
ಪಕ್ಷದ ಆಂತರಿಕ ಸರ್ವೆಗಳನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ.. ರಾಜ್ಯದಲ್ಲಿ ಬಿಜೆಪಿ ಮೋದಿ ಇಲ್ಲದೆ ಇದ್ದಾಗಲೂ 18 ಸೀಟು ಗೆದ್ದಿತ್ತು. ಆ ಪ್ರಕಾರ ನೋಡಿದರೆ.. ಈಗಲೂ 15ರಿಂದ 18 ಸೀಟು ಸಮಸ್ಯೆ ಏನಲ್ಲ. ಆದರೆ.. ಕಾಂಗ್ರೆಸ್ ಈಗ ಮೊದಲಿಗಿಂತ ಬಲಿಷ್ಠವಾಗಿದೆ. ಕಳೆದ ಬಾರಿಯಂತೆ ಕೇವಲ 1 ಸೀಟಿನಲ್ಲಿ ಗೆಲ್ಲುವುದಿಲ್ಲ. ಸಂಖ್ಯೆಗಳು ಹೆಚ್ಚುವುದಂತೂ ಖಚಿತ. ಆದರೆ. ಕಳೆದ ಬಾರಿ ಸಲೀಸಾಗಿ ಗೆದ್ದಿದ್ದ ಬೆಂಗಳೂರು ಗ್ರಾಮಾಂತರವೇ ಈ ಬಾರಿ ದೊಡ್ಡ ಚಾಲೆಂಜ್.
ಬಿಜೆಪಿ ಮೈತ್ರಿ ಕೂಟ ಗೆಲ್ಲಬಹುದಾದ 15, ಕಾಂಗ್ರೆಸ್ ಗೆಲ್ಲಬಹುದಾದ 5 ಕ್ಷೇತ್ರಗಳು ಅವರವರಲ್ಲಿಯೇ ಫಿಕ್ಸ್ ಆಗಿವೆ. ಇನ್ನುಳಿದ 8ರಲ್ಲಿ ಸಿದ್ದು ಗ್ಯಾರಂಟಿ ವರ್ಸಸ್ ಮೋದಿ ಅಲೆಯಲ್ಲಿ ಯಾವುದು ಗೆಲ್ಲುತ್ತೋ.. ಅದು ಹೆಚ್ಚು ಸ್ಥಾನ ಗಳಿಸಲಿದೆ.



