ಕರ್ನಾಟಕ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅದಲು ಬದಲು ಆಗ್ತಾರಾ.. ಅಥವಾ ಕೇವಲ ಸಂಪುಟ ಪುನಾರಚನೆ ಅಥವಾ ವಿಸ್ತರಣೆಯಾಗುತ್ತಾ ಎಂಬ ಕುರಿತು ಸಾಕಷ್ಟು ಗೊಂದಲಗಳಿವೆ. ಡಿಸಿಎಂ ಡಿಕೆ ಶಿವಕುಮಾರ್ ಆಡುತ್ತಿರುವ ಒಂದೊಂದು ಮಾತುಗಳು ಮತ್ತು ಹಿಡಿಯುತ್ತಿರುವ ಒಂದೊಂದು ಸೂತ್ರಗಳು, ಇಡುತ್ತಿರುವ ಒಂದೊಂದು ಹೆಜ್ಜೆಗಳು ಸಾಕಷ್ಟು ಕುತೂಹಲ ಮೂಡಿಸಿವೆ. ಡಿಸಿಎಂ ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಡೆಡ್‌ಲೈನ್ ಹಾಕಿಕೊಂಡಿದ್ದಾರೆಂಬ ಮಾತು ಹರಿದಾಡುತ್ತಿರುವುದು ಮಾದ್ಯಮಗಳ ಜೊತೆಯಲ್ಲಿ ಅಲ್ಲ. ಕಾಂಗ್ರೆಸ್ ಪಡಸಾಲೆಯಲ್ಲಿ. ಇದಕ್ಕೆ ಸಿದ್ಧರಾಮಯ್ಯ ಕೂಡಾ ಕೌಂಟರ್ ಕೊಡೋಕೆ ರೆಡಿ ಆಗಿದ್ದಾರೆ. ಅವರು ಹೋರಾಟದ ತಂತ್ರ ಹೆಣೆಯುತ್ತಿದ್ದಾರೆ. ಇದರ ಮಧ್ಯೆ ರಾಹುಲ್ ಗಾಂಧಿ ಬೇರೆಯದ್ದೇ ಸಿಗ್ನಲ್ ಕೊಟ್ಟಿದ್ದಾರೆ.
ಡಿಕೆ ಶಿವಕುಮಾರ್ ಹೆಜ್ಜೆ ಏನು..?
ಒಂದು ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ಅವರಿಗೆ ನವೆಂಬರ್ 21, 24 ಮತ್ತು 26ರ ಮುಹೂರ್ತ ನೀಡಲಾಗಿದೆ. ಆ ಮುಹೂರ್ತಗಳಲ್ಲಿ ಸಿಎಂ ಆದರೆ ಒಳ್ಳೆಯದು ಎಂದು ಸಲಹೆ ಕೊಡಲಾಗಿದೆಯಂತೆ. ಯಾವುದೇ ಮಾಧ್ಯಮ ಅಥವಾ ಪತ್ರಿಕೆಗಳು ತಮಗೆ ತಾವೇ ಕಲ್ಪನೆ ಮಾಡಿಕೊಂಡು ಸುದ್ದಿ ಬರೆಯೋಕೆ ಆಗಲ್ಲ. ಮೈಸೂರಿನ ಪತ್ರಿಕೆಯೊಂದರಲ್ಲಿ “ನವೆಂಬರ್ 21 ಇಲ್ಲವೇ 26ಕ್ಕೆ ಮುಖ್ಯಮಂತ್ರಿಯಾಗಿ ಡಿಕೆಶಿ ಪದಗ್ರಹಣ?” ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. ರಾಜ್ಯದ 34ನೇ ಮುಖ್ಯಮಂತ್ರಿ ಪದಗ್ರಹಣಕ್ಕೆ ಮುಹೂರ್ತ ನಿಗದಿ. ನವೆಂಬರ್ 11ಕ್ಕೆ ದೆಹಲಿಗೆ ಡಿಕೆಸಿ ಭೇಟಿ ನೀಡಲಿದ್ದು, ಈಗಾಗಲೇ ವರಿಷ್ಠರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದು ಮೈಸೂರಿನ ಪತ್ರಿಕೆ. ಸಿದ್ಧರಾಮಯ್ಯ ಮೈಸೂರಿನವರೇ ಎಂಬ ಕಾರಣಕ್ಕೆ ದೊಡ್ಡ ಸಂಚಲನ ಹುಟ್ಟು ಹಾಕಿತ್ತು.
ಸಿದ್ಧರಾಮಯ್ಯ ಈ ವಿಷಯಕ್ಕೆ ಮಾಧ್ಯಮಗಳ ಮೇಲೆ ಗರಂ ಆಗಿದ್ದು. ಇದು ಸಿದ್ಧರಾಮಯ್ಯನವರ ಸಹಜ ವರ್ತನೆ ಅಲ್ಲ. ತಮಗೆ ವಿರುದ್ಧ ಸುದ್ದಿ ಬಂದರೂ.. ಒಂದು ಮಾತು ಬೈದೋ.. ಅಥವಾ ಲೇವಡಿ ಮಾಡಿಯೋ ನಡೆದುಬಿಡುವ ಸಿದ್ಧರಾಮಯ್ಯ.. ಇದೇ ಮೊದಲ ಬಾರಿ ಎಂಬಂತೆ ಆ ರೀತಿ ವರ್ತಿಸಿದ್ದರು. ಸಂಥಿಂಗ್ ಈಸ್ ಫಿಶಿ ಎನಿಸಿದ್ದೇ ಆಗ.
ಡಿಕೆ ಹೌದು ಅನ್ನಲ್ಲ.. ಇಲ್ಲ ಅಂತಾನೂ ಹೇಳಲ್ಲ..!
ಅತ್ತ ಡಿಕೆ ಸುದ್ದಿ ಹೌದು ಅಂತಾನೂ ಹೇಳ್ತಿಲ್ಲ. ಇತ್ತ ಸುಳ್ಳು ಅಂತಾನೂ ಹೇಳ್ತಿಲ್ಲ. ಡಿಕೆ ಅವರ ನಿಗೂಢ ಮಾತುಗಳು ಇದಕ್ಕೆ ಇನ್ನಷ್ಟು ಪುಷ್ಟಿ ಕೊಡುತ್ತಿವೆ. ದೆಹಲಿಗೆ ಹೋಗ್ತಾರೆ. ಬರ್ತಾರೆ. ಡಿಕೆಯೂ ಅಷ್ಟೇ.. ಅಕಸ್ಮಾತ್.. ಇದು ಸುಳ್ಳು ವರದಿ ಆಗಿದ್ದರೆ.. ಅತ್ಯಂತ ನೇರಾನೇರವಾಗಿ ʻಇಲ್ಲ. ನಾನು ಸಿಎಂ ಹುದ್ದೆ ರೇಸಿನಲ್ಲಿ ಇಲ್ಲʼʼ ಎಂದೋ.. ಅಥವಾ.. ʻʻ2018ರವರೆಗೂ ಸಿದ್ಧರಾಮಯ್ಯ ಸಿಎಂ ಆಗಿರ್ತಾರೆʼʼ ಎಂದೋ ಅನುಮಾನಕ್ಕೆ ಆಸ್ಪದ ಇಲ್ಲದ ರೀತಿ ಹೇಳುತ್ತಿದ್ದರು. ಡಿಕೆಯನ್ನು ಬಲ್ಲವರಿಗೆ ಅದೂ ಗೊತ್ತು.
ರಾಹುಲ್ ಗಾಂಧಿ ಮೆಸೇಜ್..
ಈ ಮಧ್ಯೆ ದೆಹಲಿಗೆ ಎಡತಾಕುತ್ತಿರುವವರಿಗೆ ರಾಹುಲ್ ಗಾಂಧಿ ʻಹೋಲ್ಡ್ ಆನ್ʼ ಸಿಗ್ನಲ್ ಕೊಟ್ಟಿದ್ದಾರೆ. ಬಿಹಾರ ಎಲೆಕ್ಷನ್ ಮುಗಿಯೋವರೆಗೂ ಸುಮ್ಮನಿರಿ ಎಂದಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಬೇರೆಯದೇ ಟೆನ್ಷನ್ ಶುರು ಆಗಿದೆ. ಏಕೆಂದರೆ ಬಿಹಾರದಲ್ಲಿ ಕಾಂಗ್ರೆಸ್ ಗೆ ಒಳ್ಳೇ ಸಿಗ್ನಲ್ ಸಿಗುತ್ತಿಲ್ಲ. ಆಂತರಿಕ ವರದಿಗಳ ಪ್ರಕಾರ ಬಿಹಾರದಲ್ಲಿ ಜೊತೆಗಾರ ಪಕ್ಷ ಆರ್‌ಜೆಡಿ ದೊಡ್ಡ ಗೆಲುವು ಸಾಧಿಸಿದರೂ.. ಅಧಿಕಾರ ಇಲ್ಲ. ತಮ್ಮ ಪಕ್ಷ ಕಳೆದ ಬಾರಿಗಿಂತ ಹೀನಾಯವಾಗಿ ಕುಸಿಯಲಿದೆ ಎಂಬ ವರದಿಗಳು ಬರುತ್ತಿವೆಯಂತೆ. ಹೀಗಾಗಿ ಕಾಮಧೇನುವಿನಂತೆ ಇರುವ ಕರ್ನಾಟಕವನ್ನು ಹಾಳು ಮಾಡಿಕೊಳ್ಳೋದು ಬೇಡ ಎಂದು ಯೋಚಿಸುತ್ತಿದ್ದಾರಂತೆ. ಮುಂದಿನ ನಿರ್ಧಾರ ನವೆಂಬರ್ 14ರ ನಂತರವೇ.
ಅಂದಹಾಗೆ ಡಿಕೆ ಫಿಕ್ಸ್ ಮಾಡಿಕೊಂಡಿರುವ ಮೂರು ಮುಹೂರ್ತಗಳೂ ಇರುವುದು ಬಿಹಾರ ಕೌಂಟಿಂಗ್ ಮುಗಿದ ಮೇಲೆ.



