ಡಿಕೆ ಶಿವಕುಮಾರ್ ಅವರು ಸಿಎಂ ಆಗ್ತಾರಾ.. ಪವರ್ ಶೇರಿಂಗ್ ಇಷ್ಯೂ ಮುಗಿಯುತ್ತಾ.. ಬಗೆಹರಿಯುತ್ತಾ ಎಂಬ ಕಾತುರ, ನಿರೀಕ್ಷೆಗಳ ಮಧ್ಯೆ ರಾಹುಲ್ ಗಾಂಧಿ ಕೊನೆಗೂ ಡಿಕೆ ಅವರಿಗೆ ಸಿಕ್ಕಿದ್ದಾರೆ. ಸುದೀರ್ಘವಾಗಿ ಮಾತನಾಡಿದ್ದಾರೆ. ಮಾತಿನ ವಿಚಾರ ಎಲ್ಲ ಹೇಳೋಕ್ ಆಗಲ್ಲ ಎಂದು ಡಿಕೆ ಹೇಳುತ್ತಿದ್ದರೆ, ಇತ್ತ ಸಿದ್ದರಾಮಯ್ಯ ಅವರ ಪರಮಾಪ್ತ ಸಚಿವ ಜಮೀರ್ ಅಹ್ಮದ್ ಕೊಟ್ಟಿರುವ ಟ್ವಿಸ್ಟಿನ ಕಥೆಯೇ ಬೇರೆ. ಆ ಟ್ವಿಸ್ಟು.. ಇನ್ಯಾರಿಗೋ ಟಿಪ್ ಕೊಟ್ಟಂತೆ ಇದೆ.
ಕರ್ನಾಟಕದಲ್ಲಿ ಸಿಂಹಾಸನ ಸಂಘರ್ಷ ಮಕರ ಸಂಕ್ರಮಣಕ್ಕೂ ಕಾಲಿಟ್ಟಿದೆ. ಹೈಕಮಾಂಡ್ ಲೆವೆಲ್ನಲ್ಲಿ ಡಿಕೆಶಿಗೆ ಖುಷಿ ಸುದ್ದಿ ಸಿಕ್ಕಂತೆ ಕಾಣ್ತಿದೆ.. ನಗು ನಗುತ್ತಲೇ ಸಭೆ ಮುಗಿಸಿ ಹೊರಬಂದ ಡಿಕೆ, ಪ್ರತಿದಿನವೂ ಒಳ್ಳೆಯ ದಿನ ಅಂತ ಫಿಲಾಸಫರ್ ಆಗಿದ್ದಾರೆ. ನಾಯಕತ್ವದ ಸರದಿ ವಿಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಹಕ್ಕೊತ್ತಾಯವನ್ನು ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಎದುರು ಪ್ರಸ್ತಾಪಿಸಿದ್ದಾರೆ. ರಾಹುಲ್ ಸಮಾಧಾನದಿಂದಲೇ ಆಲಿಸಿದ್ದಾರಾದರೂ ಮುಂದಿನ ತೀರ್ಮಾನವೇನು ಎಂಬುದರ ಸ್ಪಷ್ಟತೆ ಸಿಕ್ಕಿಲ್ಲ. ಸರಕಾರ ರಚನೆ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಒಪ್ಪಂದದ ಅನ್ವಯ ಕೊಟ್ಟ ಮಾತು ಈಡೇರಿಸುವಂತೆ ಕೋರಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ಸುಮಾರು 15 ನಿಮಿಷಗಳ ಕಾಲ ಪ್ರತ್ಯೇಕವಾಗಿ ಒನ್ ಟು ಒನ್ ಚರ್ಚೆ ನಡೆಸಿದ್ದು, ಅದಾದ ನಂತರ ಡಿಕೆ ತಮ್ಮ ಸ್ವಿಟ್ಜರ್ಲೆಂಡ್ ಪ್ರವಾಸವನ್ನು ದಿಢೀರ್ ಅಂತಾ ರದ್ದು ಮಾಡಿದ್ದಾರೆ. ಕೊಟ್ಟಿರುವ ಕಾರಣ ವಿಧಾನಮಂಡಲ ವಿಶೇಷ ಅಧಿವೇಶನ.
ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯ ಸರಕಾರದ ಉನ್ನತ ಮಟ್ಟದ ನಿಯೋಗದೊಂದಿಗೆ ಭಾನುವಾರ ಬೆಳಗ್ಗೆ ದಾವೋಸ್‌ಗೆ ಡಿ.ಕೆ. ಶಿವಕುಮಾರ್ ತೆರಳಬೇಕಿತ್ತು. ಅದರಂತೆ ಡಿಸಿಎಂ ಶನಿವಾರ ಸಂಜೆ ದಿಲ್ಲಿಯಿಂದ ಬೆಂಗಳೂರಿಗೆ ವಾಪಸಾಗಿ ವಿದೇಶ ಪ್ರವಾಸಕ್ಕೆ ತೆರಳುವುದು ನಿಗದಿಯಾಗಿತ್ತು. ಪ್ರವಾಸ ರದ್ದಾಗಿದೆ.
ಈ ನಡುವೆ ಪವರ್ ಶೇರಿಂಗ್ ಆಟಕ್ಕೆ ಸಡನ್ ಟ್ವಿಸ್ಟ್ ಕೊಟ್ಟಿರೋದು ಜಮೀರ್ ಅಹ್ಮದ್. ಸಿದ್ದರಾಮಯ್ಯ ಅವರೇ 2028ರವರೆಗೂ ಸಿದ್ದರಾಮಯ್ಯ ಸಿಎಂ ಎಂದು ರಿಪೀಟ್ ಮಾಡಿರುವ ಜಮೀರ್, ಸೆಪ್ಟೆಂಬರ್, ನವೆಂಬರ್, ಡಿಸೆಂಬರ್, ಸಂಕ್ರಾಂತಿ ಕ್ರಾಂತಿಯೆಲ್ಲ ಭಸ್ಮವಾದವು. ಕ್ರಾಂತಿ ಎಂದವರಿಗೇ ಈಗ ಬೇದಿ ಆಗ್ತಿದೆ ಎಂದು ಲೇವಡಿ ಮಾಡಿದ್ದಾರೆ. ಬೀದಿಲಿ ಹೋಗೋ ದಾಸಯ್ಯನನ್ನು ತಂದು ಇವರೇ ನಿಮ್ಮ ಮುಂದಿನ ಸಿಎಂ ಎಂದು ಹೈಕಮಾಂಡ್ ಹೇಳಿದರೆ ಅದಕ್ಕೆ ಬದ್ಧ ಎಂದಿದ್ದಾರೆ ಜಮೀರ್ ಅಹ್ಮದ್.
ಅಷ್ಟೇ ಅಲ್ಲ ಶಾಸಕರಲ್ಲದವರೂ ಸಿಎಂ ಆಗಬಹುದು ಎಂದಿದ್ದಾರೆ. ಶಾಸಕರಲ್ಲದವರೂ ಸಿಎಂ ಆಗಬಹುದು. ಆದರೆ, ಸಿಎಂ ಆದ 6 ತಿಂಗಳ ಒಳಗೆ ವಿಧಾನಸಭೆ ಅಥವಾ ವಿಧಾನಪರಿಷತ್ ಸದಸ್ಯರಾಗಬೇಕು. ಇದು ನಿಯಮ. ಈ ನಿಯಮವನ್ನೂ ನೆನಪಿಸಿರುವ ಜಮೀರ್ ಅಹ್ಮದ್, ಆ ರೀತಿಯದ್ದೊಂದು ಚರ್ಚೆ ಶುರುವಾದರೂ ಆಶ್ಚರ್ಯ ಇಲ್ಲ ಎಂಬ ಸಂದೇಶ ಕೊಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಮಗನ ಮುಖದಲ್ಲಿ ಹಸುನ್ಮುಖ ಕಾಣುತ್ತಿದೆ.



