ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ʻಸಿಎಂ ಕುರ್ಚಿʼಗಾಗಿ ದೊಡ್ಡ ಹೋರಾಟವೇ ನಡೆಯುತ್ತಿದೆ. ಎಲ್ಲವೂ ಗುಪ್ತ್ ಗುಪ್ತ್ ಹೋರಾಟವೇ. ಬಹಿರಂಗವಾಗಿ ಯಾರಿಗೂ ಅಸಮಾಧಾನವಿಲ್ಲ. ಆಕ್ರೋಶ ಇಲ್ಲ. ನೋವೂ ಇಲ್ಲ. ಎಲ್ಲವೂ ಸುಸೂತ್ರವಾಗಿದೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಒಳಗೊಳಗೆ ಏನೇನೋ ನಡೆಯುತ್ತಿದೆ. ಹೀಗಿರುವಾಗಲೇ ಇಂಧನ ಸಚಿವರೂ ಆಗಿರುವ ಕೆಜೆ ಜಾರ್ಜ್ ಅವರಿಗೆ ಶ್ರೀಕೃಷ್ಣನಾಗುವ ಯೋಗ ಬಂದಿದೆ. ಅಂದರೆ ಮಹಾಭಾರತದಲ್ಲಿ ಕೌರವರು, ಪಾಂಡವರ ʻಕುರುಕ್ಷೇತ್ರʼ ಶುರುವಾಗುವ ಮೊದಲು ಶ್ರೀಕೃಷ್ಣ ಸಂಧಾನ ನಡೆದಿದ್ದ ಹಾಗೆ.. ಈಗ ಜಾರ್ಜ್ ಸಂಧಾನ ಬಂದಿದೆ. ಕೆಜೆ ಜಾರ್ಜ್, ಸಿದ್ಧರಾಮಯ್ಯ ಗುಂಪಿನ ಶಾಸಕ. ಸಚಿವ. ಜೊತೆಗೆ ಕರ್ನಾಟಕದಲ್ಲಿ ಸೋನಿಯಾ ಗಾಂಧಿಯವರ ನಂಬಿಗಸ್ತ ಬಂಟರಲ್ಲಿ ಒಬ್ಬರು. ಏನು ಸೂತ್ರ ತಂದಿರಬಹುದು..?
ಜಾರ್ಜ್ ಅವರು ಭಾನುವಾರ ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಅವರ ಜೊತೆ ಸುಮಾರು ಹೊತ್ತು ಮಾತನಾಡಿದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲಿಯೂ ಕೂಡಾ ಗಂಟೆಗಳಷ್ಟು ಹೊತ್ತು ಚರ್ಚೆ ಮಾಡಿ.. ಆನಂತರ ನೇರವಾಗಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಅಂದಹಾಗೆ ಡಿಕೆ ಶಿವಕುಮಾರ್ ಅವರೇ ಜಾರ್ಜ್ ಮನೆಗೆ ಹೋಗಿ ಭೇಟಿ ಮಾಡಿರುವುದು ವಿಶೇಷ.
ಇಷ್ಟಕ್ಕೂ ಸದ್ಯಕ್ಕೆ ಬಹಿರಂಗವಾಗಿರುವಂತೆ ಜಾರ್ಜ್ ಕೊಟ್ಟಿರುವ ಸಂಧಾನ ಸೂತ್ರಗಳೇನು ಎಂದರೆ..
ಅಧಿಕಾರ ಹಂಚಿಕೆ ಅಥವಾ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ಚರ್ಚಿಸಿ ಸೂಕ್ತ ನಿರ್ಧಾರ ಮಾಡಲಿದೆ. ಅಲ್ಲಿಯವರೆಗೆ ತಾಳ್ಮೆ ವಹಿಸಬೇಕು.
ರಾಹುಲ್‌ಗಾಂಧಿ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಅವರು ವಾಪಸಾದ ಬಳಿಕ ಮಾತನಾಡೋಣ. ಅಲ್ಲಿಯವರಗೆ ಸಮಾಧಾನದಿಂದ ಇರಬೇಕು.
ತಮ್ಮ ಬಣದ ಶಾಸಕರು ಮಾಧ್ಯಮಗಳಿಗೆ ಮಾತನಾಡದಂತೆ ನಿರ್ಬಂಧ ವಿಧಿಸಬೇಕು.
ಯಾವುದೇ ಬಣದ ನಾಯಕರೂ ಅನಗತ್ಯ ವಿವಾದ ಸೃಷ್ಟಿಸಿ ಪ್ರತಿಪಕ್ಷಗಳಿಗೆ ಆಹಾರವಾಗುವುದು ಬೇಡ.
ವರಿಷ್ಠರ ಮಟ್ಟದಲ್ಲಿ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿ ನಿರ್ಧಾರವಾಗಲಿ. ಅಲ್ಲಿಯವರೆಗೂ ತಾಳ್ಮೆ..ತಾಳ್ಮೆ..ತಾಳ್ಮೆ.
ಇದು ಜಾರ್ಜ್ ಅವರು ಹೇಳಿದ್ದಾರೆ ಎಂಬ ಮಾತು. ಹೇಳಿರಬಹುದು. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಏಕೆಂದರೆ ವಿವಾದವಾಗುವಂತ ಯಾವ ಸಂದೇಶವೂ ಇಲ್ಲ. ಆದರೆ.. ಇದಕ್ಕೆ ಡಿಕೆ ಶಿವಕುಮಾರ್ ಏನು ಹೇಳಿರಬಹುದು ಎಂಬ ಕುತೂಹಲವಂತೂ ಇದೆ.
ಯಾವುದೇ ರಾಜಕೀಯ ಬೆಳವಣಿಗೆ ನಡೆದರೂ ಅಧಿಕಾರ ಹಸ್ತಾಂತರ ಅಥವಾ ಸಂಪುಟ ಪುನರ್‌ರಚನೆ ಕುರಿತು ರಾಹುಲ್‌ಗಾಂಧಿ ಅವರು ದೇಶಕ್ಕೆ ವಾಪಸಾದ ಬಳಿಕವೇ ಸ್ಪಷ್ಟತೆ ದೊರೆಯಲಿದೆ. ನ.27 ರಿಂದ 30 ರ ನಡುವೆ ಈ ಬಗ್ಗೆ ಸ್ಪಷ್ಟ ಸಂದೇಶ ಸಿಗಲಿದೆ.
ಭಾನುವಾರ ಖರ್ಗೆ ಮನೆಗೆ ಸಿದ್ದರಾಮಯ್ಯ ಬಣದ ಹಿರಿಯ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಮೊದಲಾದವರು ಭೇಟಿ ಕೊಟ್ಟರೆ, ಡಿಕೆ ಶಿವಕುಮಾರ್ ಜೊತೆ ಗುರುತಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಆಹ್ವಾನದ ನೆಪದಲ್ಲಿ ಭೇಟಿ ಮಾಡಿದ್ದಾರೆ. ಇದರ ನಡುವೆ ಸಚಿವರಾದ ಬೈರತಿ ಸುರೇಶ್, ಕೆ.ಜೆ. ಜಾರ್ಜ್, ಶಾಸಕರಾದ ರೂಪಕಲಾ ಶಶಿಧರ್, ಎ.ಎಸ್. ಪೊನ್ನಣ್ಣ, ನಂಜೇಗೌಡ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದಾರೆ.



