ಮಂಡ್ಯದಲ್ಲಿ ಭರ್ಜರಿಯಾಗಿ ಗೆದ್ದಿದ್ದಾರೆ ಕುಮಾರಸ್ವಾಮಿ. ರಾಜ್ಯದಲ್ಲಿಯೇ ಅತೀ ಹೆಚ್ಚು ಅಂತರದಲ್ಲಿ ಗೆದ್ದ ಎರಡನೇ ಸಂಸದ ಕುಮಾರಸ್ವಾಮಿ. ಮೊದಲನೆಯವರು ಕಾಗೇರಿ. ಅವರು ೩ ಲಕ್ಷದ ೩೦ ಸಾವಿರಕ್ಕೂ ಹೆಚ್ಚು ಅಂತರದಲ್ಲಿ ಗೆದ್ದಿದ್ಧಾರೆ. ಈಗ ಕುಮಾರಸ್ವಾಮಿಯವರೇನೋ ಗೆದ್ಧಾಯ್ತು. ಮುಂದೆ..?
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಕುಮಾರಸ್ವಾಮಿ ತೆರವು ಮಾಡಬೇಕು. ಆಗ ಅಸೆಂಬ್ಲಿ ಬೈ ಎಲೆಕ್ಷನ್ ನಡೆಯುತ್ತದೆ. ಆಗ ಕ್ಯಾಂಡಿಡೇಟ್ ಯಾರು..? ಎಲ್ಲರ ಕಣ್ಣೂ ಡಿಕೆ ಸುರೇಶ್ ಅವರ ಮೇಲಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ ಸೋಲು ಕಂಡಿದ್ಧಾರೆ. ಸಹಜವಾಗಿಯೇ ಚನ್ನಪಟ್ಟಣಕ್ಕೆ ಅವರು ಕಾಂಗ್ರೆಸ್ ಕ್ಯಾಂಡಿಡೇಟ್ ಆಗ್ತಾರಾ..? ಆ ಬಗ್ಗೆ ಯಾವುದೇ ಚಿಂತನೆ ಸದ್ಯಕ್ಕಿಲ್ಲ. ಮಾಧ್ಯಮದವರಿಗೆ ಆ ಬಗ್ಗೆ ಚಿಂತನೆಯಿರಬೇಕು ಅಷ್ಟೇ ಎಂದಿದ್ಧಾರೆ ಡಿಕೆ ಶಿವಕುಮಾರ್.
ಡಿ.ಕೆ.ಸುರೇಶ್ ಸೋಲು ನನ್ನ ವೈಯಕ್ತಿಕ ಸೋಲು ಎಂದಿರುವ ಡಿಕೆ ಶಿವಕುಮಾರ್ ಸೋತೆವು ಎಂದು ಮನೆಯಲ್ಲಿ ಕುಳಿತುಕೊಳ್ಳುವವನು ನಾನಲ್ಲ. ನನ್ನನ್ನು ನಂಬಿರುವ ಜನ, ಕಾರ್ಯಕರ್ತರಿಗೆ ಶಕ್ತಿ ತುಂಬಲು ಕೆಲಸ ಮಾಡುತ್ತೇನೆ. ನಮ್ಮ ಕಾರ್ಯಕರ್ತರ ರಕ್ಷಣೆ ಮಾಡಲು ತಂತ್ರ, ಪ್ರತಿತಂತ್ರ ಏನು ಮಾಡಬೇಕೋ ಎಲ್ಲವೂ ಗೊತ್ತಿದೆ. ದೊಡ್ಡ, ದೊಡ್ಡ ನಾಯಕರೇ ಸೋತಿದ್ದಾರೆ. ಈಗಾಗಿರುವ ಸೋಲಿನಿಂದ ಚೇತರಿಸಿಕೊಳ್ಳಬೇಕಿದೆ ಎಂದು ಹೇಳಿದ್ಧಾರೆ.
ಡಾ.ಸಿಎನ್ ಮಂಜುನಾಥ್ ಒಳ್ಳೆಯ ವ್ಯಕ್ತಿ : ಡಿಕೆ ಶಿವಕುಮಾರ್
ನನ್ನ ಕ್ಷೇತ್ರದಲ್ಲಿ ಡಾ.ಸಿ.ಎನ್.ಮಂಜುನಾಥ್ ಗೆಲುವು ಸಾಧಿಸಿದ್ದು, ಅವರಿಗೆ ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಪಕ್ಷಕ್ಕಿಂತ ಅಲ್ಲಿ ವ್ಯಕ್ತಿ ಗೆದ್ದಿದ್ದಾರೆ. ಆದರೂ, ಇಷ್ಟು ದೊಡ್ಡ ಅಂತರದಲ್ಲಿ ಸೋಲಿನ ನಿರೀಕ್ಷೆ ಮಾಡಿರಲಿಲ್ಲ. ಡಿ.ಕೆ.ಸುರೇಶ್ ಉತ್ತಮ ಕೆಲಸ ಮಾಡಿದ್ದು, ಆಡಳಿತ ವಿರೋಧ ಇರಲಿಲ್ಲ. ಜನರು ಡಾ.ಮಂಜುನಾಥ್ ಅವರಿಗೆ ಅವಕಾಶ ನೀಡಬೇಕು ಎಂದು ಅವರನ್ನು ಗೆಲ್ಲಿಸಿದ್ದಾರಷ್ಟೆ. ಕನಕಪುರ ಕ್ಷೇತ್ರದಲ್ಲಿ 60 ಸಾವಿರ ಮತಗಳ ಮುನ್ನಡೆ ಪಡೆಯುವ ನಿರೀಕ್ಷೆಯಿತ್ತು. ಆದರೆ, ಅಷ್ಟು ಕಡಿಮೆ ಅಂತರ ಬಂದಿದ್ದನ್ನು ನಿರೀಕ್ಷಿಸಿರಲಿಲ್ಲ. ಈ ಫಲಿತಾಂಶದ ಮೂಲಕ ಜನರು ನೀಡಿರುವ ಸಂದೇಶವನ್ನು ಅರಿಯುತ್ತೇನೆ. ಪ್ರಜ್ಞಾವಂತ ಮತದಾರರ ತೀರ್ಪನ್ನು ಒಪ್ಪುತ್ತೇನೆ ಎಂದು ಹೇಳಿದ್ಧಾರೆ ಡಿಕೆ ಶಿವಕುಮಾರ್.
ಚನ್ನಪಟ್ಟಣ್ಣ ಬಿಜೆಪಿಗೋ.. ಜೆಡಿಎಸ್ʻಗೋ..?
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಇನ್ನು 6 ತಿಂಗಳ ಒಳಗೆ ಬೈಎಲೆಕ್ಷನ್ ನಡೆಯಬೇಕು. ಈಗಿನಿಂದಲೇ ಬೆಳವಣಿಗೆಗಳು ಆರಂಭವಾಗಿವೆ. ಕ್ಷೇತ್ರ ತ್ಯಾಗ ಮಾಡುವ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನು ಉಪಚುನಾವಣೆಗೆ ಕಣಕ್ಕಿಳಿಸಬೇಕು ಎಂಬ ಕೂಗು ಜೆಡಿಎಸ್ ಪಾಳೆಯದಿಂದ ಕೇಳಿಬಂದಿದೆ. ಆದರೆ, ಈ ಬಗ್ಗೆ ಇದುವರೆಗೆ ನಿಖಿಲ್ ಆಗಲಿ ಅಥವಾ ಕುಮಾರಸ್ವಾಮಿ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದಕ್ಕೆ ಇನ್ನೂ ಸಮಯವೂ ಕೂಡಿ ಬಂದಿಲ್ಲ. ಆದರೆ, ಕಳೆದ ಬಾರಿ ಕುಮಾರಸ್ವಾಮಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್ ಅವರು ಉಪಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯೋಗೇಶ್ವರ್ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಅಳಿಯ ಆಗಿರುವ ಡಾ.ಸಿ.ಎನ್.ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿಸುವವರೆಗೆ ತಂತ್ರ ರೂಪಿಸಿ ಯಶಸ್ವಿಯಾದವರು. ಹೀಗಾಗಿ, ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ತಾವೇ ಅಭ್ಯರ್ಥಿಯಾಗಬೇಕು ಎಂದು ಪಟ್ಟು ಹಿಡಿಯಬಹುದು.
ಕುಮಾರಸ್ವಾಮಿ ಸದ್ಯದ ಮಟ್ಟಿಗೆ ನಿಖಿಲ್ ಅವರನ್ನು ಚುನಾವಣೆಗೆ ನಿಲ್ಲಿಸುವ ಮನಸ್ಸಿನಲ್ಲಿ ಇಲ್ಲ. ಮಂಡ್ಯದಲ್ಲಿ ಸೋತು, ರಾಮನಗರದಲ್ಲೂ ಸೋತಿರುವ ನಿಖಿಲ್ ಅವರನ್ನು ಮತ್ತೆ ಕ್ಷೇತ್ರ ಬದಲಾವಣೆ ಇಚ್ಚೆ ಇದ್ದಂತಿಲ್ಲ. ಸೋಲಲಿ.. ಗೆಲ್ಲಲಿ.. ರಾಮನಗರದಲ್ಲೇ ಇರಲಿ ಎಂಬ ಅಭಿಪ್ರಾಯ ಕುಮಾರಸ್ವಾಮಿ ಅವರದ್ದು ಎನ್ನಲಾಗಿದೆ.
ಸದ್ಯದ ಮಟ್ಟಿಗೆ ಚನ್ನಪಟ್ಟಣದ ಕ್ಯಾಂಡಿಡೇಟ್ ಬಗ್ಗೆ ಸೀರಿಯಸ್ಸಾದ ಚರ್ಚೆಗಳಂತೂ ನಡೆಯುತ್ತಿಲ್ಲ.



