ಚನ್ನಪಟ್ಟಣ. ಸದ್ಯಕ್ಕೆ ನಡೆಯಬೇಕಿರುವ 3 ಉಪಚುನಾವಣೆಗಳ ಪೈಕಿ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿರುವುದು ಚನ್ನಪಟ್ಟಣ. ಚನ್ನಪಟ್ಟಣಕ್ಕೆ ನಾನೇ ಮೈತ್ರಿ ಅಭ್ಯರ್ಥಿ ಎಂದು ಸಿಪಿ ಯೋಗೇಶ್ವರ್ ಹೇಳ್ತಾ ಬಂದಿದ್ದಾರೆ. ಆದರೆ ಮೈತ್ರಿ ಕ್ಯಾಂಡಿಡೇಟ್ ಫೈನಲ್ ಆಗಿಲ್ಲ. ಇದ್ದಕ್ಕಿದ್ದಂತೆ ನಿಖಿಲ್ ಹೆಸರು ಕೇಳಿ ಬರೋಕೆ ಶುರುವಾಗಿದೆ. ನಾನು ಅಭ್ಯರ್ಥಿ ಅಲ್ಲ ಎಂದು ನಿಖಿಲ್ ಹೇಳುತ್ತಿದ್ದಾರಾದರೂ, ಅದೇ ಫೈನಲ್ ಎನ್ನುವುದಕ್ಕೆ ಯಾರೂ ತಯಾರಿಲ್ಲ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ ಸುರೇಶ್ ನಿಲ್ಲುವುದು ಕನ್ಫರ್ಮ್ ಎನ್ನಲಾಗ್ತಾ ಇದೆ. ಅದಕ್ಕೆ ಕಾರಣವಾಗಿರುವುದು ಮಾಜಿ ಶಾಸಕ ಎಂಸಿ ಅಶ್ವತ್ಥ್.
ಬಿಜೆಪಿಯಲ್ಲಿ : ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾದ ನಂತರ ಯೋಗೇಶ್ವರ್ ಸಾಕಷ್ಟು ಚುರುಕಾಗಿದ್ದರು. ಕ್ಷೇತ್ರದ ಉಪ ಚುನಾವಣೆ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಅವರು ಹಲವು ಬಾರಿ ದೆಹಲಿಗೂ ಹೋಗಿ ಬಂದಿದ್ದರು. ಆದರೆ ಯೋಗೇಶ್ವರ್ ಅವರೇ ಅಭ್ಯರ್ಥಿಯಾಗುತ್ತಾರಾ ಎನ್ನುವುದು ಖಚಿತವಾಗಿಲ್ಲ. ಈ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಬಿಜೆಪಿಯ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಮಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಜತೆಗೆ ತಾವು ಪಕ್ಷೇತರವಾಗಿಯಾದರೂ ಸ್ಪರ್ಧಿಸುವುದು ನಿಶ್ಚಿತ ಎಂದು ಘೋಷಿಸಿರುವುದು ಉಭಯ ಪಕ್ಷಗಳ ಮೈತ್ರಿಗೆ ಸಂಕಷ್ಟ ಉಂಟು ಮಾಡಿದೆ. ಕುಮಾರಸ್ವಾಮಿ ವಿರುದ್ಧಕೆಂಡಾ ಮಂಡಲವಾಗಿರುವ ಯೋಗೇಶ್ವರ್ ಶತಾಯಗತಾಯ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ.
ಜೆಡಿಎಸ್ʻನಲ್ಲಿ : ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರ, ಜೆಡಿಎಸ್ ತೆರವುಗೊಳಿಸಿರುವ ಕ್ಷೇತ್ರವಾಗಿರುವುದರಿಂದ ಅದನ್ನು ತಾವೇ ಉಳಿಸಿಕೊಂಡು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಒಲವು ಹೊಂದಿದ್ದಾರೆ. ಇದು ಮಿತ್ರ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿದೆ.
ಕಾಂಗ್ರೆಸ್ಸಿನಲ್ಲಿ : ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವ ವಿಚಾರದಲ್ಲಿ ಹಲವು ಹೆಸರು ಕೇಳಿ ಬರುತ್ತಿದೆ. ಅದರಲ್ಲಿ ಪ್ರಮುಖವಾಗಿ, ಡಿ.ಕೆ.ಸುರೇಶ್, ಕ್ಷೇತ್ರದ ಮಾಜಿ ಶಾಸಕ ಎಂ.ಸಿ.ಅಶ್ವಥ್ ಮತ್ತು ರಘುನಂದನ್ ರಾಮಣ್ಣ ಅವರ ಹೆಸರು ಕೇಳಿ ಬರುತ್ತಿತ್ತು. ಈಗ ಖುದ್ದು, ಅಶ್ವಥ್ ಅವರೇ, ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಕಣಕ್ಕಿಳಿಯಲಿದ್ದಾರೆ. ಚುನಾವಣೆಯಲ್ಲಿ ಗೆದ್ದು ರಾಜ್ಯ ಸಂಪುಟದಲ್ಲಿ ಸಚಿವರಾಗಲಿ ಎಂದು ಹೇಳಿರೋದು ಎಂಸಿ ಅಶ್ವತ್ಥ್. ಅಷ್ಟೇ ಅಲ್ಲ, ಅದಕ್ಕಾಗಿ ಚಂಡಿಕಾ ಹೋಮವನ್ನೂ ನಡೆಸುತ್ತಿದ್ದಾರೆ.
ಚನ್ನಪಟ್ಟಣ ಸೇರಿದಂತೆ ರಾಜ್ಯದಲ್ಲಿ ನಡೆಯಬೇಕಿರುವ ಮೂರು ಅಸೆಂಬ್ಲಿ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಿದೆ. ನವೆಂಬರ್ 13ರಂದು ಚುನಾವಣೆ ನಡೆಯಲಿದ್ದು, ನ.28ಕ್ಕೆ ಫಲಿತಾಂಶ ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 25 ಅಂತಿಮ ದಿನವಾಗಿದೆ. ಇಷ್ಟು ದಿನ ಅವರು ಅಭ್ಯರ್ಥಿ, ಇವರು ಅಭ್ಯರ್ಥಿ ಎಂದು ಊಹಾಪೋಹದ ಸುದ್ದಿಗಳದ್ದೇ ಕಾರುಬಾರು ನಡೆಯುತ್ತಿತ್ತು. ಈಗ, ದಿನಾಂಕ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಅಭ್ಯರ್ಥಿಗಳನ್ನು ಇನ್ನು ಏಳೆಂಟು ದಿನಗಳಲ್ಲಿ ಫೈನಲ್ ಮಾಡಬೇಕಿದೆ. ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣದ ಉಪಚುನಾವಣೆ ನಡೆಯಲಿದೆ.



