ಕುಮಾರಸ್ವಾಮಿ ವಿರುದ್ಧ ಡಿಕೆ ಶಿವಕುಮಾರ್ ಹೇಳಿಕೆಗಳು :
ಎಚ್.ಡಿ.ಕುಮಾರಸ್ವಾಮಿ ಅವರು ಯೂ ಟರ್ನ್ ಕುಮಾರ, ಅವರದು ಕ್ಷಣಕ್ಕೊಂದು ಮಾತು, ಕ್ಷಣಕ್ಕೊಂದು ಬಣ್ಣ.
ದೊಡ್ಡ ಆಲದನಹಳ್ಳಿ ಕೆಂಪೇಗೌಡನ ಮಗ, ಯಾರಿಗೂ ಹೆದರುವ ಮಗ ಅಲ್ಲ
ನನ್ನ ಅಜ್ಜಯ್ಯನ ಸುದ್ದಿ ನಿಮಗೆ ಬೇಡ, ಯಡಿಯೂರಪ್ಪರನ್ನ ಜೈಲಿಗೆ ಹಾಕಿಸಿದ್ದು ಯಾರು ಎಂದು ಗೊತ್ತಿದೆ.
ತಿಮ್ಮಪ್ಪ ಕಾಸು ಬಿಡಲ್ಲ, ಮಂಜುನಾಥ ಮಾತು ಬಿಡಲ್ಲ ಅಂತಾರೆ. ಮಂಜುನಾಥಸ್ವಾಮಿ ಸಹವಾಸಕ್ಕೆ ಹೋಗಬೇಡ
ಬ್ರಿಟಿಷರ ಕೈಲೇ ಕಾಂಗ್ರೆಸ್ ಮುಗಿಸೋಕೆ ಆಗಲಿಲ್ಲ, ಇನ್ನು ಕುಮಾರಸ್ವಾಮಿ ಕೈಲಿ ಆಗುತ್ತಾ..?
ನೀನು ಸಿಎಂ ಆಗಿದ್ದಾಗ ʻಡಿಕೆಶಿ ಅಪ್ಪ ಅಮ್ಮನಿಗೆ ಹುಟ್ಟಿಲ್ಲ ಎಂದಾಗಲೇ ನಾನು ಹೆದರಿಲ್ಲʼ ನೀನೇ ಕೊನೆಗೆ ಕ್ಷಮೆ ಕೇಳಿದ್ದೆ. ಈಗ ಹೆದರುತ್ತೀನಾ..?
ನನ್ನ ಅಧ್ಯಕ್ಷತೆಯಲ್ಲಿ 136 ಸೀಟು ಬಂತು, ನಿನ್ನ ಅಧ್ಯಕ್ಷತೆಯಲ್ಲಿ ಎಷ್ಟು ಬಂತು.. ಬರೀ 19 ಸೀಟು..
ಸ್ವಂತ ಅಣ್ಣ, ಅಣ್ಣನ ಮಕ್ಕಳ ಏಳಿಗೆಯನ್ನೇ ಕುಮಾರಸ್ವಾಮಿ ಸಹಿಸಲ್ಲ. ಇನ್ನು ನನ್ನ ಏಳಿಗೆ ಸಹಿಸ್ತಾನಾ..
ನಿನ್ನದು ಖಾಲಿ ಮಾತು, ಬುಡಬುಡಕೆ..
ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ. ಅವರನ್ನ ಮುಟ್ಟೋಕೂ ಸಾಧ್ಯ ಇಲ್ಲ.
ವಿಜಯೇಂದ್ರ ವಿರುದ್ಧ ಡಿಕೆ ಶಿವಕುಮಾರ್ ಹೇಳಿಕೆಗಳು :
ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕೃಪಾಕಟಾಕ್ಷದಿಂದ ವಿಜಯೇಂದ್ರ ಗೆಲುವು ಸಾಧಿಸಿದರು.
ವಿಜಯೇಂದ್ರ ಭ್ರಷ್ಟಾಚಾರದ ಬ್ರಹ್ಮ..
ಯಡಿಯೂರಪ್ಪ ಜೈಲಿಗೆ ಹೋಗಿದ್ದು ಯಾರಿಂದ ಅನ್ನೋದು ವಿಜಯೇಂದ್ರಂಗೆ ಗೊತ್ತಿಲ್ವಾ..?
ತನ್ನ ಅಪ್ಪನನ್ನು ಯಾಕೆ ಜೈಲಿಗೆ ಕಳಿಸಿದೆ ಅಂತಾ ವಿಜಯೇಂದ್ರನೇ ಹೇಳಲಿ..
ನಿಮ್ಮದೇ ಪಕ್ಷದ ಶಾಸಕ ಯತ್ನಾಳ್, ಗೂಳಿಹಟ್ಟಿ ಶೇಖರ್‌ಗೆ ಉತ್ತರ ಕೊಡು, ಆಮೇಲೆ ನನಗೆ ಉತ್ತರ ಕೊಡು..
ಹೀಗೆ.. ಡಿಕೆ ಶಿವಕುಮಾರ್ ಗುಡುಗುತ್ತಲೇ ಇದ್ದಾರೆ. ಅವರ ಮೊದಲ ದಾಳಿ ಕುಮಾರಸ್ವಾಮಿ ಅವರ ವಿರುದ್ಧ. ಆಸ್ತಿ ಲೆಕ್ಕಾಚಾರದ ವಿಷಯ. ಎರಡನೇ ದಾಳಿ ವಿಜಯೇಂದ್ರ ಅವರ ಮೇಲೆ. ಭ್ರಷ್ಟಾಚಾರದ ವಿರುದ್ಧ.
ಡಿಕೆ ಶಿವಕುಮಾರ್ ತಂತ್ರ ಯಶಸ್ವಿ :
ಹೌದು, ಮೈಸೂರು ಚಲೋ ಪಾದಯಾತ್ರೆ ನಡೆಯುತ್ತಿರುವುದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರೋ ಮುಡಾದ 14 ಸೈಟುಗಳನ್ನು ಪಡೆದಿರುವ ಪ್ರಕರಣದ ಬಗ್ಗೆ. ಸಿದ್ದರಾಮಯ್ಯ, ತಮ್ಮ ಪತ್ನಿಯ ಹೆಸರಲ್ಲಿ ಮೈಸೂರಿನ ವಿಜಯನಗರದಲ್ಲಿ 14 ಸೈಟು ಪಡೆದಿರುವ ವಿಷಯವೇ ಈಗ ವಿವಾದದ ಕೇಂದ್ರ ಬಿಂದು. ನನ್ನ ಪತ್ನಿ, ಮುಡಾಗೆ ಕೊಟ್ಟಿದ್ದ ಜಮೀನಿಗೆ ಪರಿಹಾರವಾಗಿ ಸೈಟು ಪಡೆದಿದ್ದೇನೆ, ಏನ್ ತಪ್ಪು ಅಂತಿದ್ಧಾರೆ ಸಿದ್ದರಾಮಯ್ಯ. ಆದರೆ.. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಮೇಲೆ ಸಂಶಯಗಳೇ ಹೆಚ್ಚಾಗಿವೆ.
ದಲಿತರೊಬ್ಬರ ಭೂಮಿಯನ್ನು ಸರ್ಕಾರ ಅಂದರೆ ಮುಡಾ ವಶಪಡಿಸಿಕೊಳ್ಳುತ್ತೆ. ಆನಂತರ ಡಿನೋಟಿಫೈ ಮಾಡುತ್ತೆ. ಈ ಅವಧಿಯಲ್ಲಿ ಜಮೀನಿನ ಮಾಲೀಕ ಸತ್ತೂ ಹೋಗಿರುತ್ತಾನೆ. ಆ ಜಮೀನನ್ನು ಪಾರ್ವತಿ ಸಿದ್ದರಾಮಯ್ಯ ಅವರ ಅಣ್ಣ ಮಲ್ಲಿಕಾರ್ಜುನ್ ಖರೀದಿ ಮಾಡಿ, ತಂಗಿಗೆ ಅರಿಶಿನ ಕುಂಕುಮ ಎಂದು ಕೊಡ್ತಾರೆ. ಪ್ರತೀ ಹಂತದಲ್ಲೂ ತಪ್ಪಾಗಿದೆ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಆದರೆ.. ಆ ಒಂದೊಂದು ತಪ್ಪುಗಳನ್ನು ಕಣ್ತಪ್ಪಿನ ತಪ್ಪು ಎಂದು ಹೇಳುತ್ತಿದೆ ಸಿದ್ದರಾಮಯ್ಯ ಮತ್ತವರ ಸರ್ಕಾರ.
ಆದರೆ.. ಇಡೀ ಪಾದಯಾತ್ರೆಯಲ್ಲಿ ಚರ್ಚೆಯಾಗಬೇಕಿದ್ದ ಪ್ರಮುಖ ವಿಷಯವನ್ನೇ ಡೈವರ್ಟ್ ಮಾಡಿದ್ದು ಡಿಕೆ ಶಿವಕುಮಾರ್. ಈಗ ಇಡೀ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಅವರಿಗಿಂತ ಹೆಚ್ಚಾಗಿ ʻಡಿಕೆ ಶಿವಕುಮಾರ್ ವರ್ಸಸ್ ಕುಮಾರಸ್ವಾಮಿʼ ಹಾಗೂ ʻಡಿಕೆಶಿ ವರ್ಸಸ್ ವಿಜಯೇಂದ್ರʼ ಎಂದು ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯನವರ ಹಗರಣದ ವಿಷಯವೇ ಸೈಡಿಗೆ ಹೋಗಿದೆ. ಡಿಕೆ ಶಿವಕುಮಾರ್ ಮಾಸ್ಟರ್ ಸ್ಟ್ರೋಕ್ ಎಂದಿದ್ದು ಇದೇ ಕಾರಣಕ್ಕೆ.



