ಡಿ.ಕೆ.ಶಿವಕುಮಾರ್ (DK Shivakumar) ಅವರು ನನ್ನ ಬಳಿ ಕಮಿಷನ್ (Commission) ಕೇಳಿಲ್ಲ. ಭಾವೋದ್ವೇಗಕ್ಕೆ ಒಳಗಾಗಿ ಆ ರೀತಿ ಮಾತನಾಡಿದ್ದೆ. ಇದರಿಂದ ಡಿ.ಕೆ.ಶಿವಕುಮಾರ್ (DK Shivakumar) ಅವರ ಭಾವನೆಗೆ ಘಾಸಿಯಾಗಿದ್ದು, ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ. ನಾನು ಭಾವುಕನಾಗಿ ಆ ರೀತಿ ಮಾತನಾಡಿದೆ. ಇದನ್ನೇ ಪ್ರತಿಪಕ್ಷಗಳು (BJP) ಅಸ್ತ್ರವಾಗಿಸಿಕೊಂಡು ಅಜ್ಜಯ್ಯನ ಮಠದಲ್ಲಿಪ್ರಮಾಣ ಮಾಡಲಿ ಎಂದು ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸುವುದು ಸರಿಯಲ್ಲ. ನನ್ನ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ. ನಾನು ಸಣ್ಣವನು. ತಪ್ಪು ಮಾಡಿ ಪಶ್ಚಾತ್ತಾಪ ಪಟ್ಟಿದ್ದೇನೆ. ಈ ಬಗ್ಗೆ ಡಿ.ಕೆ.ಶಿವಕುಮಾರ್ ಅವರಲ್ಲಿ ಕ್ಷಮೆ (Sorry) ಕೋರುತ್ತೇನೆ. ತನಿಖಾ ವರದಿ ಬಳಿಕವೇ ಬಿಲ್ ಪಾವತಿ ಮಾಡಲಿ. ನಮ್ಮ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ಪ್ರತಿಪಕ್ಷ ಬಿಜೆಪಿಯವರು ಗುತ್ತಿಗೆದಾರರ ಬಾಕಿ ಬಿಲ್ ಕೊಡಿಸಲು ನೆರವಾಗಲಿ.
ಇದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ, ಅಜ್ಜಯ್ಯನ ಮೇಲೆ ಆಣೆ ಮಾಡಿ (Ajjayya) ಎಂದು ಸವಾಲು ಹಾಕಿದ್ದ ಗುತ್ತಿಗೆದಾರ ಹೇಮಂತ್ (Contractor Hemanth) ಅವರ ಮಾತು. ಗುತ್ತಿಗೆದಾರರು ಕೇವಲ ತಮ್ಮ ಮಾತನ್ನಷ್ಟೇ ಹಿಂದೆಗೆದುಕೊಂಡಿಲ್ಲ. ನಮ್ಮ ಜೊತೆ ಇರಿ, ನಮ್ಮ ಹೋರಾಟಕ್ಕೆ ಬಲ ಕೊಡಿ, ನಮ್ಮ ಕಷ್ಟವನ್ನು ಬಗೆಹರಿಸಿ ಎಂದು ಯಾರ್ಯಾರನ್ನು ಕೇಳಿಕೊಂಡಿದ್ದರೋ.. ಎಲ್ಲರನ್ನೂ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಹೇಮಂತ್ ಸೇರಿದಂತೆ ಹಲವು ಗುತ್ತಿಗೆದಾರರು ಯಡಿಯೂರಪ್ಪ, ಆರ್. ಅಶೋಕ್, ಬಸವರಾಜ ಬೊಮ್ಮಾಯಿ (BS Yedyurappa, R.Ashok, Basavaraja Bommai) ಸೇರಿದಂತೆ ಹಲವು ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡಿದ್ದರು. ಇದೀಗ ಪ್ರತಿಪಕ್ಷಗಳೇ ನಮ್ಮ ಮಾತನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಶುಕ್ರವಾರವಷ್ಟೇ ಮಾತನಾಡಿದ್ದ ಗುತ್ತಿಗೆದಾರ ಕೆಂಪಣ್ಣ (Contractor Kempanna) ಕೂಡಾ ಇದೇ ಮಾತು ಹೇಳಿದ್ದರು. ಗುರುವಾರ ತಾವೇ ಮಾಡಿದ್ದ 15% ಆರೋಪವನ್ನು ತಾವೇ ತಳ್ಳಿ ಹಾಕಿದ್ದರು. ಹೇಮಂತ್ ಕೂಡಾ ಕ್ಷಮೆ ಕೇಳ್ತಾರೆ ಎಂದಿದ್ದರು. ಬೆಂಕಿಯಿಂದ ಬಾಣಲೆಗೆ ಬಿದ್ದಂತಾಯ್ತು ಎಂಬ ತಮ್ಮದೇ ಹೇಳಿಕೆಗೆ ಸಂಪೂರ್ಣ ಉಲ್ಟಾ ಹೊಡೆದಿದ್ದರು. ಇದೀಗ ನೋಡಿದರೆ, ಕೆಂಪಣ್ಣ ಅವರಷ್ಟೇ ಅಲ್ಲದೆ, ಹೇಮಂತ್ ಕೂಡಾ ಆರೋಪ ನಿರಾಕರಿಸುತ್ತಿದ್ದಾರೆ. ಹಾಗಾದರೆ ಗುತ್ತಿಗೆದಾರರ ಸಮಸ್ಯೆ ಬಗೆಹರೀತಾ..? ಗೊತ್ತಿಲ್ಲ. ಹಣವಂತೂ ರಿಲೀಸ್ ಆಗಿಲ್ಲ. ಆರೋಪವಂತೂ ವಾಪಸ್ ಆಗಿದೆ. ಬೇಷರತ್ತಾಗಿ.
ಗುತ್ತಿಗೆದಾರರು ಕಮಿಷನ್ ಆರೋಪ ಹಿಂಪಡೆದುಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಅಜ್ಜಯ್ಯನ ಮಠಕ್ಕೆ ಬಂದು ಆಣೆ ಮಾಡಿ ಎಂದಿದ್ದ ಗುತ್ತಿಗೆದಾರ ಹೇಮಂತ್ ಮತ್ತಿತರರು ತಮ್ಮ ಹೇಳಿಕೆ ವಾಪಸ್ ಪಡೆದಿದ್ದಾರೆ. ಗುತ್ತಿಗೆದಾರರು ನೋವಿನಲ್ಲಿದ್ದು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಅವರನ್ನು ಬಳಸಿಕೊಂಡ ಸಾಮ್ರಾಟ ಅಶೋಕ ಚಕ್ರವರ್ತಿ, ನವರಂಗಿ ನಾರಾಯಣ, ಸಿ.ಟಿ ರವಿ, ಗೋಪಾಲಯ್ಯ ಈಗ ಏನು ಹೇಳುತ್ತಾರೆ? ಉತ್ತರ ಕೊಡಲಿ\’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಾಕೀತು ಮಾಡಿದರು.
‘ನಮ್ಮ ಅಜ್ಜಯ್ಯನ ಸಹವಾಸ ಏನು ಎಂದು ಅವರಿಗೆಲ್ಲಾ ಗೊತ್ತಿಲ್ಲ. ನಾನೀಗ ತಕ್ಷಣಕ್ಕೆ ಉತ್ತರ ನೀಡಲು ಹೋಗುವುದಿಲ್ಲ. ನಮಗೆ ನವರಂಗಿದು, ಚಕ್ರವರ್ತಿದು ಎಲ್ಲರದ್ದೂ ಗೊತ್ತಿದೆ. ಎಲ್ಲವನ್ನು ಒಮ್ಮೆಗೆ ಬಿಟ್ಟರೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ನಾನು ರಾಜ್ಯದ ಜನರಿಗೆ ಉತ್ತರ ನೀಡುವ ಜವಾಬ್ದಾರಿ ಹೊಂದಿದ್ದೇನೆ. ಅದನ್ನು ಮಾಡುತ್ತೇನೆ. ಬಿಜೆಪಿ ಸರ್ಕಾರದ ಅವಧಿಯ ಅಕ್ರಮ ಮತ್ತು ನಕಲಿ ಕಾಮಗಾರಿಗಳ ಬಗ್ಗೆ ಅಘಾತಕಾರಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಸಿಎಂ ಕೂಡ ಮಾತನಾಡಲು ಹೇಳಿದ್ದರು. ಆದರೆ, ಬಿಬಿಎಂಪಿ ಬೆಂಕಿ ದುರಂತ ಮತ್ತಿತರ ಕಾರ್ಯ ಒತ್ತಡದಿಂದ ಸಾಧ್ಯವಾಗಿರಲಿಲ್ಲ. ಸ್ವಾತಂತ್ರ್ಯ ದಿನಾಚರಣೆ ಮುಗಿಯಲಿ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಎಲ್ಲವನ್ನೂ ಬಯಲಿಗೆಳೆಯುತ್ತೇನೆ ಎಂದು ಗುಡುಗಿದ್ದಾರೆ.



