ರಾಜ್ಯದಲ್ಲಿ ರಾಜಕೀಯ ಸಮರ, ತಂತ್ರ ತಾರಕಕ್ಕೇರುವುದರ ಜೊತೆಗೆ ನಿಗೂಢವಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರೀಗ ರಾಹುಲ್ ಗಾಂಧಿ ಜೊತೆಯಲ್ಲೂ ಮಾತನಾಡಿದ್ದಾರೆ. ಇನ್ನೂ ಕೆಲವರನ್ನು ನಿಗೂಢವಾಗಿ ಭೇಟಿ ಮಾಡಿದ್ದಾರೆ. ಇತ್ತ ಸಚಿವ ಜಮೀರ್ ಅಹ್ಮದ್ ಇದ್ದಕ್ಕಿದ್ದಂತೆ ಹರಿಯಾಣಕ್ಕೆ ಹೋಗಿ ಸುರ್ಜೇವಾಲಾ ಅವರನ್ನು ಮೀಟ್ ಮಾಡಿ ಬಂದಿದ್ದಾರೆ. ಈಗ ನಡೆಯುತ್ತಿರೋದು ನಿಗೂಢ ರಾಜಕೀಯ.
‘ನಾವೆಲ್ಲಾ ರಾಜಕಾರಣಿಗಳು, ಖಂಡಿತ ರಾಜಕೀಯ ಮಾಡಿಯೇ ಮಾಡುತ್ತೇವೆ. ನಮ್ಮ ಅನುಕೂಲಕ್ಕೆ ಯಾವಾಗ, ಯಾರನ್ನು ಭೇಟಿ ಮಾಡಬೇಕೋ ಮಾಡುತ್ತೇವೆ. ನನ್ನ ಭೇಟಿಗಳ ಮಾಹಿತಿ ನಾನು ಬಹಿರಂಗಪಡಿಸುವುದಿಲ್ಲ. ಪ್ರತಿಯೊಂದಕ್ಕೂ ಕಾಲವೇ ಉತ್ತರ ನೀಡಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆ ಹೇಳಿಕೆಯ ನಿಗೂಢತೆಯನ್ನು ಅರ್ಥ ಮಾಡಿಕೊಳ್ಳಬೇಕಿರುವುದು ಸಿಎಂ ಸಿದ್ದರಾಮಯ್ಯ ಮತ್ತು ಅವರ ಟೀಂ.
ಭಾನುವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಐಸಿಸಿ ವರಿಷ್ಠರನ್ನು ಭೇಟಿ ಮಾಡಿದ್ದೀರಾ ಎಂಬ ಪ್ರಶ್ನೆಗೆ, ‘ಅದನ್ನು ನಾನು ಬಹಿರಂಗಪಡಿಸಲ್ಲ. ನಾನೇಕೆ ಅದನ್ನೆಲ್ಲ ಬಹಿರಂಗಪಡಿಸಲಿ? ಕಾಲವೇ ಉತ್ತರ ನೀಡುತ್ತದೆ. ಒಂದು ಮಾತಿನಲ್ಲಿ ಹೇಳುವುದಾದರೆ, ಕಾಲ ಎಲ್ಲದಕ್ಕೂ ತನ್ನ ಉತ್ತರ ನೀಡಲಿದೆ’ ಎಂದು ಹೇಳಿದ್ದಾರೆ ಡಿಕೆ.ಡಿ.ಕೆ.ಶಿವಕುಮಾರ್ ಅವರು ಜ.18 ರಂದು ಭಾನುವಾರ ನಿಗದಿಯಾಗಿದ್ದ ಸ್ವಿಜರ್‌ಲೆಂಡ್ ದಾವೋಸ್ ಪ್ರವಾಸ ರದ್ದುಪಡಿಸಿ, ಭಾನುವಾರ ದೆಹಲಿಗೆ ಭೇಟಿ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಎಂಜಿ-ನರೇಗಾ ಪರ ಪಿಸಿಸಿ ಅಧ್ಯಕ್ಷರ ಸಭೆಯಲ್ಲೂ ಭಾಗವಹಿಸಿದ್ದ ಡಿಕೆ ಶಿವಕುಮಾರ್ ದೆಹಲಿ ಪ್ರವಾಸವೇ ನಿಗೂಢ.
ಶುಕ್ರವಾರ ದೆಹಲಿಗೆ ಹೋಗಿದ್ದ ಡಿಕೆ, ಅದೇ ದಿನ ರಿಟರ್ನ್ ಆಗಬೇಕಿತ್ತು. ಅಲ್ಲಿಯೇ ಉಳಿದುಕೊಂಡರು. ಅದಾದ ನಂತರ ಶನಿವಾರ ಸಂಜೆ ಬೀದರ್‌ಗೆ ದೆಹಲಿಯಿಂದ ಬಂದು, ಭೀಮಣ್ಣ ಖಂಡ್ರೆ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು, ಬೆಂಗಳೂರಿಗೆ ಬರದೆ.. ಮತ್ತೆ ದೆಹಲಿಗೆ ಹೋದರು. ಸಿಡ್ಜರ್‌ಲೆಂಡ್ ದಾವೋಸ್ ಟೂರ್ ಕ್ಯಾನ್ಸಲ್ ಮಾಡಿರುವ ಡಿಕೆ, ದೆಹಲಿಯಲ್ಲಿ ಹಲವರನ್ನು ಭೇಟಿ ಮಾಡುತ್ತಿದ್ದಾರೆ.
ಇತ್ತ ಸಚಿವ ಜಮೀರ್ ಅಹ್ಮದ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿದ್ದ ಸಚಿವ ಜಮೀರ್ ಅಹಮದ್ ಖಾನ್ ಅವರು ಸುರ್ಜೆವಾಲಾ ಕರೆ ಹಿನ್ನೆಲೆಯಲ್ಲಿ ಅಲ್ಲಿಂದಲೇ ಶನಿವಾರ ಸಂಜೆಯೇ ದೆಹಲಿಗೆ ತೆರಳಿ,ಭಾನುವಾರ ಮುಂಜಾನೆ ದೆಹಲಿಯಿಂದ ಹರಿಯಾಣಕ್ಕೆ ತೆರಳಿ ಕೈತಾಲ್‌ನಲ್ಲಿದ್ದ ಸುರ್ಜೇವಾಲಾ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿ ಮಾಡಿದ್ದಾರೆ.ಜಮೀರ್ ಅಹಮದ್ ಖಾನ್ ಅವರು ಸುರ್ಜೇವಾಲಾ ಭೇಟಿ ನಂತರ ಮತ್ತೆ ದೆಹಲಿ ಮಾರ್ಗವಾಗಿ ಹುಬ್ಬಳ್ಳಿಗೆ ವಾಪಸಾಗಿದ್ದಾರೆ. ಭೇಟಿಯ ಕಾರಣ ನಿಗೂಢವಾಗಿಯೇ ಇದೆ.



