ಡಿಕೆ ಶಿವಕುಮಾರ್ ಔತಣಕೂಟದಲ್ಲಿ 25ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಮಯದಲ್ಲಿಯೇ ಡಿನ್ನರ್ ಪಾರ್ಟಿ ನಡೆದಿದೆ. ಇದು ರವಾನಿಸಿರುವ ಸಂದೇಶವೇ ಬೇರೆ. ಏಕೆಂದರೆ ಡಿಕೆ ಶಿವಕುಮಾರ್ ಡಿಸಿಎಂ ಅಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷರೂ ಹೌದು. ಯಾರಾದರೂ ಪ್ರತ್ಯೇಕವಾಗಿ ನಿಂತು, ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದರೆ.. ಗದರಿಸಿ ತಿದ್ದಿ ಬುದ್ದಿ ಹೇಳಬೇಕಾಗಿರುವುದು ಕೂಡಾ ಡಿಕೆ ಶಿವಕುಮಾರ್. ಈಗ ಡಿಕೆ ಯವರೇ ಡಿನ್ನರ್ ಪಾರ್ಟಿ ಆಯೋಜಿಸಿರುವುದು, ಆ ಪಾರ್ಟಿಗೆ 25ಕ್ಕೂ ಹೆಚ್ಚು ಶಾಸಕರು ಬಂದಿರುವುದೇ ವಿಶೇಷ.
ಈ ಡಿನ್ನರ್ ಪಾರ್ಟಿಯಲ್ಲಿ ಆಹಾರ ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ,
ಮೀನುಗಾರಿಕೆ ಸಚಿವ ಮಾಂಕಾಳು ವೈದ್ಯ, ಎಂಸಿ ಸುಧಾಕರ್, ಶರಣ ಪ್ರಕಾಶ್ ಪಾಟೀಲ್, ಚೆಲುವರಾಯಸ್ವಾಮಿ ಇದ್ದರು. ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಅವರಷ್ಟೇ ಅಲ್ಲದೆ, ಕೂಡ್ಲಿಗಿ ಶಾಸಕ ಎನ್.ಟಿ. ಶ್ರೀನಿವಾಸ್, ಕುಣಿಗಲ್ ಶಾಸಕ ಡಾ.ಹೆಚ್.ಡಿ.ರಂಗನಾಥ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್, ಶೃಂಗೇರಿ ಶಾಸಕ ಟಿ,ಡಿ.ರಾಜೇಗೌಡ, ಪುಲಕೇಶಿನಗರ ಶಾಸಕ ಎ.ಸಿ.ಶ್ರೀನಿವಾಸ್, ಮಾಲೂರು ಶಾಸಕ ಕೆ.ಎನ್.ನಂಜೇಗೌಡ, ಆನೇಕಲ್ ಶಾಸಕ ಆನೇಕಲ್ ಶಿವಣ್ಣ, ಕೋಲಾರ ಶಾಸಕ ಕೊತ್ತನೂರು ಮಂಜುನಾಥ್, ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ, ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ, ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್, ಬಾದಾಮಿ ಶಾಸಕ ಭೀಮಸೇನ್ ಚಿಮ್ಮನಕಟ್ಟಿ, ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ಇದಲ್ಲದೇ ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಕೂಡ ಭಾಗಿಯಾಗಿದ್ದಾರೆ.
ಕೌಂಟರ್ ಡಿನ್ನರ್ ಪಾರ್ಟಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ಅಹಿಂದ, ವಾಲ್ಮೀಕಿ ಸಮುದಾಯದ ಮುಖಂಡರ ಸಭೆ ನಡೆಸಿದ ಬೆನ್ನಲ್ಲೇ. ಶಿವಕುಮಾರ್ ಅವರು ಈ ಔತಣಕೂಟ ಆಯೋಜಿಸಿದ್ದಾರೆ. ಸಚಿವ ಎಂಬಿ ಪಾಟೀಲ್ ಅವರೇನೋ ಇಬ್ಬರಿಗೂ ನಾನೇ ಡಿನ್ನರ್ ಪಾರ್ಟಿ ಮಾಡಿಸ್ತೇನೆ ಎಂದು ಹೇಳಿದ್ದಾರೆ. ಇದರ ನಡುವೆಯೇ ಈ ಮೀಟಿಂಗ್ ನಡೆದಿದೆ.
ಡಿಕೆ ಡಿನ್ನರ್ ಮೀಟಿಂಗ್ಗೆ ಡಿಸಿಎಂ ಆಪ್ತ ಹಾಗೂ ಖ್ಯಾತ ಮೈನಿಂಗ್ ಉದ್ಯಮಿ ದೊಡ್ಡಣ್ಣವರ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅವರ ಆತಿಥ್ಯದಲ್ಲಿ ಸಭೆ ಜರುಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಸಭೆ ಆಯೋಜಿಸಿದ್ದಾರೆ.
ಸಭೆಯಲ್ಲಿ ಏನಾಯ್ತು..?
ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬಗ್ಗೆಯೇ ಡಿಕೆಶಿ ಕರೆದಿದ್ದ ಡಿನ್ನರ್ ಮೀಟಿಂಗ್‌ನಲ್ಲಿ ಹೆಚ್ಚು ಚರ್ಚೆಯಾಗಿದೆ. ಯತೀಂದ್ರಗೆ ನೋಟೀಸ್ ಕೊಡಿ ಎಂದು ಕೆಲ ಶಾಸಕರು ಡಿಕೆಶಿಗೆ ಒತ್ತಡ ಹಾಕಿದ್ದಾರೆ. ಈ ವೇಳೆ ಎಲ್ಲದಕ್ಕೂ ಸರಿಯಾಗಿ ಉತ್ತರ ಕೊಡುತ್ತೇನೆ, ಕಾಯಿರಿ ಎಂದು ಡಿಕೆಶಿ ತಿಳಿಸಿದ್ದಾರೆ ಎನ್ನಲಾಗಿದೆ. ಸಿಎಂ ಬದಲಾವಣೆ ವಿಚಾರ ಡಿನ್ನರ್ ಮೀಟಿಂಗ್‌ನಲ್ಲಿ ಚರ್ಚೆಯಾಗಿದ್ದು, ಅಗತ್ಯ ಬಿದ್ದರೆ ಹೈಕಮಾಂಡ್ ಭೇಟಿಗೆ ಹೋಗುತ್ತೇವೆ ಎಂದು ಕೆಲವು ಶಾಸಕರು ಡಿಕೆ ಶಿವಕುಮಾರ್‌ಗೆ ತಿಳಿಸಿದ್ದಾರೆ. ‘ನಿಮಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಡಲೇಬೇಕು’. ‘ಈ ಬಗ್ಗೆ ಹೈಕಮಾಂಡ್‌ಗೆ ಮನವಿ ಮಾಡ್ಕೊಳ್ಳುತ್ತೇವೆ’ ಹೀಗಂತ ಕೆಲ ಶಾಸಕರು ಡಿಕೆಶಿಗೆ ಹೇಳಿದ್ದಾರೆ. ಇದರ ಬಗ್ಗೆ ಯಾವುದೇ ಯೆಸ್ ಅಥವಾ ನೋ ಹೇಳದೆ ಇದ್ದ ಡಿಕೆ ಪರೋಕ್ಷವಾಗಿ ಶಾಸಕರ ದೆಹಲಿ ಯಾತ್ರೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.



