ರಾಮನಗರ. ಈ ಜಿಲ್ಲೆಯ ಹೆಸರು ಈಗ ಬದಲಾಗಿದೆ. ಇನ್ನು ಮುಂದೆ ರಾಮನಗರ ಜಿಲ್ಲೆಯಲ್ಲಿ ರಾಮನೂ ಇರಲ್ಲ. ನಗರವೂ ಇರಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಇರುತ್ತದೆ. ಹಾಗಂತ ರಾಮನಗರದ ಹೆಸರು ಬದಲಾಯ್ತಾ.. ಎಂದರೆ ಅಲ್ಲ. ಬದಲಾಗಿರುವುದು ಜಿಲ್ಲೆಯ ಹೆಸರಷ್ಟೇ.
ಬೆಂಗಳೂರು ಸೌಥ್ ಎಂದು ಬದಲಿಸವುದಕ್ಕೆ ಕರ್ನಾಟಕ ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ದಿನದಿಂದಲೂ ಹಠಕ್ಕೆ ಬಿದ್ದಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ತಮ್ಮ ಹಠವನ್ನು ಸಾಧಿಸಿದ್ದಾರೆ. ಅದಕ್ಕೆ ಕಾರಣ ಕುಮಾರಸ್ವಾಮಿ ಎಂಬುದು ರಹಸ್ಯವೇನಲ್ಲ.
ರಾಷ್ಟ್ರಪತಿ ತಿರಸ್ಕರಿಸಿದ್ದ ಶಿಫಾರಸು ಮತ್ತೆ ಜಾರಿ ಹೇಗೆ..?
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಲು 2024ರ ಜುಲೈನಲ್ಲೇ ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಿತ್ತು. ಈ ನಿರ್ಣಯವನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಲು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಕೋರಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯವು ಈ ಪ್ರಸ್ತಾವನೆಯನ್ನು ತಿರಸ್ಕರಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ಇದರ ನಡುವೆಯೂ ಇದೀಗ ಸಚಿವ ಸಂಪುಟ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಷಯ ಮಂಡಿಸಿ, ಮರು ನಾಮಕರಣ ಪ್ರಸ್ತಾವನೆಗೆ ಅನುಮೋದನೆ ಪಡೆದಿದ್ದಾರೆ.
‘ಸಂವಿಧಾನ 7ನೇ ಪರಿಚ್ಛೇದವು ಒಕ್ಕೂಟ ಪಟ್ಟಿಯಲ್ಲಿ ಬರುವ ವಿವಿಧ ವಿಷಯಗಳ ಬಗ್ಗೆ ವಿವರಣೆ ನೀಡುತ್ತದೆ. ರಾಜ್ಯ ಪಟ್ಟಿಯ ಸಂಖ್ಯೆ 18ರಲ್ಲಿ ಬರುವ ಭೂಮಿ ವಿಷಯವು ರಾಜ್ಯ ಸರ್ಕಾರದ ವಿಷಯ. ರಾಜ್ಯಪಟ್ಟಿಯ ವಿಷಯ ಸಂಖ್ಯೆ 45ರಲ್ಲಿ ಬರುವ ಭೂ ಕಂದಾಯದ ವಿಚಾರವೂ ರಾಜ್ಯದ ವಿಷಯ. ಹೀಗಾಗಿ ಜಿಲ್ಲೆಯ ಹೆಸರು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರದ ಒಪ್ಪಿಗೆ ಅಗತ್ಯವಿಲ್ಲ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ (4) ರಲ್ಲಿ ರಾಜ್ಯಕ್ಕೆ ವಲಯ, ತಾಲೂಕು, ಜಿಲ್ಲೆ ರಚನೆ, ಬದಲಾವಣೆ, ರದ್ದುಪಡಿಸುವ ಹಾಗೂ ಹೆಸರು ಮರುನಾಮಕರಣ ಮಾಡುವ ಅವಕಾಶವಿದೆ. ಹೀಗಾಗಿ ಅನುಮೋದನೆ ನೀಡಬೇಕು’ ಎಂದು ಕಾನೂನು ನಿಯಮ ಉಲ್ಲೇಖಿಸಿ ಜಿಲ್ಲೆಯ ಹೆಸರು ಬದಲಾವಣೆಗೆ ಅನುಮೋದನೆ ಪಡೆಯಲಾಗಿದೆ.
ಜಿಲ್ಲೆಗಳ ಹೆಸರು ನಾಮಕರಣ ಮಾಡುವುದು ರಾಜ್ಯದ ವಿಷಯ. ಕಂದಾಯ ಇಲಾಖೆಯು ಮಾಹಿತಿಗಾಗಿ ಅಷ್ಟೇ ಕೇಂದ್ರಕ್ಕೆ ಮರುನಾಮಕರಣ ತೀರ್ಮಾನವನ್ನು ಕಳುಹಿಸಿತ್ತು. ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಕೇಂದ್ರಕ್ಕೆ ಅಧಿಕಾರ ಇಲ್ಲ. ರಾಮನಗರ ಎಂದು ನಾಮಕರಣ ಮಾಡುವಾಗಲೂ ಕೇಂದ್ರದ ಅನುಮತಿ ಪಡೆದಿಲ್ಲ. ಹೀಗಾಗಿ ಕೇಂದ್ರದ ಅನುಮತಿ ಬೇಕಾಗಿಲ್ಲ ಎಂದು ಹೇಳಿದ್ದಾರೆ ಉಪಮುಖ್ಯಮಂತ್ರಿ ಡಿಕೆ.
ಬದಲಾಗಿರುವುದು ಜಿಲ್ಲೆಯ ಹೆಸರು ಮಾತ್ರ.. ರಾಮನಗರ ಅಲ್ಲ..!
‘ರಾಮನಗರ ಜಿಲ್ಲಾ ಕೇಂದ್ರವಾಗಿಯೇ ಮುಂದುವರೆಯಲಿದೆ. ಕೇವಲ ಜಿಲ್ಲೆಯ ಹೆಸರನ್ನು ಮಾತ್ರ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಲಾಗಿದೆ. ಈ ಬಗ್ಗೆ ಶೀಘ್ರ ಆದೇಶ ಹೊರ ಬೀಳಲಿದೆ. ಇನ್ನು ಮುಂದೆ ನನ್ನನ್ನು ಬೆಂಗಳೂರು ದಕ್ಷಿಣ ಜಿಲ್ಲೆಯವನು ಎಂದು ಹೇಳಿದ್ದಾರೆ ಡಿಕೆ ಶಿವಕುಮಾರ್. ಅರ್ಥವಾಗಬೇಕು ಎಂದರೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರು. ಆಧರೆ ಅಧಿಕಾರ ನಡೆಯುವುದು ಮಂಗಳೂರು. ಮಂಗಳೂರು ಜಿಲ್ಲಾ ಕೇಂದ್ರ. ಉತ್ತರ ಕನ್ನಡ ಜಿಲ್ಲೆಯೂ ಅಷ್ಟೇ, ಕಾರವಾರ ಆಢಳಿತದ ಕೇಂದ್ರ. ಬೆಂಗಳೂರು ದಕ್ಷಿಣವೂ ಅಷ್ಟೇ. ಜಿಲ್ಲೆಯ ಹೆಸರು ಮಾತ್ರ ಬದಲಾಗಿದೆ. ರಾಮನಗರ ಪಟ್ಟಣದ/ನಗರದ ಹೆಸರಲ್ಲ.
ರಾಮನಗರ ಈ ಹಿಂದೆ ಬೆಂಗಳೂರು ಜಿಲ್ಲೆಯೇ ಆಗಿತ್ತು. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ಮಾಗಡಿ, ರಾಮನಗರ, ಕನಕಪುರ ಇವೆಲ್ಲವೂ ಬೆಂಗಳೂರಿನಲ್ಲೇ ಇದ್ದವು. ನಾನೂ ಕೂಡಾ ಹಿಂದೆ ಬೆಂಗಳೂರು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ರಾಮನಗರ ಎಂಬುದು ಬೆಂಗಳೂರಿನಿಂದ ಬೇರ್ಪಡಿಸಿ ಮಾಡಿರುವ ಜಿಲ್ಲೆ. ಹೀಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ಹೆಸರು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವಷ್ಟೇ ಎಂದು ಸಮರ್ಥನೆ ಕೊಟ್ಟಿದ್ದಾರೆ ಡಿಕೆ.
ಹಾಗಾದರೆ ಮುಂದೇನು..? ಎಲ್ಲವೂ ಬದಲಾಗುತ್ತದಾ..?
ಜಿಲ್ಲಾ ಕೇಂದ್ರವಾಗಿ ರಾಮನಗರ ಮುಂದುವರೆಯುತ್ತದೆ. ಅದು ಬದಲಾಗಲ್ಲ.
ಜಿಲ್ಲೆಯ ಹೆಸರಷ್ಟೇ ಬದಲಾವಣೆ. ರಾಮನಗರ ಪಟ್ಟಣ/ನಗರ ಅಲ್ಲ.
ಯಾವುದೇ ಭೂ ದಾಖಲೆಗಳು ಇತ್ಯಾದಿಗಳನ್ನು ತಿದ್ದಿಕೊಳ್ಳಬೇಕಾದ, ತಿದ್ದಿಸಬೇಕಾದ ಅಗತ್ಯವೂ ಇಲ್ಲ.
ನಮ್ಮ ಬಳಿ ಇರುವ ದಾಖಲೆಗಳಲ್ಲಿ ಹೆಸರು ಬದಲಿಸಿಕೊಳ್ಳಲು ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಹೋಗಬೇಕಾಗಿಲ್ಲ.
ಹೊಸದಾಗಿ ಬರೆಯುವ ದಾಖಲೆಗಳಲ್ಲಿ ಮಾತ್ರ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಮೂದಿಸಲಾಗುತ್ತದೆ. ಹಳೆಯ ದಾಖಲೆಗಳಲ್ಲಿ ರಾಮನಗರ ಜಿಲ್ಲೆ ಎಂದು ಇದ್ದರೂ ಯಾವುದೇ ಸಮಸ್ಯೆಯಾಗುವುದಿಲ್ಲ.



