ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ಧರಾಮಯ್ಯ ಅವರ ಮಧ್ಯೆ ಒಂದು ಒಪ್ಪಂದ ಆಗಿದೆ. ಆ ಒಪ್ಪಂದದ ಪ್ರಕಾರ ಎರಡೂವರೆ ವರ್ಷದ ನಂತರ ಡಿಕೆ ಶಿವಕುಮಾರ್ ಅವರಿಗೆ ಸಿದ್ಧರಾಮಯ್ಯ ಅಧಿಕಾರ ಬಿಟ್ಟುಕೊಡಬೇಕು. ಹೀಗೊಂದು ಸುದ್ದಿ ಸಿದ್ಧರಾಮಯ್ಯ ಸಿಎಂ ಆದಾಗಿನಿಂದ ಕೇಳುತ್ತಲೇ ಇದೆ. ಅದನ್ನು ಸಿದ್ಧರಾಮಯ್ಯ ಮತ್ತು ಡಿಕೆ ಇಬ್ಬರೂ ನಿರಾಕರಿಸುವುದಿಲ್ಲ. ಹೌದು ಎಂದು ಒಪ್ಪಿಕೊಳ್ಳೋದು ಇಲ್ಲ. ಇದೀಗ ಡಿಕೆ ಸಿಎಂ ಆಗಬೇಕು ಎಂಬ ವಾದಕ್ಕೆ ಶಕ್ತಿ ನೀಡಿರುವುದು ರಂಭಾಪುರಿ ಶ್ರೀಗಳು.
ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ವೀರ ಸೋಮೇಶ್ವರ ಸ್ವಾಮೀಜಿ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಬಿಜ್ಜಹಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಸಿದ್ದೇಶ್ವರ ಸ್ವಾಮಿ ದೇವಾಲಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ.. ಸಿಎಂ ಬದಲಾವಣೆ ಕುರಿತಂತೆ ಕೇಂದ್ರ ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರು ಸಮಾಲೋಚನೆ ನಡೆಸಬೇಕು. ಒಪ್ಪಂದ ಆಗಿರುವಂತೆ ಡಿಕೆಶಿಗೆ ಅವಕಾಶ ಮಾಡಿಕೊಡಬೇಕು. ಏನು ಒಪ್ಪಂದ ಆಗಿದೆ ಎನ್ನುವುದು ಸಿದ್ದರಾಮಯ್ಯ, ಡಿಕೆಶಿ ಹಾಗೂ ವರಿಷ್ಠರಿಗೆ ಮಾತ್ರ ತಿಳಿದಿದೆ. ಆ ಒಪ್ಪಂದದಂತೆ ನಡೆದುಕೊಂಡರೆ ಎಲ್ಲಾ ರಾಜಕಾರಣಿಗಳಿಗೂ ಗೌರವ ಎಂದಿದ್ದಾರೆ.
ರಂಭಾಪುರಿ ಶ್ರೀಗಳ ಮಾತಿಗೆ ವೀರಶೈವ ಲಿಂಗಾಯತರಲ್ಲಿ ವಿಶೇಷ ಗೌರವ ಮಾನ್ಯತೆ ಇದೆ. ಹಾಗೆ ಹೇಳುವುದಕ್ಕೆ ಕೂಡಾ ಕಾರಣ ಇದೆ. ಒಂದು ಮೂಲದ ಪ್ರಕಾರ ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ ಎಂಬ ಚರ್ಚೆ ಶುರುವಾಯಿತಲ್ಲ. ಅದನ್ನು ಸಿದ್ಧರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದರು. ಸಿದ್ದು ಬಳಗದ ಎಂಬಿ ಪಾಟೀಲ್, ವಿನಯ್ ಕುಲಕರ್ಣಿ, ಕಾಶಪ್ಪನವರ್ ಅವರೇ.. ಹೋರಾಟದ ನೇತೃತ್ವ ವಹಿಸಿದ್ದರು. ಆದರೆ.. ಆ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದವರು ಡಿಕೆ ಶಿವಕುಮಾರ್ ಮಾತ್ರ. ಹೀಗಾಗಿಯೇ.. ರಂಭಾಪುರಿ ಶ್ರೀಗಳು ಬೇಷರತ್ ಆಗಿ ಡಿಕೆ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ ಎನ್ನಲಾಗಿದೆ.
ಈಗಿರುವ ಸಿಎಂ ಹಾಗೂ ರಾಷ್ಟ್ರೀಯ ನಾಯಕರ ಗೌರವವೂ ಉಳಿಯುತ್ತೆ. ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟಪಟ್ಟಿದ್ದಕ್ಕಾಗಿ ಡಿ.ಕೆ.ಶಿವಕುಮಾರ್ ಅವರಿಗೂ ಸಮಾಧಾನ ಆಗುತ್ತೆ. ಈಗಾಗಲೇ ಕೆಲವರು ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಾಗ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಎಲ್ಲಿಯವರೆಗೆ ಡಿಕೆಶಿಗೆ ಸಿಎಂ ಸ್ಥಾನ ಸಿಗುವುದಿಲ್ಲವೋ, ಅಲ್ಲಿಯವರೆಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಿ ಎಂದು ಹೈಕಮಾಂಡ್ ನಾಯಕರು ಕೇಳಬಾರದು. ಅವರಿಗೆ ಸಿಎಂ ಸ್ಥಾನ ಸಿಕ್ಕಿದರೆ ಅವರಾಗಿಯೇ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುತ್ತಾರೆ.. ಎಂದು ಯಾವುದೇ ಕಾಂಗ್ರೆಸ್ ನಾಯಕರಿಗಿಂತ ಪ್ರಬಲವಾಗಿ.. ಡಿಕೆ ಬಣದ ಶಾಸಕರಿಗಿಂತ ಬಲವಾಗಿ ಪ್ರತಿಪಾದಿಸಿದ್ದಾರೆ.
ಡಿಕೆಶಿ ಕಾಂಗ್ರೆಸ್ ಕಾರ್ಯಕರ್ತರು, ಶ್ರೀಗಳು, ಜನತೆ ಬಯಸುತ್ತಾರೆ. ಯಾರು ಏನೇ ಬಯಸಿದರೂ ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ, ನಾವೆಲ್ಲ ಪಕ್ಷ ಕಟ್ಟಿರುವವರು, ಪಕ್ಷದ ಶಿಸ್ತಿನ ಸಿಪಾಯಿಗಳು. ನಾನಾಗಲಿ, ಸಿದ್ದರಾಮಯ್ಯ ಅವರಾಗಲಿ, ಯಾರೇ ಆಗಿರಲಿ, ನಾವೆಲ್ಲರೂ ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳುತ್ತೇವೆ ಎಂದು ಉತ್ತರ ಕೊಟ್ಟಿದ್ದಾರೆ ಡಿಕೆ.



