ದೇಶದಲ್ಲಿ ಅತೀ ದೊಡ್ಡ ಕೇಡರ್ ಬೇಸ್ ಪಾರ್ಟಿ ಇರುವುದು ಬಿಜೆಪಿಗೆ. ಬಿಜೆಪಿಗೆ ಆ ದೊಡ್ಡ ಕೇಡರ್ ಇರುವುದು ಆರೆಸ್ಸೆಸ್ಸಿನಿಂದ ಎನ್ನುವುದು ಗುಟ್ಟೇನಲ್ಲ. ಬಹಿರಂಗವಾಗಿ ಯಾರು ಏನೇ ಅನ್ನಲಿ.. ಟೀಕೆ ಮಾಡಲಿ.. ಬಯ್ಯಲಿ.. ತುಟಿಕ್ ಪಿಟಿಕ್ ಎನ್ನದ ಆರ್.ಎಸ್.ಎಸ್. ಆಯ್ದ ವಿಚಾರಗಳಿಗೆ ಮಾತ್ರ ಮಾತನಾಡುತ್ತದೆ. ಸಂಘಟನೆಯ ವಿಷಯವಂತೂ ಹೇಳುವಂತೆಯೇ ಇಲ್ಲ.
ಸಮಯ ಪಾಲನೆ ಹಾಗೂ ಶಿಸ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲ ಪಾಠಗಳು. ಹೊಸದಾಗಿ ಹೋದವರಿಗೆ ಮಿಲಿಟರಿ ರೂಲ್ಸ್ ಎನ್ನುವಂತೆ ಕಾಣಬಹುದು. ಆದರೆ.. ಸಂಘದ ಕಾರ್ಯಕರ್ತರೇ ಹಾಗೆ. ಆರ್.ಎಸ್.ಎಸ್. ಮಾದರಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಕಾಂಗ್ರೆಸ್ಸಿನ ಹಲವರು ಹೇಳಿದ್ದರಾದರೂ.. ಅದು ಜಾರಿಗೆ ಬಂದಿರಲಿಲ್ಲ. ಆರ್.ಎಸ್.ಎಸ್. ಮಾದರಿ ಅನುಸರಿಸುತ್ತೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಲಾಠಿ ಕೊಟ್ಟು ಡ್ರಿಲ್ ಮಾಡಿ ಕಾಮಿಡಿ ಆಗಿದ್ದವರೇ ಹೆಚ್ಚು. ಆರ್.ಎಸ್.ಎಸ್. ಎಂದರೆ.. ಕೇವಲ ಲಾಠಿ ಅಲ್ಲ. ಅಲ್ಲಿನ ಶಿಸ್ತುಗಳ ಇನ್ನೊಂದು ಲೋಕವನ್ನೇ ನೋಡಬಹುದು. ಆರ್.ಎಸ್.ಎಸ್. ಬಗ್ಗೆ ಹಲವು ಪ್ರಗತಿಪರರು ಬರೆದಿದ್ದಾರಾದರೂ.. ಅದು ಕುರುಡನ ಆನೆಯ ವರ್ಣನೆಯಂತೆ. ಆದರೆ.. ಈ ಬಾರಿ ಆರ್.ಎಸ್.ಎಸ್. ಮಾದರಿಯ ಒಂದಿಷ್ಟು ಸೂತ್ರ ಮುಂದಿಟ್ಟು ಮಾತನಾಡುತ್ತಿರುವುದು ಡಿಕೆ ಶಿವಕುಮಾರ್. ಅವರು ಕೆಪಿಸಿಸಿ ಅಧ್ಯಕ್ಷರೂ ಹೌದು.
ಡಿಕೆ ಸೂತ್ರ ನಂ.೧ : ಕಾಂಗ್ರೆಸ್ ಕುಟುಂಬ
ಪ್ರತಿ ಬೂತ್‌ನಲ್ಲೂ 50 ಮಂದಿ ಸದಸ್ಯರನ್ನು ಒಳಗೊಂಡ ‘ಕಾಂಗ್ರೆಸ್ ಕುಟುಂಬ’ ರೂಪಿಸಿ ಬೂತ್ ಹಾಗೂ ಗ್ರಾಮಗಳಲ್ಲಿ ಯಾವುದೇ ಕಾರ್ಯಕ್ರಮ ಆದರೂ 50 ಮಂದಿ ಸದಸ್ಯರು ಸೇರಿ ತೀರ್ಮಾನ ಮಾಡುವಂತಾಗಬೇಕು. ಯಾರು ಎಷ್ಟೇ ದೊಡ್ಡ ನಾಯಕರಾದರೂ ಈ ಜವಾಬ್ದಾರಿ ತೆಗೆದುಕೊಂಡು ಕಾಂಗ್ರೆಸ್ ಕುಟುಂಬವನ್ನು ಬೆಳೆಸಬೇಕು. ಅಂದರೆ.. ಒಂದೊಂದು ಬೂತ್ʻನಲ್ಲಿ ೫೦ ಕುಟುಂಬಗಳು (೫೦ ಸದಸ್ಯರಲ್ಲ) ಕಾಂಗ್ರೆಸ್ ಸೈನ್ಯಕ್ಕೆ ಸೇರಿದಂತೆ.
ಪ್ರತಿ ಜಿಲ್ಲೆಯಲ್ಲೂ ಪಕ್ಷದ ಕಚೇರಿ ನಿರ್ಮಾಣ : ಪ್ರತಿ ಜಿಲ್ಲೆಗೊಂದು ಜಿಲ್ಲಾ ಕಚೇರಿ ಇರಬೇಕು. ಇನ್ನೊಂದು ವರ್ಷದಲ್ಲಿ ಪಕ್ಷದ ಜಿಲ್ಲಾ ಕಚೇರಿಗಳನ್ನು ಕಟ್ಟಬೇಕು. ಅದರ ಹೊಣೆ ಸಚಿವರದ್ದು. ಪಕ್ಷದ ಜಿಲ್ಲಾ ಕಚೇರಿ ಕಟ್ಟಿ, ಆ ಮೂಲಕ ಅಲ್ಲಿಯೇ ಪ್ರತಿ ತಿಂಗಳೂ ಸಭೆ ನಡೆಸುವ ಪರಿಪಾಠ ಆರಂಭವಾಗಬೇಕು. ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್‌ನಲ್ಲಿ ಯಾರೆಲ್ಲಾ 2 ಅವಧಿ ಹಾಗೂ 10 ವರ್ಷಗಳ ಅಧಿಕಾರ ಮಾಡಿದ್ದಾರೋ ಅವರು ಅಧಿಕಾರ ಬಿಟ್ಟುಕೊಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಕೂಡಾ ಡಿಕೆ ಸೂಚನೆ ಕೊಟ್ಟಿದ್ಧಾರೆ. ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ (ಹಳೆ ಜೆಡಿಎಸ್ ಕಚೇರಿ) ನೆಲಸಮ ಮಾಡಿ ಹೊಸದಾಗಿ ನಿರ್ಮಾಣ ಮಾಡುತ್ತೇವೆ. ಜತೆಗೆ ಪ್ರತಿ ಜಿಲ್ಲೆಯಲ್ಲೂ ಒಂದು ವರ್ಷದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಲು ಅಡಿಪಾಯ ಹಾಕುತ್ತೇವೆ. ಎಲ್ಲಾ ಜಿಲ್ಲೆಗಳಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರು ಇದರ ಹೊಣೆ ಹೊರಬೇಕು ಎಂದು ಹೇಳಿದ್ಧಾರೆ.
ಪಕ್ಷದ ಕಚೇರಿಗೆ ಸಿಎಂ ಕೂಡಾ ಬರಬೇಕು : ಇನ್ನು ಪ್ರತಿ ತಿಂಗಳಿಗೊಮ್ಮೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರಿಂದ ಒಂದು ದಿನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡುವ ಕೆಲಸ ಆಗಲಿದೆ ಎಂದಿರುವ ಡಿಕೆ ಶಿವಕುಮಾರ್ ಈ ಬಗ್ಗೆ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆ ಮಾಡಿದ್ದು, ಪ್ರತಿ ತಿಂಗಳು ಒಂದು ದಿನ ಕಾಂಗ್ರೆಸ್ ಕಚೇರಿಯಲ್ಲಿ ಕೂತು ಕಾರ್ಯಕರ್ತರನ್ನು ಭೇಟಿ ಮಾಡುವ ಕೆಲಸ ಮಾಡಲಿದ್ದೇವೆ. ಇದನ್ನು ಸರಿಯಾದ ವ್ಯವಸ್ಥೆ ಮೂಲಕ ಆಯೋಜಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕೇವಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷದ ಸದಸ್ಯತ್ವ ಹೊಂದಿರುವವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇನ್ನು ಮಂತ್ರಿಗಳು ವಾರ ಮುಂಚಿತವಾಗಿ ದಿನಾಂಕ ನಿಗದಿ ಮಾಡಿ ಕಾರ್ಯಕರ್ತರನ್ನು ಭೇಟಿ ಮಾಡಬೇಕು ಎಂದು ಸೂಚನೆ ನೀಡಿದ್ಧಾರೆ.



