ನಾನು ಎಲ್ಲಿರ್ತಿನಿ ಅನ್ನೋದು ಮುಖ್ಯ ಅಲ್ಲ. 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು.
ಪವರ್ ವಿಚಾರ ಮುಖ್ಯ ಅಲ್ಲ. ಶ್ರಮಕ್ಕೆ ಫಲ ಸಿಗುತ್ತದೆ. ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ ಇದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಫಲ ಇದೆ.
ನಾನು ಇಲ್ಲಿ ಪರ್ಮನೆಂಟ್ ಆಗಿ ಇರೋದಕ್ಕೆ ಆಗಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಐದೂವರೆ ವರ್ಷ ಆಯ್ತು ಆಗ್ಲೆ, ಸ್ವಲ್ಪ ದಿನಕ್ಕೆ ಆರು ವರ್ಷ ಆಗತ್ತೆ. ಡಿಸಿಎಂ ಆದ ತಕ್ಷಣವೇ ಬಿಡಬೇಕು ಅಂತಿದ್ದೆ. ಖರ್ಗೆ, ರಾಹುಲ್ ಗಾಂಧಿ ಹೇಳಿದರು. ಮುಂದುವರೆದೆ. ಬೇರೆಯವರಿಗೆ ಅವಕಾಶ ಕೊಡಬೇಕು.
ಇಂತಹ ಮಾತುಗಳನ್ನೆಲ್ಲ ಹೇಳಿರುವುದು ಡಿಕೆ ಶಿವಕುಮಾರ್. ಎಲ್ಲ ಮೀಡಿಯಾಗಳಲ್ಲಿ ಡಿಕೆ ಶಿವಕುಮಾರ್ ತ್ಯಾಗದ ಮಾತು ಎಂದೇ ಸುದ್ದಿಯಾಗಿದೆ. ಆದರೆ.. ವಾಸ್ತವವಾಗಿ ಆಗಿರುವುದೇ ಬೇರೆ, ಡಿಕೆ ಶಿವಕುಮಾರ್.. ಯಾವತ್ತಿಗೂ ತ್ಯಾಗದ ಮಾತನಾಡುವುದು.. ತ್ಯಾಗರಾಜನಾಗುವುದು ಸಾಧ್ಯವೇ ಇಲ್ಲ.
ಸಿನಿಮಾಗಳಲ್ಲಿ ತ್ಯಾಗರಾಜ ಎಂಬ ಬಿರುದು ರಮೇಶ್ ಅರವಿಂದ್ ಅವರಿಗ ಮಾತ್ರ ಸೀಮಿತ. ರಾಜಕೀಯದಲ್ಲಿ ತ್ಯಾಗರಾಜರು ಇರೋದಿಲ್ಲ. ಸಿನಿಮಾಗಳಲ್ಲಿ ತ್ಯಾಗರಾಜ ಎಂದರೆ ಏನರ್ಥ ಗೊತ್ತಲ್ಲ. ಪ್ರೀತಿಸುವುದು, ಕಾಮಿಸುವುದು, ಮೋಹಿಸುವುದು.. ಕೊನೆಗೆ ಅದು ಬೇರೆಯವರ ಪಾಲು ಎಂದು ಗೊತ್ತಾದಾಗ.. ʻಮಹಾತ್ಯಾಗʼ ಘೋಷಿಸಿ ಸೈಡಿಗೆ ಹೋಗಿಬಿಡೋದು. ಅವರನ್ನು ನೋಡಿ ಒಳಗೊಳಗೇ ನೋವಾದರೂ ಸಂತೋಷ ಪಡೋದು.. ಅಥವಾ ಸಂತೋಷ ಪಟ್ಟವರಂತೆ ನಟಿಸೋದು. ಹಾಗೆಯೇ ಬದುಕೋದು. ಆದರೆ.. ರಾಜಕೀಯದಲ್ಲಿ ಅದೆಲ್ಲ ಸಾಧ್ಯ ಇಲ್ಲ. ಏಕೆಂದರೆ ಇದು ಡಿಕೆ ಶಿವಕುಮಾರ್.
ಡಿಕೆ ಇಷ್ಟೆಲ್ಲ ಹೇಳಿದ್ದು ಇಂದಿರಾ ಗಾಂಧಿ ಜನ್ಮದಿನ ಕಾರ್ಯಕ್ರಮದಲ್ಲಿ. ಇದರ ಜೊತೆಗೆ ಡಿಕೆ ಅದೇ ವೇದಿಕೆಯಲ್ಲಿ ʻʻ ಜಗತ್ತಿನಲ್ಲಿ ಎರಡು ರೀತಿಯ ಜನ ಇದ್ದಾರೆ. ಒಬ್ಬ ಕೆಲಸ ಮಾಡುವವನು, ಮತ್ತೊಬ್ಬ ಅದರ ಲಾಭ ಪಡೆದುಕೊಳ್ಳುವವನು. ನೀವು ಮೊದಲ ಗುಂಪಿಗೆ ಸೇರಿ ಎಂದು ಇಂದಿರಾ ಗಾಂಧಿ ಹೇಳಿದ್ದರುʼʼ ಎಂಬ ಮಾತು ಹೇಳಿದ್ದಾರೆ. ಆ ಮಾತು ಇನ್ಯಾರಿಗೋ ಕೊಟ್ಟಿರುವ ಟಾಂಗ್ ಎನ್ನವುದು ರಾಜಕೀಯ ಪಂಡಿತರ ವಿಶ್ಲೇಷಣೆ.
ಡಿಕೆ ಶಿವಕುಮಾರ್ ಅವರಿಗೆ ಚದುರಂಗವೂ ಗೊತ್ತು. ಕಬಡ್ಡಿಯೂ ಗೊತ್ತು. ಕುಸ್ತಿಯೂ ಗೊತ್ತು. ಖೋಖೋ ಕೂಡಾ ಗೊತ್ತು. ಏನ್ಸಾರ್.. ತ್ಯಾಗದ ಮಾತಾಡ್ತಿದ್ದೀರಿ ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟಿರೋ ಡಿಕೆ ʻʻ ತ್ಯಾಗ ಅಥವಾ ಓಡಿ ಹೋಗುವ ಬಗ್ಗೆ ಮಾತನಾಡುತ್ತಿಲ್ಲ. ನಾನು ಓಡಿ ಹೋಗುವ ಮನುಷ್ಯನಲ್ಲʼʼ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕ್ಷ ಏನು ಹೇಳುತ್ತದೆಯೋ ಅದನ್ನು ನಾನು ಪಾಲಿಸುತ್ತೇನೆ. ಪಕ್ಷದ ಅಧ್ಯಕ್ಷರಾದವರು ಹೇಗೆ ಕೆಲಸ ಮಾಡಬೇಕೆಂಬುದಕ್ಕೆ ನಾನು ಉದಾಹರಣೆಯಾಗಬೇಕು, ಪಕ್ಷದಲ್ಲಿ ನಮ್ಮ ಗುರುತು ಬಿಟ್ಟುಹೋಗಬೇಕು. ನಾನು ಈ ವಿಚಾರವಾಗಿ ಮಾತನಾಡಿದೆ ಅಷ್ಟೇ. ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಅಧ್ಯಕ್ಷರು ಎಲ್ಲಿಯವರೆಗೂ ಜವಾಬ್ದಾರಿ ನಿಭಾಯಿಸಲು ಸೂಚಿಸುತ್ತಾರೋ ಅಲ್ಲಿಯವರೆಗೂ ನಾನು ಕರ್ತವ್ಯ ನಿಭಾಯಿಸುತ್ತೇನೆ ಎಂದಿದ್ದಾರೆ.
2026ರ ಬಜೆಟ್ ಮಂಡಿಸುತ್ತೇನೆ : ಸಿದ್ದರಾಮಯ್ಯ
ಹಣಕಾಸು ಸಚಿವನಾಗಿ ಮುಂದಿನ ವರ್ಷ 17ನೇ ಬಜೆಟ್ ಮಂಡಿಸುತ್ತೇನೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಮಂಗಳವಾರ ಆಯೋಜಿಸಿದ್ದ ‘ಎಲ್.ಜಿ.ಹಾವನೂರು ವರದಿಯ ಸುವರ್ಣ ಮಹೋತ್ಸವ’ದಲ್ಲಿ ಸಿದ್ದರಾಮಯ್ಯ ತಮ್ಮ ಎಂದಿನ ಹಳೆ ಸ್ಟೋರಿಯನ್ನು ಹೇಳಿದ್ದಾರೆ. ನಾನು ಮೊದಲ ಬಾರಿಗೆ ಹಣಕಾಸು ಸಚಿವ ಆದಾಗ ಈ ಸಿದ್ದರಾಮಯ್ಯಗೆ ನೂರು ಕುರಿ ಲೆಕ್ಕ ಹಾಕೋಕೆ ಬರಲ್ಲ. ಹಣಕಾಸು ಮಂತ್ರಿಯಾಗಿ ಬಜೆಟ್ ಮಾಡಿಸುತ್ತಾರಾ? ಏನು ಕೆಲಸ ಮಾಡುತ್ತಾರೆ ಎಂದು ಪತ್ರಿಕೆಯೊಂದರಲ್ಲಿ ಟೀಕೆ ಮಾಡಿದ್ದರು ಎಂದು ಮತ್ತೆ ನೆನಪಿಸಿಕೊಂಡಿದ್ದಾರೆ.
ನಾನು ಅದನ್ನು ಸವಾಲಾಗಿ ಸ್ವೀಕರಿಸಿದ್ದೆ. ಅಂದಿನಿಂದ ಇಂದಿನವರೆಗೆ ಯಶಸ್ವಿಯಾಗಿ 16 ಬಜೆಟ್ ಮಂಡಿಸಿದ್ದೇನೆ ಎಂದಾಗ.. ಸಭಿಕರೊಬ್ಬರು 17ನೇ ಬಜೆಟ್ ಸರ್… ಎಂದರು. ಅದಕ್ಕೆ ಮುಖ್ಯಮಂತ್ರಿ ಅವರು ಏ ಇಲ್ಲಯ್ಯ ಈ ವರ್ಷ 16ನೇ ಬಜೆಟ್ ಮಂಡಿಸಿದ್ದೇನೆ. ಮುಂದಿನ ವರ್ಷ 17ನೇ ಬಜೆಟನ್ನೂ ನಾನೇ ಮಂಡಿಸುತ್ತೇನೆ ಎಂದು ಹೇಳಿದರು.
ಮುಂದಿನದ್ದನ್ನು ರಾಜಕೀಯದಲ್ಲಿ ಆಸಕ್ತಿ ಇರುವವರು ತಮ್ಮ ತಮ್ಮ ವಿವೇಚನೆಗೆ ತಕ್ಕಂತೆ ಕಲ್ಪನೆ ಮಾಡಿಕೊಳ್ಳಬಹುದು.



