ಸಿಎಂ ಯಾರು? ಸಿದ್ದರಾಮಯ್ಯ ಸಿಎಂ (CM Siddaramaiah) ಆಗಿ ಅಧಿಕಾರದಲ್ಲಿರುವಾಗಲೇ ನೂತನ ಸಿಎಂ ಕೂಗು ಶುರುವಾಗಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ೬ ತಿಂಗಳು ತುಂಬುವ ಮೊದಲೇ ಎದ್ದಿರುವ ಕೂಗು ಸಿದ್ದರಾಮಯ್ಯಗೆ ಶುಭ ಸೂಚನೆಯಂತೂ ಅಲ್ಲವೇ ಅಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕಂತೂ ಮೊದಲೇ ಅಲ್ಲ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಕುಸಿಯುತ್ತಿರುವಾಗ ಬಂದಿರುವ ದೊಡ್ಡ ಗೆಲುವು ಇದು. ಕಾಂಗ್ರೆಸ್ಸಿಗೆ ಆಕ್ಸಿಜನ್ ಕೊಟ್ಟಂತೆ ಸಿಕ್ಕಿರುವ ಗೆಲುವು ಇದು.
ಇಡೀ ದೇಶದಲ್ಲಿ ರಾಜಸ್ತಾನ ಬಿಟ್ಟರೆ, ದೊಡ್ಡ ರಾಜ್ಯ ಎಂದು ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕ. ಛತ್ತೀಸ್ʻಗಡದಲ್ಲಿದೆಯಾದರೂ ಅದು ದೊಡ್ಡ ರಾಜ್ಯ ಎಂದು ಹೇಳಲಾಗದು. ರಾಜಸ್ತಾನ ಮತ್ತು ಛತ್ತೀಸ್ʻಗಡದಲ್ಲಿ (Rajastan and chattisgarh) ಇದೇ ತಿಂಗಳು ಚುನಾವಣೆಯೂ ಇದೆ. ಯಾವುದೇ ಚುನಾವಣೆ ಗೆಲುವು ಸುಲಭ ಇರುವುದಿಲ್ಲ. ಅಂಥಾದ್ದರಲ್ಲಿ ಇರುವ ರಾಜ್ಯದಲ್ಲಿ ತಿಕ್ಕಾಟ ಶುರುವಾಗಿಬಿಟ್ಟರೆ ಎಂಬ ಆತಂಕ ಕಾಂಗ್ರೆಸ್ ಹೈಕಮಾಂಡಿನದ್ದು.
ಆದರೆ ಇಡೀ ವಿವಾದ ಶುರವಾಗಿದ್ದರ ಮೂಲ ಎಲ್ಲಿಂದ ಎಂದು ಹುಡುಕುವುದಕ್ಕೆ ಶುರು ಮಾಡಿದರೆ ಅದು ವಿಜಯದಶಮಿಯ ಹಬ್ಬದ ಶುಭಾಶಯಗಳಲ್ಲಿದೆ ಎಂಬ ನಿಗೂಢ ಸತ್ಯ ಹೊರಬಿದ್ದಿದೆ. ವಿಜಯದಶಮಿ ಹಬ್ಬದ ದಿನ ಪತ್ರಕರ್ತರಿಗೆ ಶುಭಾಶಯ ಹೇಳುವಾಗ ಈ ವಿಜಯದಶಮಿಯಂದು ನಾನು ಡಿಸಿಎಂ ಆಗಿ ಶುಭ ಕೋರುತ್ತೇನೆ. ಮುಂದಿನ ವಿಜಯದಶಮಿಯಂದು ಸಿಎಂ ಆಗಿ ಶುಭ ಕೋರುತ್ತೇನೆ ಎಂದರಂತೆ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್. (Dk Shivakumar) ಅದೂ ಎಲ್ಲರಿಗೂ ಅಲ್ಲ, ಕೆಲವು ಆಯ್ದ ಪತ್ರಕರ್ತರಿಗೆ, ಫೋನ್ʻನಲ್ಲಿ ಶುಭ ಕೋರುವಾಗ ಹೇಳಿದ್ದ ಮಾತದು. ಅಂದಹಾಗೆ ಪತ್ರಕರ್ತರ ವಲಯದಲ್ಲಿ ಸಿದ್ದರಾಮಯ್ಯ ಸೂಪರ್ ಸ್ಟ್ರಾಂಗ್. ಹೀಗಾಗಿಯೇ ಅದು ಸಿದ್ದರಾಮಯ್ಯ ಅವರಿಗೆ ತಲುಪಿ, ಕ್ರಾಸ್ ಚೆಕ್ ಕೂಡಾ ಆಗಿ ಹೌದು ಎಂಬ ಸುದ್ದಿ ಹೊರಬಿದ್ದ ನಂತರವೇ ಈ ಕೌಂಟರ್ ಅಟ್ಯಾಕ್ ಶುರುವಾಯ್ತು ಎನ್ನುತ್ತಿವೆ ಮೂಲಗಳು.
ಅದಾದ ಮೇಲೆಯೇ ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಮೀಟಿಂಗ್ ನಡೆದಿದ್ದು, ಪರಮೇಶ್ವರ್ (Parameshwar) ಅವರ ಪರ ನಿಂತ ಸಿದ್ದು ನಾನು ಕೆಳಗಿಳಿದರೆ ನೀವು ಸಿಎಂ ಆಗಿ ಎಂಬ ಸಂದೇಶ ಕೊಟ್ಟಿದ್ದು, ಅದಾದ ಬಳಿಕ ಕೆಎನ್ ರಾಜಣ್ಣ ಪರಮೇಶ್ವರ್ ಸಿಎಂ ಆಗುವುದಾದರೆ ನನ್ನ ಬೆಂಬಲ ಎಂದಿದ್ದು.. ಇವೆಲ್ಲ ವಿಧಾನಸೌಧದ ಸುತ್ತಮುತ್ತ ಕೇಳಿ ಬರುತ್ತಿರುವ ಕಥೆಗಳಷ್ಟೆ. ಅಧಿಕೃತವಾಗಿ ಯಾರೂ ಹೇಳುವುದಿಲ್ಲ.
ಅಂದಹಾಗೆ ಇದೆಲ್ಲದರಿಂದ ತಕ್ಷಣ ಎಚ್ಚೆತ್ತುಕೊಂಡವರು ಮಲ್ಲಿಕಾರ್ಜು ಖರ್ಗೆ.(Mallikarjuna karge) ಅವರು ಮೊದಲು ಸೈಲೆಂಟ್ ಮಾಡಿದ್ದು ಪ್ರಿಯಾಂಕ್ ಖರ್ಗೆ ಅವರನ್ನ. ಸಿಎಂ ಆಗುವುದಕ್ಕೆ ನನಗೂ ಅರ್ಹತೆಯಿದೆ ಎಂಬ ಪ್ರಿಯಾಂಕ್ ಮಾತು, ಸೃಷ್ಟಿಸಬೇಕಾದ ತಲ್ಲಣ ಸೃಷ್ಟಿಸಿತ್ತು. ಆನಂತರ ಪ್ರಿಯಾಂಕ್ ಅವರೇ ಆ ಹೇಳಿಕೆಗೆ ಸ್ಪಷ್ಟೀಕರಣ ಕೊಡುವಂತೆ ನೋಡಿಕೊಂಡರಷ್ಟೇ ಅಲ್ಲ, ದೆಹಲಿಯ ಪ್ರತಿನಿಧಿಗಳನ್ನು ಬೆಂಗಳೂರಿಗೆ ಕಳಿಸಿ ಸೈಲೆಂಟ್ ಆಗಿರುವಂತೆ ಸೂಚಿಸಿದರು.
ಇದಾದ ಮೇಲೆ ಈ ರಗಳೆ ಸಾಕು ಎನ್ನುವಂತಾಗಿದೆಯಂತೆ ಡಿಕೆ ಶಿವಕುಮಾರ್ ಅವರಿಗೆ. ಹೇಗಿದ್ದರೂ ಲೋಕಸಭೆ (LokaShaba Election) ಮುಗಿದ ಮೇಲೆ ನನಗೇ ಅಧಿಕಾರ ಸಿಗಲಿದೆ. ಆತುರವೇಕೆ ಎಂಬ ತೀರ್ಮಾನಕ್ಕೆ ಬಂದಿರುವ ಡಿಕೆ ಶಿವಕುಮಾರ್, ಸಿಎಂ ಆಗುವುದಕ್ಕೆ ನನಗ್ಯಾವ ಅರ್ಜೆನ್ಸಿಯೂ ಇಲ್ಲ ಎಂಬ ಹೇಳಿಕೆ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿಕೆ ನೀಡಿದ್ದ ಬೆಂಬಲಿಗರಿಗೆಲ್ಲ ನೋಟಿಸ್ ಕೊಡುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಅಲ್ಲಿಗೆ.. ಸಿಎಂ ಯಾರಾಗಬೇಕು ಎಂಬ ಚರ್ಚೆ ಬೆಂಕಿಯಾಗಿ, ಕೆಂಡವಾಗಿ ಈಗ ಆ ಕೆಂಡದ ಮೇಲೆ ಬೂದಿ ಬಿದ್ದಿದೆ. ಗಾಳಿ ಸ್ವಲ್ಪ ಜೋರಾಗಿ ಬೀಸಿ ಬೂದಿ ಮರೆಯಾದರೂ ಸಾಕು, ಕೆಂಡ ಮತ್ತೆ ಮತ್ತೆ ಸುಡಲು ಶುರುವಾಗಲಿದೆ.



