ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುತ್ತಾ ಹೈಕಮಾಂಡ್..? ಗೊತ್ತಿಲ್ಲ. ಅವರಿಬ್ಬರ ಮಧ್ಯೆ 2023ರಲ್ಲಿ ಅಗ್ರಿಮೆಂಟ್ ಆಗಿತ್ತಾ..? ಅದೂ ಗೊತ್ತಿಲ್ಲ. ಯಾಕೆಂದರೆ ಅದು ಅಧಿಕೃತ ಅಲ್ಲ. ಈ ನಡುವೆಯೇ ನವೆಂಬರ್ 20ಕ್ಕೆ ಎರಡೂವರೆ ವರ್ಷ ಮುಗಿಯಲಿದೆ. ಅಧಿಕಾರ ಹಸ್ತಾಂತರದ ಸುದ್ದಿ ಜೋರಾಗಿದೆ. ಹೀಗಿರುವಾಗಲೇ ಇಬ್ಬರೂ ದೆಹಲಿಗೆ ಹೋಗಿದ್ದಾರೆ. ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ಕೇಳಿದ್ದು ಒಂದೇ ಒಂದು ಮಾತು. ಅದಕ್ಕೆ ಸಿದ್ಧರಾಮಯ್ಯ ಹೇಳಿರೋದು ಮೂರು ಉತ್ತರ. ಆ ಮೂರು ಉತ್ತರಗಳಲ್ಲ.. ಅವಕಾಶಗಳು. ಆಯ್ಕೆಗಳು. ಆದರೆ.. ಆ ಮೂರರಲ್ಲಿ ಯಾವೊಂದು ಆಯ್ಕೆಯೂ ಡಿಕೆ ಪರವಾಗಿಲ್ಲ ಎನ್ನವುದೇ ವಿಚಿತ್ರ.
ಡಿಕೆ ಶಿವಕುಮಾರ್ ಕೇಳಿರೋದು ಇಷ್ಟೇ. 2023ರಲ್ಲಿ ಅಧಿಕಾರಕ್ಕೆ ಬಂದೆವು. ಸಿದ್ಧರಾಮಯ್ಯ ಒಬ್ಬರೇ ಕಾರಣ ಅಲ್ಲ. ನಾನೂ ಬೆವರು ಸುರಿಸಿದ್ದೇನೆ. ಸಂಘಟನೆಯ ಜವಾಬ್ದಾರಿ ನಿಭಾಯಿಸಿದ್ದೇನೆ. ಸಂಪನ್ಮೂಲ ನೀಡಿದ್ದೇನೆ. ಒಕ್ಕಲಿಗರ ಬೆಲ್ಟಿನಲ್ಲಿ ಹಿನ್ನಡೆ ಅನುಭವಿಸುತ್ತಿದ್ದ ಪಕ್ಷಕ್ಕೆ, ಅಲ್ಲಿ ಸೀಟು ಬರುವುದಕ್ಕೆ ಕಾರಣ ನಾನು ಸಿಎಂ ಆಗುತ್ತೇನೆ ಎನ್ನುವುದು. ಬೇರೇನಿಲ್ಲ. ಸಿದ್ಧರಾಮಯ್ಯ ಒಪ್ಪಿದ್ದಂತೆ ಅಧಿಕಾರ ಬಿಟ್ಟುಕೊಡಲಿ ಎಂದಿದ್ದಾರೆ.
ಅದಕ್ಕೆ ಸಿದ್ಧರಾಮಯ್ಯ ಅವರು ಹೇಳಿರೋದು ಮೂರು ಆಯ್ಕೆ.
ಮೊದಲನೆಯದ್ದು..
ಸಿಎಂ ಬದಲಾವಣೆ ಆಗುವುದಾದರೆ ದಲಿತರನ್ನು ಮಾಡಿ. ಖರ್ಗೆ ಅಥವಾ ಪರಮೇಶ್ವರ್ ಸಿಎಂ ಆಗೋದಾದರೆ ನನಗೆ ಅಭ್ಯಂತರ ಇಲ್ಲ.
ಎರಡನೆಯದ್ದು..
ಒಕ್ಕಲಿಗರೇ ಆಗುವುದಾದರೆ ಕೃಷ್ಣ ಭೈರೇಗೌಡರನ್ನು ಸಿಎಂ ಮಾಡಿ. ಆತನಿಗೆ ವಯಸ್ಸಿದೆ. ಹುಮ್ಮಸ್ಸು ಇದೆ. ಕ್ಲೀನ್ ಹ್ಯಾಂಡ್.
ಮೂರನೆಯದ್ದು..
ಲಿಂಗಾಯತರನ್ನು ಸಿಎಂ ಮಾಡುವುದಾದರೆ.. ಎಂಬಿ ಪಾಟೀಲ್ ಅಥವಾ ಈಶ್ವರ ಖಂಡ್ರೆ ಅವರನ್ನು ಆಯ್ಕೆ ಮಾಡಿ ಎನ್ನುವುದು.
ಅಂದಹಾಗೆ ಡಿಕೆ ಯಾಕೆ ಬೇಡ ಎನ್ನುವುದಕ್ಕೆ ಅವರು ಕೊಟ್ಟಿರುವ ಕಾರಣ ಇಷ್ಟೇ. ಡಿಕೆ ವಿರುದ್ಧ ಕ್ರಿಮಿನಲ್ ಕೇಸುಗಳಿವೆ. ಮೋದಿ ಅಥವಾ ಶಾ ಡಿಕೆ ಸಿಎಂ ಆದ ಮೇಲೆ ದೆಹಲಿ, ಉತ್ತರಾಖಂಡದಲ್ಲಿ ಮಾಡಿದಂತೆ ಸಿಎಂ ಆದವರನ್ನು ಜೈಲಿಗೆ ತಳ್ಳಿದರೆ ಕಾಂಗ್ರೆಸ್ ಪಕ್ಷದ ಇಮೇಜ್ ಡ್ಯಾಮೇಜ್ ಆಗುತ್ತೆ.
ಇದೆಲ್ಲ ಗೊತ್ತಾಗುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಒಂದು ಸ್ಟೆಪ್ ಹಿಂದಿಟ್ಟಿದ್ದಾರೆ. ಸಂಪುಟ ವಿಸ್ತರಣೆ ಬೇಡವೇ ಬೇಡ. ಬದಲಾಗುವುದಾದರೆ ನಾಯಕತ್ವ ಬದಲಾಗಲಿ ಎಂದು ಪಟ್ಟು ಹಿಡಿದಿದ್ದಾರೆ. ಜೊತೆಗೆ ಸಂಪುಟ ವಿಸ್ತರಣೆಯೇ ಆದರೆ.. ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶ ರವಾನೆಯಾಗಲಿದೆ. ಬೇಡವೇ ಬೇಡ ಎಂದು ಪಟ್ಟು ಹಾಕಿದ್ದಾರೆ.
ಸಮಸ್ಯೆ ಶುರುವಾಗಿದ್ದು ಎಲ್ಲಿ ಎಂದು ನೋಡಿದರೆ.. ಡಿಕೆ ಶಿವಕುಮಾರ್.. ಈಗ ಹೈಕಮಾಂಡ್ ಎದುರು ಮಾಡುತ್ತಿರುವ ಮನವಿಯನ್ನು ಸಿದ್ಧರಾಮಯ್ಯ ಎದುರೇ ಮಾಡಬೇಕಿತ್ತು. ಹಾಗೆ ಮಾಡಲಿಲ್ಲ ಎನ್ನುವುದು. ಡಿಕೆ.. ತಮ್ಮ ಆಪ್ತರ ಬಳಿ ಯಾಕೆ ಬಿಟ್ಟು ಕೊಡಲ್ಲ. ಅದು ಹೇಗೆ ಕೊಡಲ್ವೋ.. ನಾನೂ ನೋಡ್ತೀನಿ ಅಂತೆಲ್ಲ ಹೇಳ್ಕೊಂಡಿದ್ದಾರಂತೆ. ಅದಕ್ಕೆ ಸಿದ್ಧರಾಮಯ್ಯ ಸಿಟ್ಟಾಗಿದ್ದಾರಂತೆ.
ಅಕಸ್ಮಾತ್.. ಡಿಕೆ ಶಿವಕುಮಾರ್ ನೇರವಾಗಿಯೇ ಕೇಳಿದ್ದರೆ.. ಆಗ ʻಅದನ್ನ ಹೈಕಮಾಂಡ್ ಜೊತೆ ಮಾತನಾಡಿ. ಅವರ ಮೂಲಕವೇ ಹೇಳಿಸಿʼ ಎಂದೋ.. ಅಥವಾ ʻನನ್ನನ್ನು ಹೀಗೆ ಕೇಳುವುದು ಒತ್ತಡ ಹೇರುವ ತಂತ್ರʼ ಎಂದೋ ಸ್ಟೋರಿ ಬಿಲ್ಡ್ ಆಗ್ತಾ ಇತ್ತು. ಅಷ್ಟೇ.



