ದೈವದ ಕುರಿತು ದೈವಾರಾಧನೆ, ಆಚರಣೆ, ದೈವನರ್ತಕರ ಕುರಿತು ಬಂದ ಚಿತ್ರಗಳಲ್ಲಿ ಕಾಂತಾರ ಮೊದಲ ಚಿತ್ರವಲ್ಲ. ಈ ಹಿಂದೆ ದೈವ, ಗಗ್ಗರ, ಧರ್ಮದೈವ, ಕಲ್ಜಿಗ, ಕರಿಹೈದ ಕರಿಅಜ್ಜ, ದಿಗಿಲ್, ಧರ್ಮಚಾವಡಿ, ಪುಂಡಿ ಪಣವು, ದೇಯಿ ಬೈದೆತಿ.. ಹೀಗೆ ಹಲವು ಚಿತ್ರಗಳಿವೆ. ಯಕ್ಷಗಾನಗಳೂ ಆಗಿವೆ. ಯಕ್ಷಗಾನದ ವಿಡಿಯೋಗಳೂ ಆಗಿವೆ. ಶಾರ್ಟ್ ಫಿಲ್ಮ್ ಆಗಿವೆ. ಮಾರುಕಟ್ಟೆಯೂ ಆಗಿದೆ. ಹಣವನ್ನೂ ಮಾಡಿವೆ. ಆದರೆ.. ಎಲ್ಲವೂ ತುಳು ಚಿತ್ರಗಳಲ್ಲಿಯೇ ಹೆಚ್ಚು. ಹುಡುಕಿದರೆ ಇನ್ನಷ್ಟು ಸಿಕ್ಕಾವು. ಆದರೆ.. ಆ ಯಾವ ಚಿತ್ರಗಳಿಗೂ ಇಲ್ಲದ ವಿರೋಧ ಕಾಂತಾರಕ್ಕೆ ಮಾತ್ರ ಏಕೆ..? ಸಕ್ಸಸ್ ಆಯ್ತು ಅಂತಾನಾ..
ಕಾಂತಾರದಲ್ಲಿ ದೈವಕ್ಕೆ ಅಪಚಾರ ಆಗಿದೆ ಎನ್ನುವ ವಾದ ಈ ಮೊದಲೂ ಇತ್ತು. ಈಗಲೂ ಶುರುವಾಗಿದೆ. ʻಪ್ರೇಕ್ಷಕರ ಕೋರ್ಟ್ʼ ಆಗಿರುವ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಲೇ ಇವೆ.
ಕಾಂತಾರ ಬೆನ್ನಲ್ಲೇ ಕೊರಗಜ್ಜ ಎಂಬ ಸಿನಿಮಾ ರಿಲೀಸ್ ಆಗುವುದಕ್ಕೆ ಸಿದ್ಧವಾಗಿದೆ. ಹಾಗೆ ನೋಡಿದ್ರೆ.. ಕಾಂತಾರ ಸಿನಿಮಾ ಆರಂಭದಲ್ಲಿಯೇ ಇದು ನಮ್ಮ ನಂಬಿಕೆಯ ವಿಷಯ, ದಯವಿಟ್ಟು ಯಾರೂ ಇದನ್ನು ಅನುಕರಣೆ ಮಾಡಬೇಡಿ ಎಂಬ ಡಿಸ್ ಕ್ಲೇಮರ್ ಕೂಡಾ ಇದೆ. ಇದೆಲ್ಲವನ್ನೂ ಸೈಡಿಗಿಟ್ಟು ಕಾಂತಾರವನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ.
ಇದರ ನಡುವೆಯೇ ಕಾಂತಾರ ಹೊಸ ದಾಖಲೆ ಬರೆದಿದೆ. ಒಟ್ಟಾರೆ ಕಲೆಕ್ಷನ್ ಈಗಾಗಲೇ 7 ಕೋಟಿಯ ಸಮೀಪ ಬಂದಿದೆ. ಶನಿವಾರ ಮತ್ತು ಭಾನುವಾರದ ಕಲೆಕ್ಷನ್ ಥಟ್ಟಂತ ಡಬಲ್.. ತ್ರಿಬಲ್.. ಆಗಿದೆ. ಕಾಂತಾರ ನೋಡಿದವರ ಸಂಖ್ಯೆ ಈಗ 1 ಕೋಟಿಗೂ ಹೆಚ್ಚು. ಮೊದಲಿನ ಕಾಂತಾರವನ್ನು ಕೂಡಾ ಒಂದು ಕೋಟಿಗೂ ಹೆಚ್ಚು ಜನ ನೋಡಿದ್ದರು. ಆದರೆ.. ಈ ಬಾರಿ ಒಂದು ವಾರಕ್ಕೆ ಹಳೆಯ ಕಾಂತಾರದ ರೆಕಾರ್ಡ್ ಬ್ರೇಕ್ ಮಾಡಿ ಮುನ್ನುಗ್ಗುತ್ತಿದೆ. ಒಟ್ಟಾರೆ ಕಲೆಕ್ಷನ್ 600 ಕೋಟಿ ದಾಟಿದ್ದು, ಈ ವಾರಾಂತ್ಯದ ಹೊತ್ತಿಗೆ 800 ಕೋಟಿ ದಾಟುವ ನಿರೀಕ್ಷೆ ಇದೆ.
ಕಾಂತಾರ ಪರ-ವಿರೋಧ ಚರ್ಚೆಗಳೂ ಚಾಲ್ತಿಯಲಿಲವೆ. ಕಾಂತಾರ ಸಿನಿಮಾವನ್ನು ವಿರೋಧಿಸುತ್ತಿರುವವರ ಪ್ರಕಾರ ದೈವ ಗಡ್ಡ ಬಿಡಲ್ಲ. ದೈವ ಯಾರನ್ನೂ ಕೊಲ್ಲುವುದಿಲ್ಲ. ರಕ್ತ ಕುಡಿಯುವುದಿಲ್ಲ. ವಿಕೃತವಾಗಿ ವರ್ತಿಸುವುದಿಲ್ಲ. ಕಾಂತಾರದಲ್ಲಿ ದೈವ ಆವಾಹನೆಯಾದಾಗ ರಿಷಬ್ ಶೆಟ್ಟಿಯವರ ವರ್ತನೆ, ದೈವಕ್ಕೆ ಅಪಮಾನವಾಗುವಂತಿದೆ. ದೈವಕ್ಕೆ ಅಪಚಾರ ಮಾಡಿದ ಕಾರಣಕ್ಕೇ ಕಾಂತಾರ ಚಿತ್ರೀಕರಣ ವೇಳೆ ಅನಾಹುತಗಳ ಮೇಲೆ ಅನಾಹುತಗಳಾದವು ಎಂದೆಲ್ಲ ಹೇಳುತ್ತಾರೆ.
ದೈವದ ಕಥೆ ಇಲ್ಲದ ಚಿತ್ರಗಳಲ್ಲೂ ಅನಾಹುತಗಳಾಗಿವೆ. ಆಗುತ್ತವೆ. ಕಾಂತಾರದ ಅವಘಡಗಳನ್ನು ದೈವದ ಕೋಪ ಎನ್ನುವವರಿಗೆ ಒಂದು ಪ್ರಶ್ನೆ. ದೈವ ಮುನಿಸಿಕೊಂಡಿದ್ದರೆ, ಕಾಂತಾರ ಫ್ಲಾಪ್ ಆಗಬೇಕಿತ್ತು. ಸಿನಿಮಾದ ಯಶಸ್ಸು ಕೂಡಾ ದೈವದ ಅನುಗ್ರಹವೇ ಅಲ್ಲವೇ..
ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿದ ಕಾಂತಾರ ಚಾಪ್ಟರ್ ಒನ್ ಸಿನಿಮಾದ ನಾಗಾಲೋಟ ಮುಂದುವರಿದಿದೆ. ಕೆಲವೊಂದು ವಿಷಯಗಳ ನಡುವೆ ಕಾಂತಾರ ಸಿನಿಮಾ ಬಾಕ್ಸಾಫೀಸ್ ನಲ್ಲಿ ದರ್ಬಾರ್ ಮಾಡುವುದನ್ನು ಮುಂದುವರಿಸಿದೆ. ಇಂತಹ ಸಿನಿಮಾವನ್ನು ಬೇರೆ ಭಾಷೆಯ ನಿರ್ದೇಶಕರಿಗೆ ತೆಗೆಯಲು ಸಾಧ್ಯವೇ ಎನ್ನುವ ಜನಾಭಿಪ್ರಾಯವೂ ಇದೆ.



