ಮಾರ್ಟಿನ್. ಚಿತ್ರ ಶುಕ್ರವಾರ ರಿಲೀಸ್ ಆಗ್ತಾ ಇದೆ. ಚಿತ್ರದ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ನಡುವಿನ ಕಿತ್ತಾಟದಿಂದಾಗಿ ಎಪಿ ಅರ್ಜುನ್ ಅವರು ಚಿತ್ರದ ಪ್ರಚಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ದಾವಣಗೆರೆ ಈವೆಂಟಿನಲ್ಲಿ ಪ್ರತ್ಯಕ್ಷರಾಗುವ ಮೂಲಕ ಗೊಂದಲಗಳಿಗೆ ತಾತ್ಕಾಲಿಕ ತೆರೆ ಎಳೆಯೋ ಪ್ರಯತ್ನ ಮಾಡಿದ್ದಾರೆ.
ಮಾರ್ಟಿನ್ ಚಿತ್ರದ ಟ್ರೇಲರ್, ಆಂಥೆಮ್ ಇವನ್ನೆಲ್ಲ ನೋಡ್ತಾ ಇದ್ರೆ, ಚಿತ್ರದ ಕಥೆಯನ್ನು ಅರ್ಜುನ್ ವಿಭಿನ್ನವಾಗಿ ಹೇಳಿರಬಹುದು ಅನ್ನೋದಂತೂ ಪಕ್ಕಾ. ಚಿತ್ರಕ್ಕೆ ಕಥೆ ಬರೆದಿರೋ ಅರ್ಜುನ್ ಸರ್ಜಾ. ಧ್ರುವ ಸರ್ಜಾ ಅವರ ಸೋದರ ಮಾವ. ಆದರೆ ಚಿತ್ರ ಶುರುವಾಗಿದ್ದಾಗ ಇದ್ದ ಬಾಂಡಿಂಗ್ ಈಗಿಲ್ಲ. ಆದರೆ ಇದು ನನ್ನ ಸಿನಿಮಾ ಅಂತ ಹೇಳ್ಕೊಂಡಿರೋ ಅರ್ಜುನ್, ಚಿತ್ರದ ಪ್ರಚಾರ ಮಾಡ್ತಿದ್ದಾರೆ. ಹೈಕೋರ್ಟಿಗೆ ಹೋಗಿ ತಮ್ಮ ಹೆಸರು ಬಳಸೋಕೆ ಆರ್ಡರ್ ತಂದು ಪ್ರಚಾರ ನಡೆಸ್ತಿರೋ ಅರ್ಜುನ್, ತಮ್ಮದೇ ಚಿತ್ರಕ್ಕೆ ತಡೆ ಕೋರಿದ್ದ ನಿರ್ದೇಶಕ ಅನ್ನೋ ಖ್ಯಾತಿಯನ್ನೂ ಪಡೆದುಕೊಂಡಿದ್ದಾರೆ.
ಹಾಗಾದ್ರೆ ಚಿತ್ರದ ಕಥೆ ಏನು..? ಧ್ರುವ ಸರ್ಜಾ ಅವರೇ ಹೇಳಿರೋ ಪ್ರಕಾರ ಮಾರ್ಟಿನ್ ಚಿತ್ರದ ಹೀರೋ ಹೆಸರು ಮಾರ್ಟಿನ್ ಅಲ್ಲ. ಹಾಗಾದರೆ ಮಾರ್ಟಿನ್ ಯಾರು ಅಂದ್ರೆ ಚಿತ್ರಮಂದಿರದಲ್ಲೇ ನೋಡಿ..ಥ್ರಿಲ್ ಆಗಿ ಅಂತಾರೆ.
ಆದರೆ ಚಿತ್ರದ ನಿರ್ದೇಶಕ ಎಪಿ ಅರ್ಜುನ್, ಚಿತ್ರದ ಕಥೆಯ ಬಗ್ಗೆ ಒಂದಿಷ್ಟು ಕ್ಲೂ ಕೊಟ್ಟಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ, ಅರ್ಜುನ್ ಸಕ್ಸೇನಾ ಎಂಬ ಹೆಸರಿನ ಮಿಲಿಟರಿ ಅಧಿಕಾರಿ ಅರ್ಥಾತ್ ಏಜೆಂಟ್ ಆಗಿ ನಟಿಸಿದ್ದಾರೆ. ಧ್ರುವ ಸರ್ಜಾ ಅವರ ಬಾಸ್ ಆಗಿ ನಟಿಸಿರೋದು ಅಚ್ಯುತ್ ಕುಮಾರ್. ಅವರದ್ದು ಅಶೋಕ್ ಕುಮಾರ್ ಎಂಬ ನೇವಿ ಆಫೀಸರ್ ಪಾತ್ರ. ಆದರೆ ಅರ್ಜುನ್ ಅವರು ಹೇಳೋ ಪ್ರಕಾರ ಇದು ಸಂಪೂರ್ಣ ಆ್ಯಕ್ಷನ್ ತುಂಬಿರುವ ಗ್ಯಾಂಗ್‌ಸ್ಟರ್ ಕಥೆ. ಗ್ಯಾಂಗ್ ಸ್ಟರ್ ಕಥೆಯಲ್ಲಿ ಸೈನಿಕನ ಅಥವಾ ಏಜೆಂಟ್ ಪಾತ್ರ ಏನು..? ಪಾಕಿಸ್ತಾನದಲ್ಲಿ ಕಥೆ ನಡೆಯೋ ಪರಿಸ್ಥಿತಿ ಉದ್ಭವವಾಗೋದು ಯಾಕೆ.. ಕುತೂಹಲದ ಮೇಲೆ ಕುತೂಹಲ ಇದೆ.
ಧ್ರುವ ಸರ್ಜಾ ಅವರಿಗೆ ಅಭಿಮಾನಿಗಳು ಆಕ್ಷನ್ ಪ್ರಿನ್ಸ್ ಅಂತಾ ಕರೀತಾರಲ್ಲ, ಆ ಟೈಟಲ್ಲಿಗೆ ತಕ್ಕಂತೆ ಚಿತ್ರದ ಕಥೆ ಇರಲಿದೆ. ಚಿತ್ರಕಥೆಯೂ ವಿಭಿನ್ನವಾಗಿದೆ ಅಂತಾರೆ ಡೈರೆಕ್ಟರ್ ಎಪಿ ಅರ್ಜುನ್. ಈಗಾಗಲೇ ರಿಲೀಸ್ ಆಗಿರೋ ಹಾಡು, ಆಂಥೆಮ್, ಟ್ರೇಲರುಗಲ್ಲಿ ಧ್ರುವ ಸರ್ಜಾ ವಿಭಿನ್ನ ಲುಕ್ಕುಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಮಾರ್ಟಿನ್ ಆಂಥೆಮ್ ಹಾಡಿನಲ್ಲಿ ಧ್ರುವ ಸರ್ಜಾ ಸುಮಾರು ಹತ್ತು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲೂ ಅವರ ಹಲವು ಶೇಡ್‌ಗಳಿವೆ” ಎಂದು ಹೇಳಿದ್ದಾರೆ ಎಪಿ ಅರ್ಜುನ್.
ತಮ್ಮದೇ ಆದ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಚಿತ್ರವನ್ನು ಪ್ರಚಾರ ಮಾಡುತ್ತಿರೋ ಎಪಿ ಅರ್ಜುನ್, ಅಪ್ಪಿ ತಪ್ಪಿಯೂ ತಮ್ಮ ಮತ್ತು ನಿರ್ಮಾಪಕ ಉದಯ್ ಕೆ ಮೆಹ್ತಾರ ನಡುವಿನ ಜಗಳಕ್ಕೆ ಕಾರಣ ಏನು ಅನ್ನೋದನ್ನ ಹೇಳೋದಿಲ್ಲ. ಅದು ಯಾವತ್ತಿದ್ದರೂ ನನ್ನ ಚಿತ್ರ ಎನ್ನುತ್ತಾರೆ, ಧ್ರುವ ಸರ್ಜಾ ನನ್ನ ಹೀರೋ ಅಂತಾರೆ ಎಪಿ ಅರ್ಜುನ್.
ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮತ್ತು ಧ್ರುವ ಕಾಂಬಿನೇಷನ್ನಿನ ಅದ್ಧೂರಿ ಸಿನಿಮಾ ದಾವಣಗೆರೆಯಲ್ಲಿ 175 ದಿನ ಓಡಿತ್ತು. 12 ವರ್ಷಗಳ ಬಳಿಕ ಮತ್ತೆ ಬರುತ್ತಿದ್ದೇವೆ ಎಂದಿದ್ದಾರೆ ಅರ್ಜುನ್. ಅಲ್ಲದೆ ಚಿತ್ರದ ನಿರ್ಮಾಣದಲ್ಲಿ ಧ್ರುವ ಸರ್ಜಾ ಅವರು ಪಟ್ಟ ಕಷ್ಟಗಳನ್ನು ಕೂಡಾ ಹೇಳಿದ್ದಾರೆ. ಚಿತ್ರದುದ್ದಕ್ಕೂ ಧ್ರುವ ಸರ್ಜಾ ಅವರ ಮೈಮೇಲೆ ಟ್ಯಾಟೂಗಳಿವೆ. ಆ ಟ್ಯಾಟೂಗಳನ್ನು ಹಾಕಬೇಕು ಎಂದರೆ ಅದಕ್ಕಾಗಿಯೇ 2 ಗಂಟೆ ಹಿಡಿಯುತ್ತಿತ್ತು. ಟ್ಯಾಟೂ ಕಲರ್ ವಾಸನೆಗೇ ತಲೆ ಸುತ್ತು ಬರೋದು ಎಂದೆಲ್ಲ ಹೇಳಿಕೊಂಡಿದ್ದಾರೆ. ಚಿತ್ರವಂತೂ ಅದ್ಧೂರಿ ಬಿಡುಗಡೆಗೆ ಸಜ್ಜಾಗಿದೆ. ಅಡ್ವಾನ್ಸ್ ಬುಕ್ಕಿಂಗ್ ಕೂಡಾ ಶುರುವಾಗಿದೆ.
ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ಈ ಚಿತ್ರವನ್ನು ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಮಾರ್ಟಿನ್ ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿ. ಪ್ರೀತಿ ಎಂಬ ಪಾತ್ರ ಮಾಡಿದ್ದಾರೆ. ಅನ್ವೇಷಿ ಜೈನ್, ಸುಕೃತಾ ವಾಗ್ಲೆ ಕೂಡಾ ಚಿತ್ರದಲ್ಲಿದ್ದಾರೆ. ಚಿಕ್ಕಣ್ಣ, ಸಾಧುಕೋಕಿಲ, ಮಾಳವಿಕ ಅವಿನಾಶ್, ಅಚ್ಯುತ್ ಕುಮಾರ್, ನಿಖಿತಿನ್ ಧೀರ್, ನವಾಬ್ ಶಾ, ರೋಹಿತ್ ಪಾಠಕ್, ನಾಥನ್ ಜೋನ್ಸ್, ರುಬೇ ಮಸ್ಕಿರಾ.. ಮೊದಲಾದ ಸ್ಟಾರ್ ನಟರ ದಂಡೇ ಇದೆ.
ಮಣಿ ಶರ್ಮ ಹಾಡುಗಳಿಗೆ ಮ್ಯೂಸಿಕ್ ನೀಡಿದ್ದರೆ, ಹಿನ್ನೆಲೆ ಸಂಗೀತ ರವಿ ಬಸ್ರೂರು ಅವರದ್ದು. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಸಿನಿಮಾ ಬಿಡುಗಡೆ ಕಾಣುತ್ತಿದೆ ಅನ್ನೋದು ವಿಶೇಷ. ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿಯಲ್ಲಿ ಸದ್ಯಕ್ಕೆ ರಿಲೀಸ್ ಆಗ್ತಿದೆ. ಇನ್ನು ಕೊರಿಯನ್, ಅರೇಬಿಕ್, ಚೈನೀಸ್, ಸ್ಪಾನಿಷ್, ರಷ್ಯನ್, ಜಪಾನೀಸ್ ಹಾಗೂ ಮಲಯಾ ಭಾಷೆಯಲ್ಲೂ ಚಿತ್ರ ತೆರೆ ಕಾಣಲಿದೆ. ‘ಪೊಗರು’ ಬಳಿಕ ಧ್ರುವ ನಟಿಸುತ್ತಿರುವ ಸಿನಿಮಾ ಇದಾಗಿದೆ.



