ಸಿಎಂ ಸಿದ್ಧರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಧ್ಯೆ ಡೈರೆಕ್ಟ್ ಮಾತಿನ ಮಲ್ಲಯುದ್ಧ ಶುರುವಾಗಿದೆ. ತಾನು ಕುಳಿತಿರುವ ಕುರ್ಚಿಯ 4 ಕಾಲುಗಳನ್ನು ಗಟ್ಟಿಯಾಗಿ ಇಟ್ಟುಕೊಳ್ಳೋಕೆ ಆಗ್ತಿಲ್ಲ. ಅಂಥಹವರು ನಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂದು ಹೇಳೋಕೆ ಬರ್ತಾರೆ ಎಂದಿದ್ದರು ಸಿದ್ಧರಾಮಯ್ಯ. ಅದು ನೇರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೇ ಕುರಿತದ್ದಾಗಿತ್ತು. ಈ ಮಧ್ಯೆ ಚಲವಾದಿ ನಾರಾಯಣ ಸ್ವಾಮಿ ಇದಕ್ಕೆ ಉತ್ತರ ಕೊಟ್ಟಿದ್ದಾರೆ.
ವಿಜಯೇಂದ್ರ ಅವರ ಅಜ್ಞಾನ ಮತ್ತು ಅತ್ಮವಂಚನೆಯನ್ನು ಮಾತ್ರವಲ್ಲ, ದುರಹಂಕಾರವನ್ನೂ ಸೂಚಿಸುತ್ತದೆ ಎಂದಿದ್ದರು. ಮಾತ್ರವಲ್ಲ, ದಲಿತರನ್ನು ಬಿಜೆಪಿ ರಾಜ್ಯಾಧ್ಯ್ಷರನ್ನಾಗಿ ನೇಮಿಸಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಗೆ ವಿಜಯೇಂದ್ರ ಕೂಡ ತಿರುಗೇಟು ನೀಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಇದ್ದರೂ ತಪ್ಪಿಸಿದ್ದು ಯಾರೆಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ನ್ಯಾಯ, ಮೀಸಲಾತಿ, ಸಂವಿಧಾನದ ಬಗ್ಗೆ ಮೊಸಳೆ ಕಣ್ಣೀರು ಸುರಿಸೋದು ನೀವು ಮತ್ತು ನಿಮ್ಮ ಕಾಂಗ್ರೆಸ್, ಅದಕ್ಕಾಗಿ ನಿಮ್ಮ ಅಸಲಿ ಮುಖವಾಡ ಏನೆಂಬುದು ರಾಜ್ಯ ಹಾಗೂ ದೇಶದ ಜನತೆಗೆ ತಿಳಿಯಲಿ ಎಂಬ ಕಾರಣದಿಂದ ಅತ್ಯಂತ ಗೌರವದಿಂದ ನಿಮ್ಮ ಕಾಳಜಿ ನೈಜವೇ ಆಗಿದ್ದರೆ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಿ ಎಂಬ ಸಲಹೆ ನೀಡಿದ್ದೆ, ಆ ಸಲಹೆಯನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸುವ ಬದಲು ಹತಾಶೆಯಿಂದ ಸಮರ್ಥನೀಯವಲ್ಲದ ಉತ್ತರ ನೀಡಿದ್ದೀರಿ. ಮಲ್ಲಿಕಾರ್ಜುನ್ ಖರ್ಗೆಯವರಿಗೆ ಅವಕಾಶವಿದ್ದರೂ ಅವರ ಹಿರಿತನವನ್ನು ಬದಿಗೆ ಸರಿಸಿ, ಮುಖ್ಯಮಂತ್ರಿ ಸ್ಥಾನ ನೀಡದೇ ವಂಚಿಸಿದ್ದು ಕಾಂಗ್ರೆಸ್ ಅಲ್ಲವೇ?. ಕರ್ನಾಟಕದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಅರ್ಹ ನಾಯಕರು ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿದವರು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ ಗೋವಿಂದ ಕಾರಜೋಳ ಅವರನ್ನು ಸಿಎಂ ಮಾಡಿ, ಅಧ್ಯಕ್ಷರನ್ನಾಗಿ ಮಾಡಿ ಎಂಬ ಮಾತಿಗೂ ಉತ್ತರ ಕೊಟ್ಟಿದ್ದಾರೆ. ನಮ್ಮ ಪಕ್ಷದಲ್ಲಿ ಗೋವಿಂದ ಕಾರಜೋಳ ಅವರು ಹಿರಿಯರು. ಅವರು ಇನ್ನೂ ಎತ್ತರಕ್ಕೆ ಏರುತ್ತಾರೆ ಎಂದಿದ್ದಾರೆ. ವಿಶೇಷ ಎಂದರೆ.. ಇದಕ್ಕೆ ಚಲವಾದಿ ನಾರಾಯಣ ಸ್ವಾಮಿ ಕೊಟ್ಟಿರುವ ಉತ್ತರ.
ಆರ್‌ಎಸ್‌ಎಸ್ ವಿಚಾರವನ್ನು ಎಳೆದು ತಂದಿದ್ದಕ್ಕೆ ಉತ್ತರ ಕೊಟ್ಟಿರುವ ಚಲವಾದಿ ನಾರಾಯಣ ಸ್ವಾಮಿ ನಾನು ಆರ್‌ಎಸ್‌ಎಸ್ ಬುಟ್ಟಿ ಹೊತ್ತಿಲ್ಲ. ಬದಲಿಗೆ ಕಾಂಗ್ರೆಸ್ಸಿನ ನಿಮ್ಮ ಬುಟ್ಟಿಯನ್ನು ಹೊತ್ತಿದ್ದೆ. ನೀವು ನನಗೆ ಕೊಟ್ಟ ಬಹುಮಾನ ಏನೆಂದು ಗೊತ್ತಿದೆ. ಬಿಜೆಪಿಗೆ ಸೇರಿರುವ ನಾನೀಗ ವಿಧಾನಪರಿಷತ್ ಶಾಸಕಾಂಗ ಪಕ್ಷದ ನಾಯಕನಾಗಿದ್ದೇನೆ. ಕಾಂಗ್ರೆಸ್ಸಿನಲ್ಲಿಯೇ ಇದ್ದರೆ.. ಈಗಲೂ ನಾನು ಬುಟ್ಟಿ ಹೊರಬೇಕಿತ್ತು ಎಮದು ತಿರುಗೇಟು ಕೊಟ್ಟಿದ್ದಾರೆ.
ಅಲ್ಲದ ಅಂಬೇಡ್ಕರ್ ಅವರನ್ನೇ ಸೋಲಿಸಿದವರಿಂದ ನಾನು ದಲಿತರ ಜವಾಬ್ದಾರಿ ಕಲಿಯುವ ಅಗತ್ಯ ಇಲ್ಲ. ದೇಶದಲ್ಲಿ ದಲಿತರಿಗೆ ಕಾಂಗ್ರೆಸ್ ಮಾಡಿದಷ್ಟು ಮೋಸವನ್ನು, ಯಾರೂ ಮಾಡಿಲ್ಲ ಎಂದಿದ್ದಾರೆ.



