ಶಿವರಾತ್ರಿಗೆ ಶಿವಣ್ಣ ಸೆನ್ಸೇಷನ್ ಇದೆ. ಇದು ಕನ್ನಡದ ಸಂಚಲನ. ಶಿವಣ್ಣ ಜೊತೆ ಸಿನಿಮಾ ಮಾಡುವುದು ದಿನಕರ್ ಅವರ ಕನಸು. ಶಿವಣ್ಣ ವಿಷಯ ಬಿಡಿ, ಹೊಸಬರು, ಕಿರಿಯರು ಎಂದು ನೋಡುವುದಿಲ್ಲ. ಅಂತಹ ಸೆಂಚುರಿ ಸ್ಟಾರ್ ಶಿವ ರಾಜ್ʻಕುಮಾರ್ ಜೊತೆ ದಿನಕರ್ ತೂಗುದೀಪ ಹೊಸ ಸಿನಿಮಾ ಘೋಷಿಸಿದ್ಧಾರೆ. ಇದೀಗ ಅಧಿಕೃತ. ಮಹಾಶಿವರಾತ್ರಿಯ ದಿನದಂದು ಸಿನಿಮಾ ಟೈಟಲ್ ಘೋಷಣೆಯಾಗಲಿದೆ. ಅಂದಹಾಗೆ ಇದು ಶಿವಣ್ಣ ಅಭಿನಯಿಸಲಿರುವ 131ನೇ ಸಿನಿಮಾ.
ದಿನಕರ್ ತೂಗುದೀಪ ಜೊತೆಜೊತೆಯಲಿ ಚಿತ್ರದ ಮೂಲಕ ನಿರ್ದೇಶಕರಾದವರು. ಅದಾದ ಮೇಲೆ ನವಗ್ರಹ, ಸಾರಥಿ, ಲೈಫ್ ಜೊತೆ ಒಂದ್ ಸೆಲ್ಫಿ ಸಿನಿಮಾ ಮಾಡಿರುವ ದಿನಕರ್, ವಿಭಿನ್ನ ಚಿತ್ರಗಳಲ್ಲೇ ಹೆಸರು ಮಾಡಿದವರು. ಇದೀಗ ರಾಯಲ್ ಅನ್ನೋ ಸಿನಿಮಾ ನಿರ್ದೇಶಿಸುತ್ತಿರುವ ದಿನಕರ್, ಅದು ಮುಗಿಯುತ್ತಿದ್ದಂತೆಯೇ ಶಿವಣ್ಣ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.
ಆರ್.ಕೇಶವ್, ಬಿ.ಎಸ್.ಸುಧೀಂದ್ರ, ನಿರ್ಮಾಣದ ಹೊಸ ಚಿತ್ರದ ಉಳಿದ ವಿವರಗಳು ಶಿವರಾತ್ರಿಗೆ ಹೊರಬರಲಿವೆ. ಕಥ ಪ್ರಿಯದರ್ಶಿನಿ ರಾಮರೆಡ್ಡಿ ಅವರದ್ದು. ಅಂದಹಾಗೆ ತೂಗುದೀಪ ಕುಟುಂಬಕ್ಕೂ ರಾಜ್ ಕುಟುಂಬಕ್ಕೂ ಅವಿನಾಭಾವ ನಂಟು.
ತೂಗುದೀಪ ಶ್ರೀನಿವಾಸ್ ಅವರು ರಾಜ್ ಕುಟುಂಬದ ಜೊತೆ ಜೊತೆಗೇ ಸಾಗಿ ಬಂದವರು. ಮೈಸೂರಿನಲ್ಲಿರುವ ತೂಗುದೀಪ ಶ್ರೀನಿವಾಸ್ ಮನೆಗೆ ಅವರು ಇಟ್ಟಿದ್ದ ಹೆಸರು ಮು.ಪಾ.ಕೃಪ. ಇವತ್ತಿಗೂ ಇದೆ. ಆ ಹೆಸರನ್ನು ಇಟ್ಟಿದ್ದು ಮತ್ತುರಾಜ ಪಾರ್ವತಮ್ಮ ಕೃಪೆ ಎಂಬ ಕಾರಣಕ್ಕೆ ಎಂಬುದರ ನೆನಪಿನಲ್ಲಿ. ಅದನ್ನು ಇತ್ತೀಚೆಗೆ ದಿನಕರ್ ತೂಗುದೀಪ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಇನ್ನು ದರ್ಶನ್ ಅವರೂ ರಾಜ್ ಬ್ಯಾನರಿನಲ್ಲಿ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದವರು. ಅದನ್ನು ಅವರು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ. ಅದಾದ ಮೇಲೆ ಪುನೀತ್ ಅವರ ಜೊತೆ ಅರಸು ಚಿತ್ರದಲ್ಲಿ ಅತಿಥಿ ನಟರಾಗಿ ನಟಿಸಿದ್ದರು ದರ್ಶನ್.
ಇದೀಗ ದಿನಕರ್ ತೂಗುದೀಪ ಅವರ ನಿರ್ದೇಶನದಲ್ಲಿ ಶಿವಣ್ಣ ಅಭಿನಯಿಸುತ್ತಿರುವುದು ಸಂಚಲನ ಮೂಡಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.



