ದೇಶದ ಚುನಾವಣೆಯಲ್ಲಿ ಬಹುತೇಕವೇ ಏನು.. ಎಲ್ಲ ಸಮೀಕ್ಷೆಗಳು ಕೂಡಾ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ಭವಿಷ್ಯ ನುಡಿದಿವೆ. ಸಟ್ಟಾ ಬಜಾರ್ ಕೂಡಾ ಹಾಗೆಯೇ ಹೇಳುತ್ತಿದೆ. ಚುನಾವಣಾ ತಜ್ಞರ ಮಾತುಗಳೂ ಅದನ್ನೇ ಹೇಳುತ್ತಿವೆ. ಬಹುತೇಕ ಜ್ಯೋತಿಷಿಗಳು ಕೂಡಾ ಮೋದಿಯೇ ಮತ್ತೆ ಪಿಎಂ ಎನ್ನುತ್ತಿರುವಾಗ ರಾಜಗುರು ಎಂದೇ ಖ್ಯಾತರಾಗಿರುವ ಜ್ಯೋತಿಷಿ ದ್ವಾರಕನಾಥ್ ಬೇರೆಯದ್ದೇ ಭವಿಷ್ಯ ನುಡಿದಿದ್ಧಾರೆ. ದ್ವಾರಕನಾಥ್ ಅವರ ಪ್ರಕಾರ ಮೋದಿ ಪ್ರಧಾನಿಯಾಗುವ ಹಾದಿ ಕಷ್ಟವಿದೆ.
ನಾನು ನರೇಂದ್ರ ಮೋದಿ ಹಾಗೂ ಬಿಜೆಪಿ ವಿರೋಧಿಯಲ್ಲ ಎಂದು ಮೊದಲೇ ಹೇಳುವ ದ್ವಾರಕನಾಥ್ ಗ್ರಹಗಳ ವಿಶ್ಲೇಷಣೆ ಆಧರಿಸಿ ಹೇಳುವುದಾದರೆ, ಜೂನ್ 4ರಂದು ಫಲಿತಾಂಶ ಹೊರಬಿದ್ದರೂ ಕೇಂದ್ರದಲ್ಲಿ ಸರಕಾರ ರಚನೆ ವಿಳಂಬವಾಗಲಿದೆ. ಪ್ರಧಾನಿ ಅಭ್ಯರ್ಥಿ ಆಯ್ಕೆಯೂ ಚರ್ಚೆಗೆ ಗ್ರಾಸವಾಗಲಿದೆ. ಸಂಘ ಪರಿವಾರವು ಸರಕಾರ ರಚನೆ ವಿಚಾರದಲ್ಲಿ ಪ್ರಮುಖ ಪಾತ್ರವಹಿಸಲಿದೆ. ಕಳೆದ ಎರಡು ಚುನಾವಣೆಗಳಲ್ಲೂ ಉತ್ತರ ಭಾರತದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿತ್ತು. ಆದರೆ, ಈ ಬಾರಿ ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಡಿಮೆ ಸೀಟುಗಳನ್ನಷ್ಟೇ ಗೆಲ್ಲಲಿದೆ ಎಂದು ಭವಿಷ್ಯ ಹೇಳಿದ್ಧಾರೆ.
ಮೋದಿ ಮೊದಲ ಸಲ ಪ್ರಧಾನಿಯಾದಾಗ ಇದ್ದ ವರ್ಚಸ್ಸು, ಶಾಂತ ಮನಸ್ಸು ಈಗಿಲ್ಲ. ಅವರ ಮನಸ್ಸು, ಗುರಿ ಬದಲಾಗುತ್ತದೆಂದು ಯಾರೂ ಯೋಚಿಸಿರಲಿಲ್ಲ. ಹೀಗಾಗಿಯೇ, ಜನರು ಮೋದಿ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ದ್ವಾರಕನಾಥ್ ಶ್ರೇಷ್ಠ ನಾಯಕರಾಗಿದ್ದವರು ಜನರಲ್ಲಿ ಧೈರ್ಯ ತುಂಬಿ ಭರವಸೆಗಳ ಕುರಿತು ಮಾತನಾಡಬೇಕಿತ್ತು. ಆದರೆ ಚುನಾವಣೆಯಲ್ಲಿ ಹೆಣ್ಣು ಮಕ್ಕಳ ಮಾಂಗಲ್ಯದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಎಂದೂ ಹೀಗೆ ವರ್ತಿಸಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ಧಾರೆ.
ದೇವರು ಕೊಟ್ಟ ಅವಕಾಶವನ್ನು ಮೋದಿ ಕಳೆದುಕೊಳ್ಳುವ ಸಂದಿಗ್ಧತೆಯಲ್ಲಿದ್ದಾರೆ. ನಾವೀಗ ಕ್ರೋಧಿ ನಾಮ ಸಂವತ್ಸರದಲ್ಲಿದ್ದೇವೆ. 2025ರ ಮಾರ್ಚ್ 30ರಿಂದ ವಿಶ್ವವಾಸು ಸಂವತ್ಸರ ಶುರುವಾಗಲಿದೆ. ಅಲ್ಲಿಯವರೆಗೆ ಮನುಷ್ಯರು ಹಾಗೂ ನಮ್ಮನ್ನು ಆಳುವವರಲ್ಲಿ ತಾಪ, ಉಗ್ವೇದ, ಉನ್ಮಾದ ಹೆಚ್ಚಿರುತ್ತದೆ. ಈ ಸಂವತ್ಸರ ಕ್ರೋಧದಿಂದ ಕೂಡಿದ್ದು, ಮನುಷ್ಯ ಪ್ರೇರಿತ ಕ್ರೋಧಗಳೇ ಜಾಸ್ತಿಯಾಗಲಿವೆ. ದುರಾಸೆಯು ದುಃಖಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ಧಾರೆ.
ಬಿಜೆಪಿ ಪಕ್ಷವೊಂದೇ ಬಹುಮತ ಪಡೆದು ಸರಕಾರ ರಚಿಸಲು ಸಾಧ್ಯವಿಲ್ಲ. ಮೈತ್ರಿ ಪಕ್ಷಗಳ ಬೆಂಬಲ ಪಡೆಯಲೇ ಬೇಕಿದೆ. ಈ ಬಾರಿ ಪ್ರಬಲ ಪ್ರತಿಪಕ್ಷ ಲೋಕಸಭೆಯಲ್ಲಿ ಇರಲಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯು 400 ಸೀಟು ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಆದರೆ ಆ ಸಂಖ್ಯೆಯ ಹತ್ತಿರ ಸುಳಿಯುವುದು ಕಷ್ಟ. ಮಿತ್ರಪಕ್ಷಗಳ ಸಹಾಯ ಇಲ್ಲದೇ ಬಿಜೆಪಿಯೊಂದೇ ಅಧಿಕಾರ ಚುಕ್ಕಾಣಿ ಹಿಡಿಯುವುದು ಸಾಧ್ಯವಿಲ್ಲ. ಎನ್‌ಡಿಎ ಮೈತ್ರಿಕೂಟ ಬಲ 300-302 ಸ್ಥಾನಗಳನ್ನು ಗೆಲ್ಲಬಹುದು ಎಂದು ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ.



