ʻವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್… ಉಪೇಂದ್ರ ಸೋಲು ಗೆಲುವು ಬಗ್ಗೆ ತುಂಬಾ ಚಿಂತೆ ಮಾಡುತ್ತಿದ್ದೀರಿ.. ಎಂಥ ನಿಸ್ವಾರ್ಥ, ಎಂಥ ತ್ಯಾಗ ಮನೋಭಾವ.. ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ.. ಡೋಂಟ್ ವರೀ… ನಾನ್ ಗೆಲ್ಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್ ಹೇಳ್ದಾಗೆಲ್ಲಾ ಮಾಡ್ತೀನಿ, ಗೆದ್ದೇ ಗೆಲ್ತೀನಿ. ನೀವ್ ಗೆಲ್ಲೋದ್ ಯಾವಾಗ ಅಂತ ನೀವ್ ಯೋಚನೆ ಮಾಡ್ರಪ್ಪೋ. ಮುಂದಿನ ಎಲೆಕ್ಷನ್‌ನಲ್ಲಿ ನನಗ್ ಕೆಲಸ ಕೊಡ್ತೀರಾ ಅಂದ್ರೆ ನಿಲ್ತೀನಿ. ಆಗ್ಲೂ ನೀವು ಎಮೋಸನಲ್ ಪ್ರಚಾರ ಮಾಡ್ರೀ.. ಸಭೆ ಸಮಾರಂಭ ಎಲ್ಲಾ ಮಾಡ್ರೀ.. ಕಷ್ಟ ಪಡ್ರೀ.. ಆಮೇಲ್ ಐದು ವರ್ಷ ನೀವೇನ್ ಬೇಕಾದ್ರೂ ಮಾಡ್ಕಳಿ ನಾವ್ ಕೇಳಕ್ ಬರಲ್ಲ ಅಂದ್ರೆ… ಉಸ್, ಏನ್ ಬರೀಬೇಕೋ ಗೊತ್ತಾಗ್ತಿಲ್ರಪ್ಪೋ.. ಈ ದಡ್ ನನ್ ಮಗಂಗೇ ಯಾವನಾದರೂ ಇನ್ಮೇಲೆ ಬುದ್ದಿವಂತ ಅಂದ್ರೆ ಅಷ್ಟೇ… ಸೆಂದಾಗಿರಕ್ಕಿಲ್ಲಾ…”
ಇಂಥಾದ್ದೊಂದು ಪೋಸ್ಟ್ ಹಾಕಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. ಅದಕ್ಕೆಲ್ಲ ಕಾರಣವಾಗಿದ್ದು ಬೇರೇನಲ್ಲ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ.. ‘ಪವನ್ ಕಲ್ಯಾಣ್ ಅವರನ್ನು ಗೆಲ್ಲಿಸಲು ತೆಲುಗು ಜನ 14 ವರ್ಷ ತೆಗೆದುಕೊಂಡರು. ಉಪೇಂದ್ರ ಅವರನ್ನು ಗೆಲ್ಲಿಸಲು ಕನ್ನಡಿಗರು ಇನ್ನು ಎಷ್ಟು ವರ್ಷ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ’ ಎಂಬ ಪೋಸ್ಟರ್.
ಇದಕ್ಕೆ ನಟ ಉಪೇಂದ್ರ ಅವರು ವಿಡಂಬನಾತ್ಮಕವಾಗಿ, ವ್ಯಂಗ್ಯವಾಗಿ, ಲೇವಡಿ ರೂಪದಲ್ಲೇ ರಿಯಾಕ್ಷನ್ ಕೊಟ್ಟಿದ್ಧಾರೆ. ಇಷ್ಟಕ್ಕೂ ಜನ ಕೇಳೋದ್ರಲ್ಲಿ ತಪ್ಪೇನಿದೆ ಅನ್ನಿಸೋದ್ರಲ್ಲಿ ಯಾವ ತಪ್ಪಿದೆ..? ಒಂದ್ಸಲ ಪವನ್ ಕಲ್ಯಾಣ್ ಕಥೆ ನೋಡ್ಕೊಳ್ಳೋಣ.
ಮೊದಲು ಜನಸೇನಾ ಕಥೆ ನೋಡೋಣ..
ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಮಾಡಿರುವ ಮ್ಯಾಜಿಕ್ ಎಲ್ಲರಿಗೂ ಗೊತ್ತಿರೋದೇ ಆಗಿದೆ. ಆಂಧ್ರದಲ್ಲಿ ಜನಸೇನಾ ಪರ್ಫಾಮೆನ್ಸ್ 100%. ಏಕೆಂದರೆ, ಜನಸೇನಾ ಸ್ಪರ್ಧೆ ಮಾಡಿದ್ದು 21 ಅಸೆಂಬ್ಲಿ ಹಾಗೂ 2 ಲೋಕಸಭಾ ಕ್ಷೇತ್ರಗಳಲ್ಲಿ. ಅಷ್ಟರಲ್ಲೂ ಗೆದ್ದಿದೆ. ಸೋಲಿನ ಮಾತೇ ಇಲ್ಲ. ಈಗ ಪವನ್ ಕಲ್ಯಾಣ್ʻಗೂ ಉಪೇಂದ್ರ ಅವರಿಗೂ ಜನ ಹೋಲಿಸುತ್ತಿದ್ಧಾರೆ.
ಪವನ್ ಕಲ್ಯಾಣ್ ಜನಸೇನಾ ಪಕ್ಷವನ್ನು ಕಟ್ಟಿದ್ದು 2014ರಲ್ಲಿ. 2014 ಹಾಗೂ 2019ರಲ್ಲಿ ಸೋತರೂ ಕೂಡಾ, ಪವನ್ ಕಲ್ಯಾಣ್ ರಾಜಕೀಯ ನಿಲುವುಗಳು ಅತ್ಯಂತ ಸ್ಪಷ್ಟವಾಗಿದ್ದವು. ತಾವು ಕಾಂಗ್ರೆಸ್ ವಿರೋಧಿ ಎಂದು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿದ್ದ ಪವನ್, ಜಗನ್ ರೆಡ್ಡಿ ವಿರುದ್ಧ ಬಹಿರಂಗವಾಗಿ ತೊಡೆತಟ್ಟಿದ್ದರು. ಮೋದಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದರು. ಹಾಗೆಂದು 2019ರಲ್ಲಿ ಗೆಲುವು ಸಿಕ್ಕಿರಲಿಲ್ಲ. 2023ರಲ್ಲಿ ಮತ್ತೊಮ್ಮೆ ಇಡೀ ಆಂಧ್ರದಾದ್ಯಂತ ಪಾದಯಾತ್ರೆ ಮಾಡಿದ್ದ ಪವನ್ ಕಲ್ಯಾಣ್, ಈಗ ಪಕ್ಷವನ್ನು ಟಿಡಿಪಿ ಮತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಗೆಲ್ಲಿಸಿಕೊಂಡು ಬಂದಿದ್ದಾರೆ. ಹಾಗಂತ ಅವರು ಸಿನಿಮಾ ಬಿಟ್ಟಿಲ್ಲ. ಸಿನಿಮಾ ಮಾಡುತ್ತಲೇ ರಾಜಕೀಯವನ್ನೂ ಮಾಡಿಕೊಂಡು ಹೋರಾಡಿ ಗೆದ್ದಿದ್ದಾರೆ.
ಈಗ ಉಪೇಂದ್ರರ ಪ್ರಜಾಕೀಯದ ಕಥೆ..!
ಜನಸೇನಾಗೆ ಹೋಲಿಸಿದರೆ ಉಪೇಂದ್ರರದ್ದು ವಿಭಿನ್ನ ಹಾದಿ. ಅವರ ಪಾಡಿಗೆ ಅವರು ಸಿನಿಮಾ ಮಾಡ್ತಾರೆ. ಎಲ್ಲರಂತೆ ಅವರೂ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕ್ತಾರೆ. 2018ರಲ್ಲಿ ಶುರುವಾಗಿರುವ ಉತ್ತಮ ಪ್ರಜಾಕೀಯ ಪಕ್ಷದ ಪ್ರಚಾರ ನಡೆಯುವುದೂ ಕೂಡಾ ಸೋಷಿಯಲ್ ಮೀಡಿಯಾಗಳಲ್ಲಿ. ನಾವು ಹಣ ಖರ್ಚು ಮಾಡಲ್ಲ ಎನ್ನುವುದು ಉಪೇಂದ್ರರ ಪಕ್ಷ ಕೊಡುವ ಸಮರ್ಥನೆ. ಹಣ ಇಲ್ಲ ಎನ್ನುವುದು ಓಕೆ. ಆದರೆ.. ಸರ್ಕಾರದ ನೀತಿಗಳ ಬಗ್ಗೆ, ಕೆಲಸ ಕಾರ್ಯಗಳ ಬಗ್ಗೆ, ಜನ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ರಿಯಾಕ್ಷನ್ ಕೂಡಾ ಬರುವುದಿಲ್ಲ. ಸರ್ಕಾರದ ಒಳ್ಳೆಯ ಕೆಲಸಗಳ ಬಗ್ಗೆ ಹೊಗಳಿಕೆಯೂ ಬರುವುದಿಲ್ಲ. ಜನರಿಗೆ ಪ್ರಜಾಕೀಯದ ನೀತಿ ನಿಲುವುಗಳೇನು ಅನ್ನೋದರ ಬಗ್ಗೆ ಸ್ಪಷ್ಟತೆಯೂ ಇಲ್ಲ. ಏನನ್ನೂ ಮಾಡದೆ.. ಜನರೊಂದಿಗೆ ಸಂಪರ್ಕವನ್ನೇ ಇಟ್ಟುಕೊಳ್ಳದೆ.. ಒನ್ ವೇನಲ್ಲಿ ಹೋಗುತ್ತಾ.. ಜನರನ್ನು ದೂಷಿಸುತ್ತಾ ಕುಳಿತರೆ ಹೇಗೆ..?
ಸುಮ್ಮನೆ ನೋಡಿ..
ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಜನರಲ್ಲಿ ಪರ ವಿರೋಧ ಅಭಿಪ್ರಾಯಗಳೆರಡೂ ಇವೆ. ಉಪೇಂದ್ರ ನಿಲುವು ಏನು? ಗೊತ್ತಿಲ್ಲ.
ವಾಲ್ಮೀಕಿ ನಿಗಮದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ತಾರೆ. ಸೋಷಿಯಲ್ ಮೀಡಿಯಾದಲ್ಲಾದರೂ ಉಪ್ಪಿ ರಿಯಾಕ್ಷನ್ ಕೊಡ್ತಾರಾ..? ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟರೂ.. ರಿಯಾಕ್ಷನ್ ಇಲ್ಲ. ರಾಜೀನಾಮೆ ಕೊಡಿ ಎಂಬ ಆಗ್ರಹವೂ ಇಲ್ಲ. ಸರಿಯೋ.. ತಪ್ಪೋ.. ಎಂಬ ಅಭಿಪ್ರಾಯವಂತೂ ಇಲ್ಲವೇ ಇಲ್ಲ.
ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಎಡವಟ್ಟುಗಳು, ಸಿಇಟಿ ಪ್ರಶ್ನೆ ಪತ್ರಿಕೆ ಅಪಸವ್ಯಗಳು, ಬೆಂಗಳೂರಿನ ಜನರ ಕುಡಿಯುವ ನೀರಿನ ಸಮಸ್ಯೆ, ಗುಂಡಿ ಬಿದ್ದ ರಸ್ತೆಗಳು.. ಹೀಗೆ ಯಾವುದಕ್ಕೂ ಉಪ್ಪಿಯವರದ್ದು ರಿಯಾಕ್ಷನ್ ಇಲ್ಲ.
ಜನರಿಗೆ ಏನನ್ನೂ ಹೇಳದೆ.. ಏನನ್ನೂ ಮಾಡದೆ.. ಬಿಡುವಾದಾಗ.. ನಮ್ಮನ್ನು ಅರ್ಥ ಮಾಡಿಕೊಳ್ಳಿ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕೋದು.. ಅದನ್ನು ಪ್ರಶ್ನೆ ಮಾಡಿದರೆ.. ಲೇವಡಿ ಮಾಡೋದು.. ಸರಿ ಇಲ್ಲ ಉಪೇಂದ್ರ ಅವರೇ.
ಸಿನಿಮಾಗಳಲ್ಲೇನೋ ಜನ ಕಥೆ ನೋಡ್ಕೊಂಡು ಅರ್ಥ ಮಾಡ್ಕೊಳ್ತಾರೆ. ಆದರೆ.. ಜನಾಭಿಪ್ರಾಯ ರೂಪಿಸುವ ಪ್ರಯತ್ನವನ್ನೇ ಮಾಡದೆ.. ಜನರನ್ನು ದೂಷಿಸಿದ್ರೆ ಹೇಗೆ..?



