ಉಪೇಂದ್ರ ಅಂದರೇನೇ ಪ್ರಯೋಗ. ಪ್ರಯೋಗ ಅಂದರೇನೇ ಉಪೇಂದ್ರ. ಅಷ್ಟರಮಟ್ಟಿಗೆ ಖ್ಯಾತರಾಗಿರುವ ಉಪೇಂದ್ರ ಯುಐ ಚಿತ್ರದ ಟ್ರೋಲ್ ಸಾಂಗು ಈಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಆದರೆ, ಉಪೇಂದ್ರ ಇರೋದೇ ಹಾಗೆ. ಪ್ರತಿ ಚಿತ್ರದಲ್ಲೂ ಏನಾದರೊಂದು ಚಿತ್ರ ವಿಚಿತ್ರ ಪ್ರಯೋಗ ಮಾಡೋದು ಉಪ್ಪಿ ಸ್ಟೈಲ್. ಅಂತಹ ಉಪೇಂದ್ರ ಅವರ ಪ್ರಯೋಗಗಳ ದೊಡ್ಡ ಲಿಸ್ಟೇ ಇದೆ. ಒಪ್ಪುವುದು, ಮೆಚ್ಚುವುದು, ಟೀಕಿಸುವುದು ಎಲ್ಲ ಆಮೇಲಿನ ವಿಷಯ. ಪ್ರಯೋಗಗಳಂತೂ ಇವೆ.
ಉಪ್ಪಿ ಪ್ರಯೋಗ ನಂ.1
ಡಬಲ್ ಮೀನಿಂಗ್ ಡೈಲಾಗ್ಸ್ :
ತರ್ಲೆ ನನ್ಮಗ ಚಿತ್ರದ ಮೂಲಕ ಉಪ್ಪಿ ನಿರ್ದೇಶನಕ್ಕೆ ಬಂದರಷ್ಟೇ ಅಲ್ಲ, ಆಗಿನ ಟ್ರೆಂಡ್ ಆಗಿದ್ದ ಡಗಾರ್, ಪಂಪ್ ಹೌಸ್ ಮೊದಲಾದ ಪದಗಳನ್ನು ಬಳಸಿದ್ದು ಅದೇ ಮೊದಲು. ಅಷ್ಟೇ ಅಲ್ಲ, ಹೀರೋನನ್ನು ತರ್ಲೆ ನನ್ಮಗ ಎಂದು ಕರೆದಿದ್ದು ಹಾಗೂ ಪೋಲಿತನವನ್ನು ತೋರಿಸಿದ್ದು ಉಪೇಂದ್ರ.
ಉಪ್ಪಿ ಪ್ರಯೋಗ ನಂ.2
ಒಂದಕ್ಷರದ, ಚಿಹ್ನೆಗಳೇ ಸಿನಿಮಾ ಟೈಟಲ್ :
ತರ್ಲೆ ನನ್ಮಗ ಆದ ಮೇಲೆ ಶ್, ಎ ಚಿತ್ರಗಳು ಒಂದಕ್ಷರದ ಸಿನಿಮಾಗಳಾದರೆ ಓಂ, ಸ್ವಸ್ತಿಕ್, ಸೂಪರ್ ಚಿತ್ರಗಳು ಚಿಹ್ನೆಗಳನ್ನೇ ಇಟ್ಟುಕೊಂಡಿದ್ದವು. ತಮ್ಮದೇ ಉಪೇಂದ್ರ ಸಿನಿಮಾದಲ್ಲಿ ತಮ್ಮ ಹೆಸರನ್ನೇ ಟೈಟಲ್ ಆಗಿಟ್ಟುಕೊಂಡು ಸಿನಿಮಾ ಮಾಡಿದ ಖ್ಯಾತಿಯೂ ಉಪೇಂದ್ರ ಅವರದ್ದೇ. ಹೀರೋಗಳ ಹೆಸರಿನ ಸಿನಿಮಾಗಳು ಬಂದಿವೆ. ಆದರೆ ನಿರ್ದೇಶಕನ ಹೆಸರಿನ ಸಿನಿಮಾ ಬಂದಿದ್ದು ಅದೇ ಮೊದಲು.
ಉಪ್ಪಿ ಪ್ರಯೋಗ ನಂ.3
ಒಂದು ಹಾಡು.. ಹಲವು ಅರ್ಥ.. :
ಉಪ್ಪಿಗಿಂತ ರುಚಿ ಬೇರೆ ಇಲ್ಲ.. ಒಪ್ಪಿಕೊಂಡೋರೂ ದಡ್ಡರಲ್ಲ.. ಇಲ್ಲಿ ಅವರು ಉಪೇಂದ್ರಗಿಂತ ರುಚಿ ಬೇರೆ ಇಲ್ಲ ಅಂತಾ ಹೇಳ್ತಾರಾ.. ಅಥವಾ ಉಪ್ಪು ಕಥೆ ಹೇಳ್ತಾರಾ..
ಏನಿಲ್ಲ.. ಏನಿಲ್ಲ.. ನನ್ನ ನಿನ್ನ ನಡುವೆ ಏನಿಲ್ಲ. ನಿಜದಂತಿರುವ ಸುಳ್ಳಲ್ಲ.. ಸುಳ್ಳುಗಳೆಲ್ಲ ನಿಜವಲ್ಲ.. ಹೀಗೆ ಒಂದೇ ಹಾಡುಗಳಲ್ಲಿ ನಾನಾ ಅರ್ಥ ನೀಡುವ ಸಾಹಿತ್ಯ ಕೊಟ್ಟಿದ್ದು ಉಪೇಂದ್ರ ಅವರ ಪ್ರಯೋಗವೇ.
ಉಪ್ಪಿ ಪ್ರಯೋಗ ನಂ.4
ಚಿತ್ರ ವಿಚಿತ್ರ ಚಿತ್ರಕಥೆ :
ಉಪೇಂದ್ರ ಅವರ ಓಂ ಚಿತ್ರ ನೋಡಿದರೆ ರಿವರ್ಸ್ ಸ್ಕ್ರೀನ್ ಪ್ಲೇ ಇದೆ. ಎ ಚಿತ್ರದಲ್ಲಿ ಹಿಂದಿನ ಕಥೆ, ಈಗ ನಡೆಯುತ್ತಿರುವ ಕಥೆ ಹಾಗೂ ಕಾಲ್ಪನಿಕ ಕಥೆಗಳೆಲ್ಲವೂ ಒಂದರೊಳಗೊಂದು ಸೇರಿಕೊಂಡು ಥ್ರಿಲ್ ಕೊಡುತ್ತವೆ. ಉಪೇಂದ್ರ ಚಿತ್ರದಲ್ಲಿ ನಾವು ನೋಡಿದ್ದು ವ್ಯಕ್ತಿಗಳಾ.. ಭಾವನೆಗಳಾ.. ಎಂಬ ಗೊಂದಲವಾಗುವ ಕಥೆ ಇದೆ. ಹೀಗೆ.. ಕಥೆ ಹೇಳೋ ಸ್ಟೈಲಿನಲ್ಲೂ ಉಪೇಂದ್ರ ಪ್ರಯೋಗ ಮಾಡಿದ್ಧಾರೆ. ಎ ಚಿತ್ರದಲ್ಲಂತೂ ಸಿನಿಮಾ ಶುರುವಾದ ಕೆಲವೇ ನಿಮಿಷಗಳಲ್ಲಿ ದಿ ಎಂಡ್ ಬಂದು ಪ್ರೇಕ್ಷಕರು ತಲೆಗೆ ಹುಳ ಬಿಟ್ಟುಕೊಂಡಿದ್ದರು.
ಉಪ್ಪಿ ಪ್ರಯೋಗ ನಂ.5
ಪೋಸ್ಟರುಗಳೂ ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ:
ಎ ಚಿತ್ರದಲ್ಲಿ ವಿಚಿತ್ರ ಅರ್ಥ ನೀಡುವ ಪೋಸ್ಟರುಗಳು, ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ ಎಂಬ ಅಡಿಬರಹ, ಉಪೇಂದ್ರ ಬಂದಾಗ ನಾನು ಏನಾದ್ರೂ ಪಿಎಂ ಆದರೆ.. ನೀರಿನ ನಲ್ಲಿಗಳಲ್ಲಿ ಬಿಯರು ಬರುವಂತೆ ಮಾಡ್ತೀನಿ ಅನ್ನೋ ಬರಹ, ತಮ್ಮದೇ ಡ್ರೆಸ್ ಮೇಲೆ ತಮ್ಮದೇ ಡಿಸೈನ್.. ಹೀಗೆ ಚಿತ್ರ ವಿಚಿತ್ರ ಪೋಸ್ಟರುಗಳಲ್ಲಿ ಪ್ರಯೋಗ ಮಾಡಿದ್ದಾರೆ.
ಉಪ್ಪಿ ಪ್ರಯೋಗ ನಂ.6
ಹಾಡುಗಳಲ್ಲಿ ವಿಶಿಷ್ಟ ಪ್ರಯೋಗ :
ಎ ಚಿತ್ರದ ಸುಮ್ ಸುಮ್ನೆ ನಗ್ತಾಳೆ.. ಹಾಡು..
ಕ್ರಿಕೆಟ್ ಮ್ಯಾಚು ಮತ್ತು ಪ್ರೀತಿಯನ್ನು ಮಿಕ್ಸ್ ಮಾಡಿದ್ದ ಇದು ಒನ್ ಡೇ ಮ್ಯಾಚು ಕಣೋ..
ಟಿವಿ ಚಾನೆಲ್ಲುಗಳ ಹೆಸರನ್ನೇ ಇಟ್ಟು ಮಾಡಿದ್ದ ಬರಿವೋಳು.. ಸಾಂಗ್..
ನ್ಯೂಸ್ ಪೇಪರು, ಮ್ಯಾಗಜಿನ್ನುಗಳ ಹೆಸರಿಟ್ಟು ಮಾಡಿದ್ದ ಗುಡ್ ಮಾರ್ನಿಂಗ್ ಇಂಡಿಯಾ ಟುಡೇ..
ಬೇರೆ ಬೇರೆ ಭಾಷೆಗಳಲ್ಲಿ ಹೇಳುವ ಐ ಲವ್ ಯೂ ಪದವನ್ನೇ ಇಟ್ಟುಕೊಂಡು ಮಾಡಿದ ಬಾಲೋ ಭಾಷಿ ಬೆಂಗಾಲಿ..ಲಿ ಹಾಡು.. ಹಾಡು.. ಹೀಗೆ ವಿಚಿತ್ರ ಪ್ರಯೋಗದ ಹಾಡುಗಳಿವೆ.
ಉಪ್ಪಿ ಪ್ರಯೋಗ ನಂ.7
ರೌಡಿಗಳಿಂದ ಆಕ್ಟಿಂಗ್ :
ಓಂ ಚಿತ್ರ ಇದೆಯಲ್ಲ, ಅದು ಕನ್ನಡದಲ್ಲಷ್ಟೇ ಅಲ್ಲ, ಇಂಡಿಯಾದಲ್ಲೇ ಟ್ರೆಂಡ್ ಸೆಟ್ಟರ್. ಕನ್ನಡದಲ್ಲಿ ಹೀರೋ ಕೈಗೆ ಮಚ್ಚು ಕೊಟ್ಟ, ಅದನ್ನೂ ಡಾ.ರಾಜ್ ಬ್ಯಾನರಿನಲ್ಲಿ ಮಾಡಿದ ಸಿನಿಮಾ. ವಿಶೇಷ ಅಂದ್ರೆ ಆ ಸಿನಿಮಾದಲ್ಲಿ ರಿಯಲ್ ರೌಡಿಗಳಾಗಿದ್ದ ಹಲವು ರೌಡಿಗಳು ನಟಿಸಿದ್ದರು. ರೌಡಿಗಳಂತೆ ಇನ್ಯಾರೋ ನಟಿಸೋದು ಬೇರೆ.. ರೌಡಿಗಳೇ ನಟರಾಗಿ ನಟಿಸೋದು ಬೇರೆ.. ಅದನ್ನು ಮಾಡಿದ್ದು ಉಪೇಂದ್ರ.
ಉಪ್ಪಿ ಪ್ರಯೋಗ ನಂ.8
ಭಾರತದಲ್ಲೇ ರೋಬೋಟ್ ಸಿನಿಮಾ ಮಾಡಿದ ಮೊದಲಿಗ ಉಪೇಂದ್ರ :
ಭಾರತದಲ್ಲಿ ಸೈನ್ಸ್ ಫಿಕ್ಷನ್ ಕುರಿತ ಹಲವು ಚಿತ್ರಗಳು ಬಂದಿವೆ, ನಿಜ. ಆದರೆ, ರೋಬೋಟ್ ಇಟ್ಟುಕೊಂಡು ಸಿನಿಮಾ ಮಾಡಿದ್ದವರು ಉಪೇಂದ್ರ. ಹಾಲಿವುಡ್ ಸಿನಿಮಾದ ಕಥೆ ಅವರದ್ದೇ. ಸೂಕ್ಷ್ಮವಾಗಿ ನೋಡಿದರೆ ರಜನಿಕಾಂತ್ ಅಭಿನಯದ ರೋಬೋ ಸಿನಿಮಾಗೂ, ಹಾಲಿವುಡ್ ಚಿತ್ರಕ್ಕೂ ಹಲವು ಹೋಲಿಕೆಗಳಿವೆ.
ಉಪ್ಪಿ ಪ್ರಯೋಗ ನಂ.9
ಒಂದು ಸಿನಿಮಾ.. ಹಲವು ಕ್ಲೈಮಾಕ್ಸ್ :
ಒಂದು ಸಿನಿಮಾಗೆ ಒಂದು ಕ್ಲೈಮಾಕ್ಸ್ ಕೊಡುವುದೇ ಕಷ್ಟ. ಆದರೆ ಕ್ಲೈಮಾಕ್ಸ್ ಸೃಷ್ಟಿಸುವುದರಲ್ಲೂ ಉಪೇಂದ್ರ ಪ್ರಯೋಗ ಜೀವಿ. ಅವರ ಹೆಚ್2ಒ ಚಿತ್ರದ ಕ್ಲೈಮಾಕ್ಸ್ ಅರ್ಥಪೂರ್ಣವಾಗಿದೆ. ಅಷ್ಟೇ ಅಲ್ಲ, ಸೂಪರ್ ಸ್ಟಾರ್ ಚಿತ್ರದಲ್ಲಿ ಒಂದಲ್ಲ.. ಹಲವು ಕ್ಲೈಮಾಕ್ಸ್ʻಗಳಿವೆ.



