ಗೆಲ್ತಾರೋ.. ಸೋಲ್ತಾರೋ.. ಅದು ಆಮೇಲಿನ ಪ್ರಶ್ನೆ. ತೀರಾ ಹಿಂದಕ್ಕೇನೂ ಹೋಗಬೇಕಿಲ್ಲ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಫಲಿತಾಂಶ ಬರುವ ಹಿಂದಿನ ದಿನದವರೆಗೆ ಬಿಜೆಪಿ ನಾಯಕರು ಅದ್ಯಾವ ಕಾನ್ಫಿಡೆನ್ಸ್ ತೋರಿಸುತ್ತಿದ್ದರೆಂದರೆ.. ಈ ಬಾರಿ ಬಿಜೆಪಿಗೆ ಬಹುಮತ ಗ್ಯಾರಂಟಿ. ನಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಿದ್ದರು. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ.. ಬಿಜೆಪಿಗೆ ಬಹುಮತ ಬರುವುದೂ ಅಷ್ಟೇ ಸತ್ಯೆ ಎನ್ನುತ್ತಿದ್ದರು.
ಇದು ಸಹಜ. ಯಾವ ರಾಜಕೀಯ ಪಕ್ಷವೂ.. ಯಾವ ನಾಯಕರೂ ಕೂಡಾ ರಿಸಲ್ಟ್ ಬರುವವರೆಗೆ ಗೆಲುವಿನ ಉತ್ಸಾಹದಲ್ಲೇ ಇರುತ್ತಾರೆ. ಆದರೆ.. ಲೋಕಸಭೆ ಚುನಾವಣೆಯಲ್ಲಿ ಎಲ್ಲ ಉಲ್ಟಾ ಆಗಿದೆ. ಏಕೆಂದರೆ.. ಪ್ರತಿಪಕ್ಷ ನಾಯಕರ ಮಾತುಗಳು. ಕಾಂಗ್ರೆಸ್ಸಿನ ಖರ್ಗೆ, ರಾಹುಲ್, ಪ್ರಿಯಾಂಕಾ ಅವರಿಂದ ಹಿಡಿದು, ಆಮ್ ಆದ್ಮಿಯ ಕೇಜ್ರಿವಾಲ್ʻವರೆಗೆ ಎಲ್ಲರೂ ಹೇಳುತ್ತಿರುವ ಮಾತುಗಳನ್ನು ನೋಡಿದರೆ.. ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳೂ ಮೋದಿ ಮತ್ತೆ ಪ್ರಧಾನಿಯಾಗುವುದನ್ನು ಒಪ್ಪಿಕೊಂಡಿವೆಯಾ ಎಂಬ ಅನುಮಾನ ಕಾಡದೇ ಇರದು.
ಕೇಜ್ರಿವಾಲ್ ಅವರ ಹೇಳಿಕೆ ಗಮನಿಸಿ.. ಬಿಜೆಪಿ ಗೆದ್ದರೆ.. ಮೋದಿ 75ಕ್ಕೆ ರಿಟೈರ್ ಆಗ್ತಾರೆ. ಅಮಿತ್ ಶಾ ಪ್ರಧಾನಿಯಾಗ್ತಾರೆ. ಯೋಗಿ ಆದಿತ್ಯನಾಥ್ ಕೂಡಾ ಪಿಎಂ ಆಗಲ್ಲ ಎನ್ನುತ್ತಿದ್ಧಾರೆ. ಏಕೆಂದರೆ.. ಬಿಜೆಪಿಯಲ್ಲಿ 75 ವರ್ಷಗಳಿಗೆ ಚುನಾವಣಾ ರಾಜಕೀಯದಿಂದ ರಿಟೈರ್ ಆಗಬೇಕು ಅನ್ನೋ ನಿಯಮ ಇದೆ ಅಂತಿದ್ದಾರೆ.
ಇನ್ನು ಖರ್ಗೆ ಮತ್ತು ರಾಹುಲ್ ಗಾಂಧಿ ಮೋದಿ ಮತ್ತೆ ಪ್ರಧಾನಿ ಆಗಲ್ಲ. ಬರೆದಿಟ್ಟುಕೊಳ್ಳಿ. ಅವರು ಮತ್ತೆ ಪ್ರಧಾನಿಯಾಗುವುದು ಕಷ್ಟ ಎನ್ನುತ್ತಿದ್ಧಾರಾದರೂ.. ಇಂಡಿಯಾ ಮೈತ್ರಿಕೂಟವೇ ಸರ್ಕಾರ ರಚಿಸಲಿದೆ ಎಂದು ಸಾರುತ್ತಿಲ್ಲ. ಈ ಎಲ್ಲ ಹೇಳಿಕೆಗಳನ್ನು ನೋಡಿದ ರಾಜಕೀಯ ತಜ್ಞರು ಬೇರೆಯದೇ ಲೆಕ್ಕ ಹಾಕುತ್ತಿದ್ಧಾರೆ.
ಏಕೆಂದರೆ.. ವಿಶೇಷವಾಗಿ ಅದರಲ್ಲೂ ಕೇಜ್ರಿವಾಲ್ ಅವರ ಮಾತಿನಲ್ಲಿರುವ ಒಳಾರ್ಥವನ್ನು ತಮ್ಮದೇ ರೀತಿಯಲ್ಲಿ ಕೂಡಿಸಿ.. ಗುಣಿಸಿ.. ಭಾಗಿಸಿ ಲೆಕ್ಕ ಹಾಕಿ.. ಇನ್ನೇನ್ ಇದೆ.. ಮೋದಿ ಮತ್ತೆ ಪಿಎಂ ಅಂತಾ ಅವರೇ ಒಪ್ಪಿಕೊಂಡಂದಾಯ್ತಲ್ವಾ ಎನ್ನುತ್ತಿದ್ಧಾರೆ.
ಮೋದಿ 75 ವರ್ಷದ ನಂತರ ನಿವೃತ್ತಿ ತಗೊಳ್ತಾರೆ. ಅಮಿತ್ ಶಾ ಪ್ರಧಾನಿ ಆಗ್ತಾರೆ ಅನ್ನೋ ಮಾತಿನ ಅರ್ಥ ಮತ್ತು ಸಂದೇಶ ಅದೇ ತಾನೇ.. ಎಂಬುದು ಕೇಜ್ರಿ ವಿರೋಧಿಗಳ ಹೇಳಿಕೆ.
ಹಾಗೆಂದು ಬಿಜೆಪಿ ಅಂದುಕೊಂಡಷ್ಟು ಸುಲಭವಾಗಿಯೇನೂ ಇಲ್ಲ. ಗೆಲುವು ಅಷ್ಟು ಸುಲಭವಾಗಿ ಗಿಟ್ಟುವುದಿಲ್ಲ. ಜನವರಿಯಲ್ಲಿ ರಾಮ ಮಂದಿರ ಉದ್ಘಾಟನೆ ಆದಾಗ ಇನ್ನೇನು ಬಿಜೆಪಿ 350 ತಲುಪುವುದು ಫಿಕ್ಸ್ ಎಂಬ ಮಾತುಗಳಿದ್ದವು. ಅದಕ್ಕೆ ತಕ್ಕಂತೆ ಕೆಲವು ಸಮೀಕ್ಷೆಗಳು ಕೂಡಾ ಮೋದಿ 400ರ ಆಸುಪಾಸು ಹೋಗಬಹುದು ಎಂದು ಹೇಳಿದವು. ಆದರೆ ಫೆಬ್ರವರಿಯಲ್ಲಿ ಯಾವಾಗ ಬಿಜೆಪಿ ಟಿಕೆಟ್ ಹಂಚಿಕೆಗಾಗಿ ಸಭೆ ಶುರು ಮಾಡಿತೋ ಆಗ ಮೋದಿ ಜನಪ್ರಿಯತೆಯೇನೋ ಬಿಜೆಪಿ ಮತದಾರರಲ್ಲಿ ಇದ್ದೇ ಇದೆ, ಆದರೆ ಪಾರ್ಟಿಯ ಸ್ಥಳೀಯ ನಾಯಕರು ಮತ್ತು ಸಂಸದರ ವಿರುದ್ಧ ಒಂದು ಮಟ್ಟದ ಬೇಸರ, ಆಕ್ರೋಶ, ಆಡಳಿತ ವಿರೋಧಿ ಭಾವನೆ ಕಾರ್ಯಕರ್ತರಲ್ಲಿ ಜಾಸ್ತಿ ಇದೆ ಮತ್ತು ಅದು ಬಿಜೆಪಿಯ ಕಟ್ಟಾ ಮತದಾರರಿಗೂ ಶಿಫ್ಟ್ ಆಗುತ್ತಿದೆ ಎಂಬುದು ಬಿಜೆಪಿ ಸರ್ವೆಗಳಲ್ಲೇ ಸ್ಪಷ್ಟ ಆಗತೊಡಗಿತ್ತು. ಹೀಗಾಗಿ 100ಕ್ಕೂ ಹೆಚ್ಚು ಸಂಸದರಿಗೆ ಪಿಂಕ್ ಸ್ಲಿಪ್ ನೀಡಿ ಹೊಸ ಮುಖಗಳಿಗೆ ಟಿಕೆಟ್ ನೀಡಲಾಯಿತು.
ಅಲ್ಲದೆ.. 2024ರಲ್ಲಿ . ಬಿಜೆಪಿ ಅಂದುಕೊಂಡಂತೆ ರಾಮ ಮಂದಿರ ಉದ್ಘಾಟನೆ ಒಂದರ ಮೇಲೆಯೇ ಚುನಾವಣೆ ಕಾಣುತ್ತಿಲ್ಲ. ಕಾಂಗ್ರೆಸ್ ಅಂದುಕೊಂಡಂತೆ ಮೋದಿ ವಿರುದ್ದ ಎಲ್ಲರೂ ಅನ್ನುವ ಗಾಳಿಯೂ ಇಲ್ಲ. ಹೀಗಾಗಿ ಬಿಜೆಪಿಯಲ್ಲಿ ಏನಾಗಬಹುದು ಎಂದು ಒಂದು ವಿಚಿತ್ರ ತಳಮಳ ಕಾಣುತ್ತಿದೆ. ವಿಪಕ್ಷಗಳ ಕಣ್ಣುಗಳಲ್ಲಿಯೂ ಮಿಂಚು ಕಾಣುತ್ತಿದೆ.
ಆದರೆ.. ಇಲ್ಲಿ.. ಬಿಜೆಪಿಗೆ ಮೋದಿ ಅನ್ನೋ ಅನ್ನೋ ಶಕ್ತಿ ಇದೆ. ಪ್ರತಿಪಕ್ಷಗಳಿಗೆ ಇಲ್ಲ. ಮೋದಿಯ ಒಂದು ಸಾಮರ್ಥ್ಯ ಎಂದರೆ ಕೊನೆ ಬಾಲ್‌ವರೆಗೂ ಕಾದಾಡಿ ಸಮಸ್ಯೆಯಲ್ಲಿರುವ ಕ್ಷೇತ್ರವನ್ನು ತನ್ನತ್ತ ತಿರುಗಿಸಿಕೊಳ್ಳುವುದು. ದೌರ್ಬಲ್ಯ ಎಂದರೆ ಬರೀ ಮೋದಿ ಬಿಟ್ಟು ಬಿಜೆಪಿ ಸ್ಥಳೀಯನಾಯಕರಿಗೆ ಆಶಕ್ತಿ ಇಲ್ಲ. ವಿಪಕ್ಷಗಳ ಸಾಮರ್ಥ್ಯ ಎಂದರೆ ಮೋದಿಗೆ ಇರುವಂತೆ ಗೆಲ್ಲಲೇಬೇಕು ಎಂಬ ಒತ್ತಡ ಇಲ್ಲದೇ ಇರುವುದು. ದೌರ್ಬಲ್ಯ ಎಂದರೆ ಮೋದಿಯಂತೆ ವೋಟು ತರುವ ರಾಷ್ಟ್ರೀಯ ನಾಯಕತ್ವವೇ ಇಲ್ಲದಿರುವುದು. ನೋಡೋಣ.. ಜೂನ್ 4ಕ್ಕೆ ಏನಾಗುತ್ತೋ..



