ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಿಂದ ವಾಪಸ್ಸಾಗುವ ಮುನ್ನ ರಾಜ್ಯ ಕಾಂಗ್ರೆಸ್‌ನ ಎಲ್ಲ ಶಾಸಕರ ಜತೆ ಮಾತನಾಡಿ ಸುರ್ಜೇವಾಲ ರಿಪೋರ್ಟು ರೆಡಿ ಮಾಡುತ್ತಾರೆ. ಈ ರಿಪೋರ್ಟು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ ಅಂತ ರಾಹುಲ್ ಗಾಂಧಿಯವರಿಗೆ ಮನದಟ್ಟು ಮಾಡುತ್ತದೆ. ಅದಾದ ಬಳಿಕ “ಸಿದ್ರಾಮಯ್ಯಾಜೀ, ಅಧಿಕಾರ ಹಸ್ತಾಂತರಕ್ಕೆ ಸಹಕರಿಸಿ” ಎಂದು ರಾಹುಲ್ ಗಾಂಧಿಯೇ ಹೇಳುತ್ತಾರೆ. ಇಂತಾದ್ದೊಂದು ಮೆಸೇಜು ಸಿಕ್ಕ ತಕ್ಷಣ ಸಿದ್ಧರಾಮಯ್ಯ ದೆಹಲಿಗೆ ಹೋಗಿ.. ಅಲ್ಲಿಯೇ ಒಂದು ಇಂಗ್ಲಿಷ್, ಒಂದು ಹಿಂದಿ ಚಾನೆಲ್ಲಿನವರನ್ನು ಕರೆಸಿ, ಒಂದು ಡೈರೆಕ್ಟ್ ಮೆಸೇಜು ಕೊಟ್ಟು ಬಂದಿದ್ದಾರೆ. ಜೊತೆಗೆ ಕನ್ನಡದ ಎಲ್ಲ ಟಿವಿ ಚಾನೆಲ್ಲಿನವರನ್ನೂ ಕರೆಸಿಕೊಂಡು ಅದೇ ಇಂಗ್ಲಿಷ್, ಹಿಂದಿ ಚಾನೆಲ್ಲುಗಳಿಗೆ ಹೇಳಿದ್ದನ್ನೇ ಕನ್ನಡದಲ್ಲೂ ಹೇಳಿದ್ದಾರೆ. ಇದಕ್ಕೆಲ್ಲ ಏನು ಕಾರಣ ಎಂದರೆ.. ದಿನೇ ದಿನೇ ಡಿಕೆ ಶಿವಕುಮಾರ್ ಅವರ ಬೆಂಬಲಿಗರ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ಇಷ್ಟು ದಿನ ತಮ್ಮದೇ ಬಣದಲ್ಲಿದ್ದ ಪ್ರಭಾವಿ ಸಚಿವರೊಬ್ಬರು ಹಠಾತ್ ಡಿಕೆ ಬಣಕ್ಕೆ ಶಿಫ್ಟ್ ಆಗಿರುವುದು ಸಿದ್ಧರಾಮಯ್ಯ ಅವರಂತ ಸಿದ್ಧರಾಮಯ್ಯ ಅವರೇ ಕಂಗಾಲಾಗುವಂತೆ ಮಾಡಿದೆ.
ಸಿದ್ದರಾಮಯ್ಯ ಅವರಿಗೆ ಆಪ್ತ ಸಚಿವರು ಹಾಗೂ ಸಿದ್ದು ಗೂಢಚಾರರ ಪಡೆ ನೀಡಿರವ ಸಂದೇಶದ ಪ್ರಕಾರ ಡಿಕೆಶಿ ಕ್ಯಾಂಪಿನ ಬೆಳವಣಿಗೆಗಳ ಬಗ್ಗೆ ಎಚ್ಚರಿಕೆಯ ಸಂದೇಶ ತಲುಪಿವೆ. ಅದರ ಪ್ರಕಾರ, ಸರಕಾರ ಅಸ್ತಿತ್ವಕ್ಕೆ ಬಂದಾಗ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರ ಸಂಖ್ಯೆ ಕಡಿಮೆ ಇತ್ತು.
ಆದರೆ ದಿನ ಕಳೆದಂತೆ ಈ ಸಂಖ್ಯೆ ಹೆಚ್ಚತೊಡಗಿದೆ. ಇದಕ್ಕೆ ಡಿ.ಕೆ.ಶಿವಕುಮಾರ್ ಅವರ ಪವರ್ ಹೇಗೆ ಕಾರಣವೋ, ಹೈಕಮಾಂಡ್‌ನಲ್ಲಿ ಪ್ರಭಾವಿಯಾಗಿರುವ ನಾಯಕರೊಬ್ಬರು ಕೈ ಜೋಡಿಸಿರುವುದೂ ಕಾರಣ. ಇದರ ಪರಿಣಾಮವಾಗಿ ಡಿ.ಕೆ.ಶಿವಕುಮಾರ್ ಅವರ ಪರವಾಗಿ ನಿಮ್ಮ ಸಂಪುಟದ ಸಚಿವ ರೊಬ್ಬರು ಶಾಸಕರನ್ನು ಮೊಬಿಲೈಸ್ ಮಾಡುತ್ತಿದ್ದಾರೆ. ಗಂಭೀರವಾದ ವಿಷಯ ಎಂದರೆ ನಾಯಕತ್ವ ಬದಲಾವಣೆಯಾದರೆ ನಾವು ನಿಮ್ಮ ಜತೆ ನಿಲ್ಲಲು ಸಿದ್ದ. ಆದರೆ ನಾಯಕತ್ವ ಬದಲಿಸಲು ನಿರ್ಧರಿಸಿದ್ದೇವೆ ಅಂತ ವರಿಷ್ಠರಿಂದ ಅನೌನ್ಸು ಮಾಡಿಸಿ ಎಂಬುದು ಕೆಲ ಸೀನಿಯರ್ ಸಚಿವರು, ಶಾಸಕರು ಸೇರಿದಂತೆ ಹಲವರ ಸಿಗ್ನಲ್ಲು. ಈ ಮಧ್ಯೆ ಸಿದ್ಧರಾಮಯ್ಯ ಬಣದಲ್ಲಿದ್ದ ಪ್ರಭಾವಿ ಸಚಿವರೊಬ್ಬರು ಡಿಕೆ ಬಣಕ್ಕೆ ಹಾರಿರುವುದೂ ಕೂಡಾ ಸಿದ್ಧರಾಮಯ್ಯ ಅವರು ಗುರ್ ಎನ್ನಲು ಕಾರಣವಾಗಿದೆ. ಹಾಗೆ ಶಿಫ್ಟ್ ಆಗಿರುವ ಸಚಿವರಿಗೆ ಸಿದ್ಧರಾಮಯ್ಯ ಅವರ ತಂತ್ರ ಮತ್ತು ತಂತ್ರಗಾರಿಕೆ ಗೊತ್ತು. ಡಿಕೆ ಬಣದಲ್ಲಿರುವ ಸಿದ್ದು ಬಣದವರ ಬಗ್ಗೆಯೂ ಮಾಹಿತಿ ಇದೆ. ಇದು ಮುಂದಿನ ದಿನಗಳಲ್ಲಿ ತಮಗೆ ತಿರುಗುಬಾಣವಾಗಲಿದೆ ಎಂದು ಸಿದ್ಧರಾಮಯ್ಯ ಅವರಿಗೂ ಅರ್ಥವಾಗಿದೆ.
ಹೀಗಾಗಿಯೇ ಸಿದ್ಧರಾಮಯ್ಯ ನೇರವಾಗಿಯೇ ಅಖಾಡಕ್ಕೆ ಇಳಿದಿದ್ದಾರೆ.“ಮುಂದಿನ ಐದು ವರ್ಷ ಗಳ ಕಾಲ ನಾನೇ ಸಿಎಂ ಆಗಿರುತ್ತೇನೆ. ಸಿಎಂ ಆಗಲು ಬಯಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರ ಬೆಂಬಲವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಶಾಸಕಾಂಗ ನಾಯಕನ ಆಯ್ಕೆಗೆ ನಡೆದ ಚುನಾವಣೆಯಲ್ಲಿ ನಾನು ಗೆದ್ದಿದ್ದೇನೆ” ಎಂಬ ಸಂದೇಶ ಕೊಟ್ಟಿದ್ದಾರೆ. ಇದು ಡಿಕೆ ಬಣಕ್ಕೆ ಅನಿರೀಕ್ಷಿತ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ತಣ್ಣಗಾಗಿ ಹೋಗಿದೆ.ಇದು ತಮಗೆ ಸಿದ್ದರಾಮಯ್ಯ ನೀಡಿದ ಪಂಥಾಹ್ವಾನ ಎಂಬುದು ವರಿಷ್ಠರಿಗೆ ಕನ್ ಫರ್ಮ್ ಆಗಿದೆ. ಹೀಗಾಗಿ ಎಮ್ಮೆಲ್ಸಿ ಪಟ್ಟಿ ಕ್ಲಿಯರ್ ಮಾಡಿಸುವ ನೆಪದಲ್ಲಿ ನಡೆಸಲುದ್ದೇಶಿಸಲಾಗಿದ್ದ ರಾಹುಲ್ ಮೀಟಿಂಗು ಇದ್ದಕ್ಕಿದ್ದಂತೆ ಕ್ಯಾನ್ಸಲ್ ಆಗಿದೆ.ಪರಿಣಾಮ? ಅಧಿಕಾರ ಹಂಚಿಕೆಯ ಮಾತಿಗೆ ದಿಲ್ಲಿ ಮಟ್ಟದಲ್ಲೀಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಹಾಗಂತ ಈ ಮಾತು ನಿಂತೇ ಬಿಡುತ್ತದೆ ಅಂತೇನಲ್ಲ. ಯಾಕೆಂದರೆ ಡಿಕೆಶಿ ಹಿಡಿದ ಹಠ ಬಿಡುವ ನಾಯಕ ಅಲ್ಲವಲ್ಲ?



