ರಾಜ್ಯದ ಹಲವು ಕಡೆ RSS ಪಥಸಂಚಲನ ಆಗಿದೆ. ಪ್ರಾಬ್ಲಂ ಆಗಿರುವುದು ಕೇವಲ ಪ್ರಿಯಾಂಕ್ ಖರ್ಗೆ ಅವರ ಕಲಬುರಗಿಯಲ್ಲಿ. ಕಲಬುರಗಿ ಬಿಟ್ಟರೆ ಉಳಿದಂತೆ ಹಲವು ಕಡೆ RSS ಪಥಸಂಚಲನ ಆಗಿದೆ. ಭಾನುವಾರವೇ ದಾವಣಗೆರೆ ಜಿಲ್ಲೆಯ ಹರಿಹರ, ಧಾರವಾಡದ ಧಾರವಾಡ ಗ್ರಾಮೀಣ, ನವಲಗುಂ (ಎರಡೂ ಕಡೆ ಸರ್ಕಾರಿ ಶಾಲೆಗಳಿಂದಲೇ ಆರಂಭ), ಶಿವಮೊಗ್ಗ, ಬೀದರ್, ಮಂಡ್ಯದ ಪಾಂಡವಪುರ, ಮದ್ದೂರು.. ಹೀಗೆ ಹಲವು ಕಡೆ RSS ಪಥಸಂಚಲನ ಆಗಿದೆ. ಸಮಸ್ಯೆ ಆಗಿರುವುದು ಪ್ರಿಯಾಂಕ್ ಖರ್ಗೆ ಅವರ ಜಿಲ್ಲೆಯಲ್ಲಿ ಮಾತ್ರ.
ಕಲಬುರಗಿ ಹೈಕೋರ್ಟ್ ಪೀಠದಲ್ಲಿ RSS ಪಥಸಂಚಲನಕ್ಕೆ ಅವಕಾಶ ನೀಡದ್ದನ್ನು ಪ್ರಶ್ನೆ ಮಾಡಿ ಆರ್ ಎಸ್ ಎಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ಮತ್ತೆ ಅಕ್ಟೋಬರ್ 24ಕ್ಕೆ ಫಿಕ್ಸ್ ಆಗಿದೆ. ಈ ನಡುವೆ ನವೆಂಬರ್ 2ಕ್ಕೆ ಅನುಮತಿ ಕೊಟ್ಟರೆ ಓಕೆ ಎಂದಿದ್ದಾರೆ ಆರ್ ಎಸ್ ಎಸ್ ಪರ ವಕೀಲ ಅರುಣ್ ಶಾಂ. ಒಂದೇ ದಿನ ಭೀಮ್ ಆರ್ಮಿಕ, ಕಾಂಗ್ರೆಸ್ ದಲಿತ್ ಪ್ಯಾಂಥರ್ ಮತ್ತು ಆರ್ ಎಸ್ ಎಸ್ ಮೂರೂ ಪಥಸಂಚಲನ ಮಾಡುವುದಕ್ಕೆ ಅಥವಾ ರ್ಯಾಲಿ ಮಾಡುವುದಕ್ಕೆ ಅವಕಾಶ ಕೊಟ್ಟರೆ ಸಮಸ್ಯೆ ಆಗುತ್ತದೆ ಎನ್ನುವುದು ಕಲಬುರಗಿ ತಹಸೀಲ್ದಾರ್ ವಾದ. ಅದೆಲ್ಲದರ ಜೊತೆಗೆ ಆರ್ ಎಸ್ ಎಸ್ ನೋಂದಣಿ ಪತ್ರ ಕೊಟ್ಟಿಲ್ಲ ಎನ್ನುವ ಅಂಶವೂ ಕೂಡಾ ತಹಸೀಲ್ದಾರ್ ಕೇಳಿರುವ 12 ಪ್ರಶ್ನೆಗಳಲ್ಲಿ ಇದೆ.
ನವೆಂಬರ್ 02ರಂದು RSS ಪಥಸಂಚಲನಕ್ಕೆ ಅವಕಾಶ ಇದೆಯಾ..? ಇಲ್ವಾ..?
ರಾಜ್ಯದ ಬಹುತೇಕ ಮಾಧ್ಯಮಗಳು ಹಾಗೂ ಬಿಜೆಪಿ ನಾಯಕರು ನವೆಂಬರ್ 02ರಂದು RSS ಪಥಸಂಚಲನಕ್ಕೆ ಅನುಮತಿ ಕೊಟ್ಟಿದೆ ಎಂದೇ ವರದಿ ಮಾಡಿದವು. ಆದರೆ ವಾಸ್ತವದಲ್ಲಿ ಹಾಗಾಗಿಲ್ಲ. ನವೆಂಬರ್ 02ಕ್ಕೆ ಅನುಮತಿ ಬೇಕು ಎಂದರೆ ಆರ್ ಎಸ್ ಎಸ್, ಮತ್ತೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಬೇಕು. ಆಗ ಕಲಬುರ್ಗಿ ಜಿಲ್ಲಾಧಿಕಾರಿ ಅನುಮತಿ ಕೊಡಬಹುದು ಅಥವಾ ಕೊಡದೆಯೂ ಇರಬಹುದು. ಏಕೆಂದರೆ ಅವರು ಈಗಾಗಲೇ ಕೇಳಿರುವ ಪ್ರಶ್ನೆಗಳನ್ನು ಮತ್ತೆ ಕೇಳಬಹುದು. ಆಗ ಬೇರೆ ಮಾರ್ಗವೇ ಇಲ್ಲ. ಉತ್ತರ ಕೊಟ್ಟಿಲ್ಲ ಎಂದು ಹೇಳಿ ನಿರಾಕರಿಸಲೂಬಹುದು. ಪ್ರಿಯಾಂಕ್ ಖರ್ಗೆ ಈಗಾಗಲೇ ಆ ಸುಳಿವು ಕೊಟ್ಟಿದ್ದಾರೆ.
ತಾವು ಕೇಳಿರುವ 11 ಪ್ರಶ್ನೆಗಳಿಗೆ ಉತ್ತರ ಕೊಟ್ಟು ಪಥ ಸಂಚಲನ ಮಾಡಲಿ. ಸುಮ್ಮನೆ ರಿಪಬ್ಲಿಕ್ ಆಫ್ ಕಲಬುರಗಿ, ರಿಪಬ್ಲಿಕ್ ಆಫ್ ಚಿತ್ತಾಪುರ, ಸರ್ವಾಧಿಕಾರಿ ಧೋರಣೆ ಎಂದು ಕರೆಯುತ್ತೀರಾ? ಕೋರ್ಟ್ ಆದೇಶದಲ್ಲಿ ಇವತ್ತು ಪಥ ಸಂಚಲನ ಮಾಡಬೇಕು ಎಂದು ಎಲ್ಲಿ ಹೇಳಿದೆ? ಮತ್ತೊಮ್ಮೆ ಅರ್ಜಿ ಹಾಕಿದರೆ ಪರಿಗಣಿಸಿ ಎಂದು ಹೇಳಿದೆ. ಮೆರವಣಿಗೆ ಮಾಡಲು ಭೀಮ್ ಆರ್ಮಿ, ದಲಿತ ಪ್ಯಾಂಥರ್ಸ್, ಆರ್‌ಎಸ್‌ಎಸ್, ಕಾಂಗ್ರೆಸ್‌ಗೂ ಹಕ್ಕಿದೆ. ಪಥ ಸಂಚಲನಕ್ಕೆ ಅರ್ಜಿ ಸಲ್ಲಿಸಿದರೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡುತ್ತೇವೆ ಎಂದಿರುವ ಖರ್ಗೆ ಪಥ ಸಂಚಲನದಲ್ಲಿ ಎಷ್ಟು ಜನ ಸೇರುತ್ತಾರೆ ಎಂಬ ಮಾಹಿತಿಯನ್ನು ತಹಸೀಲ್ದಾರ್‌ಗೆ ನೀಡಿಲ್ಲ. ಸ್ಥಳದ ಎನ್‌ಒಸಿ ಕೊಟ್ಟಿಲ್ಲ, ದಾಖಲೆ ನೀಡಿಲ್ಲ, ಅನುಮತಿ ಕೇಳಿಲ್ಲ, ಸಂಘದ ನೋಂದಣಿ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂದ ಅವರು, ನನಗೆ ಬುದ್ಧಿ ಕಲಿಸಬೇಕೆಂದು ಉದ್ದೇಶಪೂರ್ವಕವಾಗಿ ನನ್ನ ಕ್ಷೇತ್ರದಲ್ಲಿ ಪಥ ಸಂಚಲನ ಮಾಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.



