ಸಿಎಂ ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿರುವ ನಾಯಕ. ಉಪಮುಖ್ಯಮಂತ್ರಿಯಾಗಿ, ಸಚಿವರಾಗಿ ಅನುಭವ ಇರುವವರು. ಅಷ್ಟು ಅನುಭವ ಇರುವ ಸಿದ್ದರಾಮಯ್ಯನವರನ್ನೇ ದರ್ಶನ್ ಕ್ರೌರ್ಯ ಬೆಚ್ಚಿ ಬೀಳಿಸಿದೆ ಎಂದರೆ.. ಆ ಕ್ರೌರ್ಯ ಎಂಥದ್ದಿರಬೇಕು. ಇಂತಹ ಕ್ರೌರ್ಯವನ್ನು ನೋಡೇ ಇಲ್ಲ ಎಂದು ಕ್ಯಾಬಿನೆಟ್ ಸಭೆ ಆರಂಭಕ್ಕೆ ಮೊದಲೇ ಹೇಳಿರುವ ಸಿದ್ದರಾಮಯ್ಯ, ಎಲ್ಲರಿಗೂ ಒಂದು ಎಚ್ಚರಿಕೆ ಕೊಟ್ಟಿದ್ದಾರೆ.
ಹಾಗಾದರೆ ಸಿಎಂ ದರ್ಶನ್ ಕ್ರೌರ್ಯದ ಫೋಟೋ ಅಥವಾ ವಿಡಿಯೋ ನೋಡಿದ್ದಾರಾ..? ಅಥವಾ ಕೇವಲ ಮಾಹಿತಿ ಪಡೆದಿದ್ದಾರಾ ಎಂಬ ಬಗ್ಗೆ ಪರಿಶೀಲಿಸಿದಾಗ ಕಮಿಷನರ್ ದಯಾನಂದ್ ಅವರೇ ಈ ಕುರಿತಂತೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಕ್ಲೋಸ್ಡ್ ಡೋರ್ ಮೀಟಿಂಗ್ʻನಲ್ಲಿ ದಯಾನಂದ್ ಅವರು ತಮ್ಮ ಲ್ಯಾಪ್ʻಟಾಪ್ʻನಲ್ಲಿ ಕೇಸಿನ ವಿವರ, ಫೋಟೋ, ವಿಡಿಯೋಗಳನ್ನು ತೋರಿಸಿದ್ದರಂತೆ. ಅವುಗಳನ್ನು ನೋಡಿ ಸಿಎಂ ಸಿದ್ದರಾಮಯ್ಯ ಬೆಚ್ಚಿಬಿದ್ದಿದ್ದರಂತೆ. ಇವನು ಮನುಷ್ಯನಾ.. ರಾಕ್ಷಸನಾ.. ಇವನನ್ನು ಯಾವುದೇ ಕಾರಣಕ್ಕೂ ಹೊರಗೆ ಬರದಂತೆ ನೋಡಿಕೊಳ್ಳಿ ಎಂದಿದ್ದರಂತೆ. ಯಾರ ಮಾತಿಗೂ ಬಗ್ಗಬೇಡಿ, ಕಾನೂನು ಏನು ಹೇಳುತ್ತೋ.. ಅದನ್ನು ಮಾಡಿ ಎಂದು ಫರ್ಮಾನು ಹೊರಡಿಸಿದ್ದಾರಂತೆ ಸಿದ್ದರಾಮಯ್ಯ.
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಅವರನ್ನು ಬಚಾವ್ ಮಾಡುವುದಕ್ಕಾಗಿ ಹಲವು ರಾಜಕಾರಣಿಗಳು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುವ ಪ್ರಯತ್ನಕ್ಕೆ ಮುಂದಾಗಿದ್ದು ಗೊತ್ತಿರುವ ವಿಷಯವೇ. ಸಿಎಂ ಸಿದ್ದರಾಮಯ್ಯ ಅಂತಹದ್ದೇನೂ ನಡೆದಿಲ್ಲ ಎನ್ನುತ್ತಾರಾದರೂ, ಅದನ್ನು ಒಪ್ಪಲು ಯಾರೂ ತಯಾರಿಲ್ಲ ಎನ್ನುವುದಂತೂ ನಿಜ. ದರ್ಶನ್ ಕೊಲೆ ಕೇಸಿನಲ್ಲಿ ಸರ್ಕಾರದ ಮಧ್ಯಪ್ರವೇಶ ಇಲ್ಲ ಎಂದು ಬಹಿರಂಗವಾಗಿ ಹೇಳಿರುವ ಸಿಎಂ ಸಿದ್ದರಾಮಯ್ಯ, ಅಂತಹ ಹೇಳಿಕೆ ನೀಡುವುದಕ್ಕೆ ಕಾರಣ ಏನಿರಬಹುದು ಎನ್ನುವುದೂ ಗೊತ್ತಾಗಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊಲೆ ಪ್ರಕರಣದ ಮಾಹಿತಿ ಪಡೆದಿರುವ ಸಿದ್ದರಾಮಯ್ಯ, ಆ ಕ್ರೌರ್ಯದ ವರದಿ ಕೇಳಿಯೇ ಶಾಕ್ ಆಗಿದ್ದಾರೆ.ಸಂಪುಟ ಸಭೆ ಆರಂಭದಲ್ಲೇ ಮಾತನಾಡಿರುವ ಸಿಎಂ ಈ ಕೊಲೆಯಂತ ಕ್ರೂರತನವನ್ನು ನಾನೂ ನೋಡಿಯೇ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಸಚಿವರಿಗೂ ಈ ಬಗ್ಗೆ ಮಾತಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಇಂತಹ ಕ್ರೂರತನ ನಾನು ನೋಡಿಯೇ ಇಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಯಾರೂ ಮಾತಾಡಬೇಡಿ. ಅನಗತ್ಯವಾಗಿ ಯಾರೂ ತುಟಿ ಬಿಚ್ಚಬೇಡಿ. ಪರ-ವಿರೋಧ ಚರ್ಚೆಯನ್ನೂ ಮಾಡಬೇಡಿ. ಕಾನೂನು, ಪೊಲೀಸರು ತಮ್ಮ ಕೆಲಸ ಮಾಡುತ್ತಾರೆ. ನೀವು ಯಾರೂ ಕೊಲೆ ಬಗ್ಗೆ ಯಾವುದೇ ಚರ್ಚೆ ಮಾಡಬೇಡಿ ಎಂದು ಎಲ್ಲರಿಗೂ ವಾರ್ನಿಂಗ್ ಕೊಟ್ಟಿರುವ ಸಿಎಂ ಸಿದ್ದು ಸರ್ಕಾರ ಯಾರ ರಕ್ಷಣೆಗೂ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನ ಕೊಟ್ಟಿದ್ದಾರೆ.
ರೇಣುಕಾಸ್ವಾಮಿ ಮೈ ಮೇಲೆ ಆಗಿರೋ ಗಾಯಗಳು, ಅದೆಂಥಾ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿ ಹೇಳುತ್ತಿವೆ. ಕೈ ಮೇಲಿದ್ದ ಹಚ್ಚೆ ಕಿತ್ತು ಬರುವಂತೆ ಸುಟ್ಟಿದ್ದಾರೆ. ಎದೆ ಮೇಲೆ, ಕಾಲಿನ ಮೇಲೂ ಸುಟ್ಟ ಗಾಯಗಳಿವೆ. ಇನ್ನು ಬೆನ್ನ ತುಂಬಾ ರಕ್ತ ಹೆಪ್ಪುಗಟ್ಟುವಂತೆ, ಬಾಸುಂಡೆ ಬರುವಂತೆ ಹಲ್ಲೆ ನಡೆಸಲಾಗಿದೆ. ತಲೆಗೂ ರಕ್ತ ಬರುವಂತೆ ಹೊಡೆಯಲಾಗಿದೆ. ಇಷ್ಟೇ ಅಲ್ಲ. ಮರ್ಮಾಂಗಕ್ಕೆ ಹೊಡೆದಿರುವ ಫೋಟೋ ಕೂಡ ಇದೆ. ವೃಷಣಗಳು ಹೊರ ಬೀಳುವಂತೆ ಹೊಡೆಯಲಾಗಿದೆ. ಅದನ್ನು ತೋರಿಸಲಾಗದು, ಅಷ್ಟೊಂದು ಭಯಾನಕವಾಗಿದೆ ಎಂದು ಸಿಎಂಗೆ ಮಾಹಿತಿ ನೀಡಲಾಗಿದೆ. ಹೀಗಾಗಿ ಕ್ಯಾಬಿನೆಟ್ ಸಭೆಯಲ್ಲೇ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.



