ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವಿನ ಹೋರಾಟ ಯಾವಾಗಲೂ ರೋಚಕವಾಗಿರುತ್ತದೆ. ಸಿದ್ದರಾಮಯ್ಯ ಪದೇ ಪದೇ ದೇವೇಗೌಡ, ಕುಮಾರಸ್ವಾಮಿಯನ್ನು ಕೆಣಕಿದಾಗಲೆಲ್ಲ ದೇವೇಗೌಡರು ಕೊಡುವ ಉತ್ತರಗಳು ಹೊಸ ದಿಕ್ಕನ್ನೇ ತೋರಿಸುತ್ತವೆ. ರಾಜ್ಯ ರಾಜಕೀಯಕ್ಕೆ ಹೊಸ ರೂಪ ಬರುತ್ತದೆ.
ಸಿದ್ದರಾಮಯ್ಯ ಮೊದಲ ಬಾರಿಗೆ ಶಾಸಕರಾಗಿದ್ದು ಹಾಗೂ ಅಧಿಕಾರವನ್ನು ಅನುಭವಿಸಿದ್ದು ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ. ಆ ಸರ್ಕಾರದಲ್ಲಿ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. ವಿಶೇಷವೆಂದರೆ ಹೆಗಡೆಯವರ ಆ ಸರ್ಕಾರಕ್ಕೆ ಬಿಜೆಪಿ ಬೆಂಬಲ ನೀಡಿತ್ತು. ಅಲ್ಲಿಗೆ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಹತ್ತಿದ್ದು ಕೂಡಾ ಬಿಜೆಪಿ ಬೆಂಬಲದ ಸರ್ಕಾರದಲ್ಲಿಯೇ.. ಇದನ್ನು ದೇವೇಗೌಡರು ಹೇಳುವ ಮೂಲಕ ಜಾತ್ಯತೀತತೆ ಬಗ್ಗೆ ತಮ್ಮ ಪಕ್ಷವನ್ನು ಲೇವಡಿ ಮಾಡುತ್ತಿದ್ದವರಿಗೆ ತಿರುಗೇಟು ಕೊಟ್ಟಿದ್ದಾರೆ ದೇವೇಗೌಡ.
ಜೆಡಿಎಸ್ನ ಜಾತ್ಯತೀತತೆ ಬಗ್ಗೆ ಕಾಂಗ್ರೆಸ್ ಪ್ರಸ್ತಾಪಿಸಿದೆ. ಕಾಂಗ್ರೆಸ್ ಸಮಯ ಬಂದಾಗ ಜಾತ್ಯತೀತವಾಗುತ್ತದೆ. ಬೇಕಾದಾಗ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಕಾಂಗ್ರೆಸ್ ಅಗತ್ಯವೆನಿಸಿದರೆ ಜಾತ್ಯತೀತತೆ. ದರ್ದು ಬಂದಾಗ ಜಾತ್ಯತೀತತೆ ಇರುವುದಿಲ್ಲ. ನಾವು ಬಿಜೆಪಿಗೆ ಬೆಂಬಲ ನೀಡಿದರೆ ಮನಬಂದಂತೆ ಮಾತನಾಡಲಾಗುತ್ತದೆ. ಮಂಡ್ಯದಲ್ಲಿ ಬಿಜೆಪಿ ಜತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿಕೊಂಡಿಲ್ಲವೇ? ಸಮಯಕ್ಕೆ ತಕ್ಕಂತೆ ಕಾಂಗ್ರೆಸ್ ವರ್ತನೆ ಮಾಡುತ್ತದೆ ಎಂದಿದ್ದಾರೆ ದೇವೇಗೌಡ.
ಹೀಗೆ ಹೇಳುತ್ತಲೇ ದೇವೇಗೌಡ ಅವರು ಸಿದ್ದರಾಮಯ್ಯ ಅವರ ಮೊದಲ ಅಧಕಾರದ ಕಥೆ ಹೇಳಿದ್ದು “ಈ ಹಿಂದೆ ಜನತಾ ಪಕ್ಷ ಬಿಜೆಪಿ ಜತೆಗೆ ಸಂಬಂಧ ಮಾಡಿರಲಿಲ್ಲವೇ? ಇವತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವತ್ತು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿರಲಿಲ್ಲವೇ? ಬಿಜೆಪಿ ಬೆಂಬಲದಿಂದ ರಚನೆಯಾದ ದಿವಂಗತ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ನಾನು ಲೋಕೋಪಯೋಗಿ ಸಚಿವನಾಗಿದ್ದು, ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದರು’’ ಎಂದಿದ್ದಾರೆ.
ರಾಜಕೀಯದಲ್ಲಿ ಯಾವ ಸಂದರ್ಭದಲ್ಲಿ ಬೇಕಾದರೂ ಯಾವ ಬದಲಾವಣೆಗಳು ಆಗಬಹುದು. ಎಚ್.ಡಿ.ಕುಮಾರಸ್ವಾಮಿ ಮಾತ್ರ ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದಾರಾ? ಹಿಂದೆ ರಾಮಕೃಷ್ಣ ಹೆಗಡೆ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿರಲಿಲ್ಲವೇ? ಎಂದ ದೇವೇಗೌಡ ಈ ಹಿಂದೆಯೂ ಕೂಡಾ ಪ್ರತಿಪಕ್ಷದಲ್ಲಿದ್ದಾಗ ಕಾಂಗ್ರೆಸ್ ಜೊತೆಯೂ ಹೋರಾಟ ಮಾಡಿದ್ದೇವೆ. ಹೀಗಾಗಿ, ಈಗ ಬಿಜೆಪಿ ಜತೆ ಕುಮಾರಸ್ವಾಮಿ ಅವರು ಹೋರಾಟ ನಡೆಸಿದ್ದಕ್ಕೆ ಅನ್ಯತಾ ಭಾವಿಸಬೇಕಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ.
ಅಷ್ಟೇ ಅಲ್ಲದೆ ಕಷ್ಟವೋ.. ನಷ್ಟವೋ.. ಲೋಕಸಭೆಯಲ್ಲಿ ಏಕಾಂಗಿಯಾಗಿಯೇ ಹೋಗುತ್ತೇವೆ ಎನ್ನುವ ಮೂಲಕ ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದಲ್ಲಿ ಜೆಡಿಎಸ್ ಸೇರ್ಪಡೆಯಾಗಲಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎಲ್ಲೆಲ್ಲಿ ಪಕ್ಷಕ್ಕೆ ಗೆಲ್ಲುವ ಸಾಮರ್ಥ್ಯ ಇದೆಯೋ ಅಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಆದರೆ, ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ. ಚುನಾವಣಾ ಫಲಿತಾಂಶದಲ್ಲಿ ನಮಗೆ 2 ಸ್ಥಾನ ಬರುತ್ತದೆಯೋ, 5 ಸ್ಥಾನ ಬರುತ್ತದೆಯೋ ಅಥವಾ ಸೊನ್ನೆ ಬರುತ್ತದೆಯೋ ಗೊತ್ತಿಲ್ಲ. ಫಲಿತಾಂಶದ ಸಂದರ್ಭದಲ್ಲಿ ಯಾವ ಪರಿಸ್ಥಿತಿ ಬರುತ್ತದೆಯೋ, ಆಗ ನೋಡುತ್ತೇವೆ. ಪಕ್ಷದ ಕಾರ್ಯಕರ್ತರು ಧೃತಿಗೆಡಬೇಕಾದ ಅಗತ್ಯ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.



