ನಟಿ ರಮ್ಯಾ. ಮೋಹಕ ತಾರೆ ರಮ್ಯಾ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ದಶಕಗಳೇ ಕಳೆದುಹೋಗಿವೆ. ಇದ್ದಷ್ಟು ದಿನ ಸ್ಟಾರ್ ನಟಿಯಾಗಿ ಮೆರೆದ ರಮ್ಯಾ ಅವರ ಖ್ಯಾತಿಯನ್ನು ಸರಿಗಟ್ಟುವ ಇನ್ನೊಬ್ಬ ನಾಯಕಿ ಇದೂವರೆಗೆ ಸಿಕ್ಕಿಲ್ಲ. ಹಲವು ನಟಿಯರು ಚಿತ್ರರಂಗಕ್ಕೆ ಬಂದರಾದರೂ.. ರಮ್ಯಾಗೆ ಇರುವ ಕ್ರೇಜ್ ಮುಂದೆ ಉಳಿದವರೆಲ್ಲ ಡಲ್ಲು ಹೊಡೆಯುತ್ತಾರೆ. ಅಂತಹ ರಮ್ಯಾ, ಸಿನಿಮಾಗಳಲ್ಲಿ ನಟಿಸಿ ದಶಕಗಳೇ ಕಳೆದು ಹೋಗಿವೆ. ಇತ್ತೀಚೆಗೆ ಬಂದ ಹಾಸ್ಟೆಲ್ ಹುಡುಗರು ಚಿತ್ರದಲ್ಲಿ ಮುಖ ತೋರಿಸಿದ್ದೇ ಕೊನೆ. ಅದೂ ಕೆಲವು ನಿಮಿಷಗಳ ಕಾಲ ಅಷ್ಟೇ ಇರೋ ರಮ್ಯಾ ಅವರ ಕ್ರೇಜ್ ಹೇಗಿತ್ತೆಂದರೆ.. ಹಾಸ್ಟೆಲ್ ಹುಡುಗರು ಸೂಪರ್ ಹಿಟ್.
ಇನ್ನು ಅವರದೇ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ..’ ಸಿನಿಮಾದಿಂದ ಚಿತ್ರರಂಗಕ್ಕೆ ನಾಯಕಿಯಾಗಿ ಮರುಪ್ರವೇಶವನ್ನು ಘೋಷಿಸಿ, ಆಮೇಲೆ ಆ ಚಿತ್ರದಿಂದಲೂ ಹಿಂದೆ ಸರಿದಿದ್ದರು ರಮ್ಯಾ. ‘ಉತ್ತರಕಾಂಡ’ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದರಷ್ಟೇ ಅಲ್ಲ, ಚಿತ್ರದ ಸ್ಕ್ರಿಪ್ಟ್ ಪೂಜೆ.. ಇತ್ಯಾದಿಗಳಲ್ಲಿ ಭಾಗಿಯಾಗಿದ್ದರು. ಈಗ ಆ ಚಿತ್ರದಿಂದಲೂ ಹೊರ ಬಂದಿದ್ದಾರೆ.
ಡೇಟ್ಸ್ ಕೊರತೆಯಿಂದ ‘ಉತ್ತರಕಾಂಡ’ ಸಿನಿಮಾದಲ್ಲಿ ನಾನು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. (ಸಿನಿಮಾ ಕೆಲಸಗಳನ್ನು ನಾನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇನೆ.) ಚಿತ್ರತಂಡಕ್ಕೆ ನಾನು ಶುಭ ಹಾರೈಸುತ್ತೇನೆ ಎಂದು ಪೋಸ್ಟ್ ಹಾಕಿರುವ ರಮ್ಯಾ, ರಾಜಕೀಯದಿಂದಲೂ ಅಂತರ ಕಾಯ್ದುಕೊಂಡಿದ್ಧಾರೆ. ಸಿನಿಮಾ ಮತ್ತು ರಾಜಕೀಯದ ಕೆಲಸಗಳನ್ನು ನಾನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ರಮ್ಯಾ.
ರತ್ನನ್ ಪ್ರಪಂಚ ಸಿನಿಮಾ ನಿರ್ಮಾಣ ಮಾಡಿದ್ದ ಕೆಆರ್‌ಜಿ ಸ್ಟುಡಿಯೋಸ್‌ನ ಯೋಗಿ ಜಿ ರಾಜ್ ಮತ್ತು ಕಾರ್ತಿಕ್ ಗೌಡ ‘ಉತ್ತರಕಾಂಡ’ ಸಿನಿಮಾ ನಿರ್ಮಾಪಕರಾಗಿದ್ದರು. ರೋಹಿತ್ ಪದಕಿ ನಿರ್ದೇಶಕರಾಗಿದ್ದರು. ಇದೀಗ ರಮ್ಯಾ ಹೊರ ಬಂದಿದ್ದಾರೆ. ಅಷ್ಟೇ ಅಲ್ಲ, ಸದ್ಯಕ್ಕೆ ನಡೆಯುತ್ತಿರುವ ಲೋಕಸಭೆ ಪ್ರಚಾರದಲ್ಲೂ ರಮ್ಯಾ ನಿಲ್ಲುತ್ತಿಲ್ಲ. ಪ್ರಚಾರವನ್ನೂ ಮಾಡುತ್ತಿಲ್ಲ.
ಅಂದಹಾಗೆ ರಮ್ಯಾ ಮಂಡ್ಯ ಕ್ಷೇತ್ರಕ್ಕೆ ಸಂಸದೆಯಾಗಿದ್ದವರು. ಒಮ್ಮೆ ಗೆದ್ದು ಮತ್ತೊಮ್ಮೆ ಸೋತವರು. ಆದರೆ.. ಸೋತ ಮೇಲೆ ಒಬ್ಬ ರಾಜಕಾರಣಿಗೆ ಇರಬೇಕಾದ ತಾಳ್ಮೆ ಕಳೆದುಕೊಂಡರು. ಅಷ್ಟೇ ಅಲ್ಲ, ಮಂಡ್ಯದಲ್ಲಿ ಸಿಕ್ಕಿದ್ದ ಜನಪ್ರಿಯತೆಯನ್ನೂ ಕಳೆದುಕೊಂಡರು. ಈ ಬಾರಿ ಮಂಡ್ಯ ಲೋಕಸಭೆಗೆ ಆರಂಭದಲ್ಲಿ ರಮ್ಯಾ ಹೆಸರು ಕೇಳಿ ಬಂತಾದರೂ.. ರಮ್ಯಾ ಪರ ಒಬ್ಬರೇ ಒಬ್ಬ ಕಾಂಗ್ರೆಸ್ ನಾಯಕರು ನಿಲ್ಲಲಿಲ್ಲ. ಹೀಗಾಗಿ ರಮ್ಯಾ ಹೆಸರು ಬಂದಷ್ಟೇ ವೇಗವಾಗಿ ಸೈಡಿಗೆ ಹೋಯ್ತು. ಇದೀಗ ಸಿನಿಮಾದಿಂದಲೂ ರಮ್ಯಾ ಹೊರಬಂದಿದ್ದಾರೆ.
ಇಷ್ಟಕ್ಕೂ ಡೇಟ್ಸ್ ಪ್ರಾಬ್ಲಂ ಎನ್ನುವುದು ರಮ್ಯಾ ಹೇಳುತ್ತಿರುವ ಕಥೆ ಎಂದೇ ಜನ ನಂಬುತ್ತಿದ್ದಾರೆ. ರಮ್ಯಾ ಸದ್ಯಕ್ಕೆ ಯಾವುದೇ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಡೇಟ್ಸ್ ಸಮಸ್ಯೆ ಬರುವುದಾದರೂ ಎಲ್ಲಿ ಎನ್ನುವುದು ರಮ್ಯಾ ಫ್ಯಾನ್ಸ್ ಕೇಳುತ್ತಿರೋ ಪ್ರಶ್ನೆ. ಇಂತಹ ಪ್ರಶ್ನೆಗಳಿಗೆಲ್ಲ ರಮ್ಯಾ ಉತ್ತರ ಕೊಡಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.



