ನಟ ಸುದೀಪ್ (Kichcha Sudeep) ಕನ್ನಡ ಚಿತ್ರರಂಗದಲ್ಲಿ 26 ವರ್ಷಗಳಿಂದ ಇರಬಹುದು, ಆದರೆ ಇವತ್ತಿಗೂ ಸುದೀಪ್ ಅವರನ್ನು ಜನ ಕಿಚ್ಚ ಸುದೀಪ್ (Kichcha Sudeep) ಎಂದೇ ಕರೆಯುತ್ತಾರೆ. ಸುದೀಪ್ ಅವರಿಗೆ ಆ ಹೆಸರು ಕೊಟ್ಟಿದ್ದು ಹುಚ್ಚ ಸಿನಿಮಾ. ಓಂಪ್ರಕಾಶ್ ರಾವ್ ನಿರ್ದೇಶನದ ಹುಚ್ಚ ಚಿತ್ರದ ಕೃಷ್ಣಮೂರ್ತಿ ಅಲಿಯಾಸ್ ಕಿಚ್ಚ ಹೆಸರಿನ ಪಾತ್ರದಿಂದಲೇ ಜನ ಗುರುತಿಸೋದು. ಸುದೀಪ್ ಅವರಿಗೆ ಅಭಿಮಾನಿಗಳು ಅಭಿನಯ ಚಕ್ರವರ್ತಿ ಅನ್ನೋ ಬಿರುದೂ ಸೇರಿದಂತೆ ಹಲವು ಬಿರುದುಗಳೂ ಸಿಕ್ಕಿವೆ. ಆದರೆ ಸುದೀಪ್ (Kichcha Sudeep) ಮಾತ್ರ ಕಿಚ್ಚ ಎಂದೇ ಕರೆಸಿಕೊಳ್ಳೋಕೆ ಇಷ್ಟ ಪಡ್ತಾರೆ. ಹೀಗಿರುವಾಗಲೇ ಸುದೀಪ್ ಅದೇ ಹುಚ್ಚ ನಿರ್ಮಾಪಕರಿಂದ ಟೀಕೆಗೆ ಗುರಿಯಾಗಿದ್ದಾರೆ.
ಎನ್.ಕುಮಾರ್ (N.Kumar) ಅವರು ಆರೋಪ ಮಾಡಿದ ಬೆನ್ನಲ್ಲೇ ಇದೀಗ ನಿರ್ಮಾಪಕ ರೆಹಮಾನ್ ಕೂಡಾ ಆರೋಪಿಸಿದ್ದಾರೆ. ಕಿಚ್ಚ ಸುದೀಪ್ ಅವರಿಂದ ನನಗೆ 35 ಲಕ್ಷ ರೂ. ನಷ್ಟವಾಗಿದೆ ಎಂದು ದೂರಿದ್ದಾರೆ. ರೆಹಮಾನ್ (Rahaman) ಕೇವಲ ಸುದೀಪ್ ಚಿತ್ರಗಳನ್ನಷ್ಟೇ ಅಲ್ಲ, ವಿಷ್ಣುವರ್ಧನ್ (Vishnuvardhan) ಅವರ ಯಜಮಾನಕ್ಕೂ (Yajamana) ಅವರೇ ಪ್ರೊಡ್ಯೂಸರ್. ಶಿವಣ್ಣ, ರಮೇಶ್, ಉಪೇಂದ್ರ ಸೇರಿದಂತೆ ಹಲವರ ಜೊತೆ ಸಿನಿಮ ಮಾಡಿದವರು. ನಿನ್ನೇ ಪ್ರೀತಿಸುವೆ, ಧಣಿ, ಮದುವೆ ಮನೆ, ಮಂಗಳ ಸೂತ್ರ.. ಹೀಗೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
ಸುದೀಪ್ ಅವರು ಸಿನಿಮಾ ಮಾಡುವುದಾಗಿ ಪ್ರಾಮಿಸ್ ಮಾಡಿದ್ದರು. ಆಗ ನಾನು 5 ಲಕ್ಷ ಅಡ್ವಾನ್ಸ್ ಕೊಟ್ಟಿದ್ದೆ. ಅದಾದ ಮೇಲೆ ರೀಮೇಕ್ ರೈಟ್ಸ್ ತೆಗೆದುಕೊಳ್ಳೋಕೆ 3 ಸಿನಿಮಾ ರೈಟ್ಸ್ ಖರೀದಿ ಮಾಡಿದೆ. ಸುದೀಪ್ ಅವರೇ ಹೇಳಿದಂತೆ ರೀಮೇಕ್ ರೈಟ್ಸ್ ತೆಗೆದುಕೊಂಡರೂ ಸಿನಿಮಾ ಮಾಡಲಿಲ್ಲ. ಆ ಮೂರು ಚಿತ್ರಗಳ ರೀಮೇಕ್ಸ್ ರೈಟ್ಸ್ ಖರೀದಿಗೆ ಮತ್ತು ಅಡ್ವಾನ್ಸ್ ಸೇರಿ 35 ಲಕ್ಷವಾಯಿತು. ಅಡ್ವಾನ್ಸ್ ಹಣದಲ್ಲಿ 1.5 ಲಕ್ಷ ಬಂದಿದೆ. ಇನ್ನುಳಿದ ಹಣ ವಾಪಸ್ ಕೊಟ್ಟಿಲ್ಲ ಎಂದು ದೂರಿದ್ದಾರೆ ರೆಹಮಾನ್.
ಈ ಬಗ್ಗೆ ನಾನು ಸುದೀಪ್ ಅವರ ಬಳಿ ಹಲವು ಬಾರಿ ಸಾವಿರಾರು ಬಾರಿ ಮಾತನಾಡಿದ್ದೇನೆ. ದಿಕ್ಕು ದೋಚದೆ ನಿರ್ಮಾಪಕ ಸಂಘಕ್ಕೂ ದೂರು ಕೋಡೊದಕ್ಕೆ ಮುಂದಾಗಿದ್ದೆ. ಆದರೆ ಏನೂ ಪ್ರಯೋಜನವಾಗಿಲ್ಲ. ಈಗ ನಿರ್ಮಾಪಕ ಎನ್.ಕುಮಾರ್ ಅವರಿಗೆ ಆದ ಅನ್ಯಾಯದ ವಿಚಾರ ಕೇಳಿದಾಗ ನಾನು ಕೂಡ ಮಾಧ್ಯಮಗಳ ಮುಂದೆ ಬಂದು ನನ್ನ ನಷ್ಟದ ವಿಚಾರವನ್ನ ಹಂಚಿಕೊಳ್ಳಬೇಕು ನಿಮ್ಮ ಮುಂದೆ ಬಂದಿದ್ದೇನೆ ಎಂದಿದ್ದಾರೆ ರೆಹಮಾನ್. ಸುದೀಪ್ ಅವರಿಗಾಗಿ ಅವರೇ ಹೇಳಿದಂತೆ ಹಿಂದಿಯ ಸ್ವರ್ಗ್ (Swarg) ರೈಟ್ಸ್ ತಂದೆ. ಅದಕ್ಕೆ 10 ಲಕ್ಷ ಖರ್ಚಾಯ್ತು. ಆಮೇಲೆ ಅಂದಾಜ್ ಅಪ್ನಾ ಅಪ್ನಾ (Andaz Apna Apna) ತಗೊಂಡ್ ಬನ್ನಿ, ಆ ಚಿತ್ರದ ಹಕ್ಕೂ ತಂದೆ. ಅದಾದ ಮೇಲೆ ಲಾವಾರಿಸ್ (Lawaris) ತನ್ನಿ, ಅದನ್ನೂ ತಂದೆ. ಆದರೆ ಯಾವ ಸಿನಿಮಾಗಳನ್ನೂ ಮಾಡಲಿಲ್ಲ. ಸಿನಿಮಾಗಳ ರೀಮೇಕ್ ಹಕ್ಕು ತಗೊಳ್ಳೋಕೆ 35 ಲಕ್ಷ ಖರ್ಚಾಯ್ತು ಎಂದಿದ್ದಾರೆ ರೆಹಮಾನ್. ಬೇಕಾದರೆ ಯಾವ ದೇವರ ಆಣೆ ಮಾಡಲು ಸಿದ್ಧವಿದ್ದೇನೆ. ಕುರಾನ್, ಭಗವತ್ ಗೀತೆ, ಬೈಬಲ್ (Quran, Bagavadgeethe, Bible) ಮುಟ್ಟಿ ಹೇಳುತ್ತೇನೆ ಎಂದಿದ್ದಾರೆ ನಿರ್ಮಾಪಕ ರೆಹಮಾನ್(Rahaman).



