ಸಾಮಾನ್ಯವಾಗಿ ಗಣೇಶ್ (Golden Star Ganesh) ವಿವಾದಗಳಿಂದ ದೂರ. ಇಲ್ಲವೇ ಇಲ್ಲ ಎಂದರೂ ತಪ್ಪಲ್ಲ. ವಿವಾದಗಳನ್ನೂ ಸಲೀಸಾಗಿ ನಿಭಾಯಿಸುವ, ಕಾನೂನು ಪರಿಪಾಲಿಸುವವರು. ಅಂತಹ ಗಣೇಶ್ (Golden Star Ganesh) ಕೂಡಾ ಈಗ ವಿವಾದಕ್ಕೆ ಸಿಲುಕಿದ್ದಾರೆ. ಅರಣ್ಯ ಭೂಮಿಯಲ್ಲಿ ಫಾರ್ಮ್ ಹೌಸ್ ಕಟ್ಟೋಕೆ ಹೋಗಿ ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಹಾಗಂತ, ಅವರೆನೂ ಕಾಡನ್ನು ಒತ್ತುವರಿ ಮಾಡಿಕೊಂಡೋ.. ಕಾಡನ್ನೇ ಸ್ವಂತ ಮಾಡಿಕೊಂಡೋ ಅಕ್ರಮ ಮಾಡಿಲ್ಲ. ಅವರು ಖರೀದಿ ಮಾಡಿರುವ ಜಮೀನು, ಕಾಡಿನ ಸಂರಕ್ಷಿತ ಸೂಕ್ಷ್ಮ ವಲಯ ಪ್ರದೇಶದಲ್ಲಿದೆ. ಅಷ್ಟೆ.
ಚಾಮರಾಜನರಗ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಜಕ್ಕಳ್ಳಿ ಗ್ರಾಮದಲ್ಲಿ ನಟ ಗಣೇಶ್ ಫಾರ್ಮ್ ಹೌಸ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಜಕ್ಕಳ್ಳಿ ಗ್ರಾಮದ ಸರ್ವೆ ನಂ.105ರಲ್ಲಿನ 1 ಎಕರೆ 24 ಗುಂಟೆ ಜಮೀನಿನಲ್ಲಿ ಫಾರ್ಮ್ ಹೌಸ್ (Farm House) ನಿರ್ಮಾಣ ಮಾಡುವುದು ಗಣೇಶ್ ಯೋಜನೆ. 2022ರ ಜುಲೈನಲ್ಲಿ ಖರೀದಿಸಿದ್ದ ಭೂಮಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ನಡೆಸುವ ಪ್ಲಾನ್ ಇತ್ತು. ಈ ಜಾಗದಲ್ಲೀಗ ವಸತಿ ಗೃಹ ನಿರ್ಮಾಣಕ್ಕೆ ಮುಂದಾಗಿದ್ದು, ಇದು ಪರಿಸರ ಸೂಕ್ಷ್ಮ ಪ್ರದೇಶ ಎಂದು ಅಭಿಪ್ರಾಯ ಪಟ್ಟಿದ್ದ ಬಂಡೀಪುರ (Bandipura) ಪರಿಸರ ಸೂಕ್ಷ್ಮ ವಲಯ ನಿಗಾ ಸಮಿತಿ ಕಟ್ಟಡ ನಿರ್ಮಾಣಕ್ಕೆ ತಡೆ ಕೊಟ್ಟಿತ್ತು.
ಇದನ್ನು ಪ್ರಶ್ನಿಸಿ ಗಣೇಶ್ (Golden Star Ganesh) ಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ (Justice Krishna S Deekshit) ಅವರಿದ್ದ ನ್ಯಾಯಪೀಠ ಗಣೇಶ್ ಅವರಿಗೆ ಸೂಕ್ತ ದಾಖಲೆ ಸಲ್ಲಿಸುವಂತೆ ಸೂಚನೆ ನೀಡಿದೆ. ಅಷ್ಟೇ ಅಲ್ಲ, ಗಣೇಶ್ ಅವರ ವಿರುದ್ಧ ಬಲವಂತದ ಕ್ರಮವನ್ನೂ ತೆಗೆದುಕೊಳ್ಳಬಾರದು ಎಂದು ಬಂಡೀಪುರ (Bandipura) ಪರಿಸರ ಸೂಕ್ಷ್ಮ ವಲಯ ನಿಗಾ ಸಮಿತಿಯವರಿಗೂ, ಕಟ್ಟಡ ನಿರ್ಮಾಣ ಮುಂದುವರಿಸದಂತೆ ಗಣೇಶ್ ಅವರಿಗೂ ಸೂಚನೆ ನೀಡಿದೆ. ಒಂದು ವಾರದೊಳಗೆ ಗಣೇಶ್ (Golden Star Ganesh) ದಾಖಲೆ ಸಲ್ಲಿಸುವಂತೆಯೂ, ಒಟ್ಟಾರೆ ಪ್ರಕರಣ ಒಂದು ತಿಂಗಳಲ್ಲಿ ಮುಗಿಸುವಂತೆಯೂ ಆದೇಶ ನೀಡಿದೆ.
ಬಂಡೀಪುರ (Bandipura) ಪರಿಸರ ಸೂಕ್ಷ್ಮ ವಲಯ ನಿಗಾ ಸಮಿತಿಯ ಪ್ರಕಾರ ಈ ಭಾಗದಲ್ಲಿ ಕಾಂಕ್ರೀಟ್ ಬಳಸಿ ಶಾಶ್ವತ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಸ್ಟೀಲ್ ಬಳಸಿ ಮಾಡಬಹುದು. ಆದರೆ ಈ ಕಟ್ಟಡದಲ್ಲಿ ಕಾಂಕ್ರೀಟ್ ಬಳಸಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಸಮಸ್ಯೆಯಾಗಿದೆ.
ಆದರೆ ಗಣೇಶ್ ಪರ ವಕೀಲ ಸಿ.ಕೆ. ನಂದಕುಮಾರ್ ಅವರು ಹೈಕೋರ್ಟ್ನಲ್ಲಿ ನಟ ಗಣೇಶ್ ಅವರು ಅರಣ್ಯ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಿಸುತ್ತಿಲ್ಲ. 10 ಕಿಲೋ ಮೀಟರ್ ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಿಸಬಾರದೆಂಬ ಸುಪ್ರೀಂ ಕೋರ್ಟ್ ತೀರ್ಪು ಈಗ ಮಾರ್ಪಾಟಾಗಿದೆ. ಕೇವಲ ಭೂಮಿ ಸಮತಟ್ಟು ಮಾಡಿ ಸ್ಥಳಾಂತರಿಸಬಹುದಾದ ಸ್ಟೀಲ್ ಕಟ್ಟಡವನ್ನಷ್ಟೇ ನಿರ್ಮಿಸಲಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ನೋಟೀಸ್ಗೆ ತಡೆಯಾಜ್ಞೆ ನೀಡಬೇಕು ವಾದ ಮಂಡಿಸಿದ್ದಾರೆ.



