ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ಹೊರಬಂದಾಗ ನೋಡಿದವರಿಗೆಲ್ಲ ಶಾಕ್ ಆಗಿತ್ತು. ದೇವೇಗೌಡರ ಮೊಮ್ಮಗ ಇಂತ ಕೆಲಸ ಮಾಡಿದ್ದಾನಾ..? ಛೆ.. ಎಂತಹ ತಾತನಿಗೆ ಎಂತಾ ಮೊಮ್ಮಗ ಎಂದುಕೊಂಡಿದ್ದ ಅದೇ ಜನ.. ಮೊಮ್ಮಗನ ಈ ಆಟಗಳೆಲ್ಲ ದೇವೇಗೌಡರಿಗೆ ಗೊತ್ತಿರಲಿಲ್ಲವಾ.. ಎಂದು ಪ್ರಶ್ನೆ ಮಾಡತೊಡಗಿದ್ದರು. ದೇವೇಗೌಡರನ್ನು ಹತ್ತಿರದಿಂದ ನೋಡಿರುವವರ ಪ್ರಕಾರ ʻನಿಮ್ಮ ಮೊಮ್ಮಗ ಇಂತಹ ತಪ್ಪು ಮಾಡಿದ್ಧಾನೆ. ವಿಡಿಯೋಗಳಿವೆ ನೋಡಿʼ ಎಂದು ಹೇಳುವ ಧೈರ್ಯವನ್ನು ಯಾರೊಬ್ಬರೂ ಮಾಡಿರಲಿಲ್ಲ. ವಿಡಿಯೋಗಳನ್ನು ತೋರಿಸುವುದಂತೂ ದೂರದ ಮಾತು.
ಹಾಗೆ ನೋಡಿದರೆ.. ಏನೋ ಎಡವಟ್ಟಾಗಿದೆ.. ಎಂಬ ವಾಸನೆ ಇತ್ತಾದರೂ.. ಅದು ಈ ಪರಿ ಗಂಭೀರವಾಗಿದೆ ಎಂಬ ಸುಳಿವೂ ಇರಲಿಲ್ಲ. ಹಾಗೆ ನೋಡಿದರೆ.. ಇದ್ದುದರಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚು ಮಾಹಿತಿ ಇದ್ದವರು ಕುಮಾರಸ್ವಾಮಿ ಮಾತ್ರ. ಕುಟುಂಬದವರ ಪ್ರಕಾರ ಕುಮಾರಸ್ವಾಮಿಯವರು ಹೇಳಿದರೂ.. ಅದನ್ನು ನಂಬುವ ಸ್ಥಿತಿಯಲ್ಲಿ ಅವರದ್ದೇ ಕುಟುಂಬ ಸದಸ್ಯರು ಇರಲಿಲ್ಲ. ಖುದ್ದು ರೇವಣ್ಣ, ಭವಾನಿಯವರೂ ಸೇರಿದಂತೆ, ಯಾರೂ ಇರಲಿಲ್ಲ. ಅಷ್ಟರಮಟ್ಟಿಗೆ ಎಲ್ಲರ ಕಣ್ಣಿನಲ್ಲಿ ಒಳ್ಳೆ ಹುಡುಗನಾಗಿದ್ದ ಪ್ರಜ್ವಲ್. ಆದರೆ.. ಈಗ ಖುದ್ದು ದೇವೇಗೌಡರೇ ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ಬಹಿರಂಗವಾಗಿ ಪತ್ರ ಬರೆದು ಮನವಿ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ.
ದೇವೇಗೌಡರ ಪತ್ರದಲ್ಲಿ ಇದೂ ಕೂಡಾ ಇದೆ. ತಮಗೆ ಇದರ ಬಗ್ಗೆ ಅರಿವು ಇರಲಿಲ್ಲ ಎಂಬ ಮಾಹಿತಿಯೂ ಇದೆ. ಕುಟುಂಬದಿಂದಲೇ ಮೊಮ್ಮಗನನ್ನು ಹೊರಗೆ ಹಾಕುವ ಮಾತುಗಳೂ ಪತ್ರದಲ್ಲಿವೆ.
ದೇವೇಗೌಡರ ಪತ್ರದ ಯಥಾವತ್ ವರದಿ :
ನಾನು ಮೇ 18ನೇ ತಾರೀಖಿನಂದು ದೇವಸ್ಥಾನಕ್ಕೆ ಹೊರಟಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನ ಕುರಿತಾಗಿ ಮಾತನಾಡಿದ್ದೆ. ಆತ ನನಗೆ, ನನ್ನ ಕುಟುಂಬಕ್ಕೆ, ನನ್ನ ಸಹೋದ್ಯೋಗಿಗಳಿಗೆ, ಸ್ನೇಹಿತರಿಗೆ ಮತ್ತು ನನ್ನ ಪಕ್ಷದ ಕಾರ್ಯಕರ್ತರಿಗೆ ತಂದೊಡ್ಡಿರುವ ಆಘಾತ ಮತ್ತು ನೋವಿನಿಂದ ಹೊರಬಂದು ಮಾತನಾಡಲು ಕೊಂಚ ಸಮಯ ಹಿಡಿಯಿತು. ನಾನು ಈಗಾಗಲೇ ಸ್ಪಷ್ಟಪಡಿಸಿರುವ ಹಾಗೆ ಕಾನೂನಿನ ಪ್ರಕಾರ ಅವನು ತಪ್ಪಿತಸ್ಥನೆಂದಾದರೆ, ಅವನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ನನ್ನ ಈ ನಿಲುವನ್ನು ನನ್ನ ಮಗ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಹಗರಣ ಹೊರಬಿದ್ದ ಮೊದಲ ದಿನದಿಂದಲೇ ಪ್ರತಿಪಾದಿಸಿದ್ದಾರೆ. ಈ ಕೆಲವು ವಾರಗಳಿಂದ ಜನರು ನನ್ನ ಮತ್ತು ನನ್ನ ಕುಟುಂಬದವರ ಕುರಿತಾಗಿ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದೆಲ್ಲವೂ ನನಗೆ ತಿಳಿದಿದೆ. ನಾನು ಅವರು ಮಾತನಾಡುವುದನ್ನು ನಿಲ್ಲಿಸುವ ಪ್ರಯತ್ನ ಮಾಡುವುದಿಲ್ಲ. ನಾನು ಅವರನ್ನು ಟೀಕೆ ಮಾಡಲೂ ಹೋಗುವುದಿಲ್ಲ. ಈ ಹಗರಣದ ಎಲ್ಲಾ ಸತ್ಯಾಂಶಗಳು ಹೊರಬರುವವರೆಗೂ ಅವರು ತಾಳ್ಮೆಯಿಂದ ಕಾಯಬೇಕಿತ್ತು ಎಂದು ಅವರೊಂದಿಗೆ ವಾದಕ್ಕೆ ಇಳಿಯುವುದಿಲ್ಲ. ಪ್ರಜ್ವಲ್‌ನ ಚಟುವಟಿಕೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ನಾನು ಅವರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಿಲ್ಲ. ಅವನನ್ನು ರಕ್ಷಿಸುವ ಯಾವುದೇ ಇರಾದೆಯೂ ನನಗಿಲ್ಲ. ಅವನ ಈಗಿನ ಚಲನವಲನ ಮತ್ತು ಅವನ ವಿದೇಶಿ ಯಾತ್ರೆಯ ಬಗ್ಗೆ ನನಗೆ ಏನೂ ತಿಳಿದಿಲ್ಲ, ತಿಳಿದಿರಲಿಲ್ಲ ಎಂದು ನಾನು ಜನರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಮಾತ್ರ ಉತ್ತರಿಸಬಲ್ಲೆ. ನನಗೆ ದೇವರಲ್ಲಿ ನಂಬಿಕೆ ಇದೆ ಮತ್ತು ಆ ದೇವರಿಗೆ ಎಲ್ಲಾ ಸತ್ಯ ತಿಳಿದಿದೆ ಎಂದು ನಾನು ನಂಬಿದ್ದೇನೆ.


ಈ ಸಂದರ್ಭದಲ್ಲಿ ನಾನು ಈಗ ಒಂದು ಕೆಲಸವನ್ನಷ್ಟೆ ಮಾಡಬಲ್ಲೆ. ಅದೇನೆಂದರೆ, ಪ್ರಜ್ವಲ್‌ನು ಎಲ್ಲಿದ್ದರೂ ಬಂದು, ಪೋಲಿಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸಬೇಕು ಎಂದು ಯಾವುದೇ ಮುಲಾಜು, ಮರ್ಜಿಯಿಲ್ಲದೆ ಹೇಳಬಲ್ಲೆ ಮತ್ತು ಹೇಳುತ್ತಿದ್ದೇನೆ. ಇದು ನಾನು ಅವನಿಗೆ ಕೊಡುತ್ತಿರುವ ಎಚ್ಚರಿಕೆ ಎಂದು ಕೂಡ ತಿಳಿಯಬೇಕು. ಅವನು ಈ ಎಚ್ಚರಿಕೆಗೆ ಮನ್ನಣೆ ಕೊಡದಿದ್ದಲ್ಲಿ ಅವನು ನನ್ನ ಮತ್ತು ಕುಟುಂಬದವರೆಲ್ಲರ ಕೋಪವನ್ನೂ ಎದುರಿಸಬೇಕಾಗುತ್ತದೆ. ಅವನು ಎಸಗಿದ್ದಾನೆ ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂನು ಇದೆ. ಆದರೆ ಈ ಎಚ್ಚರಿಕೆಗೆ ಅವನು ತಲೆಬಾಗದಿದ್ದಲ್ಲಿ, ಅವನು ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ. ನನ್ನ ಬಗ್ಗೆ ಅವನಿಗೆ ಏನಾದರೂ ಗೌರವವಿದ್ದಲ್ಲಿ ಅವನು ಕೂಡಲೆ ಹಿಂದಿರುಗಿ ಬರಬೇಕು.
ನಾನಾಗಲಿ, ನನ್ನ ಕುಟುಂಬದವರಾಗಲಿ ಈ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭರವಸೆ ಕೊಡುತ್ತೇನೆ. ಇದರಲ್ಲಿ ಯಾವುದೇ ಭಾವನೆಗೆ ಸಿಲುಕದೆ, ಅವನು ಎಸಗಿದ್ದಾನೆ ಎನ್ನಲಾದ ಕೃತ್ಯಗಳು ಮತ್ತು ತಪ್ಪುಗಳಿಂದ ನೊಂದಿರುವ, ಅನ್ಯಾಯಕ್ಕೆ ಒಳಗಾಗಿರುವ ಎಲ್ಲರಿಗೂ ನ್ಯಾಯ ಸಿಗುವುದಷ್ಟೆ ನನಗೆ ಮುಖ್ಯ. ಜನರ ವಿಶ್ವಾಸವನ್ನು ಮರಳಿ ಪಡೆಯುವುದಷ್ಟೆ ನನ್ನ ಗುರಿ. ಜನರು ಆರು ದಶಕಗಳ ಕಾಲದ ನನ್ನ ರಾಜಕೀಯ ಜೀವನದುದ್ದಕ್ಕೂ ನನ್ನ ಜೊತೆಗೆ ನಿಂತಿದ್ದಾರೆ. ಅವರಿಗೆ ನಾನು ಸದಾ ಋಣಿ ಮತ್ತು ನಾನು ಬದುಕಿರುವವರೆಗೂ ಅವರ ಹಿತದ ವಿರುದ್ಧ ನಡೆದುಕೊಳ್ಳುವುದಿಲ್ಲ.
ಇದು ಈ ಪತ್ರದ ಸಾರಾಂಶ. ಒಟ್ಟಾರೆ ವಿಷಯವೇನೆಂದರೆ.. ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಸ್ ಆಗಬೇಕು. ಇದು ಇಷ್ಟೆಲ್ಲ ಸುದ್ದಿಯಾಗುವ ಮೊದಲು ದೇವೇಗೌಡರಿಗೆ ವಿಷಯ ಗೊತ್ತಿರಲಿಲ್ಲ. ಪ್ರಜ್ವಲ್ ಬಂದು ವಿಚಾರಣೆ ಎದುರಿಸಬೇಕು. ಶಿಕ್ಷೆ ವಿಧಿಸಿದರೆ ಅನುಭವಿಸಬೇಕು. ಬರದೇ ಹೋದಲಿ.. ಪ್ರಜ್ವಲ್ ರೇವಣ್ಣನನ್ನು ಕುಟುಂಬದಿಂದಲೇ ಹೊರಹಾಕಲಾಗುವುದು. ಅಷ್ಟೆ.



