ನಟ ದರ್ಶನ್ ಅವರಿಗೆ ಒಂದಲ್ಲ ಒಂದು ಸಮಸ್ಯೆಗಳು ಹುಡುಕಿಕೊಂಡು ಬಂದು ಕಾಡುತ್ತಿವೆ. ಕಾಟೇರ ಬ್ಲಾಕ್ ಬಸ್ಟರ್ ಎನಿಸಿದ್ದರೂ, ದರ್ಶನ್ ಖುಷಿಯಾಗಿರೋಕೆ ಆಗಿಲ್ಲ. ಹುಲಿ ಉಗುರು ಇಟ್ಟುಕೊಂಡಿದ್ದ ಪ್ರಕರಣ, ನಾಯಿ ಕಚ್ಚಿದ ಕೇಸ್ ಮುಗಿದವು ಎನ್ನುತ್ತಿರುವಾಗಲೇ.. ಕಾಟೇರ ಸಕ್ಸಸ್ ಆಯ್ತು. ಕಾಟೇರ ಗೆದ್ದರೂ ಯಶಸ್ಸಿನ ಪಾರ್ಟಿ ಮಾಡಿದ್ದೇ ಪ್ರಾಬ್ಲಂ ಆಯ್ತು. ಎಲ್ಲದಕ್ಕೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಯ್ತು. ಅದೆಲ್ಲ ಒಂದು ಹಂತಕ್ಕೆ ಸರಿಹೋಯ್ತು ಎನ್ನುತ್ತಿರುವಾಗಲೇ ವಿಜಯಲಕ್ಷ್ಮಿ ದರ್ಶನ್ ಮತ್ತು ಪವಿತ್ರಾ ಗೌಡ ಅವರ ವಾರ್ ಶುರುವಾಯ್ತು.
ಹಾಗೆ ನೋಡಿದ್ರೆ ದರ್ಶನ್ ಅವರ ಈ ಹಿಂದಿನ ಸಿನಿಮಾ ಕ್ರಾಂತಿಯೂ ಅಷ್ಟೆ. ದರ್ಶನ್ ಅವರ ಅತಿಯಾದ ಅಹಂಕಾರದ ಮಾತುಗಳಿಂದಾಗಿ ಮೀಡಿಯಾಗಳೆಲ್ಲ ತಿರುಗಿಬಿದ್ದಿದ್ದವು. ಒನ್ಸ್ ಎಗೇನ್ ಆಗಲೂ ಕುಟುಂಬದ ಜಗಳ, ರಾಬರ್ಟ್ ನಿರ್ಮಾಪಕರ ಜೊತೆ ಜಗಳ, ಕಾರು ಅಪಘಾತ, ಜೋಗಿ ಪ್ರೇಮ್ ಮತ್ತಿತರರ ಬಗ್ಗೆ ಕೇವಲವಾಗಿ ಮಾತನಾಡಿದ್ದು, ಕ್ರಾಂತಿ ರಿಲೀಸ್ ವೇಳೆ ದರ್ಶನ್ ಅಭಿಮಾನಿಗಳು ಮಾಡಿಕೊಂಡ ರಗಳೆಗಳು.., ಚಪ್ಪಲಿ ಎಸೆತ ಪ್ರಕರಣ.. ಹೀಗೆ ನಿರಂತರವಾಗಿ ನಡೆಯುತ್ತಲೇ ಇವೆ.
ಹೀಗಾಗಿಯೇ ಏನೋ.. ಇದೆಲ್ಲದರ ಮಧ್ಯೆ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಜೊತೆ ತಿರುಪತಿ ಸಮೀಪದ ಕಾಳಹಸ್ತಿಯಲ್ಲಿ ದರ್ಶನ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಟ ದರ್ಶನ್ ಹುಟ್ಟುಹಬ್ಬಕ್ಕೆ ಮುನ್ನ ದೇಗುಲ ಯಾತ್ರೆ ನಡೆಸುತ್ತಿದ್ಧಾರೆ. ವಿಶೇಷ ಎಂದರೆ ತಿರುಪತಿ ಮತ್ತು ಕಾಳಹಸ್ತಿಯಲ್ಲಿ ವಿಶೇಷ ಪೂಜೆ ಮಾಡಿಸಿದ್ಧಾರೆ. ಈ ವೇಳೆ ದರ್ಶನ್ ಅವರೊಂದಿಗೆ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಇದ್ದರು ಎನ್ನುವುದೇ ವಿಶೇಷ.
ಇತ್ತೀಚೆಗೆ ನಟಿ ಪವಿತ್ರಾ ಗೌಡ 10 ವರ್ಷಗಳಿಂದ ನಟ ದರ್ಶನ್ ಜೊತೆ ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು. ಈ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಹಾಗೂ ಪವಿತ್ರಾ ಗೌಡ ನಡುವೆ ತಿಕ್ಕಾಟ ಶುರುವಾಗಿತ್ತು. ಬಳಿಕ ಇಬ್ಬರೂ ಸುಮ್ಮನಾಗಿದ್ದರು. ಹೀಗಾಗಿಯೇ ಈ ತಿರುಪತಿ ಹಾಗೂ ಕಾಳಹಸ್ತಿ ಪೂಜೆ ವಿಶೇಷ ಎನಿಸಿಕೊಂಡಿವೆ.
ಅಂದಹಾಗೆ ತಿರುಪತಿ ವೆಂಕಟರಮಣ ಸ್ವಾಮಿಯ ಪೂಜೆ ಏನೋ ಓಕೆ.. ಆದರೆ ಕಾಳಹಸ್ತಿಯಲ್ಲಿ ವಿಶೇಷ ಪೂಜೆ ಯಾಕೆ? ಸಾಮಾನ್ಯವಾಗಿ ಕಾಳಹಸ್ತಿಗೆ ಹೋಗುವುದು ರಾಹು, ಕೇತು, ಕುಜ ಅಥವಾ ಸರ್ಪ ದೋಷ ನಿವಾರಣೆಗೆ. ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸುತ್ತಾರೆ. ಕಾಳಹಸ್ತಿಗೆ ಹೋದವರು ಅಲ್ಲಿ ಪೂಜೆ ಮಾಡಿಸಿದ ಮೇಲೆ ನೇರವಾಗಿ ಮನೆಗೆ ವಾಪಸ್ ಬರಬೇಕು ಎನ್ನುವುದು ನಂಬಿಕೆ. ಆದರೆ ದರ್ಶನ್ ದೋಷ ನಿವಾರಣೆಗಾಗಿ ಪೂಜೆ ಮಾಡಿಸಿದರೇ.. ಇಲ್ಲವೇ ಎನ್ನುವುದು ಖಚಿತವಾಗಿಲ್ಲ.



