ರಾಜ್ಯಾದ್ಯಂತ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡ ‘ಭೀಮ’ ಸಿನಿಮಾವು ಮೊದಲ ದಿನವೇ ಭರ್ತಿ 10 ಕೋಟಿ ರೂ. ಗಳಿಸಿದೆಯಂತೆ. ವಾರಾಂತ್ಯಕ್ಕೆ ಈ ಸಿನಿಮಾವು 15-20 ಕೋಟಿ ರೂ. ಬಾಚಿಕೊಳ್ಳಲಿದೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲೇ ಸಿನಿಮಾ ಮೊದಲ ದಿನ ಮೂರೂವರೆ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆಯಂತೆ. ಇದು ಆರಂಭದಲ್ಲಿ ಸಿಗ್ತಿರೋ ಬಾಕ್ಸಾಫೀಸ್ ರಿಪೋರ್ಟ್.
ನಟ ‘ದುನಿಯಾ’ ವಿಜಯ್ ಅಭಿನಯದ ‘ಭೀಮ’ ಸಿನಿಮಾವು ಆ.9ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಚಿತ್ರದ ಟಿಕೆಟ್ ದರವನ್ನು ಜಾಸ್ತಿ ಮಾಡಲಾಗಿದೆ. 150 ರೂ. ಇದ್ದ ದರ 200/250ಕ್ಕೆ ಏರಿದೆ. ಜನ ಥಿಯೇಟರಿಗೆ ಬರುತ್ತಿಲ್ಲ ಎನ್ನುವ ಹೊತ್ತಿನಲ್ಲಿ ಇದು ಬೇಕಿತ್ತಾ ಅನ್ನೋ ಪ್ರಶ್ನೆಯೂ ಇದೆ. ಆದರೆ.. 2024ರಲ್ಲಿ ಕನ್ನಡ ಸಿನಿಮಾಗಳಿಗೆ ಸರಿಯಾದ ರೆಸ್ಪಾನ್ಸ್ ಸಿಗುತ್ತಿಲ್ಲ, ಥಿಯೇಟರ್‌ಗಳು ಹೌಸ್‌ಫುಲ್ ಆಗುತ್ತಿಲ್ಲ ಎಂಬುದರ ಮಧ್ಯೆಯೇ, ಟಿಕೆಟ್ ರೇಟ್ ಜಾಸ್ತಿ ಮಾಡಿಯೂ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ ದುನಿಯಾ ವಿಜಯ್ ಅವರ ಭೀಮ. ಮೊದಲ ದಿನವೇ ಬಹುತೇಕ ಕಡೆ ‘ಭೀಮ’ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು, ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.
ಸೆನ್ಸಾರ್‌ನಿಂದ ‘ಎ’ ಪ್ರಮಾಣ ಪತ್ರ ಪಡೆದಿರುವ ‘ಭೀಮ’ ಸಿನಿಮಾದಲ್ಲಿ ಮಾದಕ ವಸ್ತುಗಳ ಚಟ ಹಾಗೂ ಯುವ ಜನಾಂಗದ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ಕಥೆ ಇದೆ. ಕಲ್ಯಾಣಿ, ಅಚ್ಯುತ್ ಕುಮಾರ್, ನಯನಾ ಸೂಡ, ರಂಗಾಯಣ ರಘು, ರಾಘು ಶಿವಮೊಗ್ಗ, ಗೋಪಾಲಕೃಷ್ಣ ದೇಶಪಾಂಡೆ, ಪ್ರಿಯಾ ಶಠಮರ್ಷಣ, ಕಾಕ್ರೋಚ್ ಸುಧೀ ಸೇರಿದಂತೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡಿರುವ ಎರಡನೇ ಸಿನಿಮಾಗೆ ಚರಣ್ ರಾಜ್ ಸಂಗೀತ ಇದೆ. ಚರಣ್ ರಾಜ್ ಮ್ಯೂಸಿಕ್ ಚಿತ್ರದ ಇನ್ನೊಬ್ಬ ಹೀರೋ.
ಇನ್ನೊಂದು ಬಾಕ್ಸಾಫೀಸ್ ಲೆಕ್ಕದ ಪ್ರಕಾರ..
ದುನಿಯಾ ವಿಜಯ್ ಅವರ ಭೀಮ ಮೊದಲ ದಿನ : 3.95 ಕೋಟಿ
2ನೇ ದಿನ : .3.4 ಕೋಟಿ
3ನೇ ದಿನ : 1 ಕೋಟಿ
ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಯಾವ ರೀತಿಯಲ್ಲಿ ನೋಡಿದರೂ.. ಭೀಮ ಚಿತ್ರ ಜನರನ್ನೇನೋ ಚಿತ್ರಮಂದಿರಕ್ಕೆ ಕರೆದು ತಂದಿದೆ. ಆದರೆ.. ಆ ನಿರೀಕ್ಷೆಯನ್ನು ಉಳಿಸಿಕೊಂಡಿಲ್ಲ. ಏಕೆಂದರೆ.. 3ನೇ ದಿನವೇ ರಜೆ ಇದ್ದರೂ ಕೂಡಾ ಚಿತ್ರದ ಕಲೆಕ್ಷನ್ ಬಿದ್ದಿದೆ. ಭೀಮ ಬರಕತ್ತಾಗಿಲ್ಲ.



