ಒಂದ್ ಕಡೆ ವರ್ಷದ ಆರಂಭದಲ್ಲಿ ಸ್ಟಾರ್ ಚಿತ್ರಗಳಿಲ್ಲ ಎಂದು ಕೊರಗುತ್ತಿದ್ದವರಿಗೆ.. ಈಗ ತಡೆದ ಮಳೆ ಜಡಿದು ಬಂತು ಅನ್ನೋ ಹಾಗೆ ಪೈಪೋಟಿ ಶುರುವಾಗ್ತಿದೆ. ವರ್ಷದ ಕೊನೆ ಕೊನೆಗೆ ಚಿತ್ರಗಳ ಸುಗ್ಗಿ ಶುರುವಾಗಲಿದೆ. ಅತ್ತ ಮಾರ್ಟಿನ್ ಚಿತ್ರದ ಬಿಡುಗಡೆ ದಿನಾಂಕವನ್ನು ಅಕ್ಟೋಬರ್ 11ಕ್ಕೆ ಘೋಷಿಸಿರುವ ಧ್ರುವ ಸರ್ಜಾ, ಅದಾದ ಎರಡೇ ದಿನಕ್ಕೆ ಕೆಡಿ ಚಿತ್ರದ ರಿಲೀಸ್ ತಿಂಗಳು ಘೋಷಿಸಿದ್ದಾರೆ. ಗಣೇಶ್ ಅವರ ಕೃಷ್ಣಂ ಪ್ರಣಯ ಸಖಿ ರಿಲೀಸ್ʻಗೆ ರೆಡಿ ಆಗ್ತಿದೆ.
ಸುದೀಪ್ ಅವರ ಮ್ಯಾಕ್ಸ್ ರಿಲೀಸ್ ಹೊಸ್ತಿಲಲ್ಲಿದೆ.
ಶಿವಣ್ಣರ ಭೈರತಿ ರಣಗಲ್ ಆಗಸ್ಟ್ 15ಕ್ಕೆ ಈಗಾಗಲೇ ಡೇಟ್ ಘೋಷಿಸಿದೆ.
ದುನಿಯಾ ವಿಜಯ್ ಅವರ ಭೀಮ ರೆಡಿ. ರಿಲೀಸ್ ಡೇಟ್ ಅನೌನ್ಸ್ ಆಗಬೇಕಷ್ಟೆ.
ಉಪೇಂದ್ರರ ಯುಐ ಕೂಡಾ ಅಂತಿಮ ಹಂತದಲ್ಲಿದೆ.
ಪ್ರೇಕ್ಷಕರಿಗೆ ಈಗ ಯಾವುದನ್ನು ನೋಡಬೇಕು.. ಯಾವುದನ್ನೂ ಬಿಡಬೇಕು ಅನ್ನೋ ಗೊಂದಲ..
ಸರಾಸರಿ 3 ವರ್ಷಕ್ಕೊಂದು ಸಿನಿಮಾ ಮಾಡ್ತಿದ್ದ ಧ್ರುವ ಸರ್ಜಾ ಈ ಬಾರಿ ಒಂದೇ ವರ್ಷಕ್ಕೆ ಎರಡು ಸಿನಿಮಾ ಕೊಡ್ತಿದ್ದಾರೆ. ಡೈರೆಕ್ಟರ್ ಪ್ರೇಮ್ ಮತ್ತು ಧ್ರುವ ಕಾಂಬಿನೇಷನ್ ಸಿನಿಮಾ ಕೆಡಿ ಸಿನಿಮಾ ಕೆಡಿ ಇದೇ ಡಿಸೆಂಬರ್‌ನಲ್ಲಿ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ವಿಶೇಷ ಅಂದ್ರೆ.. ದರ್ಶನ್ ಅವರ ಡೆವಿಲ್ ಸಿನಿಮಾ ಕೂಡಾ ಅಕ್ಟೋಬರ್ 24ಕ್ಕೆ ರಿಲೀಸ್ ಆಗುತ್ತಿದೆ. ಡಿಸೆಂಬರಿನಲ್ಲಿ ದರ್ಶನ್ ಮತ್ತು ಧ್ರುವ ಸರ್ಜಾ ಅವರ ಸಿನಿಮಾಗಳ ವಾರ್ ಶುರುವಾಗಲಿದೆ.
ಕೆಡಿ ಚಿತ್ರ ಇನ್ನೊಂದು ದಾಖಲೆಯನ್ನೂ ಮಾಡಿದೆ. 17.70 ಕೋಟಿ ರೂ.ಗೆ ಆಡಿಯೋ ರೈಟ್ಸ್ ಸೇಲ್ ಆಗಿದ್ದು ಆನಂದ್ ಆಡಿಯೋ ಸಂಸ್ಥೆ ರೈಟ್ಸ್ ಕೊಂಡುಕೊಂಡಿದೆ. ಇದೊಂದು ದಾಖಲೆ. ‘ಕೆಡಿ’ ಅಂದ್ರೆ ಕಾಳಿದಾಸ. ಈ ಸಿನಿಮಾದಲ್ಲಿ ಕಾಳಿದಾಸ ನಾನೇ. ನಿರ್ದೇಶಕ ಪ್ರೇಮ್ ಜೊತೆಗೆ ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದ್ದೆ. ಅದು ಕೆವಿಎನ್ ಸಂಸ್ಥೆಯಿಂದ ಆರಂಭ ಆಯ್ತು. ಚಿತ್ರದ ಆಡಿಯೋ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದ್ದು, ತುಂಬಾ ಖುಷಿ ಆಗಿದೆ ಎಂದಿದ್ದಾರೆ ಹೀರೋ ಧ್ರುವ ಸರ್ಜಾ.
ಇತ್ತ ಡೆವಿಲ್ ಸಿನಿಮಾ ಆಡಿಯೋ ರೈಟ್ಸ್ ಕೂಡಾ ಡಬಲ್ ಡಿಜಿಟ್ ಮೊತ್ತಕ್ಕೆ ಮಾರಾಟವಾಗಿದೆಯಂತೆ. ಆದರೆ.. ಎಷ್ಟು ಕೋಟಿಗೆ ಅನ್ನೋ ಸ್ಪಷ್ಟ ಉತ್ತರ ಲಭ್ಯವಿಲ್ಲ. ಮೂಲಗಳ ಪ್ರಕಾರ ಕೆಡಿ ಚಿತ್ರದ ಆಡಿಯೋ ರೈಟ್ಸ್ ಆಸುಪಾಸಿನಲ್ಲಿಯೇ ಸ್ವಲ್ಪ ಹೆಚ್ಚೇ ಇದೆ. ಡೆವಿಲ್ ಚಿತ್ರಕ್ಕೆ ವೀರ್ ಪ್ರಕಾಶ್ ಡೈರೆಕ್ಟರ್ ಆಗಿದ್ದರೆ, ಅಜನೀಶ್ ಲೋಕನಾಥ್ ಸಂಗೀತ ಇದೆ. ಕಾಟೇರದ ಸೂಪರ್ ಸಕ್ಸಸ್ ಕೂಡಾ ಡೆವಿಲ್ ರೇಟ್ ಜಾಸ್ತಿ ಆಗುವಂತೆ ಮಾಡಿದೆ.
ಧ್ರುವ ಅವರ ಅದ್ಧೂರಿ ಸಿನಿಮಾ 4 ಕೋಟಿಯಲ್ಲಿ ನಿರ್ಮಾಣವಾಗಿತ್ತು. ಈಗ ಅವರದ್ದೇ ಕೆಡಿ ಚಿತ್ರದ ಕೇವಲ ಆಡಿಯೋ ಹಕ್ಕುಗಳು 17.70 ಕೋಟಿಗೆ ಮಾರಾಟವಾಗಿದೆ. ಈ ಚಿತ್ರದ ಆಡಿಯೋಗೆ ಅಷ್ಟು ದೊಡ್ಡ ಮೊತ್ತ ಬರುವುದಕ್ಕೆ ಕಾರಣ ಪ್ರೇಮ್ ಮತ್ತು ಅರ್ಜುನ್ ಜನ್ಯ. ಪ್ರೇಮ್ ಅವರ ಚಿತ್ರಗಳಲ್ಲಿ ಹಾಡುಗಳಂತೂ ಬೊಂಬಾಟ್ ಆಗಿರುತ್ತವೆ. ಪ್ರೇಮ್ ಆ ವಿಷಯದಲ್ಲಿ ಒಮ್ಮೆಯೂ ಮೋಸ ಮಾಡಿಲ್ಲ. ಅಲ್ಲದೆ..ಈ ಚಿತ್ರಕ್ಕಾಗಿ ಬೇರೆ ಬೇರೆ ಪ್ರಯೋಗಗಳೂ ಆಗಿವೆ.
ಅಮೆರಿಕದ ಲಾಸ್ ಏಂಜಲ್ಸ್ನಲ್ಲಿ ಈ ಸಿನಿಮಾಕ್ಕೆ ಸಂಗೀತವನ್ನು ಲೈವ್ ರೆಕಾರ್ಡ್ ಮಾಡಲಾಗಿದ್ದು, ಅರ್ಜುನ್ ಜನ್ಯ ಹಾಗೂ ಪ್ರೇಮ್ ಇಬ್ಬರೂ ಖುದ್ದಾಗಿ ತೆರಳಿ ಸಂಗೀತಗಾರರಿಗೆ ನಿರ್ದೇಶನ ನೀಡಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ‘ಕೆಡಿ’ ಸಿನಿಮಾಕ್ಕೆ ಆರ್ಕೆಸ್ಟ್ರಾ ಒದಗಿಸಿರುವ ಆರ್ಕೆಸ್ಟ್ರಾ ಸಿಇಒ ಬೇಲಿಂಟ್ ಸಪ್ಜೋನ್ ಹೇಳಿರುವಂತೆ, ‘ಇಷ್ಟು ದೊಡ್ಡ ಆರ್ಕೆಸ್ಟ್ರಾ ಬಳಸುತ್ತಿರುವ ಮೊದಲ ಭಾರತೀಯ ಸಿನಿಮಾ ಇದು. ಇನ್ಯಾವುದೇ ಭಾರತೀಯ ಸಿನಿಮಾಕ್ಕೆ ನಾವು ಇಷ್ಟು ದೊಡ್ಡ ಆರ್ಕೆಸ್ಟ್ರಾ ಬಳಸಿಲ್ಲ.
ಸಿನಿಮಾದ ಹಾಡುಗಳಿಗೆ ಪ್ರೇಮ್ ಹಾಗೂ ಮಂಜುನಾಥ್ ಕನ್ನಡ ಸಾಹಿತ್ಯ ಬರೆದಿದ್ದಾರೆ. ಹಿಂದಿಯಲ್ಲಿ ರಖೀಬ್ ಆಲಮ್, ತಮಿಳು ಭಾಷೆಯಲ್ಲಿ ಮದನ್ ಕರ್ಕಿ, ಮಲಯಾಳಂನಲ್ಲಿ ಗೋಪಾಲನ್ ಸಾಹಿತ್ಯ ಬರೆದಿದ್ದಾರೆ.
‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ಧಾರೆ. ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ಸೇರಿದಂತೆ ಬೃಹತ್ ತಾರಾಗಣ ಇದೆ. ಡಿಸೆಂಬರ್ ತಿಂಗಳಲ್ಲಿ ದರ್ಶನ್ ಅಭಿನಯದ ಡೆವಿಲ್ ಕೂಡಾ ರಿಲೀಸ್ ಆಗುತ್ತಿದೆ. ಇದು ಕ್ರಿಸ್ ಮಸ್ ವಾರ್ʻಗೆ ಸಾಕ್ಷಿಯಾಗಲಿದೆಯಾ.. ಎಂಬ ಕುತೂಹಲವೂ ಇದೆ.



