ಧ್ರುವ ಸರ್ಜಾ ಮತ್ತು ಶ್ರೀಲೀಲಾ ಅವರಂತಹ ಪ್ರತಿಭೆಗಳನ್ನು ಪರಿಚಯಿಸಿದವರು ಅರ್ಜುನ್. ಎ.ಪಿ.ಅರ್ಜುನ್. ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್. ಅಂಬಾರಿ, ಅದ್ಧೂರಿ, ರಾಟೆ, ಮಿ.ಐರಾವತ, ಕಿಸ್ ಚಿತ್ರಗಳನ್ನು ನಿರ್ದೇಶಿಸಿದವರು. ಇದೀಗ ಧ್ರುವ ಸರ್ಜಾ ಅವರು ನಟಿಸಿರುವ ಮಾರ್ಟಿನ್ ಚಿತ್ರದ ಬಿಡುಗಡೆಗೆ ಸಿದ್ಧವಾಗುತ್ತಿದ್ದಾರೆ. ಈ ವೇಳೆಯಲ್ಲೇ ಒಬ್ಬ ನಿರ್ದೇಶಕರ ಮೇಲೆ ಕೇಳಬಾರದಂತಹ ಗಂಭೀರ ಆರೋಪ ಕೇಳಿ ಬಂದಿದೆ.
ಮಾರ್ಟಿನ್ ಚಿತ್ರದ ನಿರ್ಮಾಪಕ ಉದಯ್ ಕೆ ಮೆಹ್ತಾ ಅವರಿಗೆ 2.5 ಕೋಟಿ ರೂಪಾಯಿ ಮೋಸವಾಗಿದ್ದು, ದೂರು ಕೊಟ್ಟಿದ್ದಾರೆ. ಈ ಮಧ್ಯೆ ನಿರ್ದೇಶಕ ಎ ಪಿ ಅರ್ಜುನ್ ವಿರುದ್ಧವೂ ಕಮಿಷನ್ ಆರೋಪ ಕೇಳಿಬಂದಿದೆ. ಅಂದರೆ ತಮ್ಮದೇ ಚಿತ್ರದ ನಿರ್ಮಾಪಕರಿಗೆ ಮೋಸ ಮಾಡಿದ ಆರೋಪ ಅದು.
ಮಾರ್ಟಿನ್’ ಚಿತ್ರಕ್ಕಾಗಿ CG ಹಾಗೂ VFX ಕೆಲಸಗಳನ್ನು ಮಾಡಿಕೊಡಲು ಡಿಜಿಟಲ್ ಟೆರೆನ್ ಎಂಬ ಸಂಸ್ಥೆಗೆ ವಹಿಸಲಾಗಿತ್ತು. ಇದಕ್ಕಾಗಿ ನಿರ್ಮಾಪಕರು 2.5 ಕೋಟಿ ರೂಪಾಯಿ ಹಣ ನೀಡಿದ್ದರು. 2.5 ಕೋಟಿ ರೂಪಾಯಿ ಹಣ ಪಡೆದಿದ್ದರೂ, ಡಿಜಿಟಲ್ ಟೆರೆನ್ ಸಂಸ್ಥೆ ಕೆಲಸ ಮಾಡಿಕೊಡಲಿಲ್ಲ. ಸರಿಯಾದ ಸಮಯಕ್ಕೆ ಕೆಲಸ ಮಾಡಿಕೊಡದ ಕಾರಣ ‘ಮಾರ್ಟಿನ್’ ರಿಲೀಸ್ ತಡವಾಗುತ್ತಾ ಹೋಯ್ತು. ಆಗ, ಡಿಜಿಟಲ್ ಟೆರೆನ್ ಸಂಸ್ಥೆ ವಿರುದ್ಧ ನಿರ್ಮಾಪಕ ಉದಯ್ ಕೆ ಮೆಹ್ತಾ ಪೊಲೀಸ್ ಠಾಣೆ ಮೆಟ್ಟಿಲೇರಿದರು. ಡಿಜಿಟಲ್ ಟೆರೆನ್ ಸಂಸ್ಥೆಯ ಸತ್ಯಾ ರೆಡ್ಡಿ, ಸುನೀಲ್ ರೆಡ್ಡಿ ಮೇಲೆ ಉದಯ್ ಕೆ ಮೆಹ್ತಾ ದೂರು ಕೊಟ್ಟರು. ಎಫ್‌ಐಆರ್ ಕೂಡಾ ದಾಖಲಾಯ್ತು.
ಈಗ ಅರ್ಜುನ್ ವಿರುದ್ಧವೇ ಆರೋಪ ಮಾಡಿರುವುದು ಡಿಜಿಟಲ್ ಟೆರೆನ್ ಸಂಸ್ಥೆಯ ಸತ್ಯಾ ರೆಡ್ಡಿ. ನಿರ್ಮಾಪಕ ಉದಯ್ ಕೆ ಮೆಹ್ತಾ ಕೊಟ್ಟಿರುವ 2.5 ಕೋಟಿ ರೂಪಾಯಿ ಹಣದಲ್ಲಿ ನಿರ್ದೇಶಕ ಎ.ಪಿ ಅರ್ಜುನ್ 50 ಲಕ್ಷ ರೂಪಾಯಿ ಕಮಿಷನ್ ಪಡೆದಿದ್ದಾರೆ ಎಂದು ಸತ್ಯಾ ರೆಡ್ಡಿ ಆರೋಪಿಸಿದ್ದಾರೆ.
ಸತ್ಯ ರೆಡ್ಡಿ ಈಗ ಅರೆಸ್ಟ್ ಆಗಿದ್ದಾನೆ.
ಸತ್ಯ ರೆಡ್ಡಿ ಕೇವಲ ನಿರ್ದೇಶಕ ಅರ್ಜುನ್ ಅವರ ಮೇಲಲ್ಲ, ಚಿತ್ರದ ಕ್ಯಾಮೆರಾಮನ್, ಎಡಿಟರ್, ಸಹಾಯಕ ನಿರ್ದೇಶಕರ ಮೇಲೂ ಕಮಿಷನ್ ಆರೋಪ ಮಾಡಿದ್ದಾನೆ.
ಇದು ಸಾಮಾನ್ಯ ಆರೋಪವಂತೂ ಖಂಡಿತಾ ಅಲ್ಲ. ತಮ್ಮದೇ ನಿರ್ದೇಶನದ ಚಿತ್ರದಲ್ಲಿ, ತಮ್ಮದೇ ಚಿತ್ರದ ನಿರ್ಮಾಪಕರಿಗೆ ಮೋಸ ಮಾಡಿದ್ಧಾರೆ ಎಂದು ಆರೋಪ ಹೊತ್ತುಕೊಳ್ಳುವುದು ಸಣ್ಣ ವಿಷಯವಂತೂ ಖಂಡಿತಾ ಅಲ್ಲ. ಅದು ಸ್ವಂತ ಮನೆಯಲ್ಲೇ ಕಳ್ಳತನ ಮಾಡಿದಂತೆ ಎನ್ನುವುದೂ ನಿಜ. ಆದರೆ.. ಎ.ಪಿ.ಅರ್ಜುನ್ ಅವರ ಹಿಂದಿನ ಟ್ರ್ಯಾಕ್ ನೋಡಿದರೆ.. ಹಾಗೆ ಅನ್ನಿಸುವುದಿಲ್ಲ ಎನ್ನುವುದೂ ಹೌದು.
ಕಮಿಷನ್ ಆರೋಪ : ನಿರ್ಮಾಪಕರನ್ನೂ ಕೇಳದರೆ.. ನನ್ನನ್ನೂ ಕೇಳದೆ ಸುದ್ದಿ ಮಾಡಿದ್ಯಾಕೆ..? ಎ.ಪಿ.ಅರ್ಜುನ್ ಪ್ರಶ್ನೆ..!
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಮಾರ್ಟಿನ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಕ್ಟೋಬರ್ 11ಕ್ಕೆ ರಿಲೀಸ್ ಆಗುತ್ತಿರುವ ಮಾರ್ಟಿನ್ ಅಂದುಕೊಂಡಿದ್ದಕ್ಕಿಂತ ವಿಳಂಬವಾಗಿ ಬರುತ್ತಿದೆ. ರಿಲೀಸ್ ಹತ್ತಿರ ಬರುತ್ತಿರುವಾಗಲೇ ಈ ವಿಘ್ನ ಎದುರಾಗಿದೆ. ತಮ್ಮ ಮೇಲೆ ಬಂದಿರುವ ಕಮಿಷನ್ ಆರೋಪ ಸುಳ್ಳು ಎಂದು ಸ್ಪಷ್ಟನೆ ಕೊಡಲು ಲಾಯರ್ ಶಂಕ್ರಪ್ಪ ಅವರೊಂದಿಗೇ ಸುದ್ದಿ ಗೋಷ್ಟಿ ನಡೆಸಿದ್ದ ನಿರ್ದೇಶಕ ಎಪಿ ಅರ್ಜುನ್ ತಮ್ಮ ಮೇಲಿನ ಎಲ್ಲ ಆರೋಪಗಳನ್ನೂ ನಿರಾಕರಿಸಿದ್ಧಾರೆ.
ಎಫ್‌ಐಆರ್ ಕಾಪಿಯಲ್ಲಿ ನನ್ನ ಹೆಸರು ಇದ್ದು, ಆಗ ಸುದ್ದಿ ಮಾಡಿದ್ದರೆ ಚೆನಾಗಿರ್ತಿತ್ತು. ಎಫ್‌ಐಆರ್ ಕಾಪಿಯಲ್ಲಿ ನನ್ನ ಹೆಸರೂ ಇಲ್ಲ. ಚಿತ್ರತಂಡದ ಯಾರೊಬ್ಬರೂ ನನ್ನ ಮೇಲೆ ದೂರು ನೀಡಿಲ್ಲ. ಯಾರೋ ಒಬ್ಬರು ಊಹಾಪೋಹದಿಂದ ಸುದ್ದಿ ಹಬ್ಬಿಸಿದ್ರು. ಆದರೆ ಅಂತಾದ್ದೊಂದು ಆರೋಪ ಬಂದಾಗ ನನಗೇ ಫೋನ್ ಮಾಡಿ ಕೇಳಬಹುದಿತ್ತು. ನಿರ್ಮಾಪಕರನ್ನಾದರೂ ಕೇಳಬಹುದಿತ್ತು. ನನ್ನ ನಂಬರ್ ಇರಲಿಲ್ವಾ ಎಂದು ಪ್ರಶ್ನೆ ಮಾಡಿದ್ಧಾರೆ ಅರ್ಜುನ್.
ಈ ಹೆಸರು ತೆಗೆದುಕೊಳ್ಳುವುದಕ್ಕೆ ಕಷ್ಟ ಪಟ್ಟಿದ್ದೇನೆ. ಮನೆ ಕಟ್ಟುವುದು ತುಂಬ ಕಷ್ಟ. ಆದರೆ ಕೆಡಗುವುದು ಸುಲಭ. ನಾನು ಬೆಳೆಯುವಾಗ ಯಾರೂ ಬೆಂಬಲಿಸಿಲ್ಲ. ಆದರೆ ಈಗ ತೇಜೋವಧೆ ಮಾಡುತ್ತಿದ್ದಾರೆ ಎಂದಿರುವ ಅರ್ಜುನ್ ಸಂಭಾವನೆ ವಿಚಾರದಲ್ಲಿ ಮನಸ್ತಾಪ ಇತ್ತು ಅನ್ನೋದನ್ನು ಒಪ್ಪಿಕೊಂಡಿದ್ದಾರೆ.
ನಿರ್ಮಾಪಕರ ಜೊತೆ ಒಪ್ಪಂದ ಮಾಡಿಕೊಂಡಿದ್ದು 2 ವರ್ಷಗಳಿಗೆ. ಆದರೆ ಸಿನಿಮಾ ಕೆಲಸ ಇನ್ನೂ ಒಂದೂವರೆ ವರ್ಷ ಹೆಚ್ಚಾಯ್ತು. ಅದಕ್ಕಾಗಿ ಮಾತುಕತೆ ನಡೆಯುತ್ತಿದೆ. ಇನ್ನು ಮಾರ್ಟಿನ್ ಚಿತ್ರದ ಬಜೆಟ್ ಜಾಸ್ತಿಯಾಗಿದ್ದು ಹೌದು, ಆದರೆ 20 ಕೋಟಿ ಹೇಳಿ, 100 ಕೋಟಿಯನ್ನಂತೂ ಯಾರೂ ಖರ್ಚು ಮಾಡಿಸಲ್ಲ. ಶೇ.10ರಿಂದ 20ರಷ್ಟು ವ್ಯತ್ಯಾಸ ಆಗಿರಬಹುದು ಎಂದಿದ್ಧಾರೆ ಅರ್ಜುನ್.
ಇನ್ನು ಅರ್ಜುನ್ ಅವರ ಜೊತೆಯಲ್ಲಿದ್ದ ವಕೀಲ ಶಂಕರಪ್ಪ ಅರ್ಜುನ್ ಅವರಿಗೆ 1 ಕೋಟಿ 50 ಲಕ್ಷ ಸಂಭಾವನೆ ನಿಗದಿ ಮಾಡಲಾಗಿತ್ತು. ಆದರೆ ಒಂದೂವರೆ ವರ್ಷ ತಡವಾಗಿರುವ ಕಾರಣ ಸಂಭಾವನೆ ವಿಷಯದಲ್ಲಿ ನಿರ್ಮಾಪಕರು ಹಾಗೂ ನಿರ್ದೇಶಕರ ಮಧ್ಯೆ ಸಣ್ಣ ಭಿನ್ನಾಭಿಪ್ರಾಯ ಇದೆ. ಅದನ್ನ ಆದಷ್ಟು ಬೇಗ ಬಗೆಹರಿಸಿಕೊಳ್ಳುವ ಸಲುವಾಗಿ ಮೇಲ್ ಮುಖಾಂತರ ನೋಟೀಸ್ ಕಳುಹಿಸಲಾಗಿದೆ. ಅದನ್ನ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಪೊಲೀಸರು ಅರ್ಜುನ್ ಅವರನ್ನು ವಿಚಾರಣೆ ಮಾಡಿದ್ಧಾರೆ. ಅರ್ಜುನ್ ಅವರ ಬ್ಯಾಂಕ್ ಬ್ಯಾಲೆನ್ಸ್, ಡಾಕ್ಯುಮೆಂಟ್ಸ್ ಮತ್ತಿತರ ದಾಖಲೆಗಳನ್ನೂ ಪರಿಶೀಲನೆ ಮಾಡಿದ್ದಾರೆ. ಅದನ್ನು ಹೇಳಿಕೊಂಡಿರುವ ಅರ್ಜುನ್ ತಮ್ಮ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದಿದ್ದಾರೆ.
ಎಲ್ಲ ಓಕೆ.. ಆದರೆ.. ಈ ಮಾತನ್ನು ಖುದ್ದು ನಿರ್ಮಾಪಕ ಉದಯ್ ಕೆ. ಮೆಹ್ತಾ ಅವರೇ ಹೇಳಿದ್ದರೆ ಚೆನ್ನಾಗಿರುತಿತ್ತು.



