ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಮಾರ್ಟಿನ್ ಹಿಟ್ ಚಿತ್ರವಾ..? ಫ್ಲಾಪ್ ಚಿತ್ರವಾ..? ಈಗಲೇ ಹೇಳೋಕೆ ಸಾಧ್ಯವಿಲ್ಲ. ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುವ ನಿರೀಕ್ಷೆ ಅಭಿಮಾನಿಗಳಿಗೆ ಇತ್ತು. ಆದರೆ, ಈ ನಿರೀಕ್ಷೆ ಹುಸಿಯಾಗಿರುವುದಂತೂ ಸತ್ಯ. ಚಿತ್ರದ ಬಗ್ಗೆ ನೆಗೆಟಿವ್ ಕಮೆಂಟ್ ಮಾಡುವವರಿಗೆ ಕಂಪ್ಲೇಂಟು, ಕೇಸು ಹಾಕಿದ್ದ ಧ್ರುವ ಸರ್ಜಾ ಫ್ಯಾನ್ಸ್ ಕೆಟ್ಟ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದಾರೆ. ಇಷ್ಟೆಲ್ಲ ಮಾಡಿಯೂ ಚಿತ್ರದ ಕಲೆಕ್ಷನ್ ಮಾತ್ರ ಕುಂಟುತ್ತಿದೆ.
ಅಕ್ಟೋಬರ್ 11ರಂದು ರಿಲೀಸ್ ಆದ ಮಾರ್ಟಿನ್ ಚಿತ್ರಕ್ಕೆ ಮೊದಲ ಮೂರು ದಿನ ಓಕೆ ಎಂಬ ಕಲೆಕ್ಷನ್ ಆಗಿತ್ತು. ತಮಿಳಿನಲ್ಲಿ ‘ವೆಟ್ಟೈಯಾನ್’, ಹಿಂದಿಯಲ್ಲಿ ‘ಜಿಗ್ರಾ’ ಸಿನಿಮಾಗಳು ರಿಲೀಸ್ ಆದ ಹೊರತಾಗಿಯೂ ‘ಮಾರ್ಟಿನ್’ ಮೊದಲ ಮೂರು ದಿನ ಉತ್ತಮ ಗಳಿಕೆ ಮಾಡಿತ್ತು. ಆದರೆ ಸೋಮವಾರದ ನಂತರ ಸಿನಿಮಾ ಕಲೆಕ್ಷನ್ ಡಲ್ಲು ಹೊಡೆಯೋಕೆ ಶುರುವಾಗಿದೆ.
Sacnilk ವರದಿ ಮಾಡಿರುವ ಪ್ರಕಾರ, ‘ಮಾರ್ಟಿನ್’ ಚಿತ್ರ ಐದನೇ ದಿನವಾದ ಮಂಗಳವಾರ 1 ಕೋಟಿ ರೂಪಾಯಿ ಗಳಿಕೆ ಮಾಡಿದೆಯಂತೆ. ಮೊದಲ ದಿನ ಈ ಚಿತ್ರ 6.7 ಕೋಟಿ ರೂಪಾಯಿ, ಎರಡನೇ ದಿನ 5.5 ಕೋಟಿ ರೂಪಾಯಿ, ಮೂರನೇ ದಿನ 3.35 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ 1.35 ಕೋಟಿ ರೂಪಾಯಿ ಹಾಗೂ ಐದನೇ ದಿನ 1 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 18 ಕೋಟಿ ರೂಪಾಯಿ ಆಗಿದೆ.
ವಿಚಿತ್ರ ಎಂದರೆ ಮೊದಲ ಎರಡು ದಿನ ಚಿತ್ರದ ಕಲೆಕ್ಷನ್ 22 ಕೋಟಿ ದಾಟಿದೆ ಎಂದು ಅಧಿಕೃತವಾಗಿ ಟ್ವೀಟ್ ಮಾಡಿದ್ದ ಸಿನಿಮಾ ತಂಡ ನಂತರ ಸೈಲೆಂಟ್ ಆಗಿದೆ. ಅಷ್ಟೇ ಅಲ್ಲ, ಚಿತ್ರದ ಸಕ್ಸಸ್ ಮೀಟ್ ಕೂಡಾ ಮಾಡಿದ್ದರೂ, ಚಿತ್ರದ ಕಲೆಕ್ಷನ್ ಲೆಕ್ಕ ಹೇಳಿಲ್ಲ. ಎರಡು ದಿನದ ಕಲೆಕ್ಷನ್ 22.6 ಕೋಟಿ ಎಂದಿದ್ದ ಚಿತ್ರತಂಡ, ಈಗ Sಚಿಛಿಟಿiಟಞ ವರದಿ ಪ್ರಕಾರ 5 ದಿನದ 18 ಕೋಟಿ ಎನ್ನುತ್ತಿದ್ದರೂ ಚಕಾರ ಎತ್ತುತ್ತಿಲ್ಲ.
ಹಾಗಂತ ಧ್ರುವ ಸರ್ಜಾ ಸಿನಿಮಾಗೆ ವಾರ ಮುಗಿಯುವ ಮುಂಚೆ 18 ಕಲೆಕ್ಷನ್ ಆಗಿರುವುದು ಸಣ್ಣ ಮೊತ್ತವೇನಲ್ಲ. ಆದರೆ ಚಿತ್ರದ ಬಜೆಟ್ 100 ಕೋಟಿ ದಾಟಿತ್ತು. ಆ ಲೆಕ್ಕಕ್ಕೆ ನೋಡಿದರೆ 18 ಕೋಟಿ ರೂಪಾಯಿ ದೊಡ್ಡ ಮೊತ್ತವೇನಲ್ಲ. ನಿರ್ಮಾಪಕ ಉದಯ್ ಮೆಹ್ತಾ ಅವರು ಬರೋಬ್ಬರಿ 100 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನುವ ವರದಿ ಇದೆ. ಇದು ನಿಜವೇ ಆಗಿದ್ದಲ್ಲಿ ನಿರ್ಮಾಪಕರಿಗೆ ದೊಡ್ಡ ನಷ್ಟ ಉಂಟಾಗಿದೆ. ವಾರಾಂತ್ಯದಲ್ಲಿ ಸಿನಿಮಾದ ಕಲೆಕ್ಷನ್ ಸ್ವಲ್ಪ ಹೆಚ್ಚಬಹುದು.
5 ದಿನಗಳ ಮಾರ್ಟಿನ್ ಕಲೆಕ್ಷನ್ ಲೆಕ್ಕ (ಕರ್ನಾಟಕ)
ಮೊದಲ ದಿನ – 6.5 ಕೋಟಿ ರೂ.
ಎರಡನೇ ದಿನ – 5.1 ಕೋಟಿ ರೂ.
ಮೂರನೇ ದಿನ – 4.1 ಕೋಟಿ ರೂ.
ನಾಲ್ಕನೇ ದಿನ – 1.7 ಕೋಟಿ ರೂ.
ಐದನೇ ದಿನ – 1.0 ಕೋಟಿ ರೂ.
ಒಟ್ಟು – 18.4 ಕೋಟಿ ರೂ.
‘ಮಾರ್ಟಿನ್’ ಸಿನಿಮಾ ಬುಕ್ ಮೈ ಶೋ ಹಾಗೂ ಐಎಂಡಿಬಿಯಲ್ಲಿ ಕೂಡಾ ಹೆಚ್ಚಿನ ರೇಟಿಂಗ್ ಗಳಿಸಿಲ್ಲ.
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕೊಟ್ಟ ಕಥೆಗೆ ಎ.ಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದರು. ಮಾಸ್ ಅವತಾರದಲ್ಲಿ ಧ್ರುವ ಸರ್ಜಾ ಅಖಾಡಕ್ಕೆ ಇಳಿದಿದ್ದರು. ದುಬಾರಿ ಆಕ್ಷನ್ ಸೀಕ್ವೆನ್ಸ್, ಇಂಟ್ರುಡಕ್ಷನ್, ಸಾಂಗ್‌ಗಳಿಂದ ‘ಮಾರ್ಟಿನ್’ ಗಮನ ಸೆಳೆದಿತ್ತು. ಆದರೆ ಚಿತ್ರದಿಂದ ದೊಡ್ಡ ಲಾಭ ಬಂದಿಲ್ಲ. ಇಷ್ಟಿದ್ದರೂ ಹಲವು ಭಾಷೆಗಳಿಗೆ ಡಬ್ ಆಗಿರುವುದರಿಂದ ಈ ಸಿನಿಮಾ ಒಳ್ಳೆಯ ಮೊತ್ತಕ್ಕೆ ಮಾರಾಟ ಆಗಿರುವ ಸಾಧ್ಯತೆಯಿದೆ. ಬೇರೆ ಬೇರೆ ರೈಟ್ಸ್‌ಗಳಿಂದ ನಿರ್ಮಾಪಕರು ಸೇಫ್ ಆಗಬಹುದು.



