ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರಕ್ಕೆ ಐದಾರು ವರ್ಷ ಸಂದಿದೆ. ಇದೇ 11ರಂದು ರಿಲೀಸ್ ಆಗಬೇಕಿರೋ ಮಾರ್ಟಿನ್ ಚಿತ್ರಕ್ಕೆ ನಿರ್ದೇಶಕರೇ ವಿಘ್ನ ತಂದಿದ್ದಾರೆ. ತಮ್ಮದೇ ಚಿತ್ರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕಾರಣ ಏನೆಂದರೆ ಚಿತ್ರದ ಪ್ರಚಾರದಲ್ಲಿ ನಿರ್ದೇಶಕರೇ ನಾಪತ್ತೆ. ನಿರ್ಮಾಪಕರೇ, ನಿರ್ದೇಶಕರನ್ನು ದೂರ ಇಟ್ಟಿದ್ದಾರೆ. ಈಗ ನಿರ್ಮಾಪಕರ ವಿರುದ್ಧ, ನಿರ್ದೇಶಕ ಎಪಿ ಅರ್ಜುನ್, ಕಾನೂನು ಸಮರ ನಡೆಸುತ್ತಿದ್ದಾರೆ.
ಮಾರ್ಟಿನ್ ಚಿತ್ರ ಶುರುವಾಗಿದ್ದು ಸುಮಾರು 5 ವರ್ಷಗಳ ಹಿಂದೆ. ನಿನ್ನೆ ಮೊನ್ನೆಯ ಪ್ರಾಜೆಕ್ಟ್ ಅಲ್ಲ, ಸರಿ ಸುಮಾರು 5 ವರ್ಷಗಳ ಹಿಂದೆ ಟೇಕಾಫ್ ಆದ ಮಾರ್ಟಿನ್, ಇನ್ನೇನು ಸುಸೂತ್ರವಾಗಿ ಸಿನಿಮಾ ಬಿಡುಗಡೆ ಆಗಲಿದೆ ಎಂದುಕೊಳ್ಳುತ್ತಿರುವಾಗಲೇ ವಿವಾದಕ್ಕೆ ಸಿಲುಕಿದೆ. ಸಿನಿಮಾದ ನಿರ್ದೇಶಕ ಎಪಿ ಅರ್ಜುನ್ ಚಿತ್ರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅವರದ್ದು ಒಂದೇ ಡಿಮ್ಯಾಂಡ್, ಚಿತ್ರದ ಪ್ರಚಾರದಲ್ಲಿ ನನ್ನ ಹೆಸರು ಬಳಸಿ ಎನ್ನುವುದು.
‘ಮಾರ್ಟಿನ್’ ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ ಹಾಗೂ ನಿರ್ದೇಶಕ ಎಪಿ ಅರ್ಜುನ್ ನಡುವೆ ಎಲ್ಲವೂ ಸರಿ ಇಲ್ಲ. ನಿರ್ಮಾಪಕ ಉದಯ್ ಮೆಹ್ತಾ, ನಿರ್ದೇಶಕರ ವಿರುದ್ಧವೇ ಹಣ ದುರ್ಬಳಕೆ ಆರೋಪ ಮಾಡಿದ್ದಾರೆ ಅಂತಾ ಆರೋಪ ಹೊರಿಸಿದ್ದಾರೆ. ಮಾರ್ಟಿನ್ ಸಿನಿಮಾದ ವಿಎಫ್ಎಕ್ಸ್ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಸಂಸ್ಥೆಯ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದ ಉದಯ್ ಕೆ ಮೆಹ್ತಾ, ನಿರ್ದೇಶಕ ಎಪಿ ಅರ್ಜುನ್ ಹೆಸರನ್ನೂ ದೂರಿನಲ್ಲಿ ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಪ್ರಚಾರದಿಂದ ಹೊರಗಿಟ್ಟಿದ್ದಾರೆ. ಇದನ್ನು ಪ್ರಶ್ನಿಸಿರುವ ಎಪಿ ಅರ್ಜುನ್, ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
‘ಸಿನಿಮಾದ ನಿರ್ದೇಶಕನಾಗಿದ್ದರೂ ಸಹ ನನ್ನ ಹೆಸರು ಕೈಬಿಟ್ಟು ಪ್ರಚಾರ ಮಾಡಲಾಗುತ್ತಿದೆ. ಸಿನಿಮಾದ ಒಪ್ಪಂದವನ್ನು ನಿರ್ಮಾಪಕರು ಪಾಲಿಸುತ್ತಿಲ್ಲ. ನನ್ನ ಹೆಸರು ಇಲ್ಲದೆ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು’ ಎಂದು ಅರ್ಜುನ್, ಕೋರ್ಟ್ ಮೊರೆ ಹೋಗಿದ್ದಾರೆ. ಸಿನಿಮಾದ ಮೂಲ ಒಪ್ಪಂದಗಳನ್ನು ನಿರ್ಮಾಪಕರು ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಚಿತ್ರದ ಪ್ರಚಾರದಲ್ಲಿ ನಿರ್ದೇಶಕರ ಹೆಸರು ಕೈಬಿಡದಂತೆ ಹೈಕೋರ್ಟ್ ಸೂಚನೆ ಕೊಟ್ಟಿದೆ. ಇದು ಅಂತಿಮ ಆದೇಶವಲ್ಲ, ಮಧ್ಯಂತರ ಸೂಚನೆ. ಎಪಿ ಅರ್ಜುನ್ ಅವರ ಪರವಾಗಿ ಹಿರಿಯ ವಕೀಲರಾದ ಉದಯ್ ಹೊಳ್ಳ ಮತ್ತು ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ.
ಇಷ್ಟಕ್ಕೂ ಪ್ರಕರಣ ಶುರುವಾಗಿದ್ದು ಮಾರ್ಟಿನ್’ ಸಿನಿಮಾದ ಸಿಜಿ ಹಾಗೂ ವಿಎಫ್ಎಕ್ಸ್ ಕೆಲಸಗಳಿಂದ. ಗ್ರಾಫಿಕ್ಸ್ ಕೆಲಸವನ್ನೆಲ್ಲ ಡಿಜಿಟಲ್ ಟೆರೆನ್ ಅನ್ನೋ ಸಂಸ್ಥೆಗೆ ವಹಿಸಲಾಗಿತ್ತು. ನಿರ್ದೇಶಕ ಅರ್ಜುನ್ ಅವರೇ ಶಿಫಾರಸ್ಸು ಮಾಡಿ, ಡಿಜಿಟಲ್ ಟೆರನ್ ಅನ್ನೋ ಸಂಸ್ಥೆಗೆ ವಹಿಸಿಕೊಟ್ಟಿದ್ದರು. ನಿರ್ಮಾಪಕ ಉದಯ್ 2.5 ಕೋಟಿ ರೂಪಾಯಿ ಹಣವನ್ನೂ ಕೊಟ್ಟಿದ್ದರು. ಆದರೆ ಸಂಸ್ಥೆ ವಿಎಫ್ಎಕ್ಸ್ ಮತ್ತು ಸಿಜಿ ಕೆಲಸವನ್ನು ಮಾಡಿಕೊಟ್ಟಿರಲಿಲ್ಲ. ಮಾಡಿ ಕೊಟ್ಟಿದ್ದ ಕೆಲಸವೂ ತೃಪ್ತಿದಾಯಕವಾಗಿ ಇರಲಿಲ್ಲ. ಹೀಗಾಗಿ ಟೆರೆನ್ ಸಂಸ್ಥೆಯ ಸುರೇಂಧ್ರ ರೆಡ್ಡಿ ಮತ್ತು ಸತ್ಯಾ ರೆಡ್ಡಿ ವಿರುದ್ಧ ಉದಯ್ ಮೆಹ್ತಾ ದೂರು ದಾಖಲಿಸಿದ್ದರು. ಆಗ ಡಿಜಿಟಲ್ ಟೆರೇನ್ ಸಂಸ್ಥೆಯ ಸುರೇಂಧ್ರ ರೆಡ್ಡಿ, ನಿರ್ಮಾಪಕ ಉದಯ್ ಮೆಹ್ತಾ ನೀಡಿರುವ ಎರಡೂವರೆ ಕೋಟಿಯಲ್ಲಿ ಎಪಿ ಅರ್ಜುನ್ 50 ಲಕ್ಷ ರೂಪಾಯಿ ಕಮೀಷನ್ ಪಡೆದಿದ್ದಾರೆ ಎಂದು ವಾದಿಸಿದ್ದರು. ಇದರಿಂದ ಸಿಟ್ಟಾದ ನಿರ್ಮಾಪಕ ಉದಯ್ ಕೆ ಮೆಹ್ತಾ, ಎಪಿ ಅರ್ಜುನ್ ಅವರನ್ನೂ ಸೇರಿಸಿ ದೂರು ಕೊಟ್ಟಿದ್ದಾರೆ. ಪ್ರಚಾರದಿಂದ ನಿರ್ದೇಶಕರನ್ನು ಹೊರಗಿಟ್ಟಿದ್ದಾರೆ. ವಿವಾದ ಇತ್ಯರ್ಥಕ್ಕೆ ಫಿಲ್ಮ್ ಚೇಂಬರ್ ಕೂಡಾ ಪ್ರಯತ್ನಿಸಿ ವಿಫಲವಾಗಿದೆ.
ಈಗ ಎಲ್ಲರನ್ನೂ ಕಾಡುತ್ತಿರುವ ಒಂದೇ ಒಂದು ಪ್ರಶ್ನೆ, ಸಿನಿಮಾ ರಿಲೀಸ್ ಆಗುತ್ತಾ.. ಇಲ್ಲವಾ.. ಅನ್ನೋದು. ಹೈಕೋರ್ಟ್ ಸೂಚನೆಯಂತೆ ಪ್ರಚಾರದಲ್ಲಿ ಹಾಗೂ ಸಿನಿಮಾದಲ್ಲಿ ನಿರ್ದೇಶಕರ ಹೆಸರು ಸೇರಿಸಬೇಕು. ಆದರೆ ಮಧ್ಯಂತರ ಆದೇಶದಲ್ಲಿ ಸಿನಿಮಾ ಬಿಡುಗಡೆ ಕುರಿತಂತೆ ಯಾವುದೇ ಸೂಚನೆ ಇಲ್ಲ. ಹೀಗಾಗಿ ಸಿನಿಮಾ ಬಿಡುಗಡೆಗೆ ತೊಂದರೆ ಇಲ್ಲ. ನಿರ್ದೇಶಕ ಎಪಿ ಅರ್ಜುನ್ ಕೂಡಾ ತಮ್ಮ ಅರ್ಜಿಯಲ್ಲಿ ತಮ್ಮ ಹೆಸರು ಕೈಬಿಟ್ಟು ಸಿನಿಮಾ ಬಿಡುಗಡೆ ಮಾಡದಂತೆ ತಡೆ ಕೋರಿದ್ದಾರೆ. ಒಟ್ಟಿನಲ್ಲಿ ತಮ್ಮದೇ ನಿರ್ದೇಶನದ ಚಿತ್ರದ ವಿರುದ್ಧ ನಿರ್ದೇಶಕರೊಬ್ಬರು ಕೋರ್ಟ್ ಮೆಟ್ಟಿಲೇರಿರುವುದು ಇದೇ ಮೊದಲು.
ಚಿತ್ರದ ಪ್ರಚಾರವನ್ನು ಧ್ರುವ ಸರ್ಜಾ ಧಾಂಧೂಂ ಅಂತಾ ಮಾಡ್ತಿದ್ದಾರೆ. ಯೂಟ್ಯೂಬ್ ಚಾನೆಲ್ಲುಗಳಿಗೆ ಸಂದರ್ಶನ ಕೊಡ್ತಿದ್ದಾರೆ. 6 ಭಾಷೆಗಳಲ್ಲಿ ಬರುತ್ತಿರುವ ಚಿತ್ರಕ್ಕೆ ಸುಮಾರು 150 ಕೋಟಿ ಖರ್ಚಾಗಿದೆಯಂತೆ. ಇಷ್ಟೆಲ್ಲ ಖರ್ಚು ಮಾಡಿರುವ ಮಾರ್ಟಿನ್ ಚಿತ್ರದ ಪ್ರಚಾರಕ್ಕಾಗಿಯೇ ಕೋಟಿ ಕೋಟಿ ಖರ್ಚಾಗಿದೆ. ಈ ಹಂತದಲ್ಲಿ ನಿರ್ಮಾಪಕರು ಮತ್ತು ನಿರ್ದೇಶಕರ ನಡುವೆ ನಡೆಯುತ್ತಿರುವ ಈ ಕಾದಾಟ, ಚಿತ್ರದ ಬಿಡುಗಡೆಗೇ ಕಂಟಕ ತರುತ್ತಾ.. ಅನ್ನೋ ಕುತೂಹಲವೂ ಇದೆ. ಆದರೆ ನಿರ್ಮಾಪಕ ಉದಯ್ ಕೆ ಮೆಹ್ತಾ, ಚಿತ್ರದ ನಿರ್ದೇಶಕರು ಎಂಬ ಜಾಗದಲ್ಲಿ ಎಪಿ ಅರ್ಜುನ್ ಅವರ ಹೆಸರನ್ನೇ ಹಾಕಿದ್ದಾರೆ. ಹೀಗಾಗಿ ಪ್ರಮಾದ ಆಗಲಿಕ್ಕಿಲ್ಲ ಎನ್ನುವ ಆಶಾವಾದ ಧ್ರುವ ಅಭಿಮಾನಿಗಳದ್ದು.



