ಧ್ರುವ ಸರ್ಜಾ ಅಭಿಮಾನಿಗಳ ಮೂರೂವರೆ ವರ್ಷಗಳ ಬರ ಕೊನೆಗೂ ನೀಗುತ್ತಿದೆ. ಎಂದಿನಂತೆ ಲೇಟ್ ಆಗಿ ಬಂದಿರೋ ಧ್ರುವ ಸರ್ಜಾ ಈ ಬಾರಿಯೂ ಸಾಕಪ್ಪಾ ಸಾಕು ಅನ್ನೋವಷ್ಟೂ ಕಾಯಿಸಿದ್ದಾರೆ. ಅಂತೂ ಇಂತೂ ಮಾರ್ಟಿನ್ ರಿಲೀಸ್ ಆಗುತ್ತಿದೆ. ವಿಶೇಷ ಅಂದ್ರೆ, ಹಿಂದಿನ ಚಿತ್ರಗಳಿಗಿಂತ ದೊಡ್ಡ ಲೆವೆಲ್ಲಿನಲ್ಲಿ ಪ್ಯಾನ್ ವರ್ಲ್ಡ್ ಸಿನಿಮಾ ಸಿನಿಮಾ ರಿಲೀಸ್ ಆಗ್ತಿರೋದು ವಿಶೇಷ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಅರ್ಜುನ್ ಸರ್ಜಾ ಅವರ ಕುಟುಂಬ ಸದಸ್ಯ. ಸಹಜವಾಗಿಯೇ ಪ್ರೀತಿ ಇರುತ್ತದೆ. ಧ್ರುವ ಕೂಡಾ ಅರ್ಜುನ್ ಸರ್ಜಾ ಅವರಿಗೆ ತಂದೆಯಂತೆಯೇ ಗೌರವ ಕೊಡ್ತಾರೆ. ಅಂತಹ ಧ್ರುವ ಸರ್ಜಾ ಇದೀಗ ರಿಲೀಸ್ ಆಗುತ್ತಿರುವ ಮಾರ್ಟಿನ್ ಚಿತ್ರಕ್ಕೆ ಕಥೆ ಬರೆದಿದ್ದಾರೆ. ನಿರ್ದೇಶನ ಎಪಿ ಅರ್ಜುನ್ ಅವರದ್ದೇ ಆದರೂ, ಕಥೆ ಅರ್ಜುನ್ ಸರ್ಜಾ ಅವರದ್ದೇ.
ಮಾರ್ಟಿನ್ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಬಂದಿದ್ದ ಅರ್ಜುನ್ ನಾನು 44 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಆದರೆ ಮೊದಲ ಬಾರಿಗೆ ಈ ರೀತಿಯ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದೇನೆ. ಇದಕ್ಕೆ ಮಾರ್ಟಿನ್ ಸಿನಿಮಾ ತಂಡ ಕಾರಣ. ಧ್ರುವ ತನ್ನ ಐದನೇ ಚಿತ್ರದಲ್ಲೇ ಮ್ಯಾಜಿಕ್ ಮಾಡಿದ್ದಾನೆ. ಆತನಿಂದ ಪ್ರೇಕ್ಷಕರು ತುಂಬಾ ನಿರೀಕ್ಷೆ ಮಾಡುತ್ತಿದ್ದಾರೆ. ನಾನು ಕೂಡ ಇವನಿಂದ ಸಾಕಷ್ಟು ಕಲಿಯುತ್ತಿದ್ದೇನೆ. ಆತನೇ ನನಗೆ ಸ್ಫೂರ್ತಿ. ಉದಯ್ ಮೆಹ್ತಾ ತುಂಬಾ ಒಳ್ಳೆಯ ನಿರ್ಮಾಪಕರು. ಅವರಿಗೆ ಈ ಸಿನಿಮಾದಿಂದ ಅವಾರ್ಡ್, ರಿವಾರ್ಡ್ ಎರಡೂ ಸಿಗುವಂತಾಗಲಿ ಎಂದು ಹಾರೈಸಿದ್ದಾರೆ.
ಸಸ್ಪೆನ್ಸ್, ಥ್ರಿಲ್ಲರ್, ಬಿಗ್ ಆಕ್ಷನ್ ಜೊತೆಗೆ ಸಣ್ಣ ಡ್ರಾಮಾ ಇರುವ ಸಿನಿಮಾ, ಯೂನಿವರ್ಸಲ್ ಸಬ್ಜೆಕ್ಟ್ ಎಂದು ಹೇಳಿದ್ದಾರೆ ಧ್ರುವ ಸರ್ಜಾ.
ವೈಭವಿ ಶಾಂಡಿಲ್ಯ ಅವರಂತೂ ಸಿನಿಮಾ ನೋಡೋವ್ರಿಗೆ ಎದೆ ಗಟ್ಟಿ ಇರಬೇಕು. ಗಟ್ಟಿ ಗುಂಡಿಗೆ ಇದ್ದವರೇ ಇಂಥ ಸಿನಿಮಾ ಮಾಡುವುದಕ್ಕೆ ಸಾಧ್ಯ ಎಂದಿದ್ದಾರೆ. ವೈಭವಿ ಶಾಂಡಿಲ್ಯ ಅವರ ಪ್ರಕಾರ ಸಿನಿಮಾ ಹೀರೋ ಧ್ರುವ ಸರ್ಜಾ ಆದರೂ.. ಅಷ್ಟು ದೊಡ್ಡ ಬಜೆಟ್ ಹಾಕಿದ ನಿರ್ಮಾಪಕ ಉದಯ್ ಕೆ ಮೆಹ್ತಾ ಅವರೂ ಚಿತ್ರದ ಹೀರೋ.
ಛಾಯಾಗ್ರಹಕ ಸತ್ಯ ಹೆಗಡೆ ಅವರಿಗೂ ಇದು ಬೇರೆಯದೇ ಅನುಭವ. ಚಿತ್ರರಂಗದಲ್ಲಿ ಸುದೀರ್ಘ ಅನುಭವ ಇರುವ ಸತ್ಯ ಹೆಗಡೆ ಅವರಿಗೂ 25 ವರ್ಷಗಳ ಸಿನಿಮಾ ಪಯಣದಲ್ಲಿ ಇದು ಬೆಸ್ಟ್ ಸಿನಿಮಾ ಎಂದು ಅನ್ನಿಸಿದೆ.
ನಿರ್ದೇಶಕ ಎಪಿ ಅರ್ಜುನ್ ಹೇಳುವುದೇ ಬೇರೆ. “ನಾನು ಮಂಡ್ಯದ ಹುಡುಗ. ನನ್ನ ಮೊದಲ ಸಿನಿಮಾ ಅಂಬಾರಿ. ಅದ್ದೂರಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾನು ಧ್ರುವನನ್ನು ಪರಿಚಯಿಸಿದೆ. ಆರಂಭದಲ್ಲಿ ನಾರ್ಮಲ್ ಸಿನಿಮಾ ಅಂತಲೇ ಪ್ರಾರಂಭಿಸಿದೆವು. 20 ದಿನಗಳ ಶೂಟಿಂಗ್ ಆದಮೇಲೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಪ್ಲಾನ್ ಮಾಡಿದೆವು. ಇಂಥ ಸಿನಿಮಾ ಮಾಡಬೇಕು ಅಂತ ಬಂದಾಗ ನಿರ್ಮಾಪಕರೂ ಮುಖ್ಯವಾಗುತ್ತಾರೆ. ಆ ವಿಷಯದಲ್ಲಿ ಮೆಹ್ತಾ ಅವರ ಧೈರ್ಯ ಮೆಚ್ಚಬೇಕು. ಸರ್ಜಾ ಸಿನಿಮಾಗಳಲ್ಲಿ ದೇಶಾಭಿಮಾನ ಎದ್ದು ಕಾಣುತ್ತದೆ ಎಂದಿದ್ದಾರೆ.



