ರಮ್ಯಾ ದೂರು ಕೊಟ್ಟಿರುವುದು ದರ್ಶನ್ ಅಭಿಮಾನಿಗಳ ಮೇಲೆ. ಹೀಗಿರುವಾಗ ಧ್ರುವ ಸರ್ಜಾ, ಲೂಸ್ ಮಾದ ಯೋಗಿ ಮತ್ತು ರಾಕ್ ಲೈನ್ ರಮ್ಯಾ ಮತ್ತು ದರ್ಶನ್ ಪರ ನಿಲ್ಲುವುದು ಹೇಗೆ ಸಾಧ್ಯ..? ಸಾಧ್ಯವಿದೆ. ಇದು ಅರ್ಥವಾಗಬೇಕು ಎಂದರೆ.. ಇಡೀ ಸ್ಟೋರಿ ಓದಬೇಕು. ಅರ್ಥ ಮಾಡ್ಕೋಬೇಕು. ಒಬ್ಬೊಬ್ಬರ ವಿವರವನ್ನೇ ನೋಡ್ತಾ ಹೋಗೋಣ..
ಧ್ರುವ ಸರ್ಜಾ ಹೇಳಿದ್ದೇನು..?
ಧ್ರುವ ಸರ್ಜಾ ಪ್ರಥಮ್‌ಗೆ ಡೈರೆಕ್ಟ್ ಆಗಿ ಬುದ್ದಿ ಹೇಳಿದ್ದಾರೆ. ʻʻಪ್ರಥಮ್‌ಗೆ ಬೇಸರ ಆಗಿರಬಹುದು. ಅವರ ಕುಟುಂಬದಲ್ಲಿ ಏನೂ ಒತ್ತಡ ಇರಬಹುದು. ಆದರೆ ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತದೆ ಎಂದಿರುವ ಧ್ರುವ ಸರ್ಜಾಗೆ ಪ್ರಥಮ್ ದೂರು ಕೊಟ್ಟಿರುವ ಬೇಸರ ಇಲ್ಲ. ಯಾವನೋ ಒಬ್ಬ ರೌಡಿ ಡ್ಯಾಗರ್ ಇಟ್ಟು ಹೆದರಿಸ್ತಾನೆ ಅಂದ್ರೆ, ಪೊಲೀಸ್ ಮೊರೆ ಹೋಗಿದ್ದು ಸರಿ. ಆದರೆ.. ʻʻ ದರ್ಶನ್ ಅವರಲ್ಲಿ ಕಿತ್ತುಕೊಳ್ಳೋಕೆ ಏನೂ ಇಲ್ಲ. ಅವರು ಧರಿಸೋದು ವಿಗ್. ಇನ್ನು, ಗಡ್ಡ ಮೀಸೆ ಅವರು ಬಿಡೋದಿಲ್ಲ. ಇನ್ನೇನು ಕಿತ್ತುಕೊಳ್ಳಲಿʼʼ ಎಂಬ ಮಾತು ಸರಿಯಲ್ಲ ಎನ್ನುವುದು ಧ್ರುವ ಮಾತು.
ಗೌರವ ಇಲ್ಲದ ರೀತಿಯಲ್ಲಿ, ವಿಗ್ ಅದು ಇದು ಅಂತ ಮಾತನಾಡುವ ಅವಶ್ಯಕತೆ ಇರಲಿಲ್ಲ. ಎಲ್ಲರಿಗೂ ಅವರವರ ಆತ್ಮಗೌರವ ಇರುತ್ತದೆ. ಯಾರೋ ಕುಗ್ಗಿದ್ದಾರೆ ಎಂದಾಗ ಆಳಿಗೊಂದು ಕಲ್ಲು ಹಾಕಬಾರದು. ಈ ವಿಚಾರದಿಂದ ಸುದೀಪ್, ಶಿವಣ್ಣ, ದುನಿಯಾ ವಿಜಯ್, ಧನಂಜಯ ಅವರಿಗೂ ಬೇಜಾರು ಆಗಿರುತ್ತದೆ. ಪುನೀತ್ ಸರ್ ಇದ್ದಿದ್ರೆ, ನನ್ನ ಅಣ್ಣ ಇದ್ದಿದ್ರೆ.. ಅವರಿಗೂ ಬೇಜಾರಾಗ್ತ ಇರ್ತಿತ್ತು. ನಮ್ಮ ಹಿರಿಯ ನಟರು ಎನ್ನಿಸಿಕೊಂಡವರ್ಯಾರೂ ಇಂಥ ಉದಾಹರಣೆ ಸೆಟ್ ಮಾಡಿಲ್ಲ. ಈಗ ನಾವು ಪ್ರಥಮ್ ಮಾತಿನ ಪರ ನಿಂತು ಮಾತನಾಡಿದರೆ.. ನಾಳೆ ನಮ್ಮ ವಿರುದ್ಧವೂ ಇನ್ಯಾವನೋ ಮಾತನಾಡುತ್ತಾನೆ ಎಂದಿದ್ದಾರೆ ಧ್ರುವ ಸರ್ಜಾ.
ಅಂದಹಾಗೆ ಸರ್ಜಾ ಅವರು ರಮ್ಯಾ ಪರ ಇದ್ದೇನೆ ಎಂದು ಹೇಳಿದ್ದಾರೆ. ರಮ್ಯಾ ಅವರಿಗೆ ಬೇಸರವಾಗಿದೆ. ದೂರು ಕೊಟ್ಟಿದ್ದಾರೆ. ಮುಂದಿನ ಕ್ರಮ ಪೊಲೀಸರಿಗೆ ಬಿಟ್ಟಿದ್ದು. ರಮ್ಯಾ ಅವರಿಗೆ ಅಶ್ಲೀಲ ಮೆಸೇಜ್ ಹಾಕಿದವರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ ಧ್ರುವ ಸರ್ಜಾ.
ರಾಕ್ ಲೈನ್ ವೆಂಕಟೇಶ್ ಹೇಳಿದ್ದೇನು..?
ʻರಮ್ಯಾ ವಿಷಯದಲ್ಲಿ ನಿಜವಾದ ಫ್ಯಾನ್ಸ್ ಪೇಜ್ಗಳಿಂದ ಮೆಸೇಜ್ ಬರುತ್ತಿದ್ದರೆ ಮಾಡಿದವರಿಗೂ, ಮಾಡಿಸುತ್ತಾ ಇರುವವರಿಗೂ ಶಿಕ್ಷೆ ಆಗಬೇಕು. ಅದರಲ್ಲಿ ಎರಡನೇ ಮಾತಿಲ್ಲ. ನಿಮ್ಮ ಮನೆಯಲ್ಲೂ ಹೆಣ್ಮಕ್ಕಳು ಇದ್ದಾರೆ. ನೀವು ಬೇರೆ ಹೆಣ್ಮಕ್ಕಳನ್ನು ಬೈಯ್ಯುವ ಬದಲು ಮೊದಲು ನಿಮ್ಮ ಮನೆಯಲ್ಲಿ ಇರುವ ಹೆಣ್ಮಕ್ಕಳನ್ನು ಕಾಪಾಡಿಕೊಳ್ಳಿ. ನಾಳೆ ಯಾವ ಸ್ಟಾರ್ ನಟ ಕೂಡ ನಿಮ್ಮನ್ನು ಬಂದು ಕಾಪಾಡಲ್ಲ. ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದಿರುವ ರಾಕ್ ಲೈನ್ ಅವರಿಗೆ ದುಷ್ಟ ಅಭಿಮಾನಿಗಳಿಗೆ ಶಿಕ್ಷೆಯಾಗಬೇಕು. ಇದನ್ನೆಲ್ಲ ದರ್ಶನ್ ಮಾಡಿಸಿದ್ದಾನೆ ಎಂದು ನಂಬುವುದಕ್ಕೆ ಆಗುತ್ತಿಲ್ಲ. ರಮ್ಯಾಗೆ ನಿಂದಿಸಿದವರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.
ಲೂಸ್ ಮಾದ ಯೋಗಿ ಹೇಳಿದ್ದೇನು..?
ನನಗೂ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿದ್ದವನೊಬ್ಬ ಬಂದು ಬ್ಲೇಡ್ ಹಾಕಿ ಹೋಗಿದ್ದ. ಆಗ ದರ್ಶನ್ ಮೇಲೆ ನನಗೂ ಕೋಪ ಬಂದಿತ್ತು. ಆಮೇಲೆ ನಿಧಾನವಾಗಿ ಯೋಚಿಸಿದಾಗ.. ದರ್ಶನ್ ಯಾಕೆ ಇಂಥದ್ದೆಲ್ಲ ಮಾಡಿಸ್ತಾರೆ ಎಂದುಕೊಂಡು ಸುಮ್ಮನಾದೆ. ಅಭಿಮಾನಿಗಳು ಎಂದು ಹೇಳಿಕೊಳ್ಳೋವ್ರಿಗೆ ಒಂದು ಮನವಿ. ಸಿನಿಮಾ ನೋಡಿ. ಪ್ರೀತಿಸಿ. ಆದರೆ.. ಇನ್ಯಾರೋ ನಟನಿಗಾಗಿ ಇನ್ನೊಬ್ಬ ನಟನಿಗೆ ತೊಂದರೆ ಕೊಡಬೇಡಿ ಎಂದಿದ್ದಾರೆ.
ಯೋಗಿ ಪ್ರಕಾರ ʻದರ್ಶನ್ ಇಂಥದ್ದನ್ನೆಲ್ಲ ಹೇಳಿ ಮಾಡಿಸಿದ್ದಾರೆ ಅಂದ್ರೆ ನಂಬೋಕೆ ಆಗಲ್ಲ. ರಮ್ಯಾ ಅವರ ಧೈರ್ಯ ಮೆಚ್ಚಬೇಕು. ಅವರು ಮೊದಲಿಂದಾಲೂ ಹಾಗೆ. ಧೈರ್ಯವಂತೆ. ರಮ್ಯಾಗೆ ನಿಂದಿಸಿರುವವರಿಗೆ ಶಿಕ್ಷೆಯಾಗಬೇಕುʼ ಎಂದಿದ್ದಾರೆ.



