ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಚಾಲೆಂಜಿಂಗ್ ಸ್ಟಾರ್ ನಡುವಿನ ಫ್ಯಾನ್ಸ್ ವಾರ್ ತಾರಕಕ್ಕೇರಿದೆ. ಮಾರ್ಟಿನ್ ಚಿತ್ರ ಬರಲಿ, ಆಗ ಪಾಠ ಕಲಿಸ್ತೇವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ ದರ್ಶನ್ ಫ್ಯಾನ್ಸ್. ಇಷ್ಟಕ್ಕೂ ದರ್ಶನ್ ಫ್ಯಾನ್ಸ್ ಆಕ್ರೋಶಗೊಳ್ಳಲು ಕಾರಣ ಏನು..? ಒಂದು ಸಂದರ್ಶನ.
ಧ್ರುವ ಸರ್ಜಾ ಮತ್ತು ದರ್ಶನ್ ನಡುವೆ ಮೊದ ಮೊದಲು ಎಲ್ಲವೂ ಚೆನ್ನಾಗಿತ್ತು. ಅರ್ಜುನ್ ಸರ್ಜಾ ಮಗಳ ಪ್ರೇಮ ಬರಹ ಚಿತ್ರ ರಿಲೀಸ್ ಆದಾಗ, ಆ ಚಿತ್ರದಲ್ಲಿ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಜೊತೆ ದರ್ಶನ್ ಕೂಡಾ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ದರ್ಶನ್ ಅವರ ಯಜಮಾನ ಚಿತ್ರದ ಹಾಡಿನಲ್ಲಿ ಚಿರಂಜೀವಿ ಸರ್ಜಾ ಸಣ್ಣ ದೃಶ್ಯದಲ್ಲಿ ನಟಿಸಿದ್ದರು. ಅಷ್ಟರಮಟ್ಟಿಗೆ ಇದ್ದ ಸಂಬಂಧಕ್ಕೆ ಅದೇನಾಯ್ತು.. ಅದೇನಾಯ್ತೋ.. ಗೊತ್ತಿಲ್ಲ. ಇತ್ತೀಚೆಗೆ ದರ್ಶನ್ ವಿರುದ್ಧ ಧ್ರುವ ಸರ್ಜಾ ಅಸಮಾಧಾನಗೊಂಡಿದ್ದರು. ಇದೀಗ ಟಿವಿ ಚಾನೆಲ್ಲೊಂದರಲ್ಲಿ ಮಾತನಾಡಿರುವ ಧ್ರುವ ಸರ್ಜಾ ಆಡಿರುವ ಮಾತುಗಳು ದರ್ಶನ್ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿವೆ.
ಸೋಶಿಯಲ್ ಮೀಡಿಯಾದಲ್ಲಿ ಇದೇ ಈಗ ಹಾಟ್ ಟಾಪಿಕ್ ಆಗಿದೆ. ಅಂದು ನಾನು ದರ್ಶನ್ ಅಭಿಮಾನಿ ಎಂದು ಹೇಳಿದ್ದವರು ಈಗ ಯಾಕೆ ಈ ರೀತಿ ಮಾತನಾಡುತ್ತಿದ್ದೀರಾ? ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ‘ಮಾರ್ಟಿನ್’ ಸಿನಿಮಾ ಬಿಡುಗಡೆ ಆಗಲಿ ನಿಮಗೆ ಬುದ್ಧಿ ಕಲಿಸುತ್ತೇವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ʼತಪ್ಪು ನಡೆಯುತ್ತಿದ್ದಾಗ, ಏಯ್, ಇದು ತಪ್ಪು ಗುರು ಎಂದು ಬುದ್ಧಿ ಹೇಳಬೇಕುʼ, ಅದನ್ನು ಬಿಟ್ಟು ಅದಕ್ಕೊಂದು ಫ್ಯಾನ್ ವಾರ್ ಅನ್ನೋ ಟ್ಯಾಗ್ ಕೊಡ್ತಾರೆ.. ʼನಾನು ನನ್ನ ಹೆಂಡತಿ, ನನ್ನ ತಂದೆ ಜೊತೆ ಪಾರ್ಟಿ ಮಾಡ್ತೀನಿ ಅಷ್ಟೇʼ, ಒಂದು ಕೆಟಗರಿ ಹೇಳುತ್ತೆ ʼನಾವು ಸಿನಿಮಾ ನೋಡಲ್ಲʼ ಅಂತ. ಸಿನಿಮಾಗಳು ಚೆನ್ನಾಗಿಯೇ ಓಡ್ತಲ್ಲ ಸರ್?
ಸಂದರ್ಶನದಲ್ಲಿ ಧ್ರುವ ಸರ್ಜಾ ಆಡಿರುವ ಕೆಲವು ಮಾತುಗಳೆಲ್ಲ ದರ್ಶನ್ ಅವರನ್ನು ಉದ್ದೇಶಿಸಿಯೇ ಹೇಳಲಾಗಿದೆ ಅನ್ನೋದು ದರ್ಶನ್ ಫ್ಯಾನ್ಸ್ ಆರೋಪ.
ಸದ್ಯ ʼಮಾರ್ಟಿನ್ʼ ಚಿತ್ರದ ಪ್ರಮೋಷನ್‌ನಲ್ಲಿರುವ ಧ್ರುವ ಸರ್ಜಾ ಅವರನ್ನು ಸುವರ್ಣ ನ್ಯೂಸ್ ಸಂದರ್ಶನ ಮಾಡಿದ್ದು, ಸದ್ಯ ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ʼದರ್ಶನ್ ಅವರ ವಿಚಾರ ಹೀಗೇ ಆಗುತ್ತೆ ಎಂದು ನನಗೆ ನಿರೀಕ್ಷೆ ಇತ್ತುʼ…ʼಇದಕ್ಕೆಲ್ಲ ಅವರು ಕೌಟುಂಬಿಕವಾಗಿ ನೊಂದಿದ್ದ ವಿಚಾರ ಕಾರಣವಾ? ಅಥವಾ ಸಕ್ಸಸ್ ತಲೆಗತ್ತಿದ್ದು ಕಾರಣನಾ?ʼ, ʼನಾನು ಈ ರೀತಿ ಮಾಡಿದ್ರೆ ಅಭಿಮಾನಿಗಳಿಗೆ ಯಾವ ಸಂದೇಶ ಹೋಗುತ್ತೆ?ʼ, ʼಮನೆಯಲ್ಲಿ ಹೆಂಡತಿಯನ್ನು ಹೊಡೆದು ಶ್ರೀರಾಮ ಚಂದ್ರನ ಕ್ಯಾರೆಕ್ಟರ್ ಮಾಡೋದು ಜನರಿಗೆ ಅರ್ಥವಾಗುತ್ತೆʼ, ʼನಮ್ಮನೆ ಹೆಣ್ಣು ಮಕ್ಕಳ ಬಗ್ಗೆ ಗೌರವದಿಂದ ಮಾತನಾಡಿ, ಕಂಡವರ ಹೆಣ್ಣುಮಕ್ಕಳ ಬಗ್ಗೆ ʼಇವರುʼ ಮಾತನಾಡೋದು ನನಗೆ ವಿಚಿತ್ರ ಎನಿಸುತ್ತೆʼ ಎಂದು ನಟ ದರ್ಶನ್ ಹಾಗೂ ಫ್ಯಾನ್ಸ್ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.
ಧ್ರುವ ಹಾಗೂ ದರ್ಶನ್ ನಡುವಿನ ಶೀತಲ ಸಮರ ರಹಸ್ಯವಾಗಿ ಉಳಿದಿಲ್ಲ. ನಾನು ದರ್ಶನ್ ಅವರ ಬಳಿ ಒಂದಷ್ಟು ಪ್ರಶ್ನೆಗಳನ್ನು ಕೇಳಬೇಕು ಎಂದು ಧ್ರುವ ಸರ್ಜಾ ಬಹಿರಂಗವಾಗಿಯೇ ಹೇಳಿದ್ದಾರೆ. ಹಿಂದೆ ಆಕ್ಷನ್ ಪ್ರಿನ್ಸ್ ಸಿನಿಮಾಗಳಿಗೆ ದರ್ಶನ್ ಬೆಂಬಲವಾಗಿ ನಿಂತಿದ್ದರು. ನಾಣು ಕೂಡ ಡಿಬಾಸ್ ಅಭಿಮಾನಿ ಎಂದು ಧ್ರುವ ಹೇಳಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ.
ಒಟ್ಟಿನಲ್ಲಿ ಮಾರ್ಟಿನ್ ಚಿತ್ರ ರಿಲೀಸ್ ವೇಳೆ ದರ್ಶನ್ ಮತ್ತು ಧ್ರುವ ಸರ್ಜಾರ ಅಭಿಮಾನಿಗಳ ಸಮರ ತಾರಕಕ್ಕೇರಲಿರುವ ಮುನ್ಸೂಚನೆಯನ್ನಂತೂ ಈ ಸೋಷಿಯಲ್ ಮೀಡಿಯಾ ವಾರ್ ನೀಡಿದೆ. ಮಾರ್ಟಿನ್ ಚಿತ್ರದ ಒಂದು ಹಾಡು ರಿಲೀಸ್ ಆಗಿದ್ದು, ನಿಧಾನವಾಗಿ ಸದ್ದು ಮಾಡುತ್ತಿದೆ. ಟ್ರೇಲರ್, ಟೀಸರ್ ಭರ್ಜರಿಯಾಗುತ್ತಿವೆ. ಆದರೆ, ಒಂದು ಸಿನಿಮಾ ರಿಲೀಸ್ ಆಗುವ ಸಮಯದಲ್ಲಿ ಈ ರೀತಿಯ ಸೋಷಿಯಲ್ ಮೀಡಿಯಾ ವಾರ್ ಶುರುವಾಗಿರುವುದು ಚಿತ್ರರಂಗದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಗಳಂತೂ ಖಂಡಿತಾ ಅಲ್ಲ.



