ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಂಜನೇಯನ ಭಕ್ತರು. ಧ್ರುವ ಸರ್ಜಾ ಅವರೊಂದಿಗೆ ಮಾತನಾಡುವಾಗ ಕೊನೆಗೆ ಹೇಳುವ ಮಾತು ಜೈ ಆಂಜನೇಯ. ಆಂಜನೇಯನ ಭಕ್ತರೆಂದರೆ ಶ್ರೀರಾಮನ ಭಕ್ತರೂ ಹೌದು. ಅಂತಹ ಧ್ರುವ ಸರ್ಜಾ ತಮ್ಮ ಮಕ್ಕಳ ನಾಮಕರಣಕ್ಕೂ ಆಯ್ಕೆ ಮಾಡಿಕೊಂಡಿರೋದು ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಶುಭ ಮುಹೂರ್ತವನ್ನು.
ಜನವರಿ ೨೨ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯಾಗಲಿದ್ದಾನೆ. ಬಾಲರಾಮನ ದಿವ್ಯಮೂರ್ತಿಗೆ ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆ ಜರುಗಲಿದೆ. ಈ ಶುಭ ಘಳಿಗೆಗಾಗಿ ವಿಶೇಷ ಮುಹೂರ್ತವೂ ಇದೆ. ಈ ಅಮೃತ ಘಳಿಗೆಯಲ್ಲೇ ಮಕ್ಕಳು ಹುಟ್ಟುವ ಕನಸು ಹೊತ್ತು ದೇಶಾದ್ಯಂತ ಲಕ್ಷಾಂತರ ಅಮ್ಮಂದಿರು ಬಯಸುತ್ತಿದ್ದಾರೆ. ಸಿಸೇರಿಯನ್ʻಗೂ ಮನವಿ ಮಾಡುತ್ತಿದ್ಧಾರೆ. ಇಂತಹ ಹೊತ್ತಿನಲ್ಲೇ ನಟ ಧ್ರುವ ಸರ್ಜಾ ತಮ್ಮ ಮಕ್ಕಳಿಗೆ ನಾಮಕರಣ ಮಾಡಲು ಆ ಅಮೃತ ಘಳಿಗೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಗೆ ಇಬ್ಬರು ಮಕ್ಕಳು. ಒಂದು ಹೆಣ್ಣು, ಒಂದು ಗಂಡು. ಈ ಇಬ್ಬರೂ ಮಕ್ಕಳಿಗೆ ಜನವರಿ ೨೨ರಂದೇ ನಾಮಕರಣ ನೆರವೇರಲಿದೆ. ಆ ದಿನ ಮನೆಯಲ್ಲಿಯೋ ಅಥವಾ ಅಣ್ಣ ಚಿರಂಜೀವಿ ಸರ್ಜಾ ಅವರ ಸಮಾಧಿ ಎದುರಲ್ಲಿಯೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆಂಜನೇಯನ ಭಕ್ತರಾಗಿರುವ ಧ್ರುವ ಸರ್ಜಾ ಅವರಿಗೆ ಶ್ರೀರಾಮನ ಮಂದಿರ ಪ್ರತಿಷ್ಠಾಪನೆಗಿಂತ ವಿಶೇಷ ಮುಹೂರ್ತ ಯಾವುದಿದೆ.
ಅಂದಹಾಗೆ ಈ ಶುಭ ಮುಹೂರ್ತವೂ ಕೂಡಾ ಅಂದ್ರೆ ನಾಮಕರಣವೂ ಕೂಡಾ ಆ ೮೪ ಸೆಕೆಂಡುಗಳ ಕಾಲಾವಧಿಯಲ್ಲೇ ನಡೆಯಲಿದೆಯೇ.. ಜನವರಿ 22ನೇ ತಾರೀಕಿನ ಮಧ್ಯಾಹ್ನ 12 ಗಂಟೆ 29 ನಿಮಿಷ, 8 ಸೆಕೆಂಡುಗಳಿಂದ 12 ಗಂಟೆ 30 ನಿಮಿಷ, 32 ಸೆಕೆಂಡುಗಳ ನಡುವಿನ 84 ಸೆಕೆಂಡುಗಳ ಮುಹೂರ್ತ ಇದ್ಯಲ್ಲ, ಆ ಸಮಯದಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ. ಆ ಸಂದರ್ಭದಲ್ಲಿಯೇ ಮಕ್ಕಳ ನಾಮಕರಣವೂ ನೆರವೇರಲಿದೆ.



