ನಟ ಧ್ರುವ ಸರ್ಜಾ ಅವರ ದೇಹ ಕಟ್ಟುಮಸ್ತಾಗಿರಬಹುದು. ಮನಸ್ಸು ಅಷ್ಟೇ ಮೃದು. ಧ್ರುವ ಸರ್ಜಾ ಅವರು ಈಗಲೂ ಅಣ್ಣ ಚಿರಂಜೀವ ಸರ್ಜಾ ಅವರನ್ನ ನೆನಪು ಮಾಡಿಕೊಳ್ಳದ ದಿನವಿಲ್ಲ. ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳುವಾಗಲೂ ಧ್ರುವ ಸರ್ಜಾ ತಮ್ಮ ಅಣ್ಣ ಚಿರಂಜೀವಿ ಸರ್ಜಾ ಹಾಗೂ ಅತ್ತಿಗೆ ಮೇಘನಾ ರಾಜ್ ಅವರನ್ನ ನೆನಪಿಸಿಕೊಂಡಿದ್ದಾರೆ.
ದರ್ಶನ್ & ಗ್ಯಾಂಗ್ʻನಿಂದ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಹಲವು ಕಡೆಯಿಂದ ನೆರವು, ಸಹಾಯಹಸ್ತ ಚಾಚಿ ಬರುತ್ತಿದೆ. ರೇಣುಕಾಸ್ವಾಮಿ ಸಚ್ಚಾರಿತ್ರ್ಯವಂತನೆಂದು ಅಲ್ಲ, ತಪ್ಪೇ ಮಾಡಿಲ್ಲ ಎಂದೂ ಅಲ್ಲ, ಜೀವ ತೆಗೆಯುವ ಅಧಿಕಾರ ಯಾರಿಗೂ ಇಲ್ಲ ಎಂಬ ಕಾರಣಕ್ಕೆ. ಆತನ ಪತ್ನಿ ಗರ್ಭಿಣಿ. ಮಾನವೀಯತೆಯ ಆಧಾರದಲ್ಲಿ. ಅಂತಹ ಕುಟುಂಬದ ನೆರವಿಗೆ ನಟ ಧ್ರುವ ಸರ್ಜಾ ಕೂಡಾ ಬಂದಿದ್ದಾರೆ.
ರೇಣುಕಾಸ್ವಾಮಿ ಕುಟುಂಬದವರ ಜೊತೆ ದೂರವಾಣಿಯಲ್ಲಿ ಮಾತನಾಡಿದ ಧ್ರುವ ಸರ್ಜಾ, ಅಣ್ಣನ ಅಕಾಲಿಕ ಮರಣ ಹಾಗೂ ಅತ್ತಿಗೆ ಎದುರಿಸಿದ ಸಂಕಟಗಳನ್ನು ನೆನಪಿಸಿಕೊಂಡಿದ್ದಾರೆ. “ಅತ್ತಿಗೆ ಗರ್ಭಿಣಿ ಆಗಿದ್ದಾಗ್ಲೆ ಅಣ್ಣ ಸತ್ತಿದ್ದು, ಆ ನೋವು ನನಗೆ ಗೊತ್ತು, ನಿಮ್ಮ ಜೊತೆಗೆ ನಾವಿದ್ದೇವೆ. ಏನೇ ಸಹಾಯ ಬೇಕಾದರೂ ನಮ್ಮನ್ನು ಕೇಳಿ” ಎಂದಿರುವ ಧ್ರುವ ಸರ್ಜಾ ಚಿತ್ರದುರ್ಗದ ಧ್ರುವ ಸರ್ಜಾ ಅಭಿಮಾನಿ ಸಂಘದ ಅಧ್ಯಕ್ಷ ಮಹಾನ್ ಹಾಗೂ ತಂಡದವರ ಮೂಲಕ ಚೆಕ್ ನೀಡಿದ್ದಾರೆ.
ಚಿರಂಜೀವಿ ಸರ್ಜಾ ಹಾಗೂ ಮೇಘನಾ ಅವರ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಚಿರಂಜೀವಿ ಹಠಾತ್ ನಿಧನರಾಗಿದ್ದರು. ಚಿರಂಜೀವಿ ಮೃತಪಟ್ಟಾಗ ಮೇಘನಾ ರಾಜ್ ಗರ್ಭಿಣಿ. ಅಣ್ಣ ಅತ್ತಿಗೆಯ ಮಗುವನ್ನು ತಮ್ಮ ಮಗನಂತೆಯೇ ನೋಡಿಕೊಳ್ತಿದ್ದಾರೆ ಧ್ರುವ ಸರ್ಜಾ. ಮೇಘನಾ ಅವರೂ ಕೂಡಾ ಧ್ರುವ ಜೊತೆ ಇವತ್ತಿಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಸದ್ಯಕ್ಕೆ ರೇಣುಕಾಸ್ವಾಮಿಯ ಕುಟುಂಬದ ಸ್ಥಿತಿಯೂ ಇದೇ. ರೇಣುಕಾಸ್ವಾಮಿ ಪತ್ನಿ ಈಗ ಗರ್ಭಿಣಿ.
ಮೇಘನಾ ರಾಜ್ ಅವರಿಗೇನೋ ತಂದೆ ಸುಂದರ್ ರಾಜ್, ತಾಯಿ ಪ್ರಮೀಳಾ ಜೋಷಾಯ್, ಗಂಡನ ತಮ್ಮ ಧ್ರುವ ಸರ್ಜಾ, ಅರ್ಜುನ್ ಸರ್ಜಾ ಕುಟುಂಬ ಹೀಗೆ.. ಎಲ್ಲವೂ ಇತ್ತು. ಕಣ್ಮರೆಯಾಗಿದ್ದು ಪ್ರಾಣಕ್ಕೆ ಪ್ರಾಣವಾಗಿ ಪ್ರೀತಿಸುತ್ತಿದ್ದ ಪತಿಯಷ್ಟೇ. ಆದರೆ, ರೇಣುಕಾಸ್ವಾಮಿ ಪತ್ನಿಗೆ ಅವರಿಗೆ ವಿದ್ಯೆ ಕಡಿಮೆ. ಓದಿರುವುದು ಪಿಯು ಅಷ್ಟೆ. ಇನ್ನು ಮುಂದಿನ ಬದುಕನ್ನು ತಾನೇ ಕಟ್ಟಿಕೊಳ್ಳಬೇಕು.
ನಟ ದರ್ಶನ್ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದಾಗ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಧ್ರುವ ಸರ್ಜಾ ದರ್ಶನ್ ಬೆಳವಣಿಗೆ ಬಗ್ಗೆ ಹೇಳಿ ಎಂದಾಗ ಇದನ್ನು ಬೆಳವಣಿಗೆ ಅಂತಾರಾ ಎಂದು ಪ್ರಶ್ನಿಸಿದ್ದರು. ಧ್ರುವ ಸರ್ಜಾ ಮತ್ತು ದರ್ಶನ್ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವುದು ಗುಟ್ಟೇನಲ್ಲ. ಆದರೆ ಮಾನವೀಯತೆ ವಿಷಯದಲ್ಲಿ ಧ್ರುವ ಸರ್ಜಾ ಒಂದು ಹೆಜ್ಜೆ ಮುಂದಿದ್ದಾರೆ ಎನ್ನುವುದೂ ಸುಳ್ಳಲ್ಲ.



