ಧ್ರುವ ಸರ್ಜಾ ಅವರ ಬಗ್ಗೆ ಶುಭ ಸಮಾಚಾರ ಕೇಳಲು ಕಾಯುತ್ತಿದ್ದವರಿಗೆ ಒಟ್ಟೊಟ್ಟಿಗೇ ಭರ್ಜರಿ ಸುದ್ದಿ ಕೊಟ್ಟಿದ್ದಾರೆ. ಒಂದೊಂದೂ ಅದ್ಧೂರಿ. ಇಷ್ಟೆಲ್ಲ ಗುಡ್ ನ್ಯೂಸುಗಳನ್ನು ಬಹದ್ದೂರ್ ಸ್ಟೈಲಲ್ಲೇ ಕೊಟ್ಟಿರೋ ಧ್ರುವ ಸರ್ಜಾ ರಿಯಲ್ ಹೀರೋ ಆಗಿದ್ಧಾರೆ.
ಸಿನಿಮಾಗಳಲ್ಲಿ ಹೀರೋ ಆಗಿ ನಟಿಸುವುದು ಬೇರೆ. ರಿಯಲ್ ಲೈಫಿನಲ್ಲಿ ಹೀರೋ ಆಗುವುದೇ ಬೇರೆ. ಆ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವ ಧ್ರುವ ಸರ್ಜಾ ಎರಡು ಜನ ಮೆಚ್ಚುವ ಕೆಲಸ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ಆ ಎರಡು ಒಂದೊಳ್ಳೆ ಕೆಲ್ಸಗಳಿಗೆ ಅಭಿಮಾನಿಗಳಷ್ಟೇ ಅಲ್ಲ, ಎಲ್ಲರೂ ಶಹಬ್ಬಾಸ್ ಎನ್ನುತ್ತಿದ್ದಾರೆ.
ಧ್ರುವ ಸರ್ಜಾ ಒಂದೊಳ್ಳೆ ಕೆಲ್ಸ ನಂ.1 : ಇತ್ತೀಚೆಗೆ ತಾಯಿಯೊಬ್ಬಳು ಬಾಯ್ ಫ್ರೆಂಡ್ ಜೊತೆ ಸೇರಿ ತಾನೇ ಹೆತ್ತ ಮಗುವಿಗೆ ಚಿತ್ರಹಿಂಸೆ ನೀಡುತ್ತಿದ್ದ ಪ್ರಕರಣ ವರದಿಯಾಗಿತ್ತು. ಆ ತಾಯಿಗೆ ಸ್ಥಳೀಯರೇ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದರು. ತಾಯಿ ಹಾಗೂ ಪ್ರಿಯಕರ ನೀಡುತ್ತಿದ್ದ ಕಿರುಕುಳದ ಬಗ್ಗೆ ಆ ಮಗು ಅಕ್ಕಪಕ್ಕದವರ ಬಳಿ ಹೇಳಿಕೊಂಡಿತ್ತು. ಇದನ್ನು ಗಮಿನಿಸಿದ್ದ ಸ್ಯಾಂಡಲ್‌ವುಡ್ ಸ್ಟಾರ್ ಧ್ರುವ ಸರ್ಜಾ ಅವರು, ಮಗುವಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಧ್ರುವ ಸರ್ಜಾ ಈ ಬಗ್ಗೆ ಯಾವುದೇ ಪ್ರಚಾರ ಮಾಡಬಾರದು ಎಂಬ ಷರತ್ತು ಹಾಕಿದ್ದರಾದರೂ, ಆ ಮಗುವನ್ನು ಸಂಪರ್ಕಿಸಲು ಸಾಧ್ಯವಾಗದೆ ಹಲವರನ್ನು ಕಾಂಟ್ಯಾಕ್ಟ್ ಮಾಡಿದ ಹಿನ್ನೆಲೆ ಸುದ್ದಿ ಹೊರಬಿದ್ದಿದೆ.
ಧ್ರುವ ಸರ್ಜಾ ಒಂದೊಳ್ಳೆ ಕೆಲ್ಸ ನಂ.2 : ಇನ್ನೊಂದು ಒಳ್ಳೆ ಕೆಲಸ ಎಂದರೆ, ಬೆಂಗಳೂರಿನ ಜನರನ್ನು ಭಾದಿಸುತ್ತಿರುವ ನೀರಿನ ಬವಣೆ. ನೀರಿನ ಅಭಾವದಿಂದ ಕಂಗೆಟ್ಟಿರುವ ಜನರಿಗಾಗಿ ಅಖಿಲ ಕರ್ನಾಟಕ ಧ್ರುವ ಸರ್ಜಾ ಅಭಿಮಾನಿಗಳ ಸಂಘದಿಂದ ನೀರು ಸರಬರಾಜು ಮಾಡಲಾಗಿದೆ. ಇದು ಕೆಂಗೇರಿ ಸುತ್ತಲಿನ ಕೆಲವು ಪ್ರದೇಶಗಳಿಗೆ ಸೀಮಿತವಾಗಿದೆ. ಆದರೆ, ಒಂದೊಳ್ಳೆ ಕೆಲಸ ಮಾಡೋಕೆ ದೊಡ್ಡ ಮನಸ್ಸು ಬೇಕು. ಇದು ಅಭಿಮಾನಿಗಳಿಂದ ನಡೆಯುತ್ತಿರುವ ಒಂದೊಳ್ಳೆ ಕೆಲಸ.
ಧ್ರುವ ಸರ್ಜಾ ಗುಡ್ ನ್ಯೂಸ್ ನಂ.3 : ಮಾರ್ಟಿನ್ ಶೂಟಿಂಗ್ ಕಂಪ್ಲೀಟ್
ಮಾರ್ಟಿನ್. ಈ ಸಿನಿಮಾ ರಿಲೀಸ್ ಆಗೋದು ಯಾವಾಗ..? ಈ ಪ್ರಶ್ನೆಗೆ ಇನ್ನೂ ಖಚಿತ ಉತ್ತರ ಸಿಕ್ಕಿಲ್ಲ. ಧ್ರುವ ಸರ್ಜಾ ಅವರ ಸಿನಿಮಾಗಳೆಂದರೆ ಹಾಗೇ.. ಕನಿಷ್ಠ 2ರಿಂದ 3 ವರ್ಷ ಬೇಕು ಅನ್ನೋ ಹಾಗಾಗಿ ಹೋಗಿದೆ. ಆದರೆ, ಈ ಮೊದಲಿನ ಸಿನಿಮಾಗಳಿಗೆ ಎದುರಾಗಿದ್ದಂತಹ ಬಜೆಟ್ ಸಮಸ್ಯೆ ಮಾರ್ಟಿನ್ ಚಿತ್ರಕ್ಕೆ ಇರಲಿಲ್ಲ. ಹೀಗಿದ್ದರೂ.. ವಿಳಂಬವಾಗಿದ್ಧೇಕೆ ಎಂದರೆ.. ಡೈರೆಕ್ಟರ್ ಎ.ಪಿ.ಅರ್ಜುನ್ ವಿವರ ಬಿಚ್ಚಿಡ್ತಾರೆ. ಸಿನಿಮಾ ಶುರುವಾಗಿ ಎರಡೂವರೆ ವರ್ಷ. 240 ದಿನಗಳ ಕಾಲ ಶೂಟಿಂಗ್ ಮಾಡಿ ಈಗ ಕಂಪ್ಲೀಟ್ ಮಾಡಿದ್ದೇವೆ ಎಂದಿದ್ದಾರೆ. ಸೆಟ್ ಹಾಕಲು ವಿಳಂಬವಾಗಿದ್ದು ಶೂಟಿಂಗ್ ಮಾಡುತ್ತಿದ್ದ ವೇಳೆ ಮಳೆ ಬಂದು ಹಾಳಾಗಿದ್ದು, ಒಂದೊಂದು ಸೆಟ್ ಮಾಡುವುದಕ್ಕೆ ತಿಂಗಳು ಸಮಯ ಹಿಡಿದಿದ್ದು ಎಲ್ಲವನ್ನೂ ಹೇಳಿಕೊಂಡಿರೋ ಅರ್ಜುನ್, ಅಂದುಕೊಂಡಿದ್ದ ಬಜೆಟ್ 40 ಕೋಟಿ. ಅದು ಶೂಟಿಂಗ್ ಶುರುವಾದ 80-90 ದಿನಕ್ಕೇ ರೀಚ್ ಆಯ್ತು ಎಂದಿದ್ದಾರೆ. ಆ ಪ್ರಕಾರ ಹೋದರೆ ಸಿನಿಮಾ ಬಜೆಟ್ 100 ಕೋಟಿ ದಾಟಿರುವ ಸೂಚನೆಗಳಂತೂ ಇವೆ. ಅಂದಹಾಗೆ ಧ್ರುವ ಸರ್ಜಾ ಅವರ ಈ ಹಿಂದಿನ ಚಿತ್ರಗಳಂತೆ ಈ ಚಿತ್ರಕ್ಕೆ ಹಣಕಾಸಿನ ತೊಂದರೆ ಆಗಲಿಲ್ಲ. ಉದಯ್ ಕೆ ಮೆಹ್ತಾ ನಿರ್ಮಾಣದ ಚಿತ್ರ ಈ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.



