ಧ್ರುವ ಸರ್ಜಾ. ಇವರ ನಂತರ ಚಿತ್ರರಂಗಕ್ಕೆ ಇನ್ನೂ ಒಬ್ಬ ಸ್ಟಾರ್ ನಟ ಸಿಕ್ಕಿಲ್ಲ. ಆದರೆ ಧ್ರುವ ಅವರ ಸಿನಿಮಾ ಬರೋದೇ ಮೂರು ವರ್ಷಕ್ಕೊಮ್ಮೆ. ದೊಡ್ಡ ಫ್ಯಾನ್ ಬೇಸ್ ಇದೆ. ಒಳ್ಳೆ ಸಿನಿಮಾಗಳನ್ನ ಕೊಟ್ಟಿದ್ದಾರೆ. ಚಿತ್ರರಂಗಕ್ಕೆ ಬಂದು ದಶಕವಾಗಿದ್ದರೂ ರಿಲೀಸ್ ಆಗಿರುವುದು ಕೇವಲ 4 ಸಿನಿಮಾಗಳು ಮಾತ್ರ. ಅಂದಹಾಗೆ ಈ ಬಾರಿ ಧ್ರುವ ಸರ್ಜಾ ಮೂರ್ಮೂರು ಶುಭ ಸುದ್ದಿ ಕೊಡ್ತಿದ್ದಾರೆ. ಮೊದಲನೆಯದ್ದು, ಈ ವರ್ಷ ಎರಡು ಸಿನಿಮಾ ರಿಲೀಸ್. ಎರಡನೆಯದ್ದು ಮಾರ್ಟಿನ್ ಆಡಿಯೋ ರೈಟ್ಸ್ ಭರ್ಜರಿ ಸೇಲ್ ಮತ್ತು ಮೂರನೇದು ಹೊಂಬಾಳೆ ಜೊತೆಯಾಗುತ್ತಿರುವ ಸೆನ್ಸೇಷನ್.
ಮೊದಲನೆ ಗುಡ್ ನ್ಯೂಸ್ “
2021ರ ನಂತರ ಧ್ರುವ ಸರ್ಜಾ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಎಂದಿನಂತೆ ಈ ಬಾರಿಯೂ 3 ವರ್ಷದ ನಂತರ ಬರುತ್ತಿರುವ ಧ್ರುವ ಅವರ ಮಾರ್ಟಿನ್ ಚಿತ್ರ ಭರ್ಜರಿ ಬಿಸಿನೆಸ್ ಮಾಡಿದೆ. ಈಗಾಗಲೇ ಟೀಸರ್ ಮೂಲಕ ಸಿನಿಮಾ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇದೆ ಎಂಬ ಸೂಚನೆ ಪ್ರೇಕ್ಷಕರಿಗೆ ಸಿಕ್ಕಿದೆ. ಈ ಚಿತ್ರದ ಆಡಿಯೋ ಹಕ್ಕು 10 ಕೋಟಿ ರೂಪಾಯಿಗೆ ಮಾರಾಟ ಆಗಿದೆ.
ಅದ್ಧೂರಿ ಚಿತ್ರದ ಮೂಲಕ ಧ್ರುವ ಸರ್ಜಾ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದ ಎ.ಪಿ.ಅರ್ಜುನ್ ಮತ್ತೊಮ್ಮೆ ಧ್ರುವ ಸರ್ಜಾ ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಬಹು ನಿರೀಕ್ಷಿತ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದ್ದು, ಚಿತ್ರದ ಆಡಿಯೋ ಹಕ್ಕು ಒಂಭತ್ತು ಕೋಟಿ ರೂಪಾಯಿಗೆ ಮಾರಾಟವಾಗಿದೆ. ಜನಪ್ರಿಯ ಆಡಿಯೋ ಸಂಸ್ಥೆ ‘ಸರೆಗಮ..’ ‘ಮಾರ್ಟಿನ್’ ಚಿತ್ರದ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ.
ನನಗೆ ತಿಳಿದಂತೆ ಇಷ್ಟು ದೊಡ್ಡ ಮೊತ್ತಕ್ಕೆ ಯಾವ ಸಿನಿಮಾದ ಆಡಿಯೋ ಹಕ್ಕೂ ಮಾರಾಟ ಆಗಿಲ್ಲ. ಈ ವಿಚಾರ ನಮಗೆ ಖುಷಿ ತಂದಿದೆ’ ಎಂದಿದ್ದಾರೆ ನಿರ್ಮಾಪಕ ಉದಯ್ ಕೆ ಮೆಹ್ತಾ. ಹಾಡುಗಳಿಗೆ ಮಣಿ ಶರ್ಮ ಸಂಗೀತ ನಿರ್ದೇಶನ ಮಾಡಿದ್ದರೆ, ರವಿ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಚಿತ್ರದ ಬಜೆಟ್ ಈಗಾಗಲೇ 100 ಕೋಟಿ ದಾಟಿದ್ದು, ಇದೇ ವರ್ಷ ರಿಲೀಸ್ ಆಗುತ್ತಿದೆ. ಧ್ರುವ ಸರ್ಜಾ ಎದುರು ನಾಯಕಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದು, ಚಿಕ್ಕಣ್ಣ, ಅನ್ವೇಶಿ ಜೈನ್, ಮಾಳವಿಕ ಅವಿನಾಶ್, ನಿಕ್ತಿನ್ ಧೀರ್, ರೋಹಿತ್, ನವಾಬ್ ಶಾ ಮೊದಲಾದವರು ಚಿತ್ರದಲ್ಲಿದ್ದಾರೆ. ಸತ್ಯ ಹೆಗಡೆ ಕ್ಯಾಮೆರಾ ಕೆಲಸವಿದೆ. ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಂಡಿದೆ. ಸದ್ಯ ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.
2ನೇ ಗುಡ್‌ನ್ಯೂಸ್ : ಇದೇ ವರ್ಷ ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ನಿನ ಕೆಡಿ ಕೂಡಾ ರಿಲೀಸ್ ಆಗಲಿದೆ. ಕೆಡಿಯಲ್ಲಿ ರವಿಚಂದ್ರನ್, ಶಿಲ್ಪಾ ಶೆಟ್ಟಿ, ಸಂಜಯ್ ದತ್, ರಮೇಶ್ ಅರವಿಂದ್ ಕೂಡಾ ನಟಿಸುತ್ತಿದ್ದು, ರೀಷ್ಮಾ ನಾಣಯ್ಯ ಹೀರೋಯಿನ್..
3ನೇ ಶುಭ ಸುದ್ದಿ : ಹೊಂಬಾಳೆ ಬ್ಯಾನರ್ ಶುರುವಾಗಿದ್ದು ಪುನೀತ್ ರಾಜಕುಮಾರ್ ಅವರಿಂದ. ಆದರೆ ಅದಾದ ಮೇಲೆ ಹೊಂಬಾಳೆ ಬ್ಯಾನರ್ ಬೆಳೆದದ್ದು ಹೇಗೆ ಅನ್ನೋದು ರೋಚಕ ಕಥೆ. ಈಗ ಹೊಂಬಾಳೆ ಬ್ಯಾನರ್ʻನ ಕಲಾವಿದರು ಎಂದರೆ ಯಶ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಶ್ರೀಮುರಳಿ, ಪ್ರಭಾಸ್, ಫಹಾದ್ ಫಾಸಿಲ್, ಅರ್ಪಣಾ ಬಾಲಮುರಳಿ, ಯುವ ರಾಜಕುಮಾರ್, ಕೀರ್ತಿ ಸುರೇಶ್ ಅವರಂತಹ ಕಲಾವಿದರಿದ್ದಾರೆ. ಪ್ರಶಾಂತ್ ನೀಲ್, ರಕ್ಷಿತ್, ರಿಷಬ್, ಪವನ್ ಕುಮಾರ್, ಸಂತೋಷ್ ಆನಂದರಾಮ್, ಡಾ.ಸೂರಿ ಅವರಂತಹ ನಿರ್ದೇಶಕರಿದ್ಧಾರೆ. ಅವರ ಸಾಲಿಗೆ ಈಗ ಧ್ರುವ ಸರ್ಜಾ ಹಾಗೂ ನರ್ತನ್ ಅವರ ಹೆಸರೂ ಸೇರಿಕೊಳ್ಳೋ ಸಮಯ ಬಂದಿದೆ.
ಡೈರೆಕ್ಟರ್ ನರ್ತನ್ ಅವರ ಚಿತ್ರದಲ್ಲಿ ಧ್ರುವ ಸರ್ಜಾ ನಟಿಸುವುದು ಪಕ್ಕಾ ಆಗಿದೆಯಂತೆ. ಸದ್ಯಕ್ಕೆ ಧ್ರುವ ಸರ್ಜಾ ಅವರು ಮಾರ್ಟಿನ್ ಮತ್ತು ಕೆಡಿ ಚಿತ್ರಗಳಲ್ಲಿ ಬ್ಯುಸಿ. ಎಲ್ಲವೂ ಅಂದುಕೊಂಡಂತೆ ಆದರೆ ಧ್ರುವ ಸರ್ಜಾ ಅವರ ಎರಡು ಚಿತ್ರಗಳು ಈ ವರ್ಷ ರಿಲೀಸ್ ಆಗಲಿವೆ. ಅತ್ತ ನರ್ತನ್ ಕೂಡಾ ಬೈರತಿ ರಣಗಲ್ ಚಿತ್ರವನ್ನು ನಿರ್ದೇಶಿಸುತ್ತಿದ್ಧಾರೆ. ಇಬ್ಬರ ಕೆಲಸವೂ ಮುಗಿಯುತ್ತಿದ್ದಂತೆಯೇ ಹೊಂಬಾಳೆಯವರ ಸಿನಿಮಾ ಶುರುವಾಗಲಿದೆ. ಆದರೆ ಈ ಸುದ್ದಿ ಇನ್ನೂ ಖಚಿತವಾಗಿಲ್ಲ.



