ಧ್ರುವ ಸರ್ಜಾ ಮತ್ತು ರಚಿತಾ ರಾಮ್ ಮತ್ತೊಮ್ಮೆ ಒಂದಾಗಿದ್ದಾರೆ. ಧ್ರುವ ಸರ್ಜಾ ಹೋರಿ ಶಿವನಾಗಿದ್ದರೆ, ಡಿಂಪಲ್ ಕ್ವೀನ್ ಪಾರ್ವತಿಯಾಗಿದ್ದಾರೆ. ಇವರಿಬ್ಬರ ನಡುವಿನ ಪ್ರೇಮಕಥೆಯ ಹೆಸರು ಕ್ರಿಮಿನಲ್. ಲವ್ ಸ್ಟೋರಿಗೆ ಕ್ರಿಮಿನಲ್ ಅನ್ನೋ ಟೈಟಲ್ ಏಕೆ.. ಅನ್ನೋದನ್ನ ನಿರ್ದೇಶಕರೇ ಹೇಳಬೇಕು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹೊಸ ಸಿನಿಮಾ ಶುರುವಾಗಿದೆ. ಇದು ಧ್ರುವ ಸರ್ಜಾ ನಟನೆಯ 7ನೇ ಸಿನಿಮಾ. ಕೆರೆಬೇಟೆ ಖ್ಯಾತಿಯ ರಾಜ್ ಗುರು ನಿರ್ದೇಶಕ. ಸಿನಿಮಾಗೆ ರಚಿತಾ ರಾಮ್ ಹೀರೋಯಿನ್. 8 ವರ್ಷಗಳ ಬಳಿಕ ಒಂದಾಗಿರುವ ಭರ್ಜರಿ ಜೋಡಿ.. ಮತ್ತೊಂದು ಹಿಟ್ ಕೊಡುವ ಭರವಸೆ ಮೂಡಿಸಿದೆ. ಅಂದಹಾಗೆ ಚಿತ್ರದಲ್ಲಿ ಧ್ರುವ ಹೋರಿ ಹಿಡಿಯುವ ಹುಡುಗನ ಪಾತ್ರ ಮಾಡ್ತಿದ್ದಾರೆ. ಧ್ರುವ ಸರ್ಜಾ ಪಾತ್ರದ ಹೆಸರೇ ಹೋರಿ ಶಿವ. ಹೋರಿ ಹಿಡಿಯುವ ಪೈಲ್ವಾನ್ ಧ್ರುವ ಸರ್ಜಾ ಅವರ ಪಾತ್ರಕ್ಕೆ ಉತ್ತರ ಕರ್ನಾಟಕದ ಸೊಗಡು ಇದೆ. ರಚಿತಾ ರಾಮ್ ಅವರದ್ದು ಪಾರ್ವತಿ ಹೆಸರಿನ ಪಾತ್ರ. ಮೊದಲ ಸೀನ್ʻನಲ್ಲೇ ಪಾರ್ವತಿಯ ಜುಟ್ಟು ಹಿಡಿದು ಮಾತಾಡಿಸುವ ಸೀನ್ ಶೂಟ್ ಆಗಿದೆ.
ಧ್ರುವ ಸರ್ಜಾ ಅವರೇನೋ ಅಪ್ಪಟ ಪೈಲ್ವಾನ್ ರೀತಿಯಲ್ಲೇ ಇದ್ದಾರೆ. ಐಷಾರಾಮಿ ಕಾರಿನಿಂದ ಇಳಿದು ಬಂದ ಧ್ರುವ ಸರ್ಜಾ ಹೆಗಲ ಮೇಲಿದ್ದ ಕೆಂಪು ವಸ್ತ್ರವೇ ಅರ್ಧ ಕಥೆ ಹೇಳ್ತಿದೆ. ಕ್ರಿಮಿನಲ್ ಚಿತ್ರದಲ್ಲಿರೋದು ನೈಜ ಕಥೆಯಂತೆ. ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದಿದ್ದ ಕಥೆಯಂತೆ. ಶೇ.99ರಷ್ಟು ವೊರಿಜಿನಲ್ ಕಥೆಯನ್ನೇ ಇಟ್ಟುಕೊಂಡಿರೋದಾಗಿ ರಾಜ್ ಗುರು ಹೇಳಿದ್ದಾರೆ. ಉಳಿದಿದ್ದು ಸಿನಿಮಾಮ್ಯಾಟಿಕ್ ಚೇಂಜ್.
ಧ್ರುವ ಸರ್ಜಾಗೆ ಮತ್ತೊಮ್ಮೆ ತಾಯಿಯಾಗುತ್ತಿರುವುದು ಹಿರಿಯ ನಟಿ ತಾರಾ. ಭರ್ಜರಿಯಲ್ಲಿಯೂ ಧ್ರುವ ತಾಯಿಯಾಗಿದ್ದ ತಾರಾ ಅನುರಾಧಾ, ಮತ್ತೊಮ್ಮೆ ಧ್ರುವಗೆ ಅಮ್ಮನಾಗಿದ್ದಾರೆ. ಪೊಗರು ಚಿತ್ರಕ್ಕೆ ಸಂಗೀತ ನೀಡಿದ್ದ ಚಂದನ್ ಶೆಟ್ಟಿಯೇ.. ಈ ಚಿತ್ರಕ್ಕೂ ಸಂಗೀತ ನಿರ್ದೇಶಕ. ಗೋಲ್ಡ್ ಮೈನ್ಸ್ ಟೆಲಿ ಫಿಲಮ್ಸ್ ನಿರ್ಮಾಣದ ಕ್ರಿಮಿನಲ್ ಚಿತ್ರವೂ ಕೂಡಾ ಪ್ಯಾನ್ ಇಂಡಿಯಾ ಸಿನಿಮಾ. 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ವೈದಿ ಛಾಯಾಗ್ರಹಣ, ರವಿವರ್ಮಾ, ವಿಕ್ರಂ ಮೋರ್ ಸಾಹಸ ಸಂಯೋಜನೆ ಇರುವ ಚಿತ್ರಕ್ಕೆ ಮನಿಶ್ ಶಾ ಈ ನಿರ್ಮಾಪಕರು.
ಎಲ್ಲ ಓಕೆ.. ಈ ಚಿತ್ರವಾದರೂ ಅಂದುಕೊಂಡಂತೆ ಶೂಟಿಂಗ್ ಕಂಪ್ಲೀಟ್ ಆಗಿ ರಿಲೀಸ್ ಮಾಡ್ತಾರಾ.. ಇದು ಪ್ರಶ್ನೆ. ಧ್ರುವ ಸರ್ಜಾ ಸಿನಿಮಾ ಎಂದರೆ ಮಿನಿಮಮ್ 3 ವರ್ಷ ಎಂಬಂತಾಗಿ ಹೋಗಿದೆ. ಈಗ ರಿಲೀಸ್ ಆಗಬೇಕಿರುವ ಕೆಡಿ ಚಿತ್ರವೂ ಶುರುವಾಗಿದ್ದು ಸುಮಾರು 4 ವರ್ಷಗಳ ಹಿಂದೆ. ಇನ್ನೂ ರಿಲೀಸ್ ಆಗಿಲ್ಲ. ಕಳೆದ ವರ್ಷವೇ ರಿಲೀಸ್ ಮಾಡ್ತೇವೆ ಎಂದಿದ್ದ ಕೆಡಿ ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶಕ. ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್.. ಮೊದಲಾ ಸ್ಟಾರ್ ನಟರನ್ನೆಲ್ಲ ಒಂದೇ ಚಿತ್ರಕ್ಕೆ ಸೇರಿಸಿರುವ ಪ್ರೇಮ್.. ಯಾವಾಗ ರಿಲೀಸ್ ಮಾಡ್ತಾರೆ ಅನ್ನೋದು ಇನ್ನೂ ಸಸ್ಪೆನ್ಸ್.
ಧ್ರುವ ಸರ್ಜಾಗೆ ದೊಡ್ಡ ಫ್ಯಾನ್ ಬೇಸ್ ಇದೆ. ಕೇವಲ 5 ಚಿತ್ರಗಳಷ್ಟೇ ರಿಲೀಸ್ ಆಗಿ, 3 ಗೆದ್ದು, 2 ಚಿತ್ರಗಳು ಸೋತಿದ್ದರೂ.. ಫ್ಯಾನ್ಸ್ ಬೇಸ್ ಕಡಿಮೆಯಾಗಿಲ್ಲ. ಆದರೆ.. ಇದೇ ರೀತಿ ಮೂರ್ನಾಲ್ಕು ವರ್ಷಕ್ಕೊಂದು ಸಿನಿಮಾ ಮಾಡ್ತಾ ಹೋದರೆ.. ಧ್ರುವ ಸರ್ಜಾ ಫ್ಯಾನ್ ಬೇಸ್ ಕಳೆದುಕೊಳ್ಳೋದು ನಿಜ. ಏಕೆಂದರೆ ಒಂದು ಜನರೇಷನ್ನೇ ಚೇಂಜ್ ಆಗಿರುತ್ತೆ.



