ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಸರಣಿ ಅಪರಾಧ ಕೃತ್ಯಗಳ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಈ ವಿಷಯ ಇಟ್ಟುಕೊಂಡು ಪದೇ ಪದೇ ಧರ್ಮಸ್ಥಳ, ಕ್ಷೇತ್ರದ ದೇವರು, ನಂಬಿಕೆ, ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಮೇಲೆ ದಾಳಿ ನಡೆಯುತ್ತಿದೆ. ಇದಕ್ಕೆ ಈಗ ಒಂದು ತಾತ್ಕಾಲಿಕ ವಿರಾಮ ಸಿಕ್ಕಿದೆ.
ದೇಶಾದ್ಯಂತ ಸಂಚಲನ ಸೃಷ್ಟಿಸಿದ ಪ್ರಕರಣದಲ್ಲಿ ಕ್ಷೇತ್ರದ ಬಗ್ಗೆ ಹಾಗೂ ಖಾವಂದರು ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅವಮಾನಕರ ಹೇಳಿಕೆ ನೀಡದಂತೆ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ.
ಮಹೇಶ್ ಶೆಟ್ಟಿ, ತಿಮ್ಮರೋಡಿ, ಎಂಡಿ ಸಮೀರ್, ಗಿರೀಶ್ ಮಟ್ಟೆಣ್ಣವರ್ ಹಾಗು ಮಾಧ್ಯಮಗಳು ಹೆಗ್ಗಡೆ ಅವರ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡಿದೆ. 350ಕ್ಕೂ ಯೂಟ್ಯೂಬ್ ಚಾನೆಲ್ಲುಗಳಿಗೂ ತಡೆ ತಂದಿದೆ.
ಈ ಮಧ್ಯೆ ಪೊಲೀಸರು ಮತ್ತು ವಕೀಲರ ನಡುವೆ ಆರೋಪ, ಪ್ರತ್ಯಾರೋಪ ಬೆನ್ನಲ್ಲೇ ನೂರಾರು ಶವಗಳನ್ನು ಹೂತಿದ್ದೇನೆ ಎಂದು ದೂರು ನೀಡಿದ್ದ ಸಾಕ್ಷಿ ದೂರುದಾರ ಈಗ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೂ ಪತ್ರ ಬರೆದಿದ್ದಾನೆ. ತನ್ನ ಪ್ರಾಣ ರಕ್ಷಣೆಗಾಗಿ ಸಾಕ್ಷಿ ದೂರುದಾರ ಸಿಜೆಐಗೆ ಪತ್ರ ಬರೆದಿದ್ದು, ತನಿಖಾಧಿಕಾರಿಗೆ ತಾನು ನೀಡಿದ್ದ ಗೌಪ್ಯ ಹೇಳಿಕೆಯನ್ನು ಪೊಲೀಸರು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ. ಅದಲ್ಲದೇ ಪೊಲೀಸರ ಮೇಲೆ ಸಾಲು ಸಾಲು ಆರೋಪಗಳು ಕೇಳಿಬಂದಿದ್ದು, ಯಾರದ್ದೋ ಅಣತಿಯಂತೆ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೂಡ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರೋಪಿಸಿರುವುದು ಕೇಸ್‌ಗೆ ತಿರುವು ನೀಡಿದೆ. ಅದಲ್ಲದೇ ಎಸ್‌ಐಟಿ ರಚನೆಗೆ ಸರ್ಕಾರದ ಮೇಲೆ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರ ನಡೆ ಮೇಲೆ ರಾಜ್ಯದ ಚಿತ್ತ ನೆಟ್ಟಿದೆ.
ಇದರ ಜೊತೆಯೇ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಕೊಲೆ, ಅತ್ಯಾಚಾರ ಹಾಗೂ ಗುಟ್ಟಾಗಿ ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣ ತನಿಖೆಗೆ ಎಸ್‌ಐಟಿ ತಂಡ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ ಆಗ್ರಹಿಸಿದ್ದಾರೆ.
ದೂರುದಾರನ ಹೇಳಿಕೆ ದಾಖಲಿಸಿಕೊಂಡಿರುವ ತನಿಖಾಧಿಕಾರಿ ಯಾರಿಗೋ ಕರೆ ಮಾಡಿ, ಅವರ ಸೂಚನೆಯಂತೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳಿವೆ ಎನ್ನುತ್ತಿದ್ಧಾರೆ. ಒಟ್ಟಿನಲ್ಲಿ, ಧರ್ಮಸ್ಥಳದ ಸರಣಿ ಅಪರಾಧ ಕೃತ್ಯಗಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಸಿಜೆಐವರೆಗೂ ಈ ಕೇಸ್ ಹೋಗಿರುವುದು ಮಹತ್ವ ಪಡೆದುಕೊಂಡಿದೆ.
ಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಕೂಡಾ ಕೆಲವು ನ್ಯೂಸ್ ಚಾನೆಲ್ಲುಗಳು ಗಂಭೀರವಾಗಿ ಚರ್ಚೆ ನಡೆಸಿವೆ. ಇದು ವಿಷಯವನ್ನು ಗಂಭೀರವಾಗಿಸಿದೆ. ಆದರೆ.. ಒತ್ತಡಗಳ ನಡುವೆಯೂ ಸಿದ್ಧರಾಮಯ್ಯ ಮೊದಲು ಪೊಲೀಸ್ ವರದಿ ಬರಲಿ, ಆಮೇಲೆ ಎಸ್‌ಐಟಿ ರಚನೆಯೋ.. ಮತ್ತೊಂದೋ ನೋಡೋಣ ಎಂದಿದ್ದಾರೆ. ತಮ್ಮ ಮೇಲೆ ಯಾವುದೇ ಒತ್ತಡ ಇಲ್ಲ ಎಂದೂ ಹೇಳಿದ್ದಾರೆ.



